Sunday, March 17, 2024

ಯಕ್ಷ ಪ್ರಶ್ನೆ 81(Yaksha prashne 81)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 80 ತಪಸ್ಸಿನ ಲಕ್ಷಣವೇನು ?

ಉತ್ತರ - ತನ್ನ ತನ್ನ ಧರ್ಮದಲ್ಲಿರುವುದು.  

ತನ್ನ ತನ್ನ ಧರ್ಮದಲ್ಲಿರುವುದೇ ತಪಸ್ಸಿನ ಲಕ್ಷಣ ಎಂಬುದಾಗಿ ಯಕ್ಷನ ಪ್ರಶ್ನೆಗೆ ಇಲ್ಲಿ ಧರ್ಮರಾಜನು ಉತ್ತರವನ್ನು ಕೊಟ್ಟಿದ್ದಾನೆ. ಧರ್ಮ ಎಂದರೇನು? ಎಂದು ತಿಳಿದಾಗ ಮಾತ್ರವೇ ತಪಸ್ಸಿನ ಅರ್ಥ ಆಗಬಹುದು. ಆರಂಭಿಸಿರುವ ಕಾರ್ಯವು ಫಲಿಸುವ ಪರ್ಯಂತ ಹಾಕುವ ಶ್ರಮವೇ ತಪಸ್ಸು. ಹಾಗಾಗಿ ಯಾವುದೇ ಕೆಲಸವೂ ಧರ್ಮವನ್ನು ಉಳಿಸಲು ಸಾಧಕವಾಗುವುದು. ಶ್ರಮರೂಪವಾದ ಕಠಿಣ ತಪಸ್ಸು ಧರ್ಮವನ್ನು ಉಳಿಸುವುದು. ಯಾವುದು ಅದರದರ ತನವನ್ನು ಉಳಿಸುವುದೋ, ಅದನ್ನೇ ಇಲ್ಲಿ ತಪಸ್ಸು ಎಂದು ಕರೆಯಲಾಗಿದೆ. 

