Saturday, August 3, 2019

ಬಂತು ಶ್ರಾವಣ (Bantu Shravana)

ಲೇಖಕರು: ವಿದ್ವಾನ್ ನರಸಿಂಹ ಭಟ್



ಗ್ರೀಷ್ಮರ್ತು ಮುಗಿಯಿತು. ವರ್ಷಾಕಾಲ ಆರಂಭವಾಯಿತು. ಎಲ್ಲೆಲ್ಲೂ ನೀರಿನ ಹಾಹಾಕಾರ. ರೈತನು ಬೆಳೆಬೆಳೆಯಲು ಮಳೆಯು ಎಂದು ಬರುವುದೋ ಎಂದು ನಿರೀಕ್ಷೆ ಮಾಡುವ ಸಮಯ. ಚಾತಕಪಕ್ಷಿಯು ಎವೆಯಿಕ್ಕದ ದೃಷ್ಟಿಯಿಂದ ಒಂದೇಸಮನೇ ಆಕಾಶವನ್ನೇ ಎದುರು ನೋಡುತ್ತಿತ್ತು. ಹಂಸ ಪಕ್ಷಿಗಳ ಸ್ವಚ್ಛಂದವಾದ ನಡಿಗೆ ಜನಮನ ಸೂರೆಗೊಳ್ಳುತ್ತಿತ್ತು. ಹತ್ತುಹಲವು ಸುಖದುಃಖಗಳ ಸಂವೇದನೆಯು ಎಲ್ಲೆಲ್ಲೂ ಕಾಣುತ್ತಿತ್ತು. ಇದಕ್ಕೆಲ್ಲ ವಿರಾಮ ಹಾಡಿ ಪ್ರಕೃತಿಯು ತನ್ನ ಇನ್ನೊಂದು ಮಗ್ಗುಲಿಗೆ ಸರಿಯುವ ಸುಂದರವಾದ ಕಾಲವೇ ವರ್ಷ ಋತು.

ಪ್ರಕೃತಿಯು ಸುಡುಬೇಸಿಗೆಯಿಂದ ಬೆಂದು ಬೆವರು ಇಳಿಸುವ ಕಾಲ ಮುಗಿಯಿತು. ಇಲ್ಲಿ ಬೆವರಿಲ್ಲ. ಬಿಸಿಲಿನ ಝಳವಿಲ್ಲ. ತಂಪು. ಸೂರ್ಯನು ಉತ್ತರದಿಂದ ದಕ್ಷಿಣಕ್ಕೆ ತನ್ನ ದಿಕ್ಕನ್ನು ಬದಲಿಸುವ ದಕ್ಷಿಣಾಯನ. ನಿಟ್ಟುಸುರಿನ ಬದಲು ನೆಮ್ಮದಿ. ರೈತನು ಹಂಬಲಿಸುತ್ತಿರುವ ಕಾಲ ಸನ್ನಿಹಿತ. ಹಾಗಾಗಿ ರೈತನ ಮುಖದಲ್ಲಿ ಮಂದಹಾಸ. ವರ್ಷೆಯ ನಿರೀಕ್ಷೆಯಲ್ಲಿದ್ದ ಚಾತಕಪಕ್ಷಿಯು ಸಂತೋಷದಿಂದ ನಲಿಯುತ್ತದೆ. ಎಲ್ಲೆಲ್ಲೂ ಮೇಘದ ಗರ್ಜನೆ. ಇದನ್ನು ಕೇಳಿ ನವಿಲುಗಳು ಗರಿಗೆದರಿ ನರ್ತಿಸುತ್ತವೆ. ಹಂಸಪಕ್ಷಿಗಳು ಮಾನಸಸರೋವರಕ್ಕೆ ಹಾರುತ್ತವೆ. ಪರಮಹಂಸರೂಪರಾದ ಸನ್ಯಾಸಿಗಳು ತಮ್ಮ ಹೃತ್ಕಮಲವನ್ನು ಹೃತ್ಸರೋವರದಲ್ಲಿ ಅರಳಿಸುತ್ತಾರೆ. ಸನ್ಯಾಸಿಗಳು ಆಗಷ್ಟೆ ತಮ್ಮ ಚಾತುರ್ಮಾಸ್ಯವ್ರತವನ್ನು ಆರಂಭಿಸಿರುತ್ತಾರೆ. ಬಾಹ್ಯವಾದ ಮನಸ್ಸನ್ನು ಅಂತಃಪ್ರಪಂಚದ ಕಡೆ ಸೆಳೆಯುವ ವರ್ಷ ಋತು ಎಂಬ ಎರಡು ತಿಂಗಳಿನ ಮೊದಲ ಮಾಸವೇ ಶ್ರಾವಣ. ಬಂದೇ ಬಿಟ್ಟಿತು ಶ್ರಾವಣ. ಹಬ್ಬಗಳ ಸರಮಾಲೆಗೆ ಒಂದೊಂದು ಮಣಿಯನ್ನು ಪೋಣಿಸುವ ಕಾಲ.

