Saturday, November 24, 2018

ಪರಂಜ್ಯೋತಿಯ ಪ್ರತಿನಿಧಿ- ದೀಪ (Paranjyotiya pratinidhi- deepa)

ಲೇಖಕರು: ತಾರೋಡಿ ಸುರೇಶ, ಬೆಂಗಳೂರು


ದೀಪ ಬೆಳಗುತ್ತದೆ. ತಕ್ಷಣ ಕತ್ತಲೆ ದೂರವಾಗುತ್ತದೆ. ಎಲ್ಲೆಡೆ  ಪ್ರಕಾಶವು ತುಂಬಿಕೊಳ್ಳುತ್ತದೆ. ಸಹಜವಾಗಿಯೇ ಜೀವಲೋಕವು ದೀಪವನ್ನು ಬಯಸುತ್ತವೆ-ದಿವಾಭೀತ(ಗೂಬೆ)ದಂತಹ ಕೆಲವನ್ನು ಹೊರತುಪಡಿಸಿ. 

ಅದರಲ್ಲೂ ಭಾರತದಲ್ಲಿ ದೀಪಕ್ಕೆ ಕೊಟ್ಟಿರುವಷ್ಟು ಮಹತ್ವವನ್ನು ಇನ್ನಾವುದಕ್ಕೂ ನೀಡಿಲ್ಲ. ಭಾರತ ಎಂಬ ಹೆಸರೇ ಭಾ ಎಂದರೆ ಬೆಳಕು ರತ ಎಂದರೆ ಅದರಲ್ಲಿ ನಲಿಯುವವರು ಎಂಬರ್ಥದಲ್ಲಿ ಬಂದಿದೆ. ಪ್ರತಿಯೊಂದು ವ್ಯವಹಾರವೂ ದೀಪ ಬೆಳಗುವಿಕೆಯಿಂದಲೇ ಆರಂಭ. ದೀಪವಿಲ್ಲದಿದ್ದರೆ ಅದು ಅಮಂಗಲ ಎಂಬುದು ದೇಶದುದ್ದಕ್ಕೂ ವ್ಯಾಪಿಸಿರುವ ಮನೋಧರ್ಮ.
ನಾವು ಬೆಳಗುವ ದೀಪವು ಪರಮಾತ್ಮನ ಪ್ರತಿನಿಧಿ.  ಕಾರಣ ಪರಮಾತ್ಮನೇ ಮೊಟ್ಟಮೊದಲ ಜ್ಯೋತಿಅವನನ್ನು ಜ್ಯೋತಿರಿವ ಅಧೂಮಕಃ ಹೊಗೆಯಿಲ್ಲದ ಜ್ಯೋತಿ,ದೀಪವದ್ವೇದಸಾರಂ”,- ಹೃದಯಕಮಲದ ಮಧ್ಯೆ ವೇದಗಳ ಸಾರವಾಗಿರುವ ಜ್ಯೋತಿಯೊಂದು ಬೆಳಗುತ್ತಿದೆ-ಎಂದೆಲ್ಲ ವರ್ಣಿಸಿದ್ದಾರೆ.
ಅಂತಹ ಆತ್ಮದೀಪವು ನಿಧಿಯಾದರೆ ನಾವು ಬಾಹ್ಯದಲ್ಲಿ ಬೆಳಗುವ ದೀಪವು ಅದರ ಪ್ರತಿನಿಧಿ.  ಆದರೆ ಹಾಗೆ  ಪ್ರತಿನಿಧಿಯಾಗಬೇಕಾದರೆ ನಿಧಿಯ ಬಳಿಗೆ ಕರೆದೊಯ್ಯುವ ಸಾಮರ್ಥ್ಯವಿರಬೇಕು. ಪ್ರತಿನಿಧಿಯಲ್ಲಿ ನಿಧಿಯ ಲಕ್ಷಣ-ಧರ್ಮಗಳು ಬಹಳ ಹೆಚ್ಚು ಪ್ರಮಾಣದಲ್ಲಿರಬೇಕು.