ಧರ್ಮ ಎಂದರೇನು? ಎಂಬುದಕ್ಕೆ ಈ ಹಿಂದಿನ ಲೇಖನದಲ್ಲಿ ವಿವರಿಸಲಾಗಿದೆ. ಅದನ್ನು ಇಲ್ಲಿ ಅನುಸಂಧಾನ ಮಾಡಿಕೊಂಡು ಈ ಲೇಖನಕ್ಕೆ ಅಡಿಯಿಡಬೇಕು. ಅದಕ್ಕೂ ಪೂರ್ವದಲ್ಲಿ ಶ್ರೀರಂಗ ಮಹಾಗುರುಗಳು ಹೇಳಿದ ಮಾತನ್ನು ಅನುಸಂಧಾನ ಮಾಡಿಕೊಂಡರೆ ಮುಂದಿನ ಕಾರ್ಯ ಸುಗಮವಾಗಬಹುದು. "ಧರ್ಮವು ಬಿದ್ದವನನ್ನೂ ಬೀಳುತ್ತಿರುವವನನ್ನೂ ಬೀಳುವವನನ್ನೂ ಮೇಲಕ್ಕೆ ಎತ್ತಿ ಹಿಡಿದು ಧರಿಸಿ ಕಾಪಾಡಿಕೊಳ್ಳುವುದಾಗಿದೆ. ಜೀವದ ವಿಕಾಸದಿಂದಾರಂಭಿಸಿ ಗರ್ಭದಲ್ಲಿ ಮತ್ತು ಅಲ್ಲಿಂದ ಹೊರಗೆ ಬಂದ ಮೇಲೂ ಇಲ್ಲಿಯವರೆಗೂ ನಮ್ಮನ್ನು ಬೆಳೆಸಿ ಕಾಪಾಡಿಕೊಂಡು ಬಂದಿರುವುದು ಧರ್ಮವೇ. ಧರ್ಮವು ಜಗತ್ತನ್ನು ಕೈಬಿಟ್ಟರೆ ಒಂದು ಕ್ಷಣವೂ ಯಾವುದೂ ಉಳಿಯುವಂತಿಲ್ಲ. ಆದ್ದರಿಂದ ನಮ್ಮನ್ನು ಉಳಿಸುವುದೂ ಧರ್ಮವೇ" ಎಂದು. ಯಾವುದು ಈ ಜಗತ್ತನ್ನು ಹೊತ್ತಿದೆಯೋ, ಯಾವುದು ಈ ಜಗತ್ತನ್ನು ರಕ್ಷಿಸುತ್ತಿದೆಯೋ, ಅದನ್ನೇ 'ಧರ್ಮ' ಎಂದು ಕರೆಯುತ್ತಾರೆ. ಈ ವಿಶ್ವವು ಯಾವುದೋ ಒಂದು ಧಾರಕಶಕ್ತಿಯಿಂದ ಮುನ್ನಡೆದುಕೊಂಡು ಬರುತ್ತಿದೆ. ಸೂರ್ಯ, ಚಂದ್ರ, ಗ್ರಹ, ನಕ್ಷತ್ರಗಳು ಆಕಾಶದಲ್ಲಿ ಹೇಗೆ ಇರಲು ಸಾಧ್ಯ. ಏತಕ್ಕೆ ಅವೆಲ್ಲವೂ ಕೆಳಕ್ಕೆ ಬೀಳುವುದಿಲ್ಲ. ನಾವು ಆರೋ ಏಳೋ ಅಡಿಯ ಎತ್ತರವಿರುತ್ತೇವೆ? ಏಕೆ ಕೆಳಕ್ಕೆ ಬೀಳುವುದಿಲ್ಲ? ಅಂದರೆ ಇದಕ್ಕೆ ಕಾರಣವೇ ಆ ಧಾರಕಶಕ್ತಿಯಾದ ಧರ್ಮ. ಅದರದರ ಸ್ವಸ್ಥವಾದ - ಆರೋಗ್ಯವಾದ ಅವಸ್ಥೆಯನ್ನೇ 'ಧರ್ಮ' ಎಂದು ಕರೆಯುತ್ತೇವೆ. ಅದು ಕೆಟ್ಟಾಗ ಧರ್ಮ ಕೆಟ್ಟಿದೆ ಎನ್ನಲಾಗುತ್ತದೆ. ಇಲ್ಲಿ ಧರ್ಮ ಎಂದರೆ ಯಾವುದೋ ಮತ, ಆಚಾರ, ವಿಚಾರವಲ್ಲ. ಧಾರಕಶಕ್ತಿಯನ್ನು ಉಳಿಸುವಂತೆ ಇದ್ದಾಗ ಮಾತ್ರ ಇವೆಲ್ಲವೂ ಧರ್ಮವಾಗಬಹುದು. ಸಹಜಾವಸ್ಥೆ ಮತ್ತು ಅದನ್ನು ಉಳಿಸುವ ಕಾರಣಸಾಮಗ್ರಿ ಎಲ್ಲವನ್ನೂ ಒಟ್ಟಾಗಿ ಸೇರಿಸಿ 'ಧರ್ಮ' ಎಂದು ಕರೆಯಬಹುದು. ಇವೆಲ್ಲವೂ ಅವುಗಳ ಕಾರ್ಯವನ್ನು ಮಾಡಲು ಸರ್ವಸಮರ್ಥವಾಗಿದ್ದಾಗ ಧರ್ಮ ಸರಿಯಾಗಿದೆ ಎನ್ನುತ್ತೇವೆ. ಇಂತಹ ಅವಸ್ಥೆಯನ್ನು ಉಳಿಸಲು ಕೆಲಸವನ್ನು ಮಾಡಬೇಕಾಗುತ್ತದೆ. ಮತ್ತು ಅಂತಹ ಅವಸ್ಥೆ ಕೆಟ್ಟಾಗಲೂ ಸರಿಪಡಿಸಲು ಕೆಲಸ ಮಾಡಬೇಕಾಗುತ್ತದೆ. ಇದನ್ನೇ 'ತಪಸ್ಸು' ಎಂಬುದಾಗಿ ಯಕ್ಷನ ಪ್ರಶ್ನೆಗೆ ಉತ್ತರವಾಗಿ ಭಾವಿಸಬೇಕು. 

ಉದಾಹರಣೆಗೆ ಶರೀರದ ಪ್ರತಿಯೊಂದು ಅಂಗವೂ ಅದರದರ ಸಹಜತನದಲ್ಲಿ ಇದ್ದರೆ ಮಾತ್ರವೇ ಶರೀರ ಸ್ವಸ್ಥವಾಗಿದೆ ಎನ್ನುತ್ತೇವೆ. ಅಂತಹ ಶರೀರವೇ "ಶರೀರಮಾದ್ಯಂ ಖಲು ಧರ್ಮಸಾಧನಮ್" ಆಗುತ್ತದೆ. ಕೆಲವೊಮ್ಮೆ 'ತಲೆ ಸುತ್ತುತ್ತದೆ' ಎಂದು ಹೇಳುತ್ತೇವೆ. ಆಗ ಉಳಿದೆಲ್ಲ ಅಂಗಗಳು ಸರಿ ಇದ್ದರೂ ಅಲ್ಲಿ ಕೆಲಸಮಾಡಲು ಸಾಧ್ಯವಾಗುವುದಿಲ್ಲ. ಅಗ ತಲೆ ಸುತ್ತು ಆಗದಂತೆ ಮಾಡಬೇಕಾಗುತ್ತದೆ. ಅಥವಾ ತಲೆ ಯಾವಾಗಲೂ ಸುತ್ತದೇ ಇರುವಂತೆ ನೊಡಿಕೊಳ್ಳಬೇಕಾಗುತ್ತದೆ. ಸೃಷ್ಟೀಶನ ಆಶಯಕ್ಕೆ ಅನುಗುಣವಾಗಿ ಆ ಪದಾರ್ಥದಮೂಲಸ್ವರೂಪವನ್ನು ಕೆಡಿಸದಂತೆಉಳಿಸುವುದೇ 'ತಪಸ್ಸು'.  

ಸೂಚನೆ : 17/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.