Sunday, June 2, 2019

ಪುರಾಣಗಳನ್ನು ಹೇಗೆ ಓದಬೇಕು? (Puranagalannu hege odabeku?)

ಲೇಖಕರು: ಡಾ. ಆರ್. ಮೋಹನ

ನಮ್ಮ ದೇಶದ ಪ್ರಾಚೀನ ಸಾಹಿತ್ಯಗಳಲ್ಲಿ ಪುರಾಣಗಳು ಅತಿಮುಖ್ಯವಾದ ಸ್ಥಾನವನ್ನು ಪಡೆದಿವೆ. ಜನಸಾಮಾನ್ಯರಿಗೂ, ಮಕ್ಕಳಿಗೂ  ಮನಮುಟ್ಟುವಂಥಹ ಕಥಾನಕಗಳು ಪುರಾಣಗಳಲ್ಲಿ ಅತ್ಯಂತ ಪುಷ್ಕಳವಾಗಿವೆ. ಮಹಾವಿಷ್ಣು  ಮತ್ತು ಶಿವ-ಮಹಾದೇವನ ಅವತಾರಗಳು, ಪ್ರಹ್ಲಾದ, ಧ್ರುವ, ಕೃಷ್ಣ, ರುಕ್ಮಿಣಿ, ಸತ್ಯಭಾಮೆ, ಗರುಡ, ಇಂದ್ರಾದಿ ದೇವತೆಗಳೇ ಮೊದಲಾದ ಅನೇಕ ಪಾತ್ರಗಳಿಂದ ಕೂಡಿದ ಕಥಾಭಾಗಗಳು ಸಿನೆಮಾ, ಕಾದಂಬರಿ  ಹಾಗೂ ಕಾರ್ಟೂನ್ ಮಾಧ್ಯಮಗಳ ಮೂಲಕ ಲೋಕಪ್ರಿಯವಾಗಿವೆ. ಅದರ ಜೊತೆಗೆ ಮತ್ತೊಂದು ಪ್ರವೃತ್ತಿಯೂ ಹುಟ್ಟಿಕೊಂಡಿದೆ. ಇದು ಅಂದು ಹೇಳಿದ ಕಟ್ಟು ಕಥೆ. ಇದನ್ನು ಮನಸೋಇಚ್ಛೆ ಬದಲಾಯಿಸಿ ಇಂದಿನ ಓದುಗರಿಗೆ ಮತ್ತಿನ್ನೂ ರೋಚಕವಾಗಿ ಮಾಡೋಣವೆಂದು ಕೆಲವರು. ಈ ಕಥೆಗಳ ಮೂಲಕ ಅಂದಿನ ಸಾಮಾಜಿಕ ವಸ್ತುಸ್ಥಿತಿಯನ್ನು ಕುರಿತು ವಿಮರ್ಶೆ, ಅನ್ವೇಷಣೆ,  ಟೀಕೆ ಮುಂತಾದುವುಗಳನ್ನು ನಡೆಸುವಿಕೆಯೂ ಇಂದು ಪ್ರಚಲಿತವಾಗಿದೆ. ಇದು ಅಸಾಂಪ್ರದಾಯಿಕ ಎಂದು ಕೆಲವರ ವಿರೋಧವಾದರೆ, ನವ್ಯ ಅನ್ವೇಷಣಾ ಕ್ರಮವೆಂದು ಇನ್ನಿತರರು. ಯಾವುದು ಸರಿ ?

ಸೃಷ್ಟಿ ತತ್ತ್ವದ ಒಳ ಅನುಭವದಿಂದ ವೇದ-ಪುರಾಣಗಳ ಉಗಮ.