ಶ್ರಾವಣ ಬಂತೆಂದರೆ ಎಲ್ಲೆಲ್ಲೂ ಹಬ್ಬದ ಸಡಗರ. ಒಂದೇ ಎರಡೇ ಹಬ್ಬಗಳು ಈ ಮಾಸದಲ್ಲಿ! ಪತ್ನಿಯು ಆಗಷ್ಟೆ ಭೀಮನ ಅಮಾವಾಸ್ಯಾ ವ್ರತವನ್ನು ಪೂರೈಯಿಸಿ ತಾಯಿಮನೆಯಿಂದ ಗಂಡನ ಮನೆಗೆ ಮರಳಿರುತ್ತಾಳೆ. ಹಾಗಾಗಿ ಪತಿಪತ್ನಿಯರು ಇಬ್ಬರೂ ಸೇರಿ ಮುಂದೆ ಅನೇಕ ವ್ರತಗಳಿಗೆ ಸಂಕಲ್ಪಿಸುತ್ತಾರೆ. ಈ ಮಾಸದ ಪೂರ್ಣಿಮಾ ತಿಥಿಯಂದು ಶ್ರವಣ ನಕ್ಷತ್ರವು ಸಂಧಿಸುವ ಕಾಲವಾದ್ದರಿಂದ ಇದಕ್ಕೆ ‘ಶ್ರಾವಣ’ ಮಾಸ ಎಂದು ಕರೆಯುತ್ತಾರೆ. ಶ್ರವಣ ನಕ್ಷತ್ರವು ವಿಷ್ಣುದೇವತಾಕವಾದ ನಕ್ಷತ್ರವಾಗಿದೆ. ಭಗವಂತನಾದ ವಿಷ್ಣುವನ್ನು ಆರಾಧಿಸಲು ಅತ್ಯಂತ
ಶ್ರೇಷ್ಠವಾದ ಮಾಸ. ನಾಗರಪಂಚಮೀ ಶುಕ್ಲಪಕ್ಷದ ಮೂರನೆ ದಿನ ‘ಮಧುಸ್ರವ’ ಎಂಬ ವ್ರತವನ್ನು ಆಚರಿಸುತ್ತಾರೆ. ಇದನ್ನು ಗುಜರಾತ್ ಪ್ರದೇಶದಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ. ಶುಕ್ಲಪಂಚಮಿಯು ‘ನಾಗರಪಂಚಮೀ’. ನಮ್ಮ ಶರೀರರದಲ್ಲೇ ಕುಂಡಲಿನೀಶಕ್ತಿಯನ್ನು ಜಾಗ್ರತಮಾಡಿಕೊಳ್ಳುವ ಪ್ರಯತ್ನ. ಅತೀಂದ್ರಿಯ ಕ್ಷೇತ್ರದಲ್ಲಿ ಮಾತ್ರವೇ ಅನುಭವಕ್ಕೆ ಬರುವ ನಾಗದೇವತೆಗಳ ಅಂತರ್ಭಾವಕ್ಕೆ ಆರೋಹಣ ಮಾಡಲು ಹೊರಗಡೆಯಲ್ಲೂ ನಾಗದೇವತೆಯನ್ನು ಆರಾಧಿಸಲು ಮಹರ್ಷಿಗಳು ನಮಗೆ ಅನುಗ್ರಹಿಸಿರುವ ಪರ್ವ. ಈ ದಿನ ಮೊಸರು ಹಾಲು ಗರಿಕೆ ದರ್ಭೆ ಗಂಧಪುಷ್ಪ ನೇವೇದ್ಯಗಳಿಂದ ನಾಗನನ್ನು ಪೂಜಿಸಬೇಕು. ಯಾರು ಭಕ್ತಿಶ್ರದ್ಧಾಪುರಸ್ಸರವಾಗಿ ನಾಗನನ್ನು ಪೂಜಿಸುತ್ತಾರೋ ಅವರಿಗೆ ಅಂತರ್ಬಾಹ್ಯಗಳಲ್ಲಿ ಸರ್ಪದ ಭಯವಿರುವುದಿಲ್ಲ.

