Saturday, September 7, 2019

ಗಣೇಶ ಚತುರ್ಥಿ (Ganesha chathurthi)

ಸಂಗ್ರಹ : ಸುಮುಖ ಹೆಬ್ಬಾರ್   


ಭಾದ್ರಪದ ಮಾಸದ, ಶುಕ್ಲಪಕ್ಷದ, ಚೌತಿ ದಿನದಂದು ಆಚರಿಸುವಂತಹ ಗಣೇಶ ಚತುರ್ಥಿ ಹಬ್ಬವು ಭಾರತದಲ್ಲಿ ತುಂಬಾ ಪ್ರಸಿದ್ಧವಾದ ಹಬ್ಬಗಳಲ್ಲಿ ಒಂದು. ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ವೃತ್ತಿಪರರಿಗೆ ರಜೆಯ ಖುಷಿಯಾದರೆ, ಮಕ್ಕಳಿಗೆ ಹೊಸ ಬಟ್ಟೆ, ಕಡುಬು, ಚಕ್ಕುಲಿ, ಪಂಚಕಜ್ಜಾಯ ಇತ್ಯಾದಿಗಳನ್ನು ಸವಿಯುವ ಸಂಭ್ರಮ. ಮನೆಮನೆಯಲ್ಲೂ ಆಚರಿಸುವ ಹಬ್ಬ. ಸಂಘ-ಸಂಸ್ಥೆಯಿಂದ ಆಚರಿಸುವುದೂ ಉಂಟು. ಊರಿನ ಜನರೆಲ್ಲಾ ಸೇರಿ ಒಟ್ಟಿಗೆ ಆಚರಿಸುವುದು ಕೂಡ ಕಂಡುಬರುತ್ತದೆ. ಕೆಲವೆಡೆ ೧ ದಿನ, ೩ ದಿನ ಅಥವಾ ೨೧ ದಿನ, ಹೀಗೆ ಅವರವರ ಅನುಕೂಲಕ್ಕೆ ತಕ್ಕಂತೆ, ಇಂತಿಷ್ಟು ದಿನಗಳ ಕಾಲ ಗಣಪತಿಯನ್ನು ಕೂರಿಸಿ, ಪೂಜಿಸುವುದು ಕಂಡುಬರುತ್ತದೆ. ಈ ಸಂದರ್ಭಗಳಲ್ಲಿ ಕೆಲವು ಭಜನೆ, ಹಾಡು, ನೃತ್ಯ ಹಾಗೂ ಇನ್ನಿತರ ಕಲೆಗಳಿಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ಕೊಡುವುದು ಸಾಮಾನ್ಯವಾಗಿದೆ. ಹಾಗೆಯೇ ಸಂಗೀತದಲ್ಲಿ ಅಥವಾ ಇನ್ನಿತರ ಕಲೆಯಲ್ಲಿ ಸಾಧಕರನ್ನು ಕರೆಯಿಸಿ, ಅವರಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೊಜಿಸುವುದು ಕೂಡ ಇಂದಿನ ಸಮಾಜದಲ್ಲಿ ಕಾಣಸಿಗುತ್ತದೆ.

ಇವತ್ತಿನ ಆಚರಣೆಗಳು:

ಆದರೆ ಇತ್ತೀಚಿನ ಕೆಲವು ಆಚರಣೆಗಳು ಜುಗುಪ್ಸೆ ತರುವಂತೆ ಇವೆ. ಗಣೇಶ ಕೂರಿಸಿದಲ್ಲಿ ಇರುವ ಧ್ವನಿವರ್ಧಕದಿಂದ, ಗಣೇಶನಿಗೆ ಯಾವ ರೀತಿಯಿಂದಲೂ ಸಂಬಂಧಪಡದ ಹಾಡುಗಳು, ಡ್ಯಾನ್ಸ್ ಇತ್ಯಾದಿಗಳು ಸಭ್ಯ ಸಮಾಜದ ಆಕ್ಷೇಪಕ್ಕೆ ಕಾರಣವಾಗಿವೆ. ಮತ್ತು “ಗಣೇಶ ಕಾರ್ಟೂನ್ಕೆಟ್ಟು ಹೋದ” ಅನ್ನುವಂತೆ, ಗಣೇಶನಿಗೆ ತರಹೇವಾರಿ ರೂಪವನ್ನುಕೊಟ್ಟು, ದೇವತೆಯ ಗಾಂಭೀರ್ಯವನ್ನೇ ಇಲ್ಲವಾಗಿಸುವ ಕೆಲಸವೂ ನಡೆಯುತ್ತಿದೆ. ವಿಶ್ವ ಕಪ್ ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ, ಗಣೇಶನ ಕೈಯಲ್ಲಿ ಚೆಂಡು –ದಾಂಡು ಇತ್ಯಾದಿಗಳನ್ನು ಕೊಟ್ಟು ವಿಚಿತ್ರ ಆಕೃತಿ ಮಾಡಿಬಿಡುತ್ತಾರೆ.

ಆಚರಣೆ ಇತ್ತೀಚಿನದೇ, ಪುರಾತನವೇ?

ವಾಸ್ತವವಾಗಿ ಇದು ಮಹರ್ಷಿಪ್ರಣೀತವಾದ ಅತಿ ಪುರಾತನವಾದ ಹಬ್ಬವಾಗಿದ್ದರೂ, ಇದು ಪುರಾತನ ಕಾಲದಿಂದಲೂ ವಿಜೃಂಭಣೆಯಿಂದ ಆಚರಿಸಿಕೊಂಡುಬಂದ ಹಬ್ಬವಲ್ಲ. ಸುಮಾರು 150 ವರ್ಷದ ಹಿಂದೆ ಜನರನ್ನು ಬ್ರಿಟಿಷರ ವಿರುದ್ಧ ಸಂಘಟಿಸುವುದಕ್ಕೋಸ್ಕರ, ಜನರನ್ನು ಒಂದೆಡೆ ಸೇರಿಸಬೇಕಾಗಿತ್ತು. ಅದಕ್ಕೋಸ್ಕರ ಈ ಹಬ್ಬವನ್ನು ದೊಡ್ಡಮಟ್ಟದಲ್ಲಿ ಆಚರಿಸುವುದಕ್ಕೆ ಪ್ರಾರಂಭ ಮಾಡಲಾಯಿತು ಎಂಬುದಾಗಿ, ಗಣಪತಿ ಹಬ್ಬದ, ಈ ಮಟ್ಟದ ವಿಜೃಂಭಣೆಯ ಬಗ್ಗೆ ಒಂದು ಅಭಿಪ್ರಾಯ ಇದೆ. ಇವಿಷ್ಟರ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಯ ಆಚರಣೆಯ ಔಚಿತ್ಯದ ಬಗ್ಗೆ ಗಮನ ಹರಿಸ ಬೇಕಾಗಿದೆ. ಅದಕ್ಕೆ ಮೊದಲು ಈ ಹಬ್ಬಕ್ಕೆ ಕೇಂದ್ರ ಬಿಂದುವಾದ ಗಣೇಶನ ಬಗ್ಗೆ ಚಿಂತನೆಯನ್ನು ನಡೆಸಿ ಮುಂದುವರೆಯೋಣ.   

