Tuesday, May 21, 2019

ಚೂಡಾಕರ್ಮದ ತಾತ್ವಿಕ ಅಂಶಗಳು (Choodakarmada thaathvika amshagalu)

ಲೇಖಕರು: ತಾರೋಡಿ ಸುರೇಶ



ಆಯುರ್ವೇದದ ಪ್ರಕಾರ ತಲೆಯ ಮುಂಭಾಗಕ್ಕೆ ಸೂರ್ಯಕಿರಣಗಳು ಬೀಳುವಂತಿರಬೇಕು. ಅದರಿಂದ ಆರೋಗ್ಯ, ಅಧ್ಯಾತ್ಮ ಹಾಗೂ ದೇವತಾಪ್ರಸನ್ನತೆಗೆ ಸಂಬಂಧಪಟ್ಟ ಕೇಂದ್ರಗಳು ಪ್ರಬೋಧಗೊಳ್ಳುತ್ತವೆ. ಅದನ್ನು ಅಡ್ಡಿಪಡಿಸುವ ಕೂದಲುಗಳನ್ನು ತೆಗೆಸಬೇಕು. ಶಿಖಾಸ್ಥಾನದಲ್ಲಿ ಶಿಖೆಯನ್ನಿರಿಸಿಕೊಳ್ಳಬೇಕು.  ಶಿಖಾಸ್ಥಾನದ ಒಳಭಾಗದಲ್ಲಿ ‘ಅಧಿಪತಿ’ ಎಂಬ ಮರ್ಮಸ್ಥಾನವಿದೆ. ಅದನ್ನು ಸಂರಕ್ಷಿಸಿಕೊಳ್ಳಬೇಕು. ಅಲ್ಲಿಗೇನಾದರೂ ಏಟು ಬಿದ್ದರೆ ಪ್ರಾಣಾಪಾಯ. ಅಲ್ಲಿ ಕೂದಲನ್ನು ಚೆನ್ನಾಗಿ ಬೆಳೆಸಬೇಕು.

ಆದರೆ ಶಿಖೆಯು ಕೇವಲ ಭೌತಿಕಲಾಭಕ್ಕಾಗಿ ಮಾತ್ರವಲ್ಲ. “ತಪೋಧ್ಯಾನಗಳಲ್ಲಿ ಆಳವಾಗಿ ಮುಳುಗಿದ ಮಹರ್ಷಿಗಳು ಸಮಾಧಿಸ್ಥಿತಿಯಲ್ಲಿ ಒಂದು ಜ್ಞಾನಶಿಖೆಯನ್ನು ದರ್ಶನ ಮಾಡುತ್ತಾರೆ.ಆ ಶಿಖೆಯ ಮಧ್ಯದಲ್ಲಿ ಪರಮಾತ್ಮನು ವಿರಾಜಮಾನನಾಗಿದ್ದಾನಪ್ಪ. ಶಿಖೆಗೆ ಒಳಗಿನ ಜ್ಞಾನಶಿಖೆಯೇ ಮೂಲ” ಎಂದು ಶ್ರೀರಂಗಮಹಾಗುರುಗಳು ಇದಕ್ಕೆ ವಿವರಣೆಯನ್ನು ಕೊಟ್ಟಿದ್ದರು. ”ತಸ್ಯಾ ಶಿಖಾಯಾ ಮಧ್ಯೇ ಪರಮಾತ್ಮಾ ವ್ಯವಸ್ಥಿತಃ” ಎಂಬ ಮಾತಿದೆ. ಈ ಹೊರಗಿನ ಶಿಖೆಯು ಒಳಶಿಖೆಯ ಸ್ಮರಣೆಯನ್ನು ಕೊಡುತ್ತದೆ. ಆ ಸ್ಮರಣೆಯೂ ಒಂದು ಸಂಸ್ಕಾರವೇ.

ಶಿಖೆಯು ಗೋವತ್ಸಪಾದದ ಆಕಾರದಲ್ಲಿರಬೇಕು ಎಂದು ಶಾಸ್ತ್ರಗಳು ವಿಧಿಸುತ್ತವೆ. ಶಿಖೆಯು ವೃತ್ತಾಕಾರದಲ್ಲಿರಬೇಕು ಮತ್ತು ಮುಷ್ಟಿಯಲ್ಲಿ ಹಿಡಿದರೆ ಒಂದು ಅಂಗುಷ್ಟದ ಗಾತ್ರವಿರಬೇಕು ಎಂದು ಶ್ರೀರಂಗಮಹಾಗುರುಗಳು ಸೂಚಿಸಿದ್ದರು. ಇದು ಬ್ರಹ್ಮಸ್ಥಾನ. ಯಾವುದೇ ಕರ್ಮವನ್ನು ಆಚರಿಸುವಾಗಲೂ ಬದ್ಧಶಿಖಿಯಾಗಿ ಮಾಡಬೇಕು ಎಂಬ ನಿಯಮವಿದೆ.ಇಲ್ಲದಿದ್ದರೆ ಕರ್ಮವು ವ್ಯರ್ಥವಾಗುತ್ತದೆ. ಅದನ್ನು ಸ್ವಲ್ಪ ಬಿಗಿಯಾಗಿ ಗಂಟು ಹಾಕಬೇಕು.ಇದು ಊರ್ಧ್ವದಲ್ಲಿರುವ ಜ್ಞಾನದ ಕೇಂದ್ರದತ್ತ ಮನಸ್ಸು ಮತ್ತು ಪ್ರಾಣಗಳನ್ನು ಮೇಲಕ್ಕೇರಿಸಿ ಜ್ಞಾನಪ್ರಬೋಧಕ್ಕೆ ಪೋಷಕವಾಗುತ್ತದೆ. ಇದೇ ನಿಯಮವು ಸ್ತ್ರೀಯರಿಗೂ ಅನ್ವಯಿಸುತ್ತದೆ. ಅವರೂ ಜಡೆ ಹಾಕಿಕೊಳ್ಳದೆ ಅಥವಾ ಕೂದಲನ್ನು ಗಂಟು ಹಾಕಿಕೊಳ್ಳದೇ ಯಾವ ಕರ್ಮವನ್ನೂ ಮಾಡಬಾರದು.

