Sunday, October 21, 2018

ದಾಂಪತ್ಯದಲ್ಲಿ ನೀತಿ-ಅನೀತಿ (Dampatyadalli neethii-aneethi)

Asst. Prof, IIT Hyderabad

ದಾಂಪತ್ಯ ಒಂದು ಒಪ್ಪಂದಅದರ ಉಲ್ಲಂಘನೆ ಶಿಕ್ಷಾರ್ಹವೋ ಅಲ್ಲವೋ ಎನ್ನುವುದು ದೇಶಾದ್ಯಂತ ಚರ್ಚಿಸಲ್ಪಡುತ್ತಿದೆ.  ವಾಗ್ವಾದಕ್ಕೆ ಪ್ರವೇಶಿಸದೆ ತಿಳಿಯ ಮನಸ್ಸಿನಿಂದ ನಮ್ಮ ದೇಶದ ಸಂಸ್ಕೃತಿಯಲ್ಲಿ ದಾಂಪತ್ಯದ ಸಂಬಂಧ ಹೇಗೆ ಬೆಳೆದು ಬಂದಿದೆ ಎಂದು ನೋಡಿದರೆ  ವಿಷಯಕ್ಕೆ ಒಂದು ಹೊಸ ದಿಗಂತ ದರ್ಶನ.

ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯ ಕೇವಲ ಒಂದು ವ್ಯವಹಾರ ಒಪ್ಪಂದವಲ್ಲ - ಸೃಷ್ಟಿಸಹಜವಾದ ಒಂದು ಬಂಧ. ದಿವಿ-ಭುವಿಗಳಂತೆ , ಮನಸ್ಸು-ವಾಕ್ಕಿನಂತೆ ಇರುವ ಸಹಜ ಸಂಬಂಧ ಎಂದು ವಿವಾಹ ಮಂತ್ರಗಳು ತಿಳಿಸುತ್ತವೆ. ದಿವಿಯ ಮೋಡ ತನ್ನ ನೀರನ್ನು ಭುವಿಗೆರಚಿ ಹೊಸ ಚಿಗುರನ್ನು ಹಬ್ಬಿಸುತ್ತೆ. ದಿವಿಯ ಪ್ರಕಾಶ ಭುವಿಯ ಜೀವನವನ್ನು ಪೋಷಿಸುತ್ತೆ. ಇದರಿಂದ ಲಾಭ ಯಾರಿಗೆ ? ದಿವಿಗೋ ಭುವಿಗೋ ? ಎಂದರೆ ಇಬ್ಬರಿಗೂ ಅಲ್ಲ. ಅವರಿಬ್ಬರೂ ಸೃಷ್ಟಿನಿಯಮದ ಪಾಲಕರಷ್ಟೇ. ಪಶು ಪಕ್ಷಿ, ಸಸ್ಯ ವನಸ್ಪತಿಗಳೇ ಮೊದಲಾದ ಜೀವರಾಶಿಯ ಸಂತತಿಗಳು ಬೆಳೆದು ಹೊಳೆವ ಸೃಷ್ಟಿಯ ಆಸೆಯನ್ನೀಡೇರಿಸುವ ಮಹಾತ್ಮರು.

ವಾಕ್ಕು ಮನಸ್ಸಿನ ಆಶಯವನ್ನು ಹೊರತರುತ್ತದೆ. ಯಾರಿಗೋಸ್ಕರ ಎಂದರೆ ವಾಙ್ಮನಸ್ಸುಗಳ ಒಡೆಯನಾದ ಆ ವ್ಯಕ್ತಿಯ ಒಳಿತಿಗೋಸ್ಕರ. ಅಂತೆಯೇ ದಾಂಪತ್ಯ ಕೇವಲ ಭೋಗಕ್ಕೆ ಲೈಸೆನ್ಸ್ ಅಲ್ಲದೆ, ನಿಸ್ವಾರ್ಥವಾಗಿ ಸೃಷ್ಟಿ-ಸೃಷ್ಟೀಶನ ಆಶಯವನ್ನು ಮುಂದುವರಿಸುವ ಹೊಣೆಗಾರಿಕೆ ಎಂದೂ ಶುದ್ಧವಾದ ಆತ್ಮಗುಣಗಳಿಂದ ಕೂಡಿದ ಸಂತತಿಯನ್ನು ಲೋಕಾರ್ಪಣೆ ಮಾಡುವ ಮಹಾಯಜ್ಞವೆಂದು ಎಣಿಸಿದರು ಭಾರತರು.