ಗಣೇಶನ ರೂಪ:



ಆನೆಯ ಮುಖ, ಬೀಸು ಕಿವಿ, ತುಂಡಾದ ಹಲ್ಲು. ದೊಡ್ಡ ಹೊಟ್ಟೆ. ಹೊಟ್ಟೆಗೋ ಹಾವಿನ ಬಿಗಿತ. ನಾಲ್ಕು ಕೈಗಳು ಬೇರೆ. ಒಂದು ಕೈಯಲ್ಲಿ ಅಂಕುಶ. ಮತ್ತೊಂದು ಕೈಯಲ್ಲಿ ಇಕ್ಷುದಂಡ (ಕಬ್ಬಿನಜಲ್ಲೆ) ಅಥವಾ ಮೋದಕ. ಮತ್ತೊಂದು ಕೈಯಲ್ಲಿ ಹಗ್ಗ. ಇನ್ನೊಂದು ಅಭಯಹಸ್ತ. ಇಷ್ಟು ದೊಡ್ಡದಾಗಿರುವ ಶರೀರ ಕುಳಿತಿರುವುದು ಒಂದು ಪುಟ್ಟ ಇಲಿಯ ಮೇಲೆ. ಅದು ಇವನಿಗೆ ವಾಹನವಂತೆ.

ಇಂತಹ ಆಕಾರವನ್ನು ಭೂಮಿಯ ಮೇಲೆ ಯಾವತ್ತಾದರೂ, ಯಾರಾದರೂ ನೋಡಿದವರಿದ್ದಾರಾ? ಅಕಸ್ಮಾತ್ತಾಗಿ ಭೂಮಿಯ ಯಾವುದೇ ಮೂಲೆಯಲ್ಲಿ ಕಾಣಲು ದೊರೆತಿದ್ದರೆ, ಈಗಿನ ಕಾಲದ ಮಾಧ್ಯಮಗಳು ಯಾವ ಮಟ್ಟದ ಪ್ರಚಾರ ಕೊಟ್ಟುಬಿಡುತ್ತಿದ್ದವು! ಯಾವುದಾದರೂ ತಾಯಿ ಇಂತಹ ಮಗುವಿಗೆ ಜನ್ಮವಿತ್ತರೆ, ಸಂತಸದ ವಿಷಯವೋ ಅಥವಾ ದುಃಖಪಡಬೇಕೋ? ಇದು ಸುರೂಪವೋ? ಕುರೂಪವೋ? ಎಂದು ಯೋಚಿಸಬೇಕಾಗಿದೆ.

ಈತನೇ ಗಣೇಶ, ಗಣಪತಿ, ವಿನಾಯಕ, ವಕ್ರತುಂಡ, ಶೂರ್ಪಕರ್ಣ ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುವ ದೇವತೆ. ಪ್ರಥಮ ಪೂಜೆಗೆ ಅರ್ಹನಾದ ದೇವತೆ. ವಿಘ್ನನಿವಾರಕ.

ಆಕಾರದ ವಿಷಯದಲ್ಲಿ ಗೊಂದಲ:

ಈತನ ಆಕಾರದ ಕುರಿತು ಬಹಳ ಗೊಂದಲಗಳಿವೆ. ಮೊದಲನೆಯದಾಗಿ, ಇವನು ಶಿವ-ಪಾರ್ವತಿಯರ ಸುಪುತ್ರ. ಶಿವನೋ ಸುಂದರೇಶ್ವರ. ಪಾರ್ವತಿಗೆ ತ್ರಿಪುರಸುಂದರಿ ಎಂಬ ಹೆಗ್ಗಳಿಕೆ. ಈ ಸುಂದರ-ಸುಂದರಿಗೆ ಹುಟ್ಟಿದಂತಹ ಮಗುವಿನ ಆಕೃತಿ, ವಿಚಿತ್ರವಾಗಿ ತೋರುತ್ತಿದೆ. ಇದು ನಿಜರೂಪವೋ? ಕಲ್ಪನೆಯೋ? ನಿಜವಾಗಿ ನೋಡಿದ್ದರೆ, ಯಾರು ನೋಡಿದ್ದಾರೆ? ಎಲ್ಲಿ ನೋಡಿದ್ದಾರೆ? ಕಲ್ಪನೆ ಆಗಿದ್ದರೆ, ಕಲ್ಪಿಸಿಕೊಂಡವರ ಸೌಂದರ್ಯಪ್ರಜ್ಞೆ ಎಂತಹದ್ದು? ಅವರ ಮನಸ್ಸಲ್ಲಿ ಏನು ಆಡಿದ್ದಿರಬಹುದು? ಬರೀಕಲ್ಪನೆ ಆದ ಪಕ್ಷದಲ್ಲಿ ಮನೋರಂಜನೆಗೆ ಸರಿಯಷ್ಟೆ. ಆತ್ಮರಂಜನೆಗೆ ತಕ್ಕದಾದುದಲ್ಲ. ಆದರೆ ಗಣಪತಿಯ ಪೂಜೆ-ಪುನಸ್ಕಾರ ಆತ್ಮಕಲ್ಯಾಣಕ್ಕಾಗಿ ಹಾಕಿಕೊಟ್ಟಿರುವ ಮಾರ್ಗ ಎಂದು ಪರಿಗಣಿಸುವಾಗ, ಕಲ್ಪನೆಯ ಪರಿಮಿತಿಯಿಂದ ಹೊರಬಂದು ಆಕಾರವನ್ನು ವಿಮರ್ಶಿಸುವುದು ಸೂಕ್ತ ಎಂದೆನಿಸುವುದು ಸಹಜ.

ಗಣೇಶನ ಹುಟ್ಟಿನ ಬಗೆಗಿನ ಕಥೆಗಳು:

ಪುರಾಣ ಕಥೆಗಳ ಅನುಸಂಧಾನವೂ ಕೂಡ, ಗಣೇಶನ ಸ್ಪಷ್ಟ ಚಿತ್ರಣವನ್ನು ನೀಡುವುದಿಲ್ಲ. ಒಂದು ಕಡೆಯಲ್ಲಿ ಪಾರ್ವತಿ-ಪರಮೇಶ್ವರರ ಮಗು ಅಂತ ಹೇಳಿದರೆ, ಇನ್ನೊಂದು ಕಡೆಯಲ್ಲಿ ಪಾರ್ವತಿಯ ಮೈಮೇಲಿನ ಕೊಳೆ ಅಥವಾ ಬೆವರಿನಿಂದ ಹುಟ್ಟಿದವನು ಅಂತ ಹೇಳಿದೆ. ಉಮಾಮಲಸಮುದ್ಭವ. ಅಷ್ಟೇ ಅಲ್ಲದೆ, ಇದಕ್ಕಿಂತ ಇನ್ನೂ ಹೆಚ್ಚು ಗೊಂದಲವನ್ನು ಉಂಟುಮಾಡುವ ಕಥೆಯೊಂದಿದೆ. ಅದರಲ್ಲಿ ಗಣೇಶ ಪಾರ್ವತಿ ಪರಮೇಶ್ವರರ ಮಗನೇ! ಅದರಲ್ಲೇನೂ ಸಂಶಯವಿಲ್ಲ. ಆದರೆ ಪಾರ್ವತಿ-ಪರಮೇಶ್ವರರ ವಿವಾಹ ಸಂದರ್ಭದಲ್ಲಿ, ಮೊದಲು ಗಣೇಶನ ಪೂಜೆ ಮಾಡಿ ಆನಂತರ ವಿವಾಹಕಾರ್ಯ ನೆರವೇರಿತು ಎಂಬುದಾಗಿ ಇದೆ.