ದೀಪವು ಪರಮಾತ್ಮನಂತೆಯೇ ಸ್ವಯಂಪ್ರಕಾಶ. ಪರಮಾತ್ಮನು ಅಜ್ಞಾನದ ಕತ್ತಲೆಯನ್ನು ದೂರ ಮಾಡುವಂತೆಯೇ ಹೊರದೀಪವೂ ಕತ್ತಲೆಯನ್ನು ಕಳೆಯುತ್ತದೆ. ಪರಂಜ್ಯೋತಿಯ ಸಾದೃಶ್ಯವನ್ನು ಹೊಂದಿದ್ದುಅದರ ದರ್ಶನವು ಮೂಲದೀಪದತ್ತ ಕೊಂಡೊಯ್ಯಬಲ್ಲುದು. ಸಮಾಧಿಸ್ಥಿತಿಯಲ್ಲಿರುವವನು ಗಾಳಿಯಿಲ್ಲದ ದೀಪದಂತೆ ನಿಶ್ಚಲನಾಗಿರುತ್ತಾನೆ ಎಂದು ಯೋಗವು ಹೇಳುತ್ತದೆ. ಪರಶಿವನನ್ನು ನಮ್ಮ ರಾಷ್ಟ್ರಕವಿಯಾದ ಕಾಳಿದಾಸನು ಗಾಳಿಯಿಲ್ಲದಿರುವ ಎಡೆಯಲ್ಲಿ ನಿಶ್ಚಲವಾಗಿರುವ ದೀಪದಂತೆಎಂದು ವರ್ಣಿಸುತ್ತಾನೆ. ಮನಸ್ಸಿನ ಚಂಚಲತೆಯಿಲ್ಲದಿರುವಾಗ ಪರಮಾತ್ಮ ದರ್ಶನ ಸಾಧ್ಯ ಎಂಬುದನ್ನೂ ಇದು ಸೂಚಿಸುತ್ತದೆ.
ಹಾಗೆಯೇ ಒಂದು ದೀಪದಿಂದ ಇನ್ನೊಂದು ದೀಪವನ್ನು ಬೆಳಗಿದರೆ ಅದು ಏಕರೂಪವಾಗಿರುತ್ತದೆ. ಹಿಂದು ಮುಂದಿನ ದೀಪಗಳ ಪ್ರಕಾಶವು ಹೆಚ್ಚು- ಕಡಿಮೆಯಾಗುವುದಿಲ್ಲ. ಸ್ಥಿರವಾದ ಭಗವದ್ಧರ್ಮವನ್ನು ಇದು ಪ್ರತಿನಿಧಿಸುತ್ತದೆ.
ಪರಮಾತ್ಮನು ಪರಮಸುಖದ ತವರುಮನೆ. ಅಂತೆಯೇ ದೀಪವೂ ಮಂಗಲಸ್ವರೂಪಿ. ಯಾವುದು ಸುಖವನ್ನು ಕೊಡುತ್ತದೆಯೋ ಅದು ಮಂಗಲ. ಇದು ಜ್ಞಾನಿಗಳ ಅನುಭವದ ಮಾತೂ ಹೌದು. ಜೊತೆಗೆ ಜ್ಞಾನಿಗಳ ಮಾರ್ಗದರ್ಶನದಲ್ಲಿ ಇದನ್ನು ಸಾಧನೆಯ ಮಾಧ್ಯಮವನ್ನಾಗಿ ಮಾಡಿಕೊಂಡರೆ ಪರಮಾತ್ಮಾನುಭವದ ಅನುಪಮವಾದ ಸುಖಕ್ಕೆ ದ್ವಾರವಾಗಬಲ್ಲದು.
ಪರಮಾತ್ಮನು ಜನನ ಮರಣಗಳ ಚಕ್ರದಿಂದ ಜೀವಿಗಳನ್ನು ಕಾಪಾಡುತ್ತಾನೆ. ದೀಪವು ಕೂಡ ತನ್ನ ದರ್ಶನದಿಂದ ತಮಸೋ ಮಾ ಜ್ಯೋತಿರ್ಗಮಯ ಎಂಬಂತೆ ತಪಸ್ಸಿನ ಸಾಧನವಾಗಿಪರಮಾತ್ಮ ತತ್ವದತ್ತ ನಯನ ಮಾಡಿಸಿ ಹುಟ್ಟುಸಾವುಗಳ ಚಕ್ರದಿಂದ ರಕ್ಷಿಸುತ್ತದೆ. ಆದ್ದರಿಂದಲೇ ಮೃತ್ಯುವಿನಾಶಿನೋ ದೀಪಃ ಎಂಬುದಾಗಿ ಕೊಂಡಾಡಿದ್ದಾರೆ.
