Wednesday, February 20, 2019

ಅಕ್ಷರಾಭ್ಯಾಸ (Aksharaabhyasa)

 ಲೇಖಕರು :  ತಾರೋಡಿ ಸುರೇಶ

ಷೋಡಶ ಸಂಸ್ಕಾರಗಳಲ್ಲಿ ಅಕ್ಷರಾಭ್ಯಾಸವೂ ಒಂದು. ಈ ಮಂಗಳವಾದ ಸಂಸ್ಕಾರವನ್ನು ವಿದ್ಯಾರಂಭ, ಅಕ್ಷರಾರಂಭ, ಅಕ್ಷರಸ್ವೀಕರಣ, ಅಕ್ಷರಲೇಖನ ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರೆ.

ಅಕ್ಷರ ಎಂಬ ಶಬ್ಧಕ್ಕೆ ನಾಶವಿಲ್ಲದಿರುವುದು ಎಂದರ್ಥ. ಮೌಲಿಕವಾಗಿ ಇದು ನಾಶವಿಲ್ಲದ ಪರತತ್ವವನ್ನೇ ಹೇಳುತ್ತದೆ. ಅಭ್ಯಾಸವೆಂದರೆ ಆ ತತ್ವಕ್ಕೆ ತನ್ನನ್ನು ಅಭಿಮುಖವಾಗಿ ಇರಿಸಿಕೊಳ್ಳುವುದು. ಹಾಗಿದ್ದಲ್ಲಿ ವರ್ಣಮಾಲೆಯಲ್ಲಿರುವ ಅಕ್ಷರಗಳಿಗೂ ಪರಬ್ರಹ್ಮನಿಗೂ ಏನು ಸಂಬಂಧ?  ಈ ಎಲ್ಲ ಅಕ್ಷರಗಳೂ ಪರತತ್ವದಿಂದಲೇ, ಸೃಷ್ಟಿಯ ಜೊತೆಯಲ್ಲಿಯೇ ವಿಕಾಸಗೊಂಡು ಬಂದಿವೆ ಎಂದು ನಮ್ಮ ಪೂರ್ವಜರಾದ ಋಷಿಗಳು ಹೇಳುತ್ತಾರೆ. ಮೂಲದಲ್ಲಿ ಬೆಳಗುತ್ತಿದ್ದ ಪರಂಜ್ಯೋತಿ, ಅಲ್ಲಿಂದ ನಾದರೂಪವಾದ ಪ್ರಣವ(ಓಂಕಾರ) ಅಲ್ಲಿಂದ ಮುಂದೆ ಸ್ವರ ಮತ್ತು ಅಕ್ಷರಗಳು ಬೆಳೆದುಬಂದವು ಎಂದು ಗುರುತಿಸಿದ್ದಾರೆ. ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಇವುಗಳನ್ನು ಪ್ರಯೋಗರೂಪದಲ್ಲಿ ತೋರಿಸುತ್ತಿದ್ದರು. ಹೀಗೆ ಪ್ರಣವದಿಂದ ವಿಕಾಸಗೊಂಡು ಬಂದ ಒಂದೊಂದು ಅಕ್ಷರವೂ ಸೃಷ್ಟಿಯಲ್ಲಿರುವ ಶಾಶ್ವತವಾದ ತತ್ವಗಳನ್ನೂ, ನಿಯಮಗಳನ್ನೂ ಪ್ರತಿನಿಧಿಸುತ್ತವೆ. ಆ ತತ್ವಗಳಿಗೂ, ಅಕ್ಷರಗಳಿಗೂ ಒಂದು ಅವಿನಾಭಾವ ಸಂಬಂಧವಿರುತ್ತದೆ. ಈ ಅಕ್ಷರಗಳ ಉಪದೇಶಸಹಿತವಾದ ಅಭ್ಯಾಸವು ಅಂತಹ ನಾಶರಹಿತವಾದ ತತ್ವಗಳೊಂದಿಗೆ ಅಭ್ಯಾಸಮಾಡುವವರನ್ನು ಜೋಡಿಸುತ್ತದೆ. ಉದಾಹರಣೆಗೆ ಅಕಾರ, ಉಕಾರ, ಮಕಾರಗಳು ಕ್ರಮವಾಗಿ  ವಿಷ್ಣು, ಬ್ರಹ್ಮ, ರುದ್ರರ ವರ್ಣರೂಪವಾದ ಅಭಿವ್ಯಕ್ತಿಗಳಾಗಿವೆ. ಒಂದೊಂದು ಅಕ್ಷರವೂ ಯೋಗಿಗಳ ಅಂತರ್ದರ್ಶನಕ್ಕೆ ವಿಷಯವಾಗಿವೆ. ಸಂಸ್ಕೃತವು ಇಂತಹ ಅಕ್ಷರಗಳ ವೈಜ್ಞಾನಿಕವಾದ ಸಂಯೋಜನೆಯಿಂದಲೇ ಅರಳಿಬಂದ ದೇವಭಾಷೆಯಾಗಿದೆ.


