Sunday, September 30, 2018

ಭಾರತದ ಆತ್ಮ : ಅಧ್ಯಾತ್ಮ (Bharatada Atma: Adhyatma)


ಶೈಕ್ಷಣಿಕ ನಿರ್ದೇಶಕಸ್ವದೇಶೀ ಇಂಡಾಲಜಿ
ಸದಸ್ಯರು, Indian Institute of Advanced Studies, Shimla

ಜೀವನವು ಒಂದು ಪ್ರಯಾಣ ಎಂಬ ರೂಪಕವನ್ನು ಹಲವರು ಹೇಳಿದ್ದಾರಲ್ಲವೆ? ನಾವೆಲ್ಲ ಎಲ್ಲಿಂದ ಬಂದೆವು? - ಎಂಬುದು ಗೊತ್ತಿಲ್ಲ. ನಾವೆಲ್ಲಿಗೆ ಹೋಗುತ್ತಿದ್ದೇವೆ? - ಎಂಬುದೂ ಗೊತ್ತಿಲ್ಲ. ಈಗಂತೂ ಇಲ್ಲಿ ಇದ್ದೇವೆಂಬುದು ಗೊತ್ತು. "ನಾನು ಯಾರು?" ಎಂಬ ಪ್ರಶ್ನೆಗೇ ಉತ್ತರವು ಗೊತ್ತಿಲ್ಲ. ಎಂದೇ ಪ್ರಸಿದ್ಧ ಸ್ತೋತ್ರವೊಂದು ಕೇಳುತ್ತದೆ: ನೀನು ಯಾರು? ನಾನು ಯಾರು? ಬಂದದ್ದು ಎಲ್ಲಿಂದ? ನನ್ನ ತಾಯಿ ಯಾರು? ತಂದೆ ಯಾರು? - ಇದನ್ನೆಲ್ಲ ಪರಿಭಾವಿಸಬೇಕಯ್ಯಾ, ಎನ್ನುತ್ತದೆ ಮಾತು.

"ಕಸ್ತ್ವಂ? ಕೋಽಹಂ? ಕುತ ಆಯಾತಃ?
ಕಾ ಮೇ ಜನನೀ? ಕೋ ಮೇ ತಾತಃ? ..."

ಹಾಗೆಯೇ ಗೀತೆಯಲ್ಲಿ ಸಹ, "ಪ್ರಾಣಿಗಳ ಆದಿಯು ಅವ್ಯಕ್ತ; ಪ್ರಾಣಿಗಳ ಮಧ್ಯವು ವ್ಯಕ್ತ; ಪ್ರಾಣಿಗಳ ನಿಧನವೂ ಅವ್ಯಕ್ತ...!" - ಎಂದು ಹೇಳಲಾಗಿದೆ

"ಅವ್ಯಕ್ತಾದೀನಿ ಭೂತಾನಿ ವ್ಯಕ್ತ-ಮಧ್ಯಾನಿ ಭಾರತ| ಅವ್ಯಕ್ತ ನಿಧನಾನ್ಯೇವ" ಎಂದು.

ಪ್ರಯಾಣವು ಸಾಗಬೇಕಾದರೆ ಕಾಲ್ನಡಿಗೆಯಿಂದ ಆಗಬಹುದು. ಎತ್ತಿನ ಬಂಡಿಯು ಹಳ್ಳಿಗಳಲ್ಲಾದರೆ, ಪಟ್ಟಣ-ನಗರಗಳಲ್ಲಿ ಕುದುರೆಯೋ ಕುದುರೆ ಗಾಡಿಯೋ ಆಗುತ್ತಿತ್ತಷ್ಟೆ. ಎಂದೇ ಅವೇ ಪ್ರಚುರವಾಗಿದ್ದ ಕಾಲದಲ್ಲಿ, ರಥದಲ್ಲಿ ಸಾಗುವ ಲೆಕ್ಕವನ್ನಿಟ್ಟುಕೊಂಡು ಹೇಳುವಿಕೆಯೆಂಬುದು ಸಹಜವಾದದ್ದು. ಉಪನಿಷತ್ತಿನಲ್ಲಿ ರಥದ ಉದಾಹರಣೆಯೇ ಮೂಡಿಬಂದಿದೆ.

