Sunday, June 30, 2019

ವಿವಾಹದಲ್ಲಿ ಮಾಂಗಲ್ಯದ ಅಂತರಾರ್ಥ (Vivahadalli mangalyada antharartha)

ಲೇಖಕರು: ತಾರೋಡಿ ಸುರೇಶ



ಗಂಡು ಹೆಣ್ಣುಗಳ ಮೈ ಬಲಿತು ಸಂತಾನ ಬೆಳೆಸುವ ಯೋಗ್ಯತೆ ಬೆಳೆಯುವುದಷ್ಟೇ ವಿವಾಹದ ಪಾತ್ರತೆಯಲ್ಲ. ಜೀವನದ ಬೇರಾಗಿರುವ ನಾರಾಯಣ(ಶಿವ) ಸ್ವರೂಪದಲ್ಲಿ ಮನಸ್ಸು ಸಂಲಗ್ನವಾಗಿ ತಾಮ್ರದ ತಂತಿಯಲ್ಲಿ ವಿದ್ಯುತ್ತಿನ ಪ್ರವಾಹವು ಹರಿಯುವಂತೆ ದೈವೀಭಾವವನ್ನು ಹರಿಯಿಸಬಲ್ಲ ಮೈ ಇವನದಾಗಿರಬೇಕು. ಅದಕ್ಕೆ ತಕ್ಕ ಯೋಗ್ಯತೆಯನ್ನು ಪಡೆದು ಗುರುವಿನ ಅನುಮತಿಯ ನಂತರವೇ ಅವನು ಗೃಹಸ್ಥಾಶ್ರಮಕ್ಕೆ ಹೆಜ್ಜೆಯಿರಿಸುತ್ತಾನೆ. ಅಂತೆಯೇ ವಧುವೂ ಸ್ವಗೃಹದಲ್ಲಿಯೇ ಸುಶಿಕ್ಷಿತಳಾಗಿರುತ್ತಾಳೆ. ಆದ್ದರಿಂದ ಇದು ಕೇವಲ ಹೊರಮೈಗಳ ಒಂದಾಗುವಿಕೆಯಲ್ಲ. ಒಳ ತತ್ವಗಳ-ಶಕ್ತಿಗಳ ಬೆಸುಗೆ. ಋಷಿಗಳ ಈ ನೋಟವನ್ನು ವಿವಾಹದ ಒಂದೊಂದು ಕ್ರಿಯಾಕಲಾಪಗಳಲ್ಲಿಯೂ ಗಮನಿಸಬಹುದು.

ಮಂಗಳಾಭರಣವಾದ ಮಾಂಗಲ್ಯವು (ತಾಳಿ) ಇದಕ್ಕೆ ಇನ್ನೊಂದು ಉದಾಹರಣೆಯಾಗಿದೆ. ಮಹರ್ಷಿಗಳು ಕಂಡ ಒಳಭಾವಕ್ಕೆ ಇದು ಹೊರನಕ್ಷೆಯಾಗಿದೆ. ಮಾಂಗಲ್ಯದಲ್ಲಿ ಸಾಮಾನ್ಯವಾಗಿ ಬಿಂದು, ವಿಸರ್ಗ, ಸೂರ್ಯಚಂದ್ರಾಗ್ನಿಗಳ ಕುರುಹು ಇದ್ದೇ ಇರುತ್ತವೆ. ಅದನ್ನು ಕಟ್ಟುವ ಸ್ಥಾನ ಕಂಠ ಮತ್ತು ಬಹುಮಟ್ಟಿಗೆ ಅದಕ್ಕೆ ಬಳಸುವ ದ್ರವ್ಯ ಸುವರ್ಣ. ಶ್ರೀರಂಗಮಹಾಗುರುಗಳು ಕೊಟ್ಟ ವಿವರಣೆಯನ್ನಾಧರಿಸಿ ಕೆಳಗಿನ ವಿವರಗಳನ್ನು ಕೊಡಬಹುದು. ವರನು ಮಾಂಗಲ್ಯವನ್ನು ವಧುವಿನ ಕಂಠಕ್ಕೆ ಕಟ್ಟುತ್ತಾನೆ. ಮಾನವನ ಬೆನ್ನುಮೂಳೆಯ ಒಳಪಾರ್ಷ್ವದಲ್ಲಿ ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ ಮತ್ತು ಸಹಸ್ರಾರ ಎಂದು ಕರೆಯಲ್ಪಡುವ ಸಪ್ತಚಕ್ರಗಳಿವೆ ಎಂದು ಜ್ಞಾನಿಗಳು ಹೇಳುತ್ತಾರೆ. ಇದನ್ನು ಆರ್ಷಸಾಹಿತ್ಯಗಳೂ ಎತ್ತಿ ಹೇಳಿವೆ. ಹಾಗೆಯೇ ಮೂಲಾಧಾರದಿಂದ ಕಂಠದವರೆಗಿನ ಎಡೆಯನ್ನು ಶಕ್ತಿಸ್ಥಾನವೆಂದು( ಪ್ರಕೃತಿ ಸ್ಥಾನವೆಂದು) ಕಂಠದಿಂದ ಮೇಲಿನ ಭಾಗವನ್ನು ಶಿವನ(ಪುರುಷ) ಸ್ಥಾನವೆಂದೂ ಗುರುತಿಸಿದ್ದಾರೆ. ಕಂಠಪ್ರದೇಶವು ಶಿವಶಕ್ತಿಯರ ಸಂಗಮಸ್ಥಾನವಾಗಿದೆ. ಈ ಸಂಗಮದ ಎಡೆಯಲ್ಲಿಯೇ  ಮಾಂಗಲ್ಯವನ್ನು ವರನು ಕಟ್ಟುತ್ತಾನೆ. ಶಿವಭಾವವನ್ನು ಮುಟ್ಟಿರುವ ವರನು ತನ್ನ ದೈವೀಭಾವವನ್ನು ಪ್ರಕೃತಿಯಲ್ಲಿ ವಿಸ್ತರಿಸುವ, ಒಳಭಾವದ ನೆನಪಿನೊಡನೆ, ಶಿವಶಕ್ತಿಗಳ ಸಮಾಗಮದ ಸ್ಥಾನದಲ್ಲಿಯೇ ಮಾಂಗಲ್ಯವನ್ನು ಕಟ್ಟುತ್ತಾನೆ.