ಉಪಾಕರ್ಮ ಮತ್ತು ಶ್ರೀಕೃಷ್ಣಾಷ್ಟಮೀ ಹುಣ್ಣಿಮೆಯ ಸನಿಹದ ಶುಕ್ರವಾರದಂದು ಆಚರಿಸುವ ವ್ರತವೇ ‘ವರಮಹಾಲಕ್ಷ್ಮೀ’. ಮಹಾವಿಷ್ಣುವಿನ ಪ್ರಿಯತಮೆಯಾದ ಅಷ್ಟೈಶ್ವರ್ಯಗಳನ್ನು ಅನುಗ್ರಹಿಸುವ ಸರ್ವೇಶ್ವರಿಯನ್ನು ಎಲ್ಲ ಸುಮಂಗಲೆಯರೂ ಸಂಭ್ರಮದಿಂದ ಆರಾಧಿಸುವ ಮಹಾವ್ರತ. ಶುಕ್ಲಪಕ್ಷದ ದ್ವಾದಶಿಯಂದು ‘ಪವಿತ್ರಾರೋಪಣ’ ಎಂಬ ಮಹಾಕಾರ್ಯ. ದರ್ಭೆಯನ್ನು ನೆಡುವುದರ ಮೂಲಕ ಸೃಷ್ಟಿಗರ್ಭದಲ್ಲಿ ಬೀಜವಾಪವನ್ನು ಮಾಡಿ ಪ್ರಕೃತಿಯನ್ನು ಆರಾಧಿಸುವ ಕಾರ್ಯ. ಈ ಮಾಸದ ಪೂರ್ಣಿಮೆ ಅಥವಾ ಶ್ರವಣನಕ್ಷತ್ರವನ್ನೇ ಪ್ರಧಾನವಾಗಿ ಇಟ್ಟುಕೊಂಡು
ಆಚರಿಸುವ ಮಹಾಪರ್ವ ‘ಉಪಾಕರ್ಮ’. ಸಂಸ್ಕಾರಪೂರ್ವಕವಾಗಿ ವೇದಗಳನ್ನು ಗ್ರಹಿಸುವ ಅಥವಾ
ಪ್ರಾರಂಭಿಸುವ ಕರ್ಮವಾದ್ದರಿಂದ ಇದಕ್ಕೆ ಉಪಾಕರ್ಮ ಎಂದು ಕರೆಯುತ್ತಾರೆ. ಮತ್ತು ಇದೇ ದಿನವನ್ನು ‘ರಕ್ಷಾಬಂಧನ’ ಎಂದೂ ಕರೆಯುತ್ತಾರೆ. ಅಪರಾಹ್ಣಕಾಲದಲ್ಲಿ ಶುದ್ಧವಾದ ಅಕ್ಷತಗಳನ್ನು ವಸ್ತ್ರದಲ್ಲಿ ಕಟ್ಟಿ ಸುವರ್ಣದಿಂದ ಅಲಂಕರಿಸಿದ ರಕ್ಷೆಯನ್ನು ಮಂತ್ರದಿಂದ ರಾಜನಿಗೆ ರಾಷ್ಟ್ರ ಭದ್ರತೆಗಾಗಿ ಕಟ್ಟುವ ವಿಧಾನ. ಕೃಷ್ಣಪಕ್ಷದ ಪ್ರತಿಪತ್ –ಮೊದಲದಿನ ‘ಗಾಯತ್ರೀಪ್ರತಿಪತ್’ ಎಂದು ಮಿಥ್ಯಾಧ್ಯಯನ ದೋಷವನ್ನು ಪರಿಹರಿಸಿಕೊಳ್ಳಲಿ ಗಾಯತ್ರೀಜಪ ಹೋಮಾದಿಗಳನ್ನು ಮಾಡಲು ಬಳಸುವ ಸಂದರ್ಭ. ಈ ಮಾಸದಲ್ಲಿ ಬರುವ ಅತ್ಯಂತ ಪವಿತ್ರವೂ ಶ್ರೇಷ್ಠವೂ ಪ್ರಸಿದ್ಧವೂ ಆದ ಪರ್ವವೇ ‘ಶ್ರೀಕೃಷ್ಣ ಜನ್ಮಾಷ್ಟಮೀ’. ಕತ್ತಲೆಯೇ ವಿಜೃಮ್ಬಿಸುವ ಕಾಲದಲ್ಲೇ ಭಗವಂತ ಶ್ರೀಕೃಷ್ಣ ಎಂಬ ನಾಮಾಂಕಿತನಾಗಿ ವಸುದೇವ ದೇವಕಿಯರ ಮಗನಾಗಿ ಅವತರಿಸಿದ ಮಹಾಕಾಲ. ಪಕ್ಷದಲ್ಲಿ ಕೃಷ್ಣಪಕ್ಷ. ಅದರಲ್ಲೂ ಅಷ್ಟಮೀ. ಮತ್ತೂ ರಾತ್ರಿಯ ಮಧ್ಯಕಾಲ. ಸರ್ವಾತ್ಮನಾ ಕತ್ತಲೆಯೇ
ಎಲ್ಲೆಲ್ಲೂ ಆವರಿಸಿದ ಸಮಯ ಕೃಷ್ಣನ ಜನನಕ್ಕೆ ಸುಕಾಲ. ಶ್ರೀಕೃಷ್ಣನ ಆದರ್ಶಗಳನ್ನು ಪಾಲಿಸಿ ಜೀವನದಲ್ಲಿ ಬೆಳಕನ್ನು ಕಾಣಲು ಮಹರ್ಷಿಗಳು ಕೊಟ್ಟ ಪರ್ವ.

