Saturday, April 6, 2019

ಅಭಿಜಾತ ಶಿಶುವಿಗೆ ಜಾತಕರ್ಮ ಸಂಸ್ಕಾರ– 2 (Abhijata shishuvige jatakakarma samskara-2)

ಲೇಖಕರು: ತಾರೋಡಿ ಸುರೇಶ


ಹಿಂದಿನ ಲೇಖನದಲ್ಲಿ ಜಾತಕರ್ಮ ಸಂಸ್ಕಾರದ ಸಂಕ್ಷಿಪ್ತ ನೋಟವನ್ನು  ಕೊಡಲಾಗಿತ್ತು. ನವಜಾತಶಿಶುವಿಗೆ ಒಡನೆಯೇ ಮಾಡಬೇಕಾಗಿರುವ ಸಂಸ್ಕಾರವಿದು.ಅದರ ವಿಧಿವಿಧಾನಗಳನ್ನು ಈಗ ಗಮನಿಸೋಣ.

ಶಿಶುವು ಜನಿಸಿದ ಸಮಾಚಾರವನ್ನು ಕೇಳಿದೊಡನೆಯೇ ಮಹಾನದಿಯಲ್ಲಿ,  ಧರಿಸಿರುವ ವಸ್ತ್ರಸಹಿತವಾಗಿ ಸ್ನಾನ ಮಾಡಬೇಕೆಂದು ಶಾಸ್ತ್ರಗಳು ವಿಧಿಸುತ್ತವೆ. ಸಾಮಾನ್ಯವಾಗಿ ರಾತ್ರಿಸ್ನಾನ ನಿಷಿದ್ಧ. ಆದರೆ ಇಲ್ಲಿ ಯಾವುದೇ ಕಾಲವಾದರೂ ಸ್ನಾನ ಮಾಡಲೇಬೇಕು. ಹಾಗೆ ಮಾಡುವಾಗ ಉತ್ತರಾಭಿಮುಖವಾಗಿ, ಶೀತಜಲದದಲ್ಲಿ ಸ್ನಾನ ಮಾಡಬೇಕು. ಶ್ರೀರಂಗಮಹಾಗುರುಗಳು ಪರಿಣಾಮದ ದೃಷ್ಟಿಯಿಂದ ತಣ್ಣೀರೇ ಶ್ರೇಷ್ಠ ಎಂದು ತಿಳಿಸಿದ್ದರು. ಶಿಶುವಿನ ಜನನದಿಂದ  ಉಂಟಾದ ಸಂತೋಷ ಇತ್ಯಾದಿಗಳ ಕಾರಣದಿಂದ ತಂದೆಯ ಪ್ರಕೃತಿಯಲ್ಲಿ ಒಂದು ವಿಶೇಷ ಬದಲಾವಣೆ ಉಂಟಾಗುವುದರಿಂದ ಶೀತಜಲದಿಂದ ಮಾಡುವ ರಾತ್ರಿಸ್ನಾನದಿಂದ ಯಾವುದೇ ತೊಂದರೆಯಾಗುವುದಿಲ್ಲ. ವ್ಯತಿರಿಕ್ತವಾಗಿ ಒಳ್ಳೆಯದೇ ಆಗುತ್ತದೆ ಎಂದೂ ಅವರು ಹೇಳಿದ್ದರು. ಪಿತೃ ಋಣದಿಂದ ಮುಕ್ತನಾಗುತ್ತಾನೆ. ಶ್ರದ್ಧೆಯಿಂದ ಕೂಡಿದ ಅಂತಹ ಧನ್ಯತೆಯ ಭಾವವೂ ಸೇರಿಕೊಂಡು ತಣ್ಣೀರಿನ ಸ್ನಾನ ಪೋಷಕವೇ ಆಗುತ್ತದೆ.

