ಪ್ರಶ್ನೆ ೧೫. ಈ ಸಂಸಾರದಲ್ಲಿ ಶ್ರೇಷ್ಠ ಯಾರು?
ಉತ್ತರ - ವಿರಕ್ತ
ಸಂಸಾರವೆಂಬುದು ಕತ್ತಿಯ ಅಲಗಿನಂತೆ, ಸರಿಯಾಗಿ ತಿಳಿದು ಬಳಸಿದರೆ ಕತ್ತಿಯಿಂದ ನಮಗೆ ಬೇಕಾದುದ್ದನ್ನು ಕತ್ತರಿಸಲು ಸಾಧ್ಯ. ಎಚ್ಚರಿಕೆ ತಪ್ಪಿದರೆ ಅದೇ ನಮಗೆ ಕುತ್ತನ್ನೂ ತರಲು ಸಾಕು. ಅಂತೆಯೇ ಈ ಸಂಸಾರವೂ ಕೂಡ. ಸಾಮಾನ್ಯವಾಗಿ ಈ ಸಂಸಾರವನ್ನು ನಮ್ಮ ಹಿಂದಿನ ಅನುಭಾವಿಕರು ಕತ್ತಿಯ ಅಲಗಿನಂತೆ ಭಾವಿಸಿದ್ದುಂಟು. ಸಂಸಾರವನ್ನು ದಾಟಲಾಗದ ಸಾಗರ ಎಂದು, ಅದೊಂದು ವಿಷದ ಬಾವಿ; ಬಿದ್ದರೆ ಎದ್ದುಬರುವುದು ಅಸಾಧ್ಯ ಎಂದೂ, ಇದೊಂದು ಮಹಾತಿಮಿಂಗಲ ಇದ್ದಂತೆ; ಕಷ್ಟದ ಕೋಟಿ ಕೋಟಿಯ ಕೋಟಲೆ ಎಂದೂ, ಸಂಸಾರವೆಂಬುದು ಗಹನವಾದ ಕಾನನ ಎಂದೂ, ನಾನಾ ಬಗೆಯಲ್ಲಿ ಬಾಧಕಾಂಶಗಳನ್ನು ಎತ್ತಿ ಎಚ್ಚರಿಸಿದ್ದುಂಟು.
ಸಂಸಾರ ಸಾಗಬೇಕಾದದ್ದೇ. ಆದ್ದರಿಂದ ಸಾರವಿದೆಯೆಂದೇ ಅದನ್ನು ಭಾವಿಸಬೇಕು. ಸಂಸಾರವೆಂಬುದು ಸಾಗರವೇ ಆದರೂ ಸಾಗರದಲ್ಲೇ ಇದ್ದು ಈಜಿ ಜಯಿಸಬೇಕಾದದ್ದು ಎಂಬುದು ಅನೇಕ ಸಾಧುಜನರ ಅಂಬೋಣವಾಗಿದೆ. ಇಂತಹ ಸಾಧಕಾಂಶವೂ ಈ ಸಂಸಾರದಲ್ಲಿದೆ. ಹಾಗಾಗಿ ಸಾಧಕ ಮತ್ತು ಬಾಧಕ ಎಂಬ ಉಭಯಾಂಶ ಪ್ರತಿಯೊಂದರಲ್ಲೂ ಸರ್ವೇಸಾಮಾನ್ಯವಾದುದಷ್ಟೆ! ಹೀಗಿದ್ದಾಗ ಸಂಸಾರವೇನೂ ಇದಕ್ಕೆ ಹೊರತಾದದ್ದಲ್ಲ. ಇಂತಹ ಉಭಯಾಂಶದಿಂದ ಕೂಡಿದ ಈ ಸಂಸಾರದಲ್ಲಿ ಸರ್ವಶ್ರೇಷ್ಠ ವ್ಯಕ್ತಿ ಯಾರು? ಎಂಬುದು ಪ್ರಕೃತ ಪ್ರಶ್ನೆ. ವಿರಕ್ತನಾದವನೇ ಇಂತಹ ಶ್ರೇಷ್ಠವ್ಯಕ್ತಿ ಎಂಬುದು ಉತ್ತರ.
