Saturday, July 27, 2019

ಆನಂದಕ್ಕಾಗಿ ಎಲ್ಲಿ ಹುಡುಕಬೇಕು? (Anandakkagi elli hudukabeku?)

ಲೇಖಕರು: ನಾಗರಾಜ ಗುಂಡಪ್ಪ


ತಿಮ್ಮನೆಂಬ ಪದ್ದ ಶಿಖಾಮಣಿಯೊಬ್ಬನು “ಆನಂದ ಧಾಮ” ಎನ್ನುವ ಮನೆಯಲ್ಲಿ ಇರುತ್ತಿದ್ದನು. ಒಮ್ಮೆ ಅವನು ಪರಸ್ಥಳದಿಂದ ರಾತ್ರಿ ಬರುವಾಗ ಮನೆಯ ಬೀಗದ ಸಿಗದೇ ಗಾಬರಿಯಾಗಿ, ಹುಯಿಲೆಬ್ಬಿಸಿ, ಹುಡುಕಲಾರಂಭಿಸುತ್ತಾನೆ. 

ಊರಿನವರು ಏನಾಯಿತೆಂದು ಬಂದು ನೋಡಿದರೆ- ತಿಮ್ಮ ಗ್ರಾಮದೊಳಗಿನ ದೀಪದ ಕಂದಡಿಯಲ್ಲಿ  ಬೀಗದ ಕೈಗಾಗಿ ಹುಡುಕುತ್ತಿರುತ್ತಾನೆ. ಆಗ ಊರಿನ ವಿವೇಕಿಗಳು – “ತಿಮ್ಮ, ಸ್ವಲ್ಪ ಸಾವಧಾನದಿಂದ ನೀನು ಹೊರಟಾಗಿನಿಂದ ಏನೇನು  ನಡೆಯಿತು ಎಂದು ಯೋಚಿಸು, ಆಗ ಎಲ್ಲೆಲ್ಲಿ ಬೀಗದ ಕೈ ಕಳೆದಿರುವ ಸಾಧ್ಯತೆಯಿದೆಯೆಂದು ಯೋಚಿಸಿ ಅಲ್ಲೆಲ್ಲಾ ಹುಡುಕಲು ಸಹಾಯ ಮಾಡುತ್ತೇವೆ” ಎಂದು ಹೇಳುತ್ತಾರೆ. ಅದಕ್ಕೆ ತಿಮ್ಮ ತಕ್ಷಣವೇ– “ಅಯ್ಯೋ ಅಷ್ಟೆಲ್ಲಾ ಯೋಚಿಸಲೇ ಬೇಕಿಲ್ಲಾ;  ವಿಶ್ರಾಂತಿಗಾಗಿ ಊರ ಹೊರಗಿನ ಕಟ್ಟೆಯ ಮೇಲೆ ಕುಳಿತಿದ್ದೆ. ಸುಲಭವಾಗಿ ಸಿಗಲೆಂದು ಬೀಗದ ಕೈಯನ್ನು ಹೊರಗಿಟ್ಟುಕೊಂಡಿದ್ದೆ, ಅದು ಅಲ್ಲೇ ಬಿದ್ದು ಹೋಗಿರುತ್ತದೆ” ಎಂದು ಉತ್ತರಿಸುತ್ತಾನೆ. 

ಊರಿನ ವಿವೇಕಿಗಳು ಸೋಜಿಗದಿಂದ- ಅಲ್ಲಪ್ಪಾ, ಊರ ಹೊರಗೆ ಬೀಗದ ಕೈ ಕಳೆದು ಹೋಗಿದ್ದರೆ ನೀನು ಊರೊಳಗಿನ ದೀಪದ ಕಂದಡಿಯಲ್ಲಿ ಏಕೆ ಹುಡುಕುತ್ತಿದ್ದೀಯಾ? ಎಂದು ಕೇಳುತ್ತಾರೆ. ಅದಕ್ಕೆ ತಿಮ್ಮನು ಇವರೆಂತಹಾಮೂರ್ಖರು ಎಂದು ತನ್ನೊಳಗೇ ನಕ್ಕು ,- “ಅಷ್ಟೂ ಗೊತ್ತಾಗುವುದಿಲ್ಲವೇ? ಊರಾಚೆ ಬರೀ ಕತ್ತಲೆಯಲ್ಲವೇ? ಬೀಗದ ಕೈ ಕಾಣಬೇಕಾದರೆ ಬೆಳಕು ಬೇಡವೇ ಬೆಳಕಿರುವೆಡೆಯಲ್ಲಲ್ಲವೇ ಹುಡುಕುವುದು” ಎಂದು ಅವರಿಗೇಬುಧ್ಧಿ ಹೇಳುತ್ತಾನೆ. 