ಅವನ ರೂಪ ವರ್ಣನೆಯಲ್ಲೇ ಅವನ ಪ್ರಸನ್ನತೆ:

ಇನ್ನೊಂದು ಎಲ್ಲರಲ್ಲೂ ಬರುವ ಸಾಮಾನ್ಯ ಜಿಜ್ಞಾಸೆ. ಸಾಮಾನ್ಯವಾಗಿ ಅಂಗಾಂಗಗಳಲ್ಲಿ ಊನ ಇದ್ದವರಿಗೆ ಅದನ್ನು ಎತ್ತಿ ಹೇಳಿದರೆ ಸಹ್ಯವಲ್ಲ. ಕೋಪ ಬರುವುದುಂಟು. ಉದಾಹರಣೆಗೆ ಉಬ್ಬು ಹಲ್ಲು ಇರುವರಿಗೆ ಹಲ್ಲುಬ್ಬ ಅಂದರೆ, ಸಹಿಸಿಕೊಳ್ಳುವವರು ಅಪರೂಪ. ಆದರೆ ಗಣಪತಿ ವಿಷಯದಲ್ಲಿ ಇದು ವಿರುದ್ಧ. ಇವನ ಅಂಗಾಂಗಗಳ ಬಗ್ಗೆ ಎತ್ತಿ ಹೇಳಿದರೆ, ಲಂಬೋದರ, ಏಕದಂತ, ಗಜಾನನ, ಶೂರ್ಪಕರ್ಣ ಎಂದು ಸ್ತುತಿಸಿದರೆ ಇವನು ಸುಪ್ರೀತನಾಗುತ್ತಾನೆ.

ಇದೇನು ರೂಪ ರಹಸ್ಯ?

ಗಣೇಶನ ಇರುವಿಕೆಯೇ ಒಂದು ಕಲ್ಪನೆ ಎಂದು ತೀರ್ಮಾನಿಸಿ ಆ ಕಲ್ಪನಾ ಜಾಲ ಮತ್ತು ಅದಕ್ಕೆ ವಿವರಣೆಯನ್ನು ಹೀಗೆ ಹೆಣೆದಿರುವುದು ಕಂಡುಬರುತ್ತದೆ.

ಕಲ್ಪನೆ:-1

ಒಂದು ಕೃಷಿಕ ವರ್ಗದ ಬೆಳೆಗಳನ್ನೆಲ್ಲಾ ಕಾಡಾನೆಗಳು ನಾಶಮಾಡುತ್ತಿತ್ತು. ಈ ಕಾಟಕ್ಕೆ ಹೆದರಿ, ಆನೆ ಮುಖದ ಒಂದು ದೇವರ ಕಲ್ಪನೆ ಮಾಡಿದರು. ಧವಸ-ಧಾನ್ಯಗಳ ಶತ್ರುವೇ ಇಲಿ. ಹಾಗಾಗಿ ಅವನ ವಾಹನ ಇಲಿಯನ್ನು ಮೆಟ್ಟಿದರೆ ತಾನೇ, ಧವಸ –ಧಾನ್ಯ ಉಳಿದೀತು. ಧವಸ-ಧಾನ್ಯಗಳ ಉಗ್ರಾಣವೇ ಹೊಟ್ಟೆ. ಧಾನ್ಯದ ಮೂಟೆಗೆ ಕಟ್ಟಿರುವ ಹಗ್ಗವೇ ಸರ್ಪ. ಸರ್ಪಗಾವಲು ಧಾನ್ಯದ ರಕ್ಷಣೆಗೆ ಎಂಬಂತೆ.

ಮೇಲ್ನೋಟಕ್ಕೆ ಸಮಸ್ಯೆ ಬಗೆಹರಿದಂತಿದ್ದರೂ,  ಹಲವು ಸಂದಿಗ್ಧತೆ ತಂದೊಡ್ಡುತ್ತಿದೆ. ಪೂಜೆಗೆ ಇಡೀ ದೇಹವನ್ನ ಯಾಕೆ ಇಟ್ಟುಕೊಂಡಿಲ್ಲ? ಬರಿಮುಖಕ್ಕೇಕೆ? ಪೂಜೆ ಮಾಡುವುದರಿಂದ ದಾಳಿ ನಿಂತಿದೆಯೇ? ಇವತ್ತಿಗೂ ಆನೆಗಳಿಂದ ದಾಳಿ ನಡೆಯುವುದುಂಟು. ಅಲ್ಲದೇ, ಹಂದಿ, ನರಿ, ತೋಳ ಮುಂತಾದವುಗಳೂ ದಾಳಿ ಮಾಡುತ್ತವೆ. ಅವುಗಳಿಗೆ ಪೂಜೆ ಬೇಡವೇ? ಉತ್ತರವಿಲ್ಲ.

ಕಲ್ಪನೆ:-2

ಇದು ವೈಜ್ಞಾನಿಕವಾದ ವಿಮರ್ಶೆ. ವಿಕಾಸವಾದದಲ್ಲಿ ,ಭೂಮಿಯಲ್ಲಿ ಮೊದಲು ಜೀವಿಗಳು ಇರಲಿಲ್ಲ. ಕಾಲಕಳೆದಂತೆ ಜಲಚರ, ಸ್ಥಲಚರ, ಆಮೇಲೆ ಮನುಷ್ಯನ ಉಗಮ. ಈ ವಿಕಾಸದ ಹಾದಿಯಲ್ಲಿ ಮಾನವ ಮತ್ತು ಮೃಗದ ಮಧ್ಯ ಕೊಂಡಿ ತೋರಿಸಲು, ಈ ಮಿಶ್ರಿತ ಕಲ್ಪನೆ. ಗ್ರೀಕರಲ್ಲೂ ಇಂತಹ ದೇವತೆಗಳಿವೆ.
ಹಾಗಿದ್ದರೆ ಬರೀ ಆನೆ ಜೊತೆ ಮಿಶ್ರಿತವಾಗಿರುವ ಶರೀರ ಯಾಕೆ? ಇತರ ಪ್ರಾಣಿಗಳ ಜೊತೆ ಯಾಕಿಲ್ಲ? ಆನೆಯ ಮುಖದಿಂದ ಹಲ್ಲು ಹೇಗೆ ಕಳಚಿತು? ಮುಂತಾದ ಪ್ರಶ್ನೆಗಳಿಗೆ ಉತ್ತರ ಇಲ್ಲೂ ಇಲ್ಲ.

ಕಲ್ಪನೆ:-3

ಗಣೇಶನ ಮೂರ್ತಿಯೊಂದು ಜಾಣರ ಕಲ್ಪನೆ. ಶಕ್ತಿ ಯುಕ್ತಿಗಳ ಸಮನ್ವಯಮೂರ್ತಿ. ಆನೆ ಶಕ್ತಿಯ ಪ್ರತೀಕ. ಉಗ್ರಾಣದಲ್ಲಿಟ್ಟ ಧಾನ್ಯವನ್ನು ಉಪಾಯದಿಂದ ಕದಿಯುವ ಇಲಿ, ಯುಕ್ತಿಯ ಪ್ರತೀಕ. ಕಾರ್ಯಸಾಧನೆಗೆ ಶಕ್ತಿ ಮತ್ತು ಯುಕ್ತಿ ಅವಶ್ಯವಾಗಿರುವಂತೆ, ಇವೆರಡನ್ನೂ ಕಲ್ಪಿಸಿಕೊಂಡಿದ್ದಾರೆ. ಕಬ್ಬಿನಜಲ್ಲೆ ಆನೆಗೆ ಪ್ರೋತ್ಸಾಹಕ. ಅಂಕುಶ ಮತ್ತು ಹಗ್ಗ ನಿಯಂತ್ರಕಗಳು. ಎಲ್ಲವೂ ಸಮತೋಲನವಾಗಿದೆ.