ಯಾವುದು ರಥ? ರಥದಲ್ಲಿ ಕುಳಿತು ನಿರ್ದಿಷ್ಟಲಕ್ಷ್ಯಕ್ಕೆ ಪ್ರಯಾಣ ಮಾಡುವವ, ಅಂದರೆ ಯಜಮಾನ, ಯಾರು? ಅರ್ಥಾತ್, ರಥಿ ಯಾರು? ರಥಿಗೊಬ್ಬ ಸಾರಥಿ ಯಾರು? ಸಾರಥಿಯು ತಾನೆ ರಥವೆತ್ತ ಸಾಗಬೇಕಾಗಿದೆಯೆಂದು ಖಚಿತಮಾಡಿಕೊಂಡಿರುವವನು? ಆತನ ಕೈಯಲ್ಲಿ ಲಗಾಮುಗಳಿರುತ್ತವೆ. ಲಗಾಮಿನ ಹಿಡಿತ-ಸೆಳೆತ-ಸಡಿಲಿಕೆಗಳಿಂದಲ್ಲವೆ ರಥವನ್ನು ಓಡಿಸುವುದು? ಲಗಾಮು ಯಾವುದು? ಲಗಾಮಿನಿಂದ ಆತನು ಕುದುರೆಯ ಅಥವಾ ಕುದುರೆಗಳ ಮೇಲೆ ಹತೋಟಿಯನ್ನಿಟ್ಟುಕೊಂಡಿರುವವನಲ್ಲವೆ? ಹಾಗಾದರೆ ಕುದುರೆಗಳು ಯಾವುವು? ಇಷ್ಟೆಲ್ಲ ಇದ್ದರೂ ಪ್ರಯಾಣದ ಕೊನೆ, ಅಂದರೆ ನಿಲ್ದಾಣವಾವುದು? ಅರ್ಥಾತ್ ಲಕ್ಷ್ಯವಾವುದು? - ಇಷ್ಟೆಲ್ಲ ಪ್ರಶ್ನೆಗಳು ಕಣ್ಣಮುಂದೆ ಬಂದು ನಿಲ್ಲುತ್ತವಲ್ಲವೆ?

ಇಷ್ಟೂ ಪ್ರಶ್ನೆಗಳಿಗೆ ಉತ್ತರವನ್ನು ಅತ್ಯಂತ ಸಂಕ್ಷಿಪ್ತವಾಗಿ ಉಪನಿಷತ್ತಿನಲ್ಲಿ ಕೊಡಲಾಗಿದೆ. ಕಠೋಪನಿಷತ್ತು ಹೀಗೆ ಹೇಳಿದೆ: "ನಾನು (ಅಥವಾ  ಆತ್ಮ) - ಎನ್ನುವುದನ್ನೇ ರಥಿಯೆಂಬುದಾಗಿ ತಿಳಿದುಕೋ. ಶರೀರವೇ ರಥ. ಬುದ್ಧಿಯೇ ಸಾರಥಿ. ಮನಸ್ಸೇ ಲಗಾಮು. ಇಂದ್ರಿಯಗಳೇ ಕುದುರೆಗಳು."

"ಯಾವನಲ್ಲಿ ವಿಜ್ಞಾನವಿಲ್ಲವೋ, ಯಾವನ ಮನಸ್ಸು ಯುಕ್ತವಾಗಿಲ್ಲವೋ ಅವನಿಗೆ ಇಂದ್ರಿಯಗಳು ವಶವಾಗಿರವು - ಸಾರಥಿಗೆ ಕೆಟ್ಟ ಕುದುರೆಗಳಿದ್ದಂತೆ."

"ಯಾವನಲ್ಲಿ ವಿಜ್ಞಾನವುಂಟೋ, ಯಾವನ ಮನಸ್ಸು ಯುಕ್ತವಾಗಿರುವುದೋ ಅವನಿಗೆ ಇಂದ್ರಿಯಗಳು ವಶವಾಗಿರುವುವು - ಸಾರಥಿಗೆ ಒಳ್ಳೆಯ ಕುದುರೆಗಳಿದ್ದಂತೆ."