ವಿವೇಕಿಗಳು ಇವನ ಮೂರ್ಖತನಕ್ಕೆ ಮರುಗಿ, ಅವನಿಗೆ ಕಷ್ಟ ಪಟ್ಟು ತಿಳಿಹೇಳಿ, ಕೈ ದೀಪವನ್ನು ಗ್ರಾಮದ ಹೊರಗೆ ತೆಗೆದುಕೊಂಡು ಹೋಗಿ ಬೀಗದ ಕೈ ಹುಡುಕಿಕೊಟ್ಟು ತಿಮ್ಮ ಪುನಃ ಆನಂದಧಾಮವನ್ನು ಸೇರುವಂತೆಮಾಡುತ್ತಾರೆ. 

ಪ್ರತಿಯೊಬ್ಬ ಮನುಷ್ಯನ ಅಂತರಾಳದಲ್ಲೂ ಆತ್ಮ ಸಾಮ್ರಾಜ್ಯವೆಂಬ ಒಂದು ಆನಂದಧಾಮವಿದೆ; ಇದೇ  ನಮ್ಮ ಮೂಲ ಹಾಗೂ ನೆಲೆಮನೆ ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ನಾವು ಕರ್ಮವಶಾತ್ ಅಲ್ಲಿಂದದೂರ ಬಂದು, ಪುನಃ ಅಲ್ಲಿಗೆ ತಲಪುವ ಬೀಗದ ಕೈಯನ್ನು ಕಳೆದುಕೊಂಡು  ಆನಂದಕ್ಕಾಗಿ ಪರದಾಡುತ್ತಿದ್ದೇವೆ. ಆದರೆ,  ನಮಗೆ ಒಳನೋಟ ಇಲ್ಲದಿರುವುದರಿಂದ ಒಳ ಪ್ರಪಂಚವು ಕತ್ತಲಮಯವಾಗಿ ತೋರಿ, ಆನಂದಕ್ಕಾಗಿ ಒಳಪ್ರಪಂಚವನ್ನು ಹುಡುಕುವುದೇ ಇಲ್ಲ. ನಮಗೆ ಬೆಳಕಾಗಿ ತೋರುತ್ತಿರುವ ಹೊರ ಪ್ರಪಂಚದಲ್ಲೇ ಸಿಕ್ಕ ಸಿಕ್ಕ ಕಡೆ ಆನಂದಕ್ಕಾಗಿ ಹುಡುಕುತ್ತಿದ್ದೇವೆ. ಆದರೆ, ಆನಂದದ ನಿಧಿ ಒಳಗಿರುವುದರಿಂದ ಹೊರ ಪ್ರಪಂಚವನ್ನು ಎಷ್ಟುಹುಡುಕಿದರೂ ಸಿಗುವುದಿಲ್ಲ. 

ಆದುದರಿಂದ ವಿವೇಕಿಗಳೂ, ಮಹಾತ್ಮರೂ ಆದ ಮಹರ್ಷಿಗಳು ಕೊಟ್ಟಿರುವ ವಿವೇಕನ್ನು ಅನುಸರಿಸಿ, ನಮ್ಮ ನೋಟವನ್ನು ಒಳಮುಖವಾಗಿ ತಿರುಗಿಸಿ, ಸಾಧನೆ ಮಾಡಿದರೆ ಮೂಲ ನೆಲೆಯಾದ ಆನಂದಧಾಮವನ್ನುತಲುಪಬಹುದು. ಹೀಗೆ ಜ್ಞಾನಿಗಳ ಮಾರ್ಗದರ್ಶನವೆಂಬ ಕೈದೀವಿಗೆಯ ಸಹಾಯದಿಂದ ಆನಂದಧಾಮದ ಬೀಗದ ಕೈಯನ್ನು ಹುಡುಕಿ ಅಲ್ಲಿನ  ಆನಂದವನ್ನನುಭವಿಸಿ ಇತರರಿಗೂ ಹಂಚಿ ಸಮಾಜವೇ ಶಾಂತಿಸಮೃದ್ಧಿಗಳಿಂದ ತುಂಬುವಂತೆ ಮಾಡುವ ದಿಕ್ಕಿನಲ್ಲಿ ಸಾಗೋಣ.

ಸೂಚನೆ:  27/07/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.