Saturday, September 7, 2019

ವಿವೇಕದಿಂದ ಬಾಳೋಣ (Vivekadinda balona)

ಲೇಖಕರು:  ರಾಜಗೋಪಾಲನ್ ಕೆ ಎಸ್
ನಿವೃತ್ತ ಕಾಮರ್ಸ್ ಪ್ರಾಧ್ಯಾಪಕರು  



ಭಸ್ಮಾಸುರ ಈಶ್ವರನನ್ನು ಕುರಿತು ತಪಸ್ಸು ಮಾಡಿದ. ತಾನು ಯಾರ ತಲೆಯ ಮೇಲೆ ಕೈ ಇಟ್ಟರೂ ಅವರು ಉರಿದು ಭಸ್ಮವಾಗಬೇಕೆಂಬ ವರ ಪಡೆದ. ವರವನ್ನು ಪರೀಕ್ಷಿಸಲು ಮೊದಲು ವರವನ್ನು ಕರುಣಿಸಿದ ಈಶ್ವರನ ತಲೆಯ ಮೇಲೆಯೇ ಕೈಯಿಡಲು ಹೊರಟ. ಈಶ್ವರ ವಿಷ್ಣುವಿನ ಬಳಿಗೆ ಓಡಿದ. ವಿಷ್ಣುವು ಮೋಹಿನಿಯ ರೂಪವನ್ನು ತಾಳಿ ಭಸ್ಮಾಸುರನ ಬಳಿ ಬಂದ. ಭಸ್ಮಾಸುರ ಮೋಹಿನಿಯನ್ನು ಮೋಹಿಸಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡ. ಮೋಹಿನಿ ತಾನು ಅಭಿನಯಿಸಿದಂತೆಯೇ ಅಭಿನಯಿಸುವುದಾದಲ್ಲಿ ಭಸ್ಮಾಸುರನನ್ನು ವರಿಸುವುದಾಗಿ ಹೇಳಿದಳು. ಮೋಹಪರವಶನಾದ ಭಸ್ಮಾಸುರ ಒಪ್ಪಿದ. ಮೋಹಿನಿ, ಭಸ್ಮಾಸುರನು ತಪಸ್ಸು ಮಾಡಿದ್ದು, ಈಶ್ವರನಿಂದ ವರ ಪಡೆದಿದ್ದು, ಅದನ್ನು ಪರೀಕ್ಷಿಸಲು ಈಶ್ವರನ ತಲೆಯ ಮೇಲೆಯೇ ಕೈ ಇಡಲು ಹೋದದ್ದು--ಹೀಗೆ ಎಲ್ಲವನ್ನೂ ಅವನಿಗೆ ಅರಿವಾಗದಂತೆಯೇ ಅಭಿನಯಿಸಿ, ತನ್ನ ತಲೆಯ ಮೇಲೆ ಕೈ ಇಟ್ಟುಕೊಂಡಾಗ, ಅದನ್ನು ಅನುಕರಿಸಿದ ಭಸ್ಮಾಸುರ ಸುಟ್ಟು ಭಸ್ಮವಾದ. 

ಶ್ರೀರಂಗಮಹಾಗುರುಗಳು ಈ ಕಥೆಯನ್ನು ಹೇಳಿ ಹೀಗೆ ಎಚ್ಚರಿಸಿದ್ದರು. “ನಮ್ಮ ಒಂದು ಸಣ್ಣ ಅವಿವೇಕ ನಮ್ಮ ಪೂರ್ಣ ಜೀವನವನ್ನೇ ಹಾಳು ಮಾಡುತ್ತದೆ. ಭಗವಂತ ಎಲ್ಲವನ್ನೂ ನಮಗೆ ಕೊಟ್ಟುಬಿಟ್ಟಿದ್ದಾನೆ ಎಂಬ ಅವಿವೇಕಕ್ಕೆ ಒಳಗಾದರೆ ಎಲ್ಲೋ ಒಂದು ಕಡೆ ನಮ್ಮ ಬಾಲ ಕತ್ತರಿಸಲು ಎಡೆಯನ್ನು ಇಟ್ಟುಕೊಂಡೇ ಇರುತ್ತಾನೆ”.