ಈ ಅಕ್ಷರಾಭ್ಯಾಸದ ಆಚರಣೆಯು ವಿವಿಧ ಸಂಪ್ರದಾಯಗಳಲ್ಲಿ ವಿಭಿನ್ನವಾಗಿದ್ದರೂ ಸಾಧಾರಣವಾಗಿ ವಿದ್ಯಾದೇವತೆಯ ಪೂಜೆ, ಆಚಾರ್ಯಪೂಜೆ ಮತ್ತು ಪ್ರಣವಾದಿ ಅಕ್ಷರಗಳನ್ನು ಮಗುವಿನಿಂದ ತಿದ್ದಿಸುವಿಕೆ ಇದ್ದೇ ಇರುತ್ತವೆ.

ಈ ಸಂಸ್ಕಾರವನ್ನು ಚೂಡಾಕರ್ಮ(ಚೌಲ)ದ ನಂತರ ಮತ್ತು ಉಪನಯನಕ್ಕೆ ಮೊದಲು ಆಚರಿಸಬೇಕು. ವಿದ್ಯಾದೇವತೆಗಳಾಗಿ, ಸರಸ್ವತೀ, ಗಣೇಶ, ಹಯಗ್ರೀವ ಮತ್ತು ಬೃಹಸ್ಪತಿಯನ್ನು ಪೂಜಿಸುವುದಿದೆ. ಇವರೆಲ್ಲರೂ ವಿದ್ಯಾ-ಬುದ್ಧಿಗಳ ಅಭಿಮಾನಿದೇವತೆಗಳಾಗಿದ್ದಾರೆ. ವಿದ್ಯೆಯು ಸಿದ್ಧಿಸಲು ಅನುಗ್ರಹ ಮಾಡುವವರಾಗಿದ್ದಾರೆ. ಉದಾಹರಣೆಗೆ ಹಯಗ್ರೀವನು ವಿದ್ಯೆಗೂ, ವಾಣಿಗೂ, ಮೇಧೆಗೂ ಅದಿಷ್ಠಾತೃ ದೇವತೆಯಾಗಿದ್ದಾನೆ. ವಾಗೀಶ ಎಂಬ ಹೆಸರು ಶ್ರೀಹಯಗ್ರೀವ, ಬ್ರಹ್ಮ ಮತ್ತು ಬೃಹಸ್ಪತಿ-ಮೂವರಿಗೂ ಅನ್ವಯಿಸುತ್ತದೆ. ಈ ಎಲ್ಲ ವಿದ್ಯಾದೇವತೆಗಳಲ್ಲಿ ಎಲ್ಲರನ್ನು ಅಥವಾ ಒಬ್ಬನನ್ನೇ ಆರಾಧಿಸಿದರೂ ವಿದ್ಯಾಭ್ಯಾಸದ ಆದಿಮಂಗಳದ ಸಿದ್ಧಿಯಾಗುವುದು. ಬೆಳ್ಳಿಯ ಹಲಗೆಯ ಮೇಲೆ ಕೇಸರಿಯೇ ಮುಂತಾದ ದ್ರವ್ಯಗಳನ್ನು ಚೆಲ್ಲಿ ಚಿನ್ನದ ಕಡ್ಡಿಯಿಂದ ಶ್ರೀ ಗಣೇಶ-ಶಾರದಾ-ಕುಲದೇವತಾ-ಲಕ್ಷ್ಮೀನಾರಾಯಣೇಭ್ಯೋ ನಮಃ, ಓಂ ನಮಸ್ಸಿದ್ಧಂ( ಅಥವಾ ಓಂ ನಮಃ ಸಿದ್ಧಾಯ) ಎಂದು  ಆಚಾರ್ಯನು ಬರೆದು ಮಗುವಿನಿಂದ ಅದನ್ನು ಹೇಳಿಸಿ, ಬರೆಸುತ್ತಾನೆ. ಚಿನ್ನಬೆಳ್ಳಿಗಳ ಸೌಕರ್ಯವಿಲ್ಲದಿದ್ದಲ್ಲಿ ಅಕ್ಕಿಯ ಮೇಲೆ ಅರಿಸಿನದ ಕೊಂಬಿನಿಂದ ಬರೆಸಿದರೂ ಅದೇ ಫಲ. ಅರಿಸಿನವು ಚಿನ್ನದ ಧರ್ಮವನ್ನೇ ಹೊಂದಿರುವುದನ್ನು ಪತ್ತೆಮಾಡಿದ ಋಷಿಗಳ ಅದ್ಭುತವಾದ ದ್ರವ್ಯವಿಜ್ಞಾನಕ್ಕೆ ಇದೊಂದು ಸಾಕ್ಷಿಯಾಗಿದೆ.