ಏನು ವಿಜ್ಞಾನವೆಂದರೆ? ಉಪನಿಷತ್ತಿನಲ್ಲಿ ಬಂದಿರುವ "ವಿಜ್ಞಾನ"ಕ್ಕೆ ವಿಶೇಷವಾದ ಜ್ಞಾನ, ವಿಶೇಷವಾದ ಅರಿವು - ಎಂದರ್ಥ. ಹಾಗೆಯೇ ಮನಸ್ಸು ಯುಕ್ತವಾಗಿರುವುದು ಎಂದರೇನು? ಮನಸ್ಸಿಗೆ ಯೋಗವು ಬಂದಿದ್ದಲ್ಲಿ ಅದು "ಯುಕ್ತ"ವಾದ ಮನಸ್ಸು. ಯಾವ ಯೋಗ? ಯೋಗವೆಂದರೆ ಸೇರ್ಪಡೆ. ತಾನೇನು ಮಾಡಬೇಕೋ ಅದಕ್ಕೇ ಮನಸ್ಸು ಹೊಂದಿಕೊಂಡಿದ್ದರೆ, ಅದರಲ್ಲೇ ಸೇರಿಕೊಂಡಿದ್ದರೆ, ಅದು ಯುಕ್ತವಾದ ಮನಸ್ಸು. "ಮನಸ್ಸು ಯುಕ್ತವಾಗಿಲ್ಲ"ವೆಂದರೆ ಮನಸ್ಸಿನಲ್ಲಿ ಸೇರಿಕೊಂಡುಹೋಗಿರುವಿಕೆಯು ಬಂದಿಲ್ಲವೆಂದೇ. ಅಲ್ಲಿಗೆ ವಿಶೇಷವಾದ ಅರಿವೂ ಯುಕ್ತವಾದ ಮನಸ್ಸೂ ಇದೆಯೆಂದರೆ, ಸಾರಥಿಗೆ ಒಳ್ಳೆಯ ಕುದುರೆಗಳಿವೆ - ಎಂದರ್ಥ. ಇಲ್ಲವೋ ಕುದುರೆಗಳು ಒಳ್ಳೆಯವಲ್ಲ - ಎಂದೇ.

ವಿಜ್ಞಾನವಿಲ್ಲದಿದ್ದರೆ ಏನು ಪರಿಣಾಮವಾಗುವುದು? ಅದು ಇದ್ದರೆ ಏನು? - ಎಂಬ ಪ್ರಶ್ನೆಗಳು ಬರುವುವಲ್ಲವೆ? ಮೊದಲು ಅರಿವು ಸರಿಯಿರಬೇಕು. ಇಲ್ಲವೋ ಮನಸ್ಸು ಯುಕ್ತವಾಗಿರದು. ಮನಸ್ಸೇ ಯುಕ್ತವಾಗಿಲ್ಲ - ಎಂದರೆ, ಇನ್ನು ಕುದುರೆಗಳ ಬಗ್ಗೆ ಹೇಳುವುದೇನು? ಅವು ಸದಶ್ವ (ಒಳ್ಳೆಯ ಕುದುರೆ)ಗಳಲ್ಲ, ದುಷ್ಟಾಶ್ವ(ಕೆಟ್ಟ ಕುದುರೆ)ಗಳೇ ಸರಿ!

ಕುದುರೆಗಳು ಹೇಗಿದ್ದರೇನು? - ಎಂದು ಕೇಳಬಹುದಲ್ಲವೆ? ಕುದುರೆಗಳು ಒಳ್ಳೆಯವಾಗಿದ್ದರೆ ಗುರಿ ಮುಟ್ಟಬಹುದು. ದುಷ್ಟಾಶ್ವಗಳಾದರೆ ಲಕ್ಷ್ಯವನ್ನು ತಲುಪಲಾದೀತೇ?

ಹಾಗಿದ್ದರೆ ಜೀವನವೆಂಬ ಪ್ರಯಾಣಕ್ಕೆ ಗುರಿಯಾವುದು? ಅದನ್ನು ಉಪನಿಷತ್ತು, "ತದ್ ವಿಷ್ಣೋಃ ಪರಮಂ ಪದಮ್" "ವಿಷ್ಣುವಿನ ಪರಮಸ್ಥಾನ" ಎನ್ನುತ್ತದೆ. ಏಕೆ ಬೇಕು ಗುರಿ? - ಎಂಬ ಪ್ರಶ್ನೆಗೂ ಉತ್ತರವು ಅಲ್ಲೇ ಇದೆ: ಅದು ಮರು ಹುಟ್ಟಿಲ್ಲದ ಎಡೆ

ಒಳ್ಳೆಯ ಕುದುರೆಗಳಾದರೆ, ಅರ್ಥಾತ್ ನಮ್ಮ ಇಂದ್ರಿಯಗಳು ಸತ್ಪ್ರವೃತ್ತಿಯನ್ನು ಹೊಂದಿದ್ದರೆ, ಪರಮಪದವನ್ನು ತಲುಪಬಹುದು. ದುಷ್ಟವಾದ ಕುದುರೆಗಳಾದರೆ ಪರಿಣಾಮವೇನು? ತತ್ಪರಿಣಾಮವೇ ಸಂಸಾರ.

