Thursday, December 19, 2019

ಆಹಾರ ತಯಾರಿಕೆ-ಇಂದಿನ ಚಿಂತನೆ. (Aahara thayarike - indina chinthane)

ಲೇಖಕರು:  ತಾರೋಡಿ ಸುರೇಶ
(ಪ್ರತಿಕ್ರಿಯಿಸಿರಿ lekhana@ayvm.in)


ಇಂದು ಆಹಾರ ತಯಾರಿಕೆಯ ವಿಷಯದಲ್ಲಿಯೂ ಬಹು ದೊಡ್ಡ ಪರಿವರ್ತನೆಯನ್ನು ಕಾಣುತ್ತಿದ್ದೇವೆ.ಕಳೆದ ನೂರು ವರ್ಷಗಳ ನಂತರ ಭಾರತಕ್ಕೆ ಭೆಟ್ಟಿ ಕೊಟ್ಟವರಿಗೆ ಪ್ರಾಯಶಃ ಗುರುತು ಸಿಗಲಿಕ್ಕಿಲ್ಲ.

ಮೊಟ್ಟಮೊದಲಿಗೆ ಗಮನ ಸೆಳೆಯುವ ಅಂಶವೆಂದರೆ ಯಂತ್ರೀಕರಣ. ಅಡುಗೆಮನೆಯನ್ನು ಶ್ರಮ ಮತ್ತು ಸಮಯವನ್ನು ಉಳಿಸಬಲ್ಲ ಮಿಕ್ಸಿ ಮುಂತಾದ ಬಗೆಬಗೆಯ ಯಂತ್ರಗಳು  ಹಿಂದಿನ ಒಲೆ, ಒರಳುಕಲ್ಲು, ಒನಕೆ ಇತ್ಯಾದಿಗಳ ಸ್ಥಾನವನ್ನಾಕ್ರಮಿಸಿವೆ.

ಎರಡನೆಯ ಅಂಶವೆಂದರೆ ದಿಡೀರ್ ಪದಾರ್ಥಗಳು. ದಿಡೀರ್  ದೋಸೆ ಹಿಟ್ಟು, ದಿಡೀರ್ ಮಸಾಲೆಪುಡಿಗಳು, ಅರ್ಧ ಬೇಯಿಸಲಾದ ತಿಂಡಿಗಳು, ಹೀಗೆ ಅವುಗಳದೇ ಒಂದು ದೊಡ್ಡ ಪಟ್ಟಿ. ದಂಪತಿಗಳಿಬ್ಬರೂ ದುಡಿಮೆಗೆ ತೆರಳಬೇಕಾದ ಇಂದಿನ ಅನಿವಾರ್ಯತೆಯಲ್ಲಿ, ಶೀಘ್ರತಮ ಕಾಲದಲ್ಲಿ ಅಡುಗೆಯನ್ನು ನಿರ್ವಹಿಸಲು ಇವು ಪರಮಾವಧಿಯ ಸಹಕಾರವನ್ನು ನೀಡಿವೆ.

ಮೂರನೆಯದಾಗಿ, ಅಡುಗೆಮನೆಯ ಪಾತ್ರೆಗಳು. ಹಿಂದೆ ಬಳಕೆಯಲ್ಲಿದ್ದ ತಾಮ್ರ, ಕಂಚು, ಹಿತ್ತಾಳೆಯ ಬದಲು ಪ್ಲಾಸ್ಟಿಕ್ ಕಂಗೊಳಿಸುತ್ತಿದೆ. ಇಂದು ಅದರ ವಿಪರಿಣಾಮಗಳ ಬಗ್ಗೆ ತಕ್ಕಮಟ್ಟಿನ ಎಚ್ಚರ ಉಂಟಾಗಿದ್ದರೂ ವಿನ್ಯಾಸ ವೈಭವ, ಸುಲಭ ಬೆಲೆ ಇತ್ಯಾದಿಗಳ ಆಕರ್ಷಣೆ ಹಾಗೆಯೇ ಇದೆ. ಅಲ್ಲೂಮಿನಿಯಮ್, ಸ್ಟೀಲ್, ಪಿಂಗಾಣಿ, ಗಾಜು-ಇವುಗಳ ವಿಶೇಷ ಬಳಕೆಯನ್ನೂ ಕಾಣಬಹುದು.
ಸ್ನಾನ ಮಾಡಿರಬೇಕಾಗಿಲ್ಲ. ಶುದ್ಧ ವಸ್ತ್ರ ಬಹುಮುಖ್ಯವಲ್ಲ. ಕೈ ತೊಳೆದು ಶುದ್ಧವಾಗಿ ಮಾಡಿದರೆ ಆಯಿತಲ್ಲವೆ?. ಶುಚಿ-ರುಚಿಯಾಗಿದ್ದರೆ ಸರಿ. ಹಿಂದೆ ಒಲೆಯನ್ನು ಗುಡಿಸಿ, ಸಾರಿಸಿ ರಂಗವಲ್ಲಿಯಿಂದ ಅಲಂಕರಿಸಿ, ಸ್ನಾನ ಮಾಡಿ ನಂತರ ಅಡುಗೆ. ಆದರೆ ಇಂದಿನ ಲೋಹದ ಒಲೆಯನ್ನು ಸಾರಿಸಿ, ರಂಗವಲ್ಲಿಯಿಂದ ಅಲಂಕರಿಸುವುದು ಹಾಸ್ಯಾಸ್ಪದ.