ಪುರಾಣ ಕಥೆಪುಸ್ತಕವಲ್ಲಎಂಬುದು ಮೊದಲಮಾತು. ಪುರಾಣಗಳು ವೇದಗಳಂತೆಯೇ ಪವಿತ್ರಗ್ರಂಥಗಳು. ನಿಸರ್ಗದಲ್ಲಿನ ದೇವತಾ ಶಕ್ತಿಗಳನ್ನು ಒಳಗೆ ಕಂಡು ಅನುಭವಿಸಿದಾಗ ಉಕ್ಕಿಬಂದ ವಾಗ್ಝರಿ ಎಂದರೆ  ವೇದಮಂತ್ರಗಳು. ಆ ಅನುಭವವನ್ನು ಕಥೆಯಾಗಿಯೂ ವರ್ಣಿಸಬಹುದು. ಇದು ಪುರಾಣಗಳ ಶೈಲಿ. ಉದಾಹರಣೆಗೆ ಲೌಕಿಕವೂ ನಿತ್ಯಪರಿಚಿತವೂ ಆದ ಕೋಪವನ್ನು ಬಣ್ಣಿಸುತ್ತಾ “ ಒಳಗೆ ಕೆಂಗಣ್ಣಿನಿಂದ ಕೂಡಿದ ಚಂಡಮಾರುತದಂತಿರುವ ರಾಕ್ಷಸನು ಗರ್ಜಿಸಿದನು. ಅವನು ಕೆಂಪುಬಟ್ಟೆಯನ್ನುಟ್ಟಿದ್ದನು” ಎನ್ನಬಹುದು. ಕೋಪಶಮನವನ್ನು “ ಬಿಳಿಯ ವಸ್ತ್ರಧರಿಸಿದ ಸೌಮ್ಯರಾಜನ ಬಾಣಕ್ಕೆ ಕೆಂಪು ರಾಕ್ಷಸನು ಹತನಾದನು” ಎಂದು ಹೇಳಬಹುದು.  ಈಗ ಈ ಕಥೆಯನ್ನು ನಾಳೆಯ ದಿವಸ ಹೊಸ ದಿಗಂತ ತೋರುವರೀತಿಯಲ್ಲಿ ಬರೆಯೋಣವೆಂದು “ ಬಿಳಿಯ ರಾಕ್ಷಸನನ್ನು ಕೆಂಪು ಧ್ವಜದ ಸೌಮ್ಯರಾಜನು ಕೊಂದ ” ಎಂದು ಬರೆಯಬಹುದು.ಆದರೆ ಕೋಪಕ್ಕೂ ಕೆಂಪು ಬಣ್ಣಕ್ಕೂ ಒಂದುನಿಸರ್ಗಸಹಜವಾದ ಸಂಬಂಧವಿದೆ. ಕೆಂಗಣ್ಣುಗಳು, ಕೆಂದ ತುಟಿ, ರಕ್ತ ಉಕ್ಕುವಿಕೆ ಇವೆಲ್ಲವೂ ಈ ಸಂಬಂಧಕ್ಕೆ ಕಾರಣಭೂತರು. ಇದು ಪುರಾತನವಾದ ಸಂಬಂಧ. ಸದಾಕಾಲ ಉಳಿವ ತತ್ತ್ವ.ಇದನ್ನು ಈ  ರೀತಿ ಬದಲಾಯಿಸುವುದು ಅಸಹಜ. ಇಲ್ಲಿ ಬಣ್ಣಿಸಿದ ಬಣ್ಣಗಳನ್ನು ಚರ್ಮದಬಣ್ಣವೆಂದು ಭಾವಿಸಿ ಬಿಳಿಯ ಚರ್ಮದ ಜನಾಂಗದ ದಬ್ಬಾಳಿಕೆ ಇದೆಂದು ವಿಮರ್ಶೆ ಬರೆದರೆ ಅದು ಹಾಸ್ಯಾಸ್ಪದವೇ  ಸರಿ.

ಪುರಾಣ ಬರೆಯುವುದಕ್ಕೆ, ವಿವರಿಸುವುದಕ್ಕೆ ಜ್ಞಾನಿಯಾಗಿರಬೇಕು.