ಎರಡು ಹುಬ್ಬುಗಳ ನೇರಕ್ಕಿಂತಲೂ (ಆಜ್ಞಾಚಕ್ರದ) ಮೇಲ್ಮುಖವಾಗಿ ಜ್ಞಾನಿಯ ಯೋಗದೃಷ್ಟಿಯು ಹರಿದಾಗ ಅಲ್ಲಿ ಬಿಂದುವಿನಂತಹ ಒಂದು ಬೆಳಕಿನ ದರ್ಶನವಾಗುತ್ತದೆ. ಅದೆ ಶಿವ(ನಾರಾಯಣ) ರೂಪವಾದ ಜ್ಯೋತಿ. ಆ ಜ್ಯೋತಿಯೇ ತನ್ನ ಸಂಕಲ್ಪದಿಂದ ಪ್ರಕೃತಿರೂಪವಾದ ಕ್ಷೇತ್ರವನ್ನು ಸೃಷ್ಟಿಸಿಕೊಳ್ಳುತ್ತದೆ. ಆಗ ಒಂದು ಬಿಂದುವು ಎರಡಾದಂತಾಯಿತು. ಅದೇ ವಿಸರ್ಗರೂಪವಾದದ್ದು. ಮೂಲಚೈತನ್ಯವು ಪ್ರಕೃತಿಯಲ್ಲಿ ಪ್ರವೇಶಿಸಿದಾಗ ಪ್ರಕೃತಿಗೆ ವಿಸ್ತಾರಗೊಳಿಸುವ ಯೋಗ್ಯತೆ ಉಂಟಾಗುತ್ತದೆ. ತಾತ್ಪರ್ಯವೇನೆಂದರೆ ಮೊಟ್ಟಮೊದಲ ಬಿಂದುರೂಪವೂ ಶಿವರೂಪವೂ ಆದ ಚೈತನ್ಯವು ವಿಸರ್ಗರೂಪವಾದ ಪ್ರಕೃತಿಯೊಡನೆ ಸೇರಿದಾಗ ಬಾಳು ವಿಸ್ತಾರಗೊಳ್ಳುತ್ತದೆ. ಇದನ್ನೇ ಬಿಂದುವಿಸರ್ಗದ ರೂಪದಲ್ಲಿ ಮಾಂಗಲ್ಯದಲ್ಲಿ ಚಿತ್ರಿಸಿದ್ದಾರೆ. ಹಾಗೆಯೇ ಸೂರ್ಯಚಂದ್ರಾಗ್ನಿಗಳೂ ಅಂತರ್ಮುಖವಾಗಿ ಸಾಗಿದಾಗ ದರ್ಶನಕ್ಕೆ ಸಿಗುವ ಶಕ್ತಿಗಳೇ. ಹೊರಮೈಮನಸ್ಸುಗಳು ವಯೋಮಾನಕ್ಕನುಗುಣವಾಗಿ ಗಂಡು-ಹೆಣ್ಣಿನ ರೂಪದಲ್ಲಿ ಸೇರುವುದು ಪ್ರಕೃತಿಸಹಜವಾದದ್ದು. ಆದರೆ ಇಷ್ಟೇ ಜೀವನವಲ್ಲ. ಧರ್ಮಾರ್ಥಕಾಮ ಮತ್ತು ಮೋಕ್ಷರೂಪವಾದ ಎಲ್ಲ ಪುರುಷಾರ್ಥಗಳನ್ನು ಅನುಭವಿಸಬೇಕು. ಆಗಲೇ ಬಹುಪುಣ್ಯದ ಕಾರಣದಿಂದ ಒದಗಿದ ಮಾನವದೇಹ ಸಾರ್ಥಕವಾಗುವುದು.

ಒಂದು ಕಮಲಪುಷ್ಪದ ಚಿತ್ರವನ್ನು ಬರೆದಾಗ ಅದು ಮನಸ್ಸನ್ನು ನಿಜವಾದ ಪುಷ್ಪದತ್ತ ಸೆಳೆಯುತ್ತದೆ. ಹಾಗೆಯೇ ಮಾಂಗಲ್ಯದ ವಿನ್ಯಾಸವು ನಮ್ಮನ್ನು ಒಳಜೀವನದತ್ತ ಸೆಳೆಯುತ್ತದೆ. ಸುವರ್ಣದ ಸ್ಪರ್ಷವೂ ಇದಕ್ಕೆ ಪೋಷಕ.  


ಸೂಚನೆ: 29/06/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.