ಈ ಕಲ್ಪನೆಯಲ್ಲಿ ಪ್ರಬುದ್ಧತೆ ಇದೆ. ಪರಿಣಿತಿ ಇದೆ. ಆದರೆ ಎಲ್ಲರೂ ಒಪ್ಪುವಂತಿಲ್ಲ. ಏಕೆಂದರೆ ಯುಕ್ತಿಗೆ ತುಂಬಾ ಪ್ರಸಿದ್ಧ ಪ್ರಾಣಿ ನರಿ. ಹಾಗೆ ತನ್ನ ನಿಯಂತ್ರಕವಾದ ಅಂಕುಶ ಮತ್ತು ಹಗ್ಗವನ್ನು, ಯಾವ ಆನೆ ತಾನೆ ಹಿಡಿದುಕೊಳ್ಳುವುದು? ಬಗೆಹರಿಯುತ್ತಿಲ್ಲ.

ಹಾಗಾದರೆ ಗಣೇಶ ನಿಜವೇ, ಕಲ್ಪನೆಯೇ?

ಒಂದು ಸೂಕ್ಷ್ಮಾಣು ಜೀವಿ ಉಪಕರಣಗಳ ಸಹಾಯದಿಂದ ನೋಡಿದಾಗ ಕಾಣಸಿಗುವ ವಿಷಯ. ಹಾಗಾಗಿ ಬರಿಗಣ್ಣಿಗೆ ಕಾಣದ ಮಾತ್ರಕ್ಕೆ ಕಲ್ಪನೆ ಎನ್ನುವುದು ಎಷ್ಟು ಸರಿ? ವಿಜ್ಞಾನಿಗಳು ಅನ್ವೇಷಣೆ ಮಾಡಿ ಸೂಕ್ಷ್ಮಜೀವಿಗಳ ಇರುವಿಕೆಯನ್ನು ದೃಢಪಡಿಸಿದರೆ, ಇವತ್ತು ಸಮಾಜ ನಂಬುವ ಹಾಗೆ, ನಮ್ಮ ಮಹರ್ಷಿಗಳ ಅಂತರಂಗದ ಅನ್ವೇಷಣೆಗೆ ಬೆಲೆ ಕೊಡಬೇಕಲ್ಲವೇ?. ನಮ್ಮ ಮಹರ್ಷಿಗಳು ನಿಸರ್ಗದ ಮೇಲೆ ಅನ್ವೇಷಣೆ ನಡೆಸಿದರು. ಹೊರ ಬ್ರಹ್ಮಾಂಡ ಅಷ್ಟೇ ಅಲ್ಲದೆ, ಈ ಪಿಂಡಾಂಡದಲ್ಲಿಯೂ ತಮ್ಮ ಯೋಗ ಸಾಧನೆಯಿಂದ ಅನ್ವೇಷಣೆ ನಡೆಸುವಾಗ ಅವರಿಗೆ ಕಂಡಂತಹ ಸತ್ಯವೇ ಗಣಪತಿಯ ರೂಪ. ಅವರು ಒಳಗೆ ಕಂಡು ಅನುಭವಿಸಿದ ಸತ್ಯವನ್ನೇ ನಮ್ಮವರೆಗೂ ತಂದುಕೊಟ್ಟರು. ಆ ಸತ್ಯವನ್ನು ಕಂಡುಕೊಳ್ಳಲು ಮಾರ್ಗವನ್ನು ಹಾಕಿಕೊಟ್ಟರು. ವಿಶಿಷ್ಟ ಸಾಧನೆಯಿಂದ ಎಲ್ಲ ಮಾನವರೂ ಅವನನ್ನು ನೋಡಬಹುದೆಂಬುದನ್ನು ತೋರಿಸಿ, ಸತ್ಯದ ಇರುವಿಕೆಯ ಬಗ್ಗೆ ನಂಬುವಂತೆ ಮಾಡಿದರು. ಗಣೇಶನನ್ನು ಕಾಣುವ, ಅವನ ಪ್ರಸನ್ನತೆಯನ್ನು ಪಡೆಯುವ ಉಪಾಯಗಳನ್ನು, ಸಂಪ್ರದಾಯದಲ್ಲಿ ಪೂಜೆ-ಪುನಸ್ಕಾರಗಳ ವಿಧಾನಗಳಲ್ಲಿ  ಜೋಡಿಸಿದರು. ಕಾಲಕ್ರಮೇಣ ಗಣಪತಿಯ ಕೇವಲ ಕೊಂಡಾಟ, ಅವನ ಪೂಜೆಯ ವಿಜೃಂಭಣೆ, ಮೂರ್ತಿ ಆರಾಧನೆ ಅಷ್ಟೇ ಉಳಿಸಿಕೊಂಡು, ಮೂಲಭೂತವಾದ ವಿಷಯಗಳು ಕಳಚಿಹೋಗಿಬಿಟ್ಟಿವೆ.

ಶ್ರೀರಂಗ ಮಹಾಗುರುಗಳ ವಿವರಣೆ:

ಇಂತಹ ಸಂದರ್ಭದಲ್ಲಿ ಮಹರ್ಷಿಗಳ ಹೃದಯವನ್ನು ಅರ್ಥಮಾಡಿಕೊಂಡು, ಅವರ ಜಾಡನ್ನು ಹಿಡಿದು ಋಷಿಗಳು ಕಂಡ ಸತ್ಯವನ್ನು ಕಂಡುಕೊಂಡು, ಗಣಪತಿಯ ಇರುವಿಕೆಯನ್ನು ದೃಢಪಡಿಸಿದವರು ಶ್ರೀರಂಗಮಹಾಗುರುಗಳು. ಅವರು “ಗಣೇಶನ ರಹಸ್ಯವನ್ನು ಅವನೇ ಬಿಚ್ಚಿಕೊಡಬೇಕಪ್ಪ”ಎನ್ನುತ್ತಿದ್ದರು. ಮರ ಹಿಂದೆ ಬೀಜವಾಗಿತ್ತು. ಆಮೇಲೆ ಮೊಳಕೆ, ಬೇರು, ಕಾಂಡ, ಕೊಂಬೆ, ಹೂವು, ಮಿಡಿ, ಕಾಯಿ, ಹಣ್ಣು ಆಗಿ ಮತ್ತೆ ಬೀಜದಲ್ಲೇ ಬಂದು ನಿಲ್ಲುತ್ತೆ. ಅಲ್ಲಿಗೆ ಮರದ ರಹಸ್ಯ ಬೀಜದಲ್ಲಿದೆ ಎಂದಾಯ್ತು. ಹಾಗೆ ಗಣೇಶನ ರಹಸ್ಯವನ್ನು ಅವನಿಂದಲೇ ತಿಳಿಯಬೇಕು ಅಂದರೆ, ಗಣೇಶ ಎಲ್ಲಿದ್ದಾನೋ ಅಲ್ಲೇ ಹೋಗಿ, ಅವನನ್ನು ನೋಡಿ ದೃಢಪಡಿಸಿದರೆ ತಾನೇ ಅವನ ರಹಸ್ಯವನ್ನು ಬಿಚ್ಚಿದಂತಾಗುತ್ತೆ.