ಭಗವದ್ಭಕ್ತರಾಗಿದ್ದವರೂ ಕೂಡ, ತಾವು ಯಾರಿಗೂ ಕಡಿಮೆಯಿಲ್ಲ ಎಂಬ ಅಹಂಕಾರಕ್ಕೆ ಸಿಲುಕಿದಾಗ ಅಧೋಗತಿಗೆ ಹೋದ ದೃಷ್ಟಾಂತಗಳಿವೆ. ಬಲಿಯು ದಾನಶೀಲನಾಗಿದ್ದರೂ ಇಂದ್ರಪದವಿಯನ್ನು ಕಸಿದುಕೊಳ್ಳುವ ಅವಿವೇಕದ ಚಿಂತನೆಯನ್ನು ಮಾಡಿದಾಗ ವಾಮನನಾಗಿ ಬಂದ ಭಗವಂತ ಬಲಿಯ ದಾನಶೀಲತೆಯನ್ನು ಬಳಸಿಕೊಂಡೇ ಅವನನ್ನು ಪಾತಾಳಕ್ಕೆ ತುಳಿದದ್ದು ಪುರಾಣದ ಪ್ರಸಿದ್ಧ ಕಥೆ. ಧೂರ್ತರಾಜರಾಗಿದ್ದ ನವನಂದರು ಚಾಣಕ್ಯನ ಬುದ್ಧಿವಂತಿಕೆಯಿಂದ ತಮ್ಮ ರಾಜ್ಯ, ಸಂಪತ್ತು ಎಲ್ಲವನ್ನೂ ಕಳೆದುಕೊಂಡಿದ್ದು ಇತಿಹಾಸ. ಸರ್ವಾಧಿಕಾರಿ ಧೋರಣೆಯನ್ನು ಇಟ್ಟುಕೊಂಡಿರುವವರು ಉನ್ನತಪದವಿಯಲ್ಲಿದ್ದರೂ, ಸ್ಥಾನಭ್ರಷ್ಟರಾಗಿರುವುದಷ್ಟೇ ಅಲ್ಲ, ಜೈಲುಪಾಲಾಗಿದ್ದಾರೆ ಎಂಬುದು ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಯಾರಿಗಾದರೂ ವೇದ್ಯವಾಗುತ್ತದೆ. ನಮಗೆಷ್ಟೇ ಸಾಮರ್ಥ್ಯವಿದ್ದರೂ, ವಿವೇಕವೆಂಬ ರಕ್ಷೆ ಜೊತೆಗಿಲ್ಲದಿದ್ದರೆ ಒಂದಲ್ಲ ಒಂದು ದಿವಸ ಪತಿತರಾಗುತ್ತೇವೆ. 

ಅವಿವೇಕ ಸರ್ವನಾಶಕ್ಕೆ ಬುನಾದಿ ಎಂದು ಅರಿತಿದ್ದರಿಂದ ವಿಭೀಷಣನು ತನ್ನ ತಪಸ್ಸಿನ ಕೊನೆಯಲ್ಲಿ ವರವನ್ನು ಕೇಳುವಾಗ “ಪರಮಾಪದ್ಗತಸ್ಯಾಪಿ ಧರ್ಮೇ ಮಮ ಮತಿರ್ಭವೇತ್”(ಎಂತಹ ಆಪತ್ತಿನಲ್ಲಿ ಸಿಲುಕಿದ್ದರೂ ಧರ್ಮದಲ್ಲಿ ನನ್ನ ಮತಿ ಇರಲಿ)ಎನ್ನುತ್ತಾನೆ. ವಿವೇಕಿಯಾಗಿದ್ದರಿಂದಲೇ ರಾಮನನ್ನು ಆಶ್ರಯಿಸಿ ಸುಖಿಯಾದ. ನಮಗೆ ಬಾಲ್ಯದಲ್ಲಿ ಹಿರಿಯರು “ದೇವರೇ ನನಗೆ ಒಳ್ಳೆಯ ಬುದ್ಧಿಯನ್ನು ಕೊಡಪ್ಪ” ಎಂದು ಕೇಳಿಕೊಳ್ಳುವಂತೆ ಶಿಕ್ಷಣ ಕೊಡುತ್ತಿದ್ದರು. ಐಶ್ವರ್ಯ, ಸ್ಥಾನ-ಮಾನ ಇತ್ಯಾದಿ ಎಲ್ಲ ವರಗಳಿಗಿಂತ ವಿವೇಕ, ಬಹು ದೊಡ್ಡ ವರ. ಎಲ್ಲವನ್ನೂ ನಮ್ಮ ಅನುಭವದಿಂದಲೇ ತಿಳಿಯಬೇಕೆನ್ನದೆ ಇತರರ ಅನುಭವಗಳಿಂದ ವಿವೇಕದ ಪಾಠ ಕಲಿಯುವುದು ಜಾಣತನ. ವಿವೇಕ ಸದಾ ನಮ್ಮ ಜೊತೆಗಿರುವಂತೆ ನಾವು ನಿರಂತರ ಎಚ್ಚರ ವಹಿಸೋಣ.   


ಸೂಚನೆ:  06/09/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.