ಅಯ್ಯೋ ! ದಾಂಪತ್ಯದ ಮಧುರ ಸಂಬಂಧವನ್ನು ಒಣ ವೈರಾಗ್ಯದ ನಿರ್ಬಂಧವನ್ನಾಗಿ ಮಾಡಿಬಿಟ್ಟರಲ್ಲ ಎಂದು ಆತಂಕ ಪಡಬೇಕಾಗಿಲ್ಲ. ದಿವಿ-ಭುವಿಗಳ ಉಪಮಾನವನ್ನು ಕೊಡುವ ವೇದ ಮಂತ್ರಗಳೇ, 'ಎನ್ನ ಹೃದಯವು ನಿನ್ನದಾಗಲಿ - ನಿನ್ನಹೃದಯವು ನನ್ನದಾಗಲಿ' ಎಂಬ ಮೃದುಮಧುರವೂ ಅರ್ಥಗರ್ಭಿತವೂ ಆದ ಮಾತುಗಳನ್ನೂ ನುಡಿಯುತ್ತವೆ. ತನ್ನ ಪ್ರಿಯತಮೆಯೂ ಭಾವೀ ಪತ್ನಿಯೂ ಆದ ಪ್ರಮದ್ವರೆಯು ಸರ್ಪವಿಷದಿಂದ ಪ್ರಾಣ ತ್ಯಜಿಸಿದಾಗ ತನ್ನ ಆಯುಷ್ಯದಲ್ಲಿ ಅರ್ಧಭಾಗ ದಾನಮಾಡಿ ಆಕೆಯನ್ನು ಬದುಕಿಸಿದ ರುರುವೂ ಒಬ್ಬ ಋಷಿಕುಮಾರನೇ ಎಂದು ಮರೆಯಬಾರದು. ಯೋಗೀಶ್ರೇಷ್ಠರಾದದ ಕಪಿಲ ಮುನಿಗಳ ತಂದೆಯೂ ಬ್ರಹ್ಮಜ್ಞಾನಿಗಳೂ ಆದ ಕರ್ದಮ ಪ್ರಜಾಪತಿಗಳು ನೂರು ವರ್ಷಗಳ ಕಾಲ ಪತ್ನಿಯಾದ ದೇವಹೂತಿಯೊಡನೆ ಅರಣ್ಯ- ರಮ್ಯ ಉದ್ಯಾನವನಗಳಲ್ಲಿ ವಿಹರಿಸಿ ಭೋಗಿಸಿದರಂತೆ. ವಸಿಷ್ಠ-ಅರುಂಧತಿ, ಅತ್ರಿ-ಅನಸೂಯ, ಕಶ್ಯಪ-ಅದಿತಿ ಮುಂತಾದ ಅಸಂಖ್ಯಾತ ಋಷಿ ದಂಪತಿಗಳು ಗೃಹಸ್ಥ ಜೀವನ ನಡೆಸಿ ವಿಸ್ತಾರವಾದ ವಂಶ ಪರಂಪರೆಯನ್ನು ಬೆಳೆಸಿದರು.