ಹಾಗಿದ್ದರೆ ಅವನೆಲ್ಲಿದ್ದಾನೆ? ಅವನನ್ನು ನೋಡುವ ಬಗೆ ಹೇಗೆ? ಮಾನವನ ಬೆನ್ನುಹುರಿ, ಜ್ಞಾನರಜ್ಜು, ಮೇರುದಂಡದ ಕೆಳಗೆ ಇರುವ ಮೂಲಾಧಾರ ಚಕ್ರದಲ್ಲಿ ಅವನವಾಸ. ಅವನು ಆ ಜಾಗದಲ್ಲಿ ಕಾಣುವ ತೇಜೋರೂಪಿ. ಆ ಪ್ರಕಾಶಕ್ಕೆ ದೇವ ಎಂಬುದಾಗಿ ಹೆಸರು. ತೇಜೋರೂಪಿ ಆಗಿರುವುದರಿಂದ ಅವನು ದೇವತೆ. “ತ್ವಂ ಮೂಲಾಧಾರ ಸ್ಥಿತೋsಸಿ ನಿತ್ಯಂ” ಎಂಬ ಗಣಪತಿ ಅಥರ್ವ ಶೀರ್ಷದ ಮಾತು ಇದೇ ಸತ್ಯವನ್ನು ಹೇಳುತ್ತದೆ. ಯೋಗ ಮಾರ್ಗದಿಂದ ಅಲ್ಲಿ ಹೋಗಿ ನೋಡಿದರೆ ಗಣೇಶನ ದರ್ಶನವಾಗುತ್ತದೆ. ಅವನು ಸಹಜವಾಗಿ ಮತ್ತು ಸುಂದರವಾಗಿ ಅಲ್ಲಿ ಬೆಳಗುತ್ತಿದ್ದಾನೆ.

ಆನೆಮುಖ, ದೇಹದಾಕಾರ, ಇತ್ಯಾದಿ ಇರೋದೆಲ್ಲ ಸೌಂದರ್ಯವೇ? ಸೌಂದರ್ಯ ಅಂದರೇನು? ತುಂಬಾ ಸಹಜವಾಗಿದ್ದರೆ ಅದೇ ಸೌಂದರ್ಯ. ಒಂದು ಗಡಿಯಾರಕ್ಕೆ ದೊಡ್ಡಮುಳ್ಳು, ಚಿಕ್ಕಮಳ್ಳು ಮತ್ತು ನಿಮಿಷದ ಮುಳ್ಳು ಇದ್ದರೆ ಅದು ಸಹಜ. ಅದಕ್ಕೆ ತಳಿರು-ತೋರಣ ಮಲ್ಲಿಗೆಯಿಂದ ಸಿಂಗರಿಸಿದರೆ ಅಸಹಜ. ಈ ನಿಟ್ಟಿನಲ್ಲಿ ಗಣೇಶನ ದರ್ಶನ ಒಳಗೆ ಆನೆ ಮುಖದಲ್ಲೇ ಆಗುವುದರಿಂದ ಅದೇ ಅವನಿಗೆ ಸಹಜ ಸೌಂದರ್ಯ.

ಗಜಕುಂಡಕ್ಷೇತ್ರ:

ಗಣೇಶ ಬೆಳಗುತ್ತಿರುವ ಜಾಗಕ್ಕೆ ಯೋಗಶಾಸ್ತ್ರದಲ್ಲಿ ಗಜಕುಂಡಕ್ಷೇತ್ರ/ಗಜಕುಂಡಚಕ್ರ ಎಂದು ಹೆಸರು. ಹಾಗಾಗಿ ಇದು ಸತ್ಯಕ್ಕೆ ಕೊಟ್ಟಿರುವ ರೂಪ ಅಥವಾ ಸತ್ಯವೇ ತಾಳಿರುವ ರೂಪ. ಹಾಗಾಗಿ ಇದು ಸಹಜವಾಗಿದೆ. 

ದಂತಗಳು ಜ್ಞಾನದ ಪ್ರತೀಕ:

ಮತ್ತು ಆತನ ಬಿಳಿಯಾಗಿರುವ ಶುಭ್ರವಾಗಿರುವ, ನಿರ್ಮಲವಾಗಿರುವ ದಂತಗಳು ಶುದ್ಧವಾದ ಜ್ಞಾನವನ್ನು ಸೂಚಿಸುತ್ತವೆ. ಬಿಳಿ ಬಣ್ಣವು ಸತ್ವಗುಣದ ಪ್ರತೀಕ. ಸತ್ವಗುಣದ ಪ್ರಭೋದವಾದಾಗ ಜ್ಞಾನದಲ್ಲಿ ಪರ್ಯವಸಾನವಾಗುವುದು.

ಸೊಂಡಿಲು ಪ್ರಣವ ಸ್ವರೂಪ:

“ಪ್ರಣವಸ್ವರೂಪಂವಕ್ರತುಂಡಂ” ಎಂಬ ಮಾತಿನಂತೆ ಸೊಂಡಿಲು ಓಂಕಾರ (ಪ್ರಣವ)ವನ್ನು ನಿರ್ದೇಶಿಸುತ್ತದೆ. ಬಲಮುರಿ ಆಗಿದ್ದರೆ ಓಂಕಾರದ ಹಿಂದಿರುವ ಜ್ಞಾನವನ್ನುಸೂಚಿಸುತ್ತದೆ. ಆದ್ದರಿಂದ ಆತ ಮೋಕ್ಷಪ್ರದ. ಅದೇ ಎಡಮುರಿಯಾಗಿದ್ದರೆ, ದೈವಕ್ಕೆ ವಿರೋಧವಿಲ್ಲದಂತಹ ಭೋಗಸಂಪತ್ತನ್ನು ದಯಪಾಲಿಸುವವ. ಹಾಗಾಗಿ ಯೋಗ-ಭೋಗವೆರಡನ್ನೂ ದಯಪಾಲಿಸುವನು ಗಣಪತಿ.

ಬೆಳಗುವ ತಾಣ –ಪೃಥ್ವಿ ತತ್ತ್ವ:

ಅವನು ಬೆಳಗುವ ಜಾಗ ಪೃಥ್ವಿತತ್ವ. ಹಾಗೆಯೇ ಅವನು ಜಲ ತತ್ವದತನಕ ವ್ಯಾಪಿಸಿರುವಂತಹ ತೇಜಸ್ಸನ್ನು ಹೊಂದಿದ್ದಾನೆ. ಇನ್ನೊಂದು ದೃಷ್ಟಿಯಲ್ಲಿ ಮೂಲಾಧಾರ ಚಕ್ರದಿಂದ ಸ್ವಾಧಿಷ್ಠಾನ ಚಕ್ರದವರೆಗೆ ಇವನ ವ್ಯಾಪ್ತಿ. ಇಷ್ಟು ದೊಡ್ಡ ವ್ಯಾಪ್ತಿಯನ್ನು ತತ್ವಾತ್ಮಕವಾಗಿ, ದೊಡ್ಡ ಹೊಟ್ಟೆಯಿಂದ ತೋರಿಸಿದೆ.

ಕುಂಡಲಿನಿ-ಒಡ್ಯಾಣ:

ಹೊಟ್ಟೆಗೆ ಕಟ್ಟಿರುವ ಹಾವು ಯಾವುದದೆಂದರೆ, ಯೋಗಿಗಳು ಅಂತರಂಗದಲ್ಲಿ ಕಾಣುವಂತಹ ಕುಂಡಲಿನೀ ಶಕ್ತಿ. ಅದರ ಒಂದು ಕಟ್ಟು-ಯೋಗಿಗಳಿಗೆ ಉದರಪ್ರದೇಶದಲ್ಲಿ ಎರ್ಪಡುವಂತಹ ಉಡ್ಯಾಣಬಂಧ. ಅದು ಸಹಜವಾಗಿ ಉಂಟಾಗುವಂತಹದ್ದು ಮತ್ತು ಆನಂದದಾಯಕವಾದದ್ದು. ಹಾಗಾಗಿ ಇದು ಗಣೇಶನ ಯೋಗವೈಭವ ಸಾರುವ ದಿವ್ಯಾಭರಣ.