ಪುರಾಣಗಳನ್ನು ಬರೆಯುವುದಕ್ಕಾಗಲಿ, ವಿಮರ್ಶೆ ಮಾಡುವುದಕ್ಕಾಗಲಿ ಪ್ರಧಾನ ಅರ್ಹತೆ ಒಂದೇ. ಪುರಾಣಗಳಿಗೆ ವಿಷಯವಾದ ಸೃಷ್ಟಿ ತತ್ತ್ವಗಳನ್ನೂ, ಅದರ ಹಿಂದಿನ ದೇವತಾ ಶಕ್ತಿಗಳನ್ನೂ ತನ್ನೊಳಗೆ ಅರಿತಿರಬೇಕು. ಆ ಅಮರವಾದ ಅನುಭವದ ಕಥೆಯನ್ನು ಬರೆದರೆ ಅದು ಪುರಾಣ, ಪುರಾತನ, ಸದಾತನ - ಎಂದೆಂದಿಗೂ ಸತ್ಯವಾದ ಕಥೆ. ಗರುಡ ಹಾರುವುದು, ತ್ರಿಪುರಾಸುರ ಸಂಹಾರ, ವೃತ್ರಾಸುರ ಸಂಹಾರ,  ಮೋಹಿನಿ ಭಸ್ಮಾಸುರ, ಸಮುದ್ರ ಮಂಥನ, ಮುಂತಾದವು ಅಂತಹ ಅತ್ಯುತ್ತಮ ತತ್ತ್ವ ರತ್ನಗಳೆಂದು ಶ್ರೀರಂಗ ಮಹಾಗುರುಗಳು ಸ್ಮರಿಸಿಕೊಂಡಿದ್ದರು. ಪುರಾಣಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂದು ಅದನ್ನು ಬರೆದ ಋಷಿಗಳೇ ಬಿಡಿಸಿಕೊಟ್ಟಿದ್ದಾರೆ. ಉದಾಹರಣೆಯನ್ನು ಕೊಡುವುದಾದರೆ ಭಾಗವತದಲ್ಲಿ ಪುರಂಜಯನೆಂಬ ರಾಜನ ಕಥೆ ವಿಸ್ತಾರವಾಗಿ ವರ್ಣಿಸಿದೆ. ನವದ್ವಾರಗಳಿಂದ  ಕೂಡಿದ ಕೋಟೆಯಲ್ಲಿ ಸುಂದರಿಯೊಡನೆ ವಾಸಿಸುತ್ತಿದ್ದನು. ಅವನ ವೈಭವ, ಬಾಳಾಟ, ಬಳಲಾಟ, ಜೀವನ ಮತ್ತು ಅಂತ್ಯಕಾಲವನ್ನೂ, ಮುಂದಿನ ಜನ್ಮವನ್ನೂ ಹೇಳಿದೆ. ಕಥೆಯನ್ನು ಹೇಳಿಮುಗಿಸಿದ ನಂತರ, ನಾರದ ಮಹರ್ಷಿಗಳು ಈ ಕಥೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂದು ವಿಸ್ತರಿಸುತ್ತಾರೆ. ನವದ್ವಾರಗಳಿಂದಕೂಡಿದ ದೇಹವೇ ಆ ಕೋಟೆ. ಪುರಂಜಯ ದೇಹದಲ್ಲಿ ವಾಸಿಸುವ ಜೀವ. ಆ ಜೀವವು ಇಂದ್ರಿಯಗಳನ್ನು ಭೋಗಿಸುತ್ತ ಅವುಗಳ ವಶನಾಗಿ  ಪಡುವ ಸಂಕಟ ವಿಸ್ತಾರವಾಗಿ ವರ್ಣಿಸಿದೆ. ಅವಿಜ್ಞಾತನೆಂಬ ಮಿತ್ರ ಅವನನ್ನು ಮುಂದಿನ ಜನ್ಮದಲ್ಲಿ ಕಾಪಾಡುವ ವೃತ್ತಾನಂತವು ಇದೆ. ಆ ಅವಿಜ್ಙಾತನೇ ಯಾರಿಗೂ ಕಾಣದಂತೆ ಗುಪ್ತವಾಗಿ ನಮ್ಮೊಡನೆ ಬರುವ ದೈವ. ನಮ್ಮನ್ನು ಶಾಶ್ವತವಾದ ನೆಮ್ಮದಿಯ ನೆಲೆ ಕರೆದೊಯ್ಯುವವನು ಅವನೇ. ಪುರಾಣಗಳನ್ನು ಹೇಗೆ ಓದಬೇಕೆಂಬುದಕ್ಕೆ ಇದು ಉತ್ತಮ ನಿದರ್ಶನ. ಜ್ಞಾನಿಯಾದವನು ಈ ಕಥೆಯನ್ನು ಉಪದೇಶಿಸಿದರೆ, ಅದನ್ನು ಶ್ರದ್ಧೆಯನ್ನು ಕೇಳಿದರೆ, ಅದು ಹೋಮ, ಹವನ, ಪೂಜೆ, ಜಪ, ತಪ ಗಳಿಗೆ ಸಮನಾದ ಫಲವನ್ನು ಕೊಡ ತಕ್ಕದ್ದು.

ಸೂಚನೆ:  01/06/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.