ಸ್ತ್ರೀಯರಿಗೆ ಚೂಡಾಕರ್ಮವು ಉಂಟೇ ಎಂಬ ಪ್ರಶ್ನೆ ಸಹಜ. ಹಿಂದೆ ಅವರಿಗೆ ಸಾಂಕೇತಿಕವಾಗಿ ಮಾಡುತ್ತಿದ್ದರು. ಈಗಲೂ ಕೇರಳದಲ್ಲಿ ಅದರ ಅವಶೇಷಗಳುಂಟು. ಅವರಿಗೆ ತಲೆಯನ್ನು ಪೂರ್ತಿ ಮುಂಡನಮಾಡಿಸಬಹುದು ಅಥವಾ ಶಿಖೆಯನ್ನು ಇಡಬಹುದು. ಸ್ತ್ರೀಯರು ಸಹಜವಾಗಿಯೇ ಕೋಮಲ ಪ್ರಕೃತಿಯವರು. ಕುಂಡಲಿನೀ ಶಕ್ತಿಯು ಪುರುಷರಿಗಿಂತ ಸ್ತ್ರೀಯರಲ್ಲಿ ವಿಶೇಷಪ್ರಮಾಣದಲ್ಲಿ ಕೆಲಸಮಾಡುತ್ತವೆ ಎಂದು ಯೋಗಸಾಹಿತ್ಯಗಳು ಕೊಂಡಾಡುತ್ತವೆ. ಭಕ್ತಿಯೂ ಅವರಿಗೆ ಸುಲಭವಾಗಿ ಒಲಿಯುತ್ತದೆ. ಜೀವಿಗಳನ್ನು ವಿಕಾಸಗೊಳಿಸುವ ವಿಶೇಷ ಜವಾಬ್ದಾರಿಯು ಅವರಿಗೆ ಪ್ರಕೃತಿಸಹಜವಾಗಿ ಒದಗಿಬಂದಿದೆ. ಅದಕ್ಕೆ ತಕ್ಕ ಮಾಂಗಲ್ಯದ ಕೇಂದ್ರಗಳು, ಅಂಗಾಂಗಗಳು ಅವರಲ್ಲಿ ವೈಶಿಷ್ಟ್ಯಪೂರ್ಣವಾಗಿದ್ದು ಅವುಗಳನ್ನು ಸಂರಕ್ಷಿಸಿಕೊಳ್ಳಬೇಕಾಗುತ್ತದೆ. ಸದಾ ಕೂದಲನ್ನು ಕತ್ತರಿಸಿಕೊಳ್ಳುವುದರಿಂದ ಅವುಗಳಲ್ಲಿ ದೋಷಗಳ ಸಂಕ್ರಮಣವಾಗುತ್ತವೆ. ಎಲ್ಲರಿಗೂ ಒಂದೇ ನಿಯಮ ಸರಿಯಲ್ಲ. ಸಂನ್ಯಾಸಿಗಳು ಮತ್ತು ಯತಿಸ್ಥಾನದಲ್ಲಿರುವ ಮಡಿಹೆಂಗಸರು ಕೇಶವಪನವನ್ನು ಆಯುರ್ವೃದ್ಧಿಗಾಗಿ ಮಾಡದೆ ಕೇವಲ ಪಾವಿತ್ರ್ಯಕ್ಕಾಗಿ ಮಾಡಿಕೊಳ್ಳುತ್ತಾರೆ.

 ಕ್ಷೇತ್ರ ಇತ್ಯಾದಿಗಳಲ್ಲಿ ದೇವರಿಗೆ ಕೇಶಸಮರ್ಪಣೆಯು(ಮುಂಡನ) ಮಂಗಲವಾದ ಕರ್ಮವೇ. ಹಿಂದೆ ಮೊದಲೇ ಸ್ನಾನಾದಿಗಳನ್ನು ಮಾಡಿ ಶುದ್ಧರಾಗಿ ನಂತರ ಮುಂಡನ ಮಾಡಿಸಿಕೊಂಡು ಭಗವದರ್ಪಣೆ ಮಾಡುತ್ತಿದ್ದರು. ಕಾಶಿಯಲ್ಲಿ ಮುಂಡನದ ಜಾಗವನ್ನು ಮುಂಡನ್ ಆಶ್ರಮ್ ಎಂದೇ ಕರೆಯುತ್ತಾರೆ. ಚೌಲದಲ್ಲಿ ಬಳಸುವ ದ್ರವ್ಯಗಳು,ಮಂತ್ರಗಳು, ಕತ್ತರಿಸುವುದರ ವಿಜ್ಞಾನ, ದೇವತೆಗಳೆಂದರೆ ಯಾರು,ನಾಪಿತನನ್ನು ನೋಡುವಿಕೆ- ಹೀಗೆ ಒಂದೊಂದು ವಿಷಯದಲ್ಲಿಯೂ ಅನೇಕ ಮರ್ಮಗಳನ್ನು ಋಷಿಗಳು ಇಟ್ಟಿದ್ದಾರೆ. ಒಂದೆರಡನ್ನು ಮಾತ್ರ ಇಲ್ಲಿ ವಿವೇಚಿಸಲಾಗಿದೆ.


ಸೂಚನೆ: 21/05/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.