ರಕ್ತಿ, ಅನುರಕ್ತಿ, ಅಂಟು, ಬಂಧ, ರಾಗ ಮೊದಲಾದವು ಸಂಸಾರದಲ್ಲೇ ಇರುವ ವ್ಯಕ್ತಿಯಲ್ಲಿ ಕಂಡುಬರುವ ಸಹಜಗುಣ. ಇದಕ್ಕೆ ವಿರುದ್ಧವಾದವುಗಳೇ ವಿರಕ್ತಿ, ಅನುರಕ್ತಿ, ವಿರಾಗ, ಮುಕ್ತಿ ಮೊದಲಾದವುಗಳು. ಉತ್ತಮ ಉದಾಹರಣೆಯೊಂದಿಗೆ ಈ ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಕೆಸರಿನ ಕಮಲ. ಇದು ಇರುವುದು ಕೆಸರಿನಲ್ಲಿ - ಹೇಯವಾದ ಸ್ಥಳದಲ್ಲಿ. ಆದರೆ ಅಲ್ಲೇ ಕಮಲವು ಪುಷ್ಪರಾಜನಾಗಿ ಭಗವಂತನ ಪೂಜಾ ಯೋಗ್ಯವಾದ ಪುಷ್ಪವಾಗುತ್ತದೆ ತಾನೆ! ಕಮಲಕ್ಕೆ ಕೆಸರು ಅಂಟುವುದಿಲ್ಲ, ಅಥವಾ ಕಮಲಕ್ಕೆ ಕೆಸರನ್ನು ಅಂಟಿಸಿಕೊಳ್ಳುವ ಸ್ವಭಾವವಿಲ್ಲ ಎಂಬುದೇ ನಿಜಸಂಗತಿ. ಅಂತೆಯೇ ಈ ಸಂಸಾರದಲ್ಲೇ ಇದ್ದ ವ್ಯಕ್ತಿಯೊಬ್ಬ ಸಂಸಾರದ ಸಕಲ ಕೆಲಸವನ್ನು ನಿಭಾಯಿಸಿಕೊಂಡು ಸಂಸಾರವನ್ನು ಸಾಗಿಸಿ ತಾನೂ ಸಂಸಾರದಲ್ಲಿ ಸಿಲುಕಿಕೊಳ್ಳದೇ ಪಾರಾಗುವ ಸ್ವಭಾವವನ್ನು ಬೆಳಸಿಕೊಳ್ಳುತ್ತಾನೆ. ಇವನೇ ನಿಜವಾದ ವಿರಕ್ತ, ಮುಕ್ತ. ಇದನ್ನು ಎಚ್ಚರಿಸುವ ಸಲುವಾಗಿ ಶ್ರೀಶಂಕರ ಭಗವತ್ಪಾದರು ಮೋಹಮುದ್ಗರ ಸ್ತೋತ್ರದಲ್ಲಿ ಹೀಗೆ ಹೇಳುತ್ತಾರೆ - "ನಳಿನೀದಲಗತಜಲಮ್ ಅತಿತರಲಂ ತದ್ವತ್ ಜೀವಿತಮ್ ಅತಿಶಯಚಪಲಂ" ಎಂದು. ಸಂಸಾರದಿಂದ ಮೇಲೇಳಲು ಉಪಾಯವನ್ನು ಅಲ್ಲೇ ಹೇಳುತ್ತಾರೆ. ಗೋವಿಂದನನ್ನು ಭಜಿಸು ಎಂದು. ಇಂದ್ರಿಯಗಳಿಗೆ ಆನಂದವನ್ನು ನೀಡುತ್ತಾ ತನ್ನ ಕಡೆ ಸೆಳೆದುಕೊಳ್ಳುವವನೇ ಗೋವಿಂದ. ಗೋವಿಂದವನನ್ನು ನಿತ್ಯಜೀವನದಲ್ಲಿ ನೆನೆಸುತ್ತಾ ಸಾಗುವವನೇ ನಿಜಾರ್ಥದ ಸಂಸಾರದಲ್ಲಿ ವಿರಕ್ತ. ಬಾಹ್ಯ ವ್ಯವಹಾರದಲ್ಲಿ ಆಸಕ್ತನಾಗಿ ಕಾರ್ಯಮಗ್ನನಾಗಿ ಕಂಡುಬಂದರೂ ಆತ ಅಲ್ಲಿ ಕೇವಲ ಕರ್ತವ್ಯರೂಪವಾಗಿ ತನ್ನ ಕರ್ಮವನ್ನು ಮಾಡುತ್ತಾನೆ. ಅವನು ಉಳಿದವರ ಆಚರಣೆಗಾಗಿ ಮಾಡುತ್ತಿರುತ್ತಾನೆ. ಅವನಿಗೆ ಕರ್ಮದ ಲೇಪವೂ ಇಲ್ಲ. ಆದ್ದರಿಂದಲೇ ಲೋಪವೂ ಇರುವುದಿಲ್ಲ. ಇದೇ ಕಾರಣಕ್ಕೆ ಅವನನ್ನು ವಿರಕ್ತ ಎನ್ನುವುದು. ಆದ್ದರಿಂದ ಈ ಸಂಸಾರದಲ್ಲಿ ಆತನೇ ಸರ್ವಶ್ರೇಷ್ಠ ಎಂಬಲ್ಲಿ ಯಾವ ಸಂದೇಹವಿಲ್ಲ.