ಅಂಕುಶ ಪಾಶಗಳ ವಿಶೇಷತೆ:

ಅವನ ಬಾಹುಗಳು ಪ್ರಕಾಶದ ವಿಸ್ತಾರವೇ ಆಗಿದೆ. ಒಂದು ಕೈಯಲ್ಲಿ ಹಿಡಿದಿರುವ ಅಂಕುಶ ತನ್ನ ನಿಗ್ರಹಕ್ಕಲ್ಲ, ಬದಲಿಗೆ ಇನ್ನೊಂದು ಆನೆಯನ್ನು ಹೆದರಿಸಲು. ಮೂಲಾಧಾರ ಕ್ಷೇತ್ರದಲ್ಲಿ ಒಂದು ಆನೆಯ ಮುಖ ಧರಿಸಿದ ಆಸುರೀಶಕ್ತಿ ಇದೆ. ಆ ಅಸುರನ ಗರ್ವಭಂಜಕನಾಗಿ ಗಣಪತಿ ಅಂಕುಶ ಹಿಡಿದಿದ್ದಾನೆ. ಶಂಕರಭಗವತ್ಪಾದರು “ನಿರಸ್ತದೈತ್ಯಕುಂಜರಂ” ಎಂದು ಗುರುತಿಸಿದ ವಿಷಯವೂ ಇದೇ ಆಗಿದೆ. ಇನ್ನೊಂದು ಕೈಯಲ್ಲಿ ಪಾಶ. ಅದು ಲೌಕಿಕ ಜೀವಿಗಳಿಗೆ ಕಟ್ಟುವ ಕಟ್ಟು. ಮುಮುಕ್ಷುಗಳಿಗೆ ಬಿಚ್ಚುವಹಗ್ಗ. ಲೌಕಿಕವಾದ ಮಾಯೆಯ ಅಪಾಯದಿಂದ ಬಿಡಿಸುವಂತಹವನು ಗಣೇಶ.

ಮೋದಕ ರಹಸ್ಯ:

ಮತ್ತೊಂದು ಕೈಯಲ್ಲಿ ಮೋದಕವನ್ನು ಹಿಡಿದುಕೊಂಡಿದ್ದಾನೆ. ಒಳಗೆ ಸಿಹಿಯಾದ ಹೂರಣದಿಂದ ಕೂಡಿದ ಭಕ್ಷ್ಯ ಮೋದಕ. ಮೋದ ಅಂದರೆ ಸಂತೋಷ. ಮೋದಕ ಅಂದರೆ ಸಂತೋಷವನ್ನು ಉಂಟುಮಾಡುವಂತಹದ್ದು. ಮೋದಕವು ಗಣಪತಿಗೆ ಸಂಬಂಧಿಸಿದ ಕ್ಷೇತ್ರಗಳನ್ನು ವಿಕಾಸಗೊಳಿಸುತ್ತದೆ. ಮನಸ್ಸು ಗಣಪತಿಯಲ್ಲಿ ನಿಲ್ಲುವಂತೆ ಮಾಡುತ್ತದೆ. ಹಾಗೆ ಮನಸ್ಸು ಹರಿದಾಗ ಮೋದ, ಸಂತೋಷ ಆಗುತ್ತದೆ. ಆ ಸಂತೋಷದ ಸೂಚಕವನ್ನೇ “ಮುದಾಕರಾತ್ತ ಮೊದಕಂ ಸದಾ ವಿಮುಕ್ತಿ ಸಾಧಕಂ” ಎಂದು ಶಂಕರಾಚಾರ್ಯರು ಗುರುತಿಸಿದ್ದಾರೆ. “ಮುಮುಕ್ಷೋ: ಮಾಧುರ್ಯಮ್” ಎಂಬ ಮಾತು ಯೋಗಶಾಸ್ತ್ರದಲ್ಲಿದೆ. ಮುಮುಕ್ಷುವಿಗೆ ಮಧುರವಾದ ಆಹಾರ ಯೋಗ್ಯವಾದದ್ದು. ಇದೇ ಮೋದಕದ ರಹಸ್ಯ.

ಕಬ್ಬಿಣ ಜಲ್ಲೆಯ ಔಚಿತ್ಯ, ಅಭಯ ಮುದ್ರೆ:

ಅವನ ಕೈಯಲ್ಲಿರುವ ಕಬ್ಬಿನ ಜಲ್ಲೆ ಯೋಗಿಗಳಿಗೆ ಅಂತರಮಾರ್ಗದಲ್ಲಿ ಸಿಗುವ ಸುಷುಮ್ನಾ ಪರ್ವಗಳನ್ನು ನೆನಪಿಗೆ ತರುವಂತಹದ್ದು. ಈ ಜ್ಞಾನಹಾದಿಯ ಸೂಚಕವಾಗಿ ಕಬ್ಬು ಇದೆಯೇ ಹೊರತು, ಆನೆಗೆ ಪ್ರಿಯವೆಂಬ ಅರ್ಥದಲ್ಲಿ ಅಲ್ಲ. ಹಾಗೆಯೇ ಇನ್ನೊಂದು ಕೈಯಲ್ಲಿ ಅಭಯ ಮುದ್ರೆ ಇದೆ. ಜೀವನದ ಒಳಬದಿಯ ಸತ್ಯವನ್ನು ಕಂಡವರಿಗೆ, ಯಾವುದೇ ಭಯವಿಲ್ಲ ಎಂಬ ಸೂಚನೆ. ಇದು ನಾಲ್ಕು ಕೈಗಳ ಸೊಬಗು ರೂಪರಹಸ್ಯ.

ವಾಹನ ಇಲಿ?

ಈತನ ವಾಹನ ಇಲಿ. ಎಲ್ಲ ದೇವತೆಗಳಿಗೂ ಒಳ್ಳೆಯ ವಾಹನ ಕೊಟ್ಟು, ಇವನಿಗೆ ಅವಮಾನ ಮಾಡಿದ್ದಾರೆ ಎನ್ನುವ ಅಭಿಪ್ರಾಯ ಸಮಾಜದಲ್ಲಿದೆ. ವಾಹನದ ತಾತ್ವಿಕ ಅಭಿಪ್ರಾಯ ಮನಸ್ಸಿಗೆ ಬರದಿದ್ದಾಗ ಹೀಗೆಲ್ಲ ಆಗುತ್ತದೆ. ಮೂಷಿಕ-ಮುಷಸ್ತೇಯೇ. ಮುಷ್ ಧಾತುವಿನಿಂದ ಕೂಡಿದ ಈ ಪದ, ಕದಿಯುವುದನ್ನು ಹೇಳುತ್ತದೆ. ಕದಿಯುವ ಕೆಲಸ ಚೆನ್ನಾಗಿ ಮಾಡುವುದು ಇಲಿ. ಯೋಗಮಾರ್ಗದಲ್ಲಿ ಸಂಚರಿಸ ಬಯಸುವ ತಪಸ್ವಿಗಳ, ತಪಸ್ಸಿನ ಶಕ್ತಿಯನ್ನು ಕದಿಯುವಂತಹ ಶಕ್ತಿಯನ್ನು ತಾತ್ವಿಕವಾಗಿ ಇಲಿ ಎಂದು ತೋರಿಸಿದೆ. ಇಂತಹ ಯೋಗವಿಘ್ನಗಳ ಶಕ್ತಿಯನ್ನುಅಡಗಿಸಿ, ಅವುಗಳ ಮೇಲೆ ಸವಾರಿಮಾಡುವವನು ಗಣೇಶ. ಮೂಲಾಧಾರವನ್ನು ಆಳುವ ಸ್ವಾಮಿ, ಅಲ್ಲಿಯ ವಿಘ್ನಗಳನ್ನು ಮೆಟ್ಟುವುದು ಸಹಜವಾಗಿಯೇ ಇದೆ. ಗಣಪತಿಗೆ ವಿಘ್ನ ಶಕ್ತಿಯನ್ನು ಅಡಗಿಸಲು ಗೊತ್ತು. ಪ್ರಯೋಗಿಸಲೂ ಗೊತ್ತು. ಹಾಗಾಗಿ ವಾಹನಇಲಿ ಅವಮಾನವಲ್ಲ. ವಿಜಯದ ಸಮ್ಮಾನ.