ನದಿಯಲ್ಲಿ ಸ್ನಾನ ಸಾಧ್ಯವಾಗದಿದ್ದರೆ, ಸುವರ್ಣ ಮತ್ತು ತುಳಸಿಯನ್ನು ಸೇರಿಸಿದ ನೀರಿನಲ್ಲಿ ಸ್ನಾನ ಮಾಡಬೇಕು. ಏಕೆಂದರೆ ಈ ಎರಡು ದ್ರವ್ಯಗಳ ಸೇರುವೆಯಿಂದ ನೀರಿಗೆ ವಿಶೇಷ ಪಾವಿತ್ರ್ಯ ಕೂಡಿಬರುತ್ತದೆ. ಹಾಗೆಯೇ ಹಗಲಿನಲ್ಲಿ ಸೂರ್ಯ ಮತ್ತು ಜ್ಯೋತಿಯ ಸನ್ನಿಧಿಯಲ್ಲಿಯೂ ಮತ್ತು ಇರುಳಿನಲ್ಲಿ ಅಗ್ನಿಯ ಸನ್ನಿಧಿಯಲ್ಲಿಯೂ ಸ್ನಾನ ಮಾಡಬೇಕು. ಜೊತೆಗೆ ಉತ್ತರಾಭಿಮುಖವಾಗಿ ನಿಂತು ಸ್ನಾನ ಮಾಡಬೇಕೆಂಬ ವಿಧಿಯುಂಟು. ತಂದೆಯು ಪಿತೃಋಣದಿಂದ ಮುಕ್ತನಾಗಿ ಋಣದ ಭಾರವು ಕಳೆದು ಉತ್ತಮಗತಿಗೆ ಪಾತ್ರನಾಗುತ್ತಾನೆ. ಆ ಕಾಲದಲ್ಲಿ ಉತ್ತರದಿಕ್ಕಿಗೆ ಅಭಿಮುಖವಾಗಿ ನಿಂತು ಸ್ನಾನ ಮಾಡುವುದರಿಂದ ಉತ್ತಮವಾದ ಗತಿಗೆ ಅದು ಪೋಷಕವಾಗಿ ಪರಿಣಮಿಸುತ್ತದೆ. ಲೌಕಿಕದಲ್ಲಿಯೂ ಸಾಮಾನ್ಯವಾಗಿ ಸಾಲವನ್ನು ತೀರಿಸಿದಾಗ ಸಚೇಲಸ್ನಾನ ಮಾಡುವ ರೂಢಿಯಿದೆ. “ಆದರೆ ಇಲ್ಲಿ ಸಾಲ ತೀರಿಸಿಯಾಗಿದೆ. ಮತ್ತೇಕೆ ಸಚೇಲಸ್ನಾನ?”ಎಂಬ ಪ್ರಶ್ನೆಗೆ ಅವಕಾಶವಿದೆ. ಸಾಲದ ಲವಲೇಶವೂ ಇಲ್ಲದಂತೆ, ಸಂಪೂರ್ಣವಾಗಿ ಋಣಭಾರದ ಸ್ಮರಣೆಯೂ ಬಾರದಂತೆ ಮಾಡಿಕೊಳ್ಳುವ ಪ್ರಕ್ರಿಯೆ ಇದು.

ನಂತರ ಹಿರಣ್ಯರೂಪದಲ್ಲಿ ನಾಂದೀಶ್ರಾದ್ಧವನ್ನು ಮಾಡಬೇಕು. “ನಂದ್ಯಂತೇ ದೇವಾಃ ಪಿತರಶ್ಚ ಅನೇನ ಇತಿ ನಾಂದೀ” ಪಿತೃಗಳೂ ಮತ್ತು ದೇವತೆಗಳಿಬ್ಬರೂ ಪ್ರಸನ್ನರಾಗಲು ಮಾಡಬೇಕಾದದು ನಾಂದೀ. ಇದು ಮಂಗಳಕರವಾದದ್ದು. ಆನಂದ ಮತ್ತು ಏಳ್ಗೆಯನ್ನು ಉಂಟುಮಾಡುವಂತಹದ್ದು. ಇದನ್ನು ಅಭ್ಯುದಯ ಶ್ರಾದ್ಧವೆಂದೂ, ವೃದ್ಧಿಶ್ರಾದ್ಧವೆಂದೂ ಕರೆಯುವುದುಂಟು. ಕೆಲವು ಸಂಪ್ರದಾಯಗಳಲ್ಲಿ, ನಾಂದೀ ಶ್ರಾದ್ಧದ ನಂತರ ಮಗುವಿಗೂ ಸ್ನಾನ ಮಾಡಿಸುವ ವಿಧಿಯಿದೆ. ನೀರಿನಲ್ಲಿ ಮುಳುಗಿ ಮಾಡುವ ವಾರುಣ ಸ್ನಾನ, ಗೋವಿನ ರಜಸ್ಸಿನ ಸ್ಪರ್ಷವು ವಾಯುವ್ಯಸ್ನಾನ. ಮೈಗೆ ಭಸ್ಮಲೇಪನ ಆಗ್ನೇಯಸ್ನಾನ. ಬಿಸಿಲುಮಳೆಯು ವರ್ಷಸ್ನಾನ ಅಥವಾ ದಿವ್ಯಸ್ನಾನ. ಮಂತ್ರಪೂತನೀರಿನಿಂದ ಪ್ರೋಕ್ಷಣೆ ಮಾಡಿಕೊಳ್ಳುವುದು ಮಂತ್ರಸ್ನಾನ. ಪರಮಾತ್ಮಧ್ಯಾನವು ಮಾನಸ ಸ್ನಾನ.- ಹೀಗೆ ಸ್ನಾನದಲ್ಲಿ ಅನೇಕ ವಿಧಗಳಿವೆ. ಶಿಶುವಿಗೆ ನೀರಿನಿಂದ ತೊಂದರೆಯಾಗುವುದಾದರೆ, ದರ್ಬೆಯ ಕೂರ್ಚದಿಂದ ಮಂತ್ರೋದಕವನ್ನು ಪ್ರೋಕ್ಷಿಸಿದರೂ ಅದು ಸ್ನಾನದ ಫಲವನ್ನೇ ಕೊಡುತ್ತದೆ.ಪ್ರಯೋಗ ಮತ್ತು ಅವುಗಳ ವಿಜ್ಞಾನವನ್ನು ಮುಂದಿನ ಲೇಖನದಲ್ಲಿ ಚಿಂತಿಸೋಣವಂತೆ.
(ಮುಂದುವರಿಯುತ್ತದೆ)


ಸೂಚನೆ: ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.