ತಮ್ಮ ತಮ್ಮ ಸಂಪ್ರದಾಯಕ್ಕನುಗುಣವಾಗಿ ಓಂ ನಮಃ ಶಿವಾಯ ಎಂದೋ ಒಂ ನಮೋ ನಾರಾಯಣಾಯ ಎಂದೋ ಬರೆಸುವುದೂ ಉಂಟು. ನಂತರ ಬೇರೆ ಅಕ್ಷರಗಳನ್ನು ಆಚಾರ್ಯನು ತಾನು ಬರೆದು ತಿದ್ದಿಸುತ್ತಾನೆ. ಜೊತೆಗೆ ಗುರುಹಿರಿಯರನ್ನು ಸಂಭಾವಿಸುತ್ತಾರೆ.

ಓಂ ನಮಃ ಸಿದ್ಧಂ ಎಂಬ ಮಂತ್ರದಲ್ಲಿ ಮೊದಲಿಗೆ ಸರ್ವಮೂಲವಾದ ಪ್ರಣವವನ್ನೂ(ಓಂ), ಸಿದ್ಧಂ ಎನ್ನುವುದು ಸಿದ್ಧಿಯನ್ನೂ, ಸಿದ್ಧಿಯನ್ನು ಪಡೆದಿರುವ ಮಹಾಪುರುಷರು ಮತ್ತು ದೇವತೆಗಳನ್ನೂ ಸೂಚಿಸಿದರೆ ನಮಃ ಎನ್ನುವುದು ಆ ದೇವತೆಯೊಂದಿಗೆ ಐಕ್ಯವನ್ನೂ ಸೂಚಿಸುತ್ತದೆ. ನಮಃ ಎನ್ನುವ ಪದಕ್ಕೆ ಐಕ್ಯ ಎಂದರ್ಥ. ಅಕ್ಷರಾಭ್ಯಾಸದಲ್ಲಿ ಅಂತರ್ದರ್ಶನದಲ್ಲಿ ಗೋಚರವಾದಂತೆ ನಾಶವಾಗದ ಅಕ್ಷರಗಳನ್ನೂ. ಅವುಗಳ ಆಕೃತಿಯನ್ನೂ ಸರಿಯಾದ ಕ್ರಮದಲ್ಲಿ ಅಭ್ಯಾಸ ಮಾಡುವುದು, ತನ್ಮೂಲಕ ಒಳತತ್ವಗಳ ಸಾಕ್ಷಾತ್ಕಾರವನ್ನು ಪಡೆಯುವ ವಿಜ್ಞಾನವಿದೆ. ಅಭ್ಯಾಸವು ಇದಕ್ಕೆ ಬೇಕಾದ ಅಂತರ್ಬಾಹ್ಯ  ಶುದ್ಧಿಯನ್ನು ನೀಡುವುದು. ಎಲ್ಲ ಪುರುಷಾರ್ಥಗಳನ್ನು ಸಾಧಿಸಿಕೊಡುತ್ತದೆ. ಲೋಕವ್ಯವಹಾರಕ್ಕೂ, ಉಪನಯನದ ನಂತರದ ಅಧ್ಯಯನಕ್ಕೂ ಅತ್ಯಗತ್ಯವಾಗಿದೆ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ಪ್ರಜಾ ವಾಣಿ ಅಂಕಣದಲ್ಲಿ  ಪತ್ರಿಕೆಯಲ್ಲಿ ಪ್ರಕಟವಾಗಿದೆ.