ಪುರಾಣ ಕಥೆಗಳ ಅಂತರಾರ್ಥ:

ಅವನ ಆಕಾರದ ಬಗ್ಗೆ ಇಷ್ಟು ಗಮನಿಸಿ, ಇನ್ನು ಪುರಾಣಗಳಲ್ಲಿರುವ ಗೊಂದಲಗಳ ಬಗ್ಗೆ ಗಮನಿಸೋಣ. “ಉಮಾಮಲಸಮುದ್ಭವ” ಪಾರ್ವತಿಯ ದೇಹದ ಕೊಳೆಯಿಂದ ಮಾಡಲ್ಪಟ್ಟವನು. ಇದು ಅವನಿಗೆ ಕಳಂಕವನ್ನು ತರುವ ವಿಷಯವಲ್ಲ. ಪಾರ್ವತಿ ಅಂದರೆ ಪ್ರಕೃತಿಮಾತೆ. ಅವಳ ಬೆವರು ಅಥವಾ ಕೊಳೆ ಅಂದರೆ ಪ್ರಕೃತಿಯ ಹೊರಪದರ. ಅಂದರೆ ಪೃಥ್ವೀತತ್ವ. ಅದಕ್ಕೆ ಅಧಿಷ್ಠಾತೃ ದೇವತೆಯಾಗಿ ಗಣಪತಿಯನ್ನು ಮಾಡಿ, ಚೈತನ್ಯವನ್ನು ತುಂಬಿದಳು. ಹಾಗಾಗಿ ಇವನು ಪಾರ್ವತಿಯ ಮಗ. ಮೂಲಾಧಾರವು ಪೃಥ್ವೀತತ್ವದ ಸ್ಥಾನ. ಅದರ ಒಡೆಯ ಗಣಪ.

ಶಿವ-ಪಾರ್ವತಿಯರ ಪುತ್ರ:



ಶಿವ ಪುರುಷ. ಪಾರ್ವತಿ ಪ್ರಕೃತಿ. ಪಿಂಡಾಂಡದಲ್ಲಿ ಇಡಾ-ಪಿಂಗಳ ನಾಡೀ  ರೂಪವಾಗಿ ಶಿವ ಶಿವೆಯರು ಕಾರ್ಯನಿರ್ವಹಿಸುತ್ತಾರೆ. ಶಕ್ತಿಯಾಗಿ ನೋಡಿದರೆ ಪ್ರಾಣ-ಅಪಾನಗಳಾಗಿ ಕಾರ್ಯನಿರ್ವಹಿಸುತ್ತಾರೆ. ಅವೆರಡೂ ಬಂದು ಸೇರುವ ಜಾಗ ಮೂಲಾಧಾರಚಕ್ರ. ಅಲ್ಲಿ ಕಾಣಿಸಿಕೊಳ್ಳುವನು ಗಣಪತಿ. ಹಾಗಾಗಿ ಇವನು ಶಿವ-ಶಿವೆಯರ ಪುತ್ರ.

ಶಿವ ಶಿವೆಯರ ವಿವಾಹದಲ್ಲಿ ಗಣೇಶನಿಗೆ ಪ್ರಥಮ ಪೂಜೆ?

ಇನ್ನೊಂದು ಕಥೆ ಶಿವ-ಪಾರ್ವತಿಯರ ವಿವಾಹಕ್ಕೆ ಸಂಬಂಧಪಟ್ಟದ್ದು. ಜೀವ-ದೇವರ ಸಮ್ಮಿಲನವನ್ನು ತಾತ್ವಿಕವಾಗಿ ವಿವಾಹ, ಕಲ್ಯಾಣ ಇತ್ಯಾದಿ ಪದಗಳಿಂದ ಸಂಭೋಧಿಸಿದ್ದಾರೆ. ಇದು ನಡೆಯುವುದು ಸಹಸ್ರಾರ ಕಮಲದಲ್ಲಿ. “ಸಹಸ್ರಾರೇ ಮಹಾಪದ್ಮೇ ಶಿವೇsನ ಸಹ ಮೋದತೆ” ಎಂಬ ಜ್ಞಾನಿಗಳ ಮಾತು ಇದಕ್ಕೆ ಪೂರಕ. ಸಹಸ್ರಾರ ತಲುಪಲು, ಹಿಂದಿನ ಚಕ್ರಗಳನ್ನು ದಾಟಿ ಹೋಗಲೇಬೇಕು. ಹೀಗೆ ಹೊರಟಾಗ ಜೀವ ಮೊದಲು ಸಂಧಿಸುವುದು ಮುಲಾಧಾರ ಚಕ್ರವನ್ನು. ಅದರಲ್ಲಿ ಪ್ರವೇಶಿಸಿ, ಅದರ ಒಡೆಯನಾದ ಗಣೇಶನ ಪ್ರಸನ್ನತೆಯನ್ನು ಪಡೆದೇ ಮುಂದುವರಿಯಬೇಕು ಎನ್ನುವುದು ಕಥೆಯ ತತ್ವಾರ್ಥ.

ಹಾಗೆಯೇ ಅವನ ಕೊಂಡಾಟ ಗಜಾನನ, ವಕ್ರತುಂಡ, ಏಕದಂತ ಏನೇ ಕರೆದರೂ ಕೂಡ ಅವನಿಗೆ ಪ್ರಿಯವಾಗಿರುತ್ತದೆ. ಏಕೆಂದರೆ ಒಂದೊಂದು ವಿಷಯವೂ ಕೂಡ, ಸತ್ಯದ ಕಡೆ ಬೊಟ್ಟು ಮಾಡಿ ತೋರಿಸುತ್ತದೆ. ಹಾಗಾಗಿ ಅದರಿಂದ ಗಣಪತಿ ಸಂತುಷ್ಟನಾಗುತ್ತಾನೆ.