ನಮ್ಮನ್ನೇ ನಾವು ದರ್ಪಣದಲ್ಲಿ ನೋಡಿಕೊಳ್ಳುವಂತೆ ದೀಪದರ್ಶನ. ಭೂಮಿಯ ನಕ್ಷೆಯಿಂದ ಭೂಮಿಯನ್ನು ಅರ್ಥಮಾಡಿಕೊಂಡಂತೆ ಇದು.ದೀಪದಲ್ಲಿ ಮೂರು ವರ್ತಿಗಳು(ಬತ್ತಿ),ಎಣ್ಣೆ ಅಥವಾ ತುಪ್ಪಮತ್ತು ಇವುಗಳನ್ನು ಹೊತ್ತಿರುವ ದೀಪಸ್ತಂಭವಿರುತ್ತದೆಯಷ್ಟೆ.ಇದೊಂದು ಅದ್ಭುತವಾದ  ಋಷಿಗಳ ಯೋಜನೆ. ಇದು ಕೇವಲ ಪರಮಾತ್ಮನ ಪ್ರತಿನಿಧಿಯಾಗಿರುವುದಲ್ಲದೆ ನಮ್ಮ ಸಮಗ್ರ ಜೀವನವನ್ನೂ  ಪ್ರತಿಬಿಂಬಿಸುತ್ತದೆ. ಇಲ್ಲಿ ದೀಪವು ಪರಮಾತ್ಮಜ್ಯೋತಿಯನ್ನೂಮೂರು ವರ್ತಿಗಳು ತ್ರಿಗುಣಾತ್ಮಕವಾದ ಪ್ರಕೃತಿಯನ್ನು ಸೂಚಿಸಿದರೆ ಎಣ್ಣೆಯು ಅಂಟಿಕೊಳ್ಳುವ ಸ್ವಭಾವವುಳ್ಳ ಭಕ್ತಿಯ ಪ್ರತೀಕ. ಜೊತೆಗೆ ದೀಪವನ್ನು ಹೊತ್ತಿರುವ ದೀಪಸ್ತಂಭವು ನಮ್ಮ ಮೇರುದಂಡವನ್ನು ಅಥವಾ ದೇಹವನ್ನು ಪ್ರತಿನಿಧಿಸುತ್ತದೆ. ಯೋಗಶಾಸ್ತ್ರವು  ಮೇರುದಂಡದೊಳಗೆ ಗುಪ್ತವಾಗಿ ನೆಲೆಸಿರುವ ಆತ್ಮಮಾರ್ಗವನ್ನೂಅದರ ತುತ್ತತುದಿಯಲ್ಲಿಸಹಸ್ರಾರ ಚಕ್ರದಲ್ಲಿ ಬೆಳಗುತ್ತಿರುವ ಪರಂಜ್ಯೋತಿಯನ್ನೂ ವಿವರವಾಗಿ ವರ್ಣಿಸುತ್ತದೆ.
ಯೋಗದೃಷ್ಟಿಗೆ ಮಾತ್ರ ಗೋಚರವಾಗುವ ಜೀವನದ ಒಳತತ್ವಗಳನ್ನೂಪದ್ಮಗಳನ್ನೂ, ವಿದ್ಯೆಗಳನ್ನೂ ಜ್ಞಾಪಿಸುವ ರೀತಿಯಲ್ಲಿ ವಿವಿಧ ವಿನ್ಯಾಸಗಳಲ್ಲಿ ಮತ್ತು ಸಂಖ್ಯೆಗಳಲ್ಲಿ ಮಂಗಳಾರತಿಗಳನ್ನೂ ಋಷಿಗಳು ಅಳವಡಿಸಿಕೊಟ್ಟಿದ್ದಾರೆ.
ಇವುಗಳೆಲ್ಲದರ ರಹಸ್ಯಗಳನ್ನು ಋಷಿಹೃದಯವೇಧಿಗಳಾದ ಮಹಾತ್ಮರಿಂದಲೇ ಅರಿಯಬೇಕು. ದೀಪರೂಪನಾದ ಪರಂಜ್ಯೋತಿಗೂ, ಪ್ರತಿನಿಧಿಯಾದ ದೀಪಕ್ಕೂ ಮತ್ತು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಟ್ಟ ಮಹರ್ಷಿಗಳಿಗೂ ಕೋಟಿನಮನಗಳು.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.