ಒಟ್ಟಾರೆ ಹೇಳುವುದಾದರೆ ಶ್ರೀರಂಗಮಹಾಗುರು ಹೇಳುವಂತೆ “ಇಂದ್ರಿಯಗಳ ಕ್ರೀಡಾಭೂಮಿಯಲ್ಲಿ
ಸೀಮಿತವಾಗದೆ ಆತ್ಮರತಿ, ಆತ್ಮಕ್ರೀಡೆಯಿಂದ ಆರಾಮದಲ್ಲೂ ವಿಹರಿಸಲು ಸನಾತನ ಮಹರ್ಷಿಗಳ
ಬಳುವಳಿಯೇ ಈ ಹಬ್ಬಗಳಪ್ಪ”. ಶ್ರಾವಣವನ್ನು ಭಗವಂತನ ಆರಾಧನೆಗೆ ಬಳಸಿಕೊಂಡು ಜೀವನವನ್ನು ಪಾವನ ಮಾಡಿಕೊಳ್ಳೋಣ.

ಸೂಚನೆ:  02/08/2019 ರಂದು ಈ ಲೇಖನ ವಿಜಯ ಕರ್ನಾಟಕ ಅಂಕಣದಲ್ಲಿ ಪ್ರಕಟವಾಗಿದೆ.