ಸರ್ವಮೂಲ ಗಣೇಶ:

ಗಣೇಶ ಶಿವ-ಪಾರ್ವತಿಯರ ಮಗ. ಆದರೂ ಮಹಿಮೆಯಲ್ಲಿ ಅವರಿಗಿಂತ ಕಡಿಮೆ ಏನು ಇಲ್ಲ. ಪಂಚಾಯತನ ದೇವತೆಗಳಲ್ಲಿ ಒಬ್ಬ. ಶಿವನಿಗೆ ಸಮಾನವಾಗಿ ಪೂಜೆ ಸ್ವೀಕರಿಸುವವ. ಇವನೇ ಪರತತ್ವ. ಸೃಷ್ಟಿ-ಸ್ಥಿತಿ-ಲಯಕ್ಕೂ ಕಾರಣೀಭೂತ. ಸರ್ವಮೂಲವು, ಸರ್ವಮಯವೂ ಆಗಿರುವವನು. “ತ್ವಮೇವಕೇವಲಂಕರ್ತಾsಸಿ| ತ್ವಮೇವಕೇವಲಂಧರ್ತಾsಸಿ| ತ್ವಮೇವಕೇವಲಂಹರ್ತಾsಸಿ|”. “ತ್ವಂಬ್ರಹ್ಮಾ ತ್ವಂವಿಷ್ಣುಸ್ತ್ವಂರುದ್ರಸ್ತ್ವಮಿಂದ್ರಸ್ತ್ವಮಗ್ನಿಸ್ತ್ವಂವಾಯುಸ್ತ್ವಂಸೂರ್ಯಸ್ತ್ವಂಚಂದ್ರಮಾಸ್ತ್ವಂಬ್ರಹ್ಮಭೂರ್ಭುವ: ಸುವರೋಮ್”.  ಗಣಪತಿ ಅಥರ್ವಶೀರ್ಷದಲ್ಲಿ ಬರುವ ಈ ಮಾತುಗಳು ಅವನ ಮಹಿಮೆಯನ್ನು ಹೇಳುತ್ತದೆ.

ಮಣ್ಣಿನ ಗಣಪತಿಯ ಪೂಜೆ:



ಇನ್ನು ಗಣಪತಿಯ ಹಬ್ಬದಂದು ಮಾಡುವಂತಹ ಕ್ರಿಯೆಗಳ ಬಗ್ಗೆ ಗಮನಹರಿಸೋಣ. ಮೊದಲನೆಯದು, ಮಣ್ಣಿನ ವಿಗ್ರಹವನ್ನು ಮಾಡಿ, ಪೂಜೆಯಾದ ನಂತರ ಅದನ್ನು ನೀರಿನಲ್ಲಿ ವಿಸರ್ಜನೆ ಮಾಡುವುದು. “ನಿಮ್ಮ ದೇವರನ್ನು ನೀರುಪಾಲು ಮಾಡಿಬಿಟ್ಟಿರಲ್ಲ” ಎಂಬ ಕುಹಕದ ಮಾತು ಇದಕ್ಕೆ ಅಂಟಿಕೊಂಡಿದೆ. ಮೂಲಾಧಾರ ಚಕ್ರವು ಪೃಥ್ವಿತತ್ವದ ಸ್ಥಾನ ಸ್ವಾಧಿಷ್ಠಾನ ಜಲತತ್ವದ ಸ್ಥಾನ. ಅಂತರಂಗದಲ್ಲಿ ಯೋಗಿಗಳು ಮೂಲಧಾರ ಪ್ರದೇಶದಲ್ಲಿ ಗಣೇಶನನ್ನು ಪೂಜಿಸಿ, ಅದರ ಮೇಲಿರುವ ಸ್ವಾಧಿಷ್ಠಾನ ಚಕ್ರದಲ್ಲಿ ಗಣೇಶನೊಡನೆ ಮನೋಲಯ ಮಾಡುತ್ತಾರೆ. ಆದರೆ ಯೋಗಿಗಳಲ್ಲದವರಿಗೆ, ಒಳಪ್ರಪಂಚದ ಸಂಸ್ಕಾರವನ್ನು ಉಂಟುಮಾಡಿ ಅವರೂ ಗಣೇಶನ ಅನುಗ್ರಹಕ್ಕೆ ಪಾತ್ರರಾಗಲು, ಪೃಥ್ವಿತತ್ವದ ಸೂಚಕವಾಗಿ ಮಣ್ಣನ್ನು ತೆಗೆದುಕೊಂಡು, ಅದರಲ್ಲಿ ಗಣಪತಿಯ ವಿಗ್ರಹವನ್ನು ಮಾಡಿ, ಅದನ್ನು ನೀರಿನಲ್ಲಿ (ಜಲತತ್ವದಲ್ಲಿ) ಲಯಗೊಳಿಸುವುದು ಎನ್ನುವ ಯುಕ್ತಿಯಿಂದ ಸಂಪ್ರದಾಯವನ್ನು ತಂದಿದ್ದಾರೆ.

ಚಂದ್ರ ದರ್ಶನ ನಿಷೇಧ:

ಚೌತಿ ದಿನದಂದು ಚಂದ್ರನನ್ನು ನೋಡಬಾರದು. ಪ್ರಕೃತಿಯ ಕೆಲವು ದೃಶ್ಯಗಳು, ಕೆಲವು ಘಟನೆಗಳು, ಮನಸ್ಸಿನ ಮೇಲೆ ಪರಿಣಾಮ ಬೀರುವುದು ತಿಳಿದಿರುವ ವಿಷಯವೇ. ಗಣೇಶ ಚತುರ್ಥಿಯ ರಾತ್ರಿಯಲ್ಲಿ ಗಣೇಶನ ನಿಜಸ್ವರೂಪ ಅನುಭವಿಸುತ್ತಾ ಆನಂದವಾಗಿರಬೇಕು. ಆ ದಿನ, ಚಂದ್ರನನ್ನು ನೋಡಿದರೆ, ಗಣೇಶನನ್ನೇ ಹಾಸ್ಯ ಮಾಡುವ ದುರ್ಬುದ್ಧಿ ಉಂಟಾಗುತ್ತದೆ. ಪೀಡಾ ಪರಿಹಾರಕ ಕೇಂದ್ರಗಳು ಅರಳುವ ಬದಲು, ಅಪಯಶಸ್ಸು, ಪೀಡೆಗೆ  ಕಾರಣವಾದಕೇಂದ್ರಗಳು ಅರಳುತ್ತವೆ. ಹಾಗಾಗಿ ಪರಿಹಾರಕ್ಕೋಸ್ಕರವಾಗಿ ಸ್ಯಮಂತಕೋಪಾಖ್ಯಾನವನ್ನು ಶ್ರದ್ಧಾಭಕ್ತಿಯಿಂದ ಕೇಳಬೇಕು.

ನೈವೇದ್ಯದಲ್ಲಿ ಬಳಸುವ ದ್ರವ್ಯಗಳ ಮಹತ್ವ:

ನೈವೇದ್ಯಗಳಾದ ಕಡುಬು, ಮೋದಕ, ಚಕ್ಕುಲಿ, ಪಂಚಕಜ್ಜಾಯ ಗಣಪತಿಗೆ ಸಂಬಂಧಿಸಿದ ಕೇಂದ್ರಗಳನ್ನು ತೆರೆಸುತ್ತವೆ. ಗರಿಕೆ ಗಣೇಶನಿಗೆ ಗಣಪತಿಯಲ್ಲಿ ಮನಸ್ಸನ್ನು ನಿಲ್ಲಿಸಲು ಸಹಾಯಕವಾಗುತ್ತದೆ.

ಹೀಗೆ ನಮ್ಮಲ್ಲೇ ಅನವರತವೂ ಬೆಳಗುತ್ತಿರುವ ಗಣೇಶನನ್ನು ಅವನ ಪ್ರಸನ್ನತೆಗೆ ಕೂಡಿ ಬರುವ ಕಾಲ ವಿಶೇಷವಾದ, ಯೋಗ-ಭೋಗವನ್ನೂ ನೀಡುವ ಈ ಗಣೇಶ ಚತುರ್ಥಿ ಹಬ್ಬವನ್ನು, ಋಷಿಗಳ ಮೂಲ ಆಶಯದಂತೆ ಆಚರಿಸಿ ಭಗವಂತನ ಕೃಪೆಗೆ ಪಾತ್ರರಾಗೋಣ.