ಸಂಸಾರವೆಂದರೇನು? ಸಂಸಾರವೆಂದರೆ ಸಂಸರಣ. ಸಂಸರಣವೆಂದರೆ ಸುತ್ತಿ ಸುತ್ತಿ ಬರುವುದು, ಬರುತ್ತಿರುವುದು. ಇದರಿಂದ ಏನು ನಷ್ಟ? - ಎಂದೂ ಕೇಳಬಹುದು. ದೆಹಲಿಯಲ್ಲಿ ಕನ್ನಾಟ್ ಸರ್ಕಸ್ (Connaught Circus) ಎಂದಿದೆಯಲ್ಲವೆ? ಅದು ವೃತ್ತಾಕಾರವಾಗಿದೆ. (Circus ಎಂದರೆ ಸುತ್ತೂ ಹೌದು). ಬೃಹದ್ವೃತ್ತ. ರಸ್ತೆಯಲ್ಲಿ ಸಾಗುತ್ತಿದ್ದರೆ ಮುಂದೆ ಮುಂದೆ ಹೋಗುತ್ತಲೇ ಇರುತ್ತೇವೆ. ಪ್ರ-ಗತಿಯಾಗುತ್ತಿದೆ ಎಂದೇ ತೋರುತ್ತದೆ. "ನಾವು ಪ್ರಗತಿಪರರು" - ಎಂದೇ ಎಂದುಕೊಳ್ಳು ತ್ತಿರುತ್ತೇವೆ. ಆದರೆ ಆಗುತ್ತಿರುವುದೇನು? ಮತ್ತೆ ಮತ್ತೆ ಸುತ್ತು! ಬಂದಲ್ಲಿಗೇ ಬರುತ್ತಿರು, ಹೋದಲ್ಲಿಗೇ ಸಾಗುತ್ತಿರು! ವಿಶೇಷವಾದ ಅರಿವಿಲ್ಲದಿದ್ದರೆ ಬರೀ ಚಕ್ರಭ್ರಮಣವೆಂದೇ ಗೊತ್ತಾಗದು; ಆಹಾ ಎಷ್ಟು ವೇಗವಾಗಿ ಹೋಗುತ್ತಿದ್ದೇನೆ! ಎಲ್ಲರನ್ನೂ ಮೀರಿಸುತ್ತಿದ್ದೇನೆ! - ಎಂದೇ ತೋರುತ್ತಿರುವುದು! ನೆಲೆಗಂಡೆವೆ? - ಎಂಬ ಪ್ರಶ್ನೆಯೇ ಬರದಿದ್ದರೆ ಲಾಭವೇನು?

ನಾವಿರುವುದೇ ಸಂಸಾರಸ್ಥಿತಿಯಲ್ಲಿ; ಲಕ್ಷ್ಯವೇ ಪರಮಪದ - ಅದುವೇ ದಾರಿಯ ಕೊನೆ, ಜೀವನದ ನಿಲ್ದಾಣ, ನೆಲೆ.

ಉಪನಿಷತ್ತು ಕೊಟ್ಟಿರುವ ರೂಪಕವು ನಾವೇನು, ನಮ್ಮ ಪ್ರಸಕ್ತ ಸ್ಥಿತಿಯೇನು, ನಮ್ಮ ಗುರಿಯೇನು - ಎನ್ನುವುದನ್ನು ತಿಳಿಸುವುದು. ರಥ-ರಥಿ, ಸಾರಥಿ-ಲಗಾಮು, ಕುದುರೆ-ದಾರಿ, ಹಾಗೂ ನಿಲ್ದಾಣ-ಭ್ರಮಣಗಳನ್ನು ಸೊಗಸಾಗಿ ತೋರಿಸಿಕೊಟ್ಟಿದೆ.

ಉದಾಹರಣವೆಂದರೆ ಮೇಲಕ್ಕೆ(ಉತ್) ಎತ್ತುವುದು(ಆಹರಣ). ಅಜ್ಞಾನವೆಂಬ ಹಳ್ಳದಿಂದ ಜ್ಞಾನವೆಂಬ ಉನ್ನತಸ್ಥಾನಕ್ಕೆ ಎತ್ತುವುದೇ ಉದಾಹರಣೆ. ಮನಸ್ಸಿಗೆ ನಾಟುವ ಉದಾಹರಣೆ-ರೂಪಕಗಳ ಮೂಲಕ ನಮ್ಮನ್ನು ಉನ್ನತಸ್ಥಿತಿಗೆ ಒಯ್ದು ಸತ್ಯವನ್ನು ತೋರಿಸಿಕೊಡುವುವು, ನಮ್ಮ ಉಪನಿಷತ್ತುಗಳು.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.