ಗಂಡಸರು ಅಡಿಗೆ ಮಾಡಬೇಕೇ ಅಥವಾ ಹೆಂಗಸರೋ? ಹಿಂದೆ ಗೃಹಿಣಿಯು ಮನೆಯಲ್ಲಿರುತ್ತಿದ್ದಳು. ಆಗ ಅವಳು ಅಡಿಗೆ ಮಾಡುವುದು ಔಚಿತ್ಯಪೂರ್ಣ. ಈಗ ಹಾಗಿಲ್ಲ. ಅವಳೂ ದುಡಿಯಲು ಹೊರಗೆ ಹೋಗುತ್ತಾಳೆ. ಆದ್ದರಿಂದ ಯಾರಿಗೆ ಬಿಡುವಿದೆಯೋ ಅವರು ಮಾಡಲಿ ಎಂಬುದು ಪ್ರಚಲಿತ ವಾದ.
ಅಡುಗೆಯಲ್ಲಿ ಮನೋಧರ್ಮದ ಪಾತ್ರವೇನಾದರೂ ಇದೆಯೇ? ಇದೆಂತಹ ಹುಚ್ಚು ಪ್ರಶ್ನೆ? ಶುಚಿ-ರುಚಿಯಾಗಿದ್ದರೆ ಸರಿ. ಕೋಪದಿಂದ ತಯಾರಿಸಲಿ, ದುಃಖದಲ್ಲಿದ್ದಾಗ ಮಾಡಲೀ ಅಡುಗೆ ಹಾಳಾಗಬಾರದು. ಯಾವ ಅಡುಗೆಯನ್ನು ಮಾಡಲು ಯಾವ ಸಾಮಗ್ರಿಗಳು ಬೇಕು, ಅವುಗಳ ಉಚಿತಪ್ರಮಾಣ, ತಯಾರಿಸುವ ವಿಧಿವಿಧಾನಗಳು ಇಷ್ಟು ಗೊತ್ತಿದ್ದರೆ ಸಾಕು. ಸೌಖ್ಯಕ್ಕಾಗಿ ರುಚಿ, ಆರೋಗ್ಯಕ್ಕಾಗಿ ಶುಚಿ, ನಮ್ಮ ಮನಸ್ಸಂತೋಷಕ್ಕಾಗಿ ವೈವಿಧ್ಯತೆ ಇಷ್ಟು ತಿಳಿದಿರಬೇಕು. ಇಂತಹ ಅಡುಗೆಯನ್ನು ಸಿದ್ಧಪಡಿಸುವ ಕೌಶಲ್ಯವೇ ಪಾಕಕಲೆ.ಆದ್ದರಿಂದ ಇದಕ್ಕಿಂತ ಹೆಚ್ಚೇನನ್ನೂ ಪಾಕಕಲಾವಂತನು ತಿಳಿದಿರಬೇಕಿಲ್ಲ.

ಅಡುಗೆಮನೆ ಎಲ್ಲಿರಬೇಕು?. ಒಲೆಯಾಗಲೀ, ಅಡುಗೆಯವರಾಗಲೀ ಇರಬೇಕಾದ ದಿಕ್ಕು ಯಾವುದು?. ಯಾವದಿನ ಯಾವ ಅಡುಗೆ?. ಇವೆಲ್ಲಾ ನಂಬಿಕೆಯ ವಿಷಯಗಳು ಅಷ್ಟೆ.
ಹೀಗೆ ಇಂದಿನವರ ಚಿಂತನೆ ಸಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಬಂದ ಸಂಪ್ರದಾಯಗಳ ಭಗ್ನಾವಶೇಷಗಳು ಬೇರೊಂದು ಕಥೆಯನ್ನೇ ಹೇಳುತ್ತವೆ. ”ಕಲೆಯು ಕಲಾನಾಥನತ್ತ ಕರೆದೊಯ್ಯಬೇಕು” ಇದು ಶ್ರೀರಂಗಮಹಾಗುರುಗಳು ಕೊಟ್ಟ ಸೂತ್ರ.ಈ ಸೂತ್ರ ಮತ್ತು ಪೀಠಿಕೆಯ ಹಿನ್ನೆಲೆಯಲ್ಲಿ ಮುಂದಿನ ಲೇಖನಗಳನ್ನು ಗಮನಿಸೋಣ. 


ಸೂಚನೆ: 17/12/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.