ದಾಂಪತ್ಯದ ಬಂಧವು ಸೃಷ್ಟಿ-ಸೃಷ್ಟೀಶನಆಶಯದಂತೆ ಮಾಡುವ ಯಜ್ಞವಾದ್ದರಿಂದ, ಅದರ ಉಲ್ಲಂಘನೆಯೂ ಸೃಷ್ಟಿಮಾತೆಯ ನ್ಯಾಯಾಲಯದಲ್ಲೇ ಶಿಕ್ಷಾರ್ಹ. ಶಿಕ್ಷೆ ಶಿಕ್ಷಣಕ್ಕೆ ಪರ್ಯಾಯ. ಏರುಪೇರನ್ನು ಸರಿಪಡಿಸುವ ಕ್ರಿಯೆ. ಆದುದರಿಂದಲೇ ಅಹಲ್ಯೆಗೆ ಶಿಕ್ಷೆ ದೀರ್ಘ ಕಾಲ ಕಠೋರ ತಪಸ್ಯೆ. ಆ ತಪಸ್ಸಿನ ಫಲವಾಗಿ ಶ್ರೀರಾಮದರ್ಶನದಿಂದ ಲೋಭಮೋಹ ವಿವರ್ಜಿತಳಾಗಿ ಗೌತಮರೊಡನೆ ಒಂದುಗೂಡುತ್ತಾಳೆ. ಅನೈತಿಕ ನಡತೆಯಲ್ಲಿ ಭಾಗಿಯಾದ ಇಂದ್ರನಿಗೆ ಷಂಡತ್ವದ ಶಿಕ್ಷೆ. ಗಂಡು-ಹೆಣ್ಣು ಇಬ್ಬರಿಗೂ ಶಿಕ್ಷೆ ಆಯಿತು ಎನ್ನುವುದು ಗಮನಾರ್ಹ. ವಿಧಿಸಲ್ಪಟ್ಟ ಶಿಕ್ಷೆ ಬೇರೆ ಬೇರೆಯಾದರೂ ಕಳೆದುಕೊಂಡಿದ್ದ ಇಂದ್ರಿಯಜಯವನ್ನು ಮಾತ್ತೆ ಪಡೆಯುವ ಗುರಿಯೊಂದೇ. ಇಲ್ಲಿ ಯಾವ ಜೈಲಿಗಾಗಲಿ ಕೋರ್ಟು-ಕಚೇರಿಗಾಗಲಿ ಅವಕಾಶವಿಲ್ಲ. ಮದುವೆಯ ದಾಖಲಾತಿ-ರದ್ದುಪಡಿಸುವಿಕೆಯ ಸುದ್ದಿಯೇ ಇಲ್ಲ. 

ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯದ ದಾಖಲಾತಿ ಹೃದಯಗರ್ಭದಲ್ಲಿ ಗೂಢವಾಗಿರುತ್ತೆ. ಭಕ್ತಕವಿ ಜಯದೇವಪತ್ನಿ ಪದ್ಮಾವತಿಯು, ಪತಿಯ ಮೃತ್ಯುವಿನ ಸುಳ್ಳು ಸಮಾಚಾರವನ್ನು ಕೇಳಿ ಅಲ್ಲೇ ಪ್ರಾಣ ತ್ಯಜಿಸಿದಳೆಂದೂ, ಜಯದೇವರ ಭಕ್ತಿಗಾನದಿಂದ ಪುನರುಜ್ಜೀವಗೊಂಡಳೆಂದೂ ವೃತ್ತಾಂತ. ಇಂತಹ ಮಹನೀಯರು ರಸಪ್ರೇಮಿಗಳೋ ಭಕ್ತಶ್ರೇಷ್ಠರೊ ? ಇಂದ್ರಿಯ ಸೌಖ್ಯವನ್ನೂ ಸೃಷ್ಟಿ-ಸೃಷ್ಟೀಶನ ತಪಸ್ಯೆಯನ್ನೂ ಏಕಕಾಲದಲ್ಲಿ ಅನಾಯಾಸವಾಗಿ ಸಾಧಿಸಿದ್ದು ಪ್ರಾಚೀನ ಭಾರತೀಯರ ಅಸಾಮಾನ್ಯ ಹಾಗೂ ಅದ್ವಿತೀಯವಾದ ಸಾಧನೆ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.