Saturday, February 2, 2019

ಸಮದರ್ಶಿತ್ವ (Samadarshithwa)


ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ (ಭಗವದ್ಗೀತಾ 5-18) ವಿದ್ಯಾವಿನಯಸಂಪನ್ನನಾದ ಬ್ರಾಹ್ಮಣನಲ್ಲಿ, ಹಸುವಿನಲ್ಲಿ, ಆನೆಯಲ್ಲಿ, ನಾಯಿಯಲ್ಲಿ, ಹಾಗೂ ನಾಯಿಯನ್ನು ತಿನ್ನುವವನಲ್ಲಿ ಪಂಡಿತರು ಸಮದರ್ಶಿಗಳು – ಎನ್ನುವುದು ಈ ಶ್ಲೋಕದ ಅಭಿಪ್ರಾಯ. 

ಸಭೆ, ಸಮಾರಂಭಗಳಲ್ಲಿ, ಲೇಖನಗಳಲ್ಲಿ ಕೊಟೇಶನ್ ಕೊಡುವ ಎಷ್ಟೋ ಮಂದಿಗೆ ಸಮಾನತೆಯನ್ನು ಎತ್ತಿ ಹೇಳುವ ಈ ಶ್ಲೋಕವು ಬಹಳ ಪ್ರಿಯವಾದುದು. 

ಮೇಲ್ನೋಟಕ್ಕೇ ಈ ಶ್ಲೋಕವು ಬಹಳ ಉದಾತ್ತ ಮನೋಭಾವವನ್ನು ವ್ಯಕ್ತಪಡಿಸುತ್ತದೆಯೆನ್ನುವುದು ಎಲ್ಲರ ಗಮನಕ್ಕೆ ಬರುತ್ತದೆ. ಭಾರತೀಯ ಸಂವಿಧಾನವು ಎಲ್ಲ ವರ್ಗದ ಜನಗಳನ್ನು ಸಮನಾಗಿ ಕಾಣಬೇಕೆನ್ನುತ್ತದೆ.  ತದ್ವಿರುದ್ಧವಾಗಿ ಯಾರಾದರೂ ಕಂಡಲ್ಲಿ, ಕಾಣುವ ವ್ಯಕ್ತಿಯು ಶಿಕ್ಷಾರ್ಹನಾಗುತ್ತಾನೆ. ನಮ್ಮ ಸಂವಿಧಾನ ಇತ್ತೀಚನದು. ಆದರೆ, ಸಹಸ್ರಾರು ವರ್ಷಗಳ ಹಿಂದಿನ ಈ ಶ್ಲೋಕವನ್ನು ನೋಡಿದವರಿಗೆ ನಮ್ಮ ಪ್ರಾಚೀನ ಭಾರತೀಯರ ವಿಶಾಲದೃಷ್ಟಿಯ ಬಗ್ಗೆ ಹೆಮ್ಮೆ ಎನಿಸದಿರದು. ಆದರೆ ಶ್ಲೋಕದ ಒಳಹೊಕ್ಕು ನೋಡುವ ವಿಮರ್ಶಕನಿಗೆ, ಗಾತ್ರ, ದೇಹಬಲ, ಬುದ್ಧಿಶಕ್ತಿ ಮೊದಲಾದ ಎಲ್ಲದರಲ್ಲಿಯೂ ತೀರ ಭಿನ್ನವಾದ, ವಿವಿಧ ಮನುಷ್ಯ ಹಾಗೂ ಪ್ರಾಣಿಗಳನ್ನು ಸಾರಾಸಗಟಾಗಿ "ಸಮ"ವೆನ್ನುವುದು, ಯಾವ ದೃಷ್ಟಿಕೋಣದಿಂದ? ಎಂಬ ಪ್ರಶ್ನೆ ಬಾಧಿಸದಿರದು. ಈ ಶ್ಲೋಕಕ್ಕೆ ಪ್ರಾಚೀನ ಹಾಗೂ ಆಧುನಿಕ ವ್ಯಾಖ್ಯಾನಕಾರರು ತಮ್ಮ ವ್ಯಾಖ್ಯಾನಕೌಶಲವನ್ನು ಮೆರೆದಿದ್ದಾರೆ. ಈ ಶ್ಲೋಕದ ಹಿಂಬದಿಯ ಆಶಯವನ್ನು ಗಮನಿಸಿದಾಗ, ಕೆಲವು ವ್ಯಾಖ್ಯಾನಗಳು ನಮ್ಮನ್ನು ದಾರಿತಪ್ಪಿಸುತ್ತಿವೆಯೆಂಬುದು ಸ್ಪಷ್ಟವಾಗುತ್ತದೆ. ಹಸುವಿಗೆ ಆಹಾರಕ್ಕೆಂದು ಹಾಕುವ ಹುಲ್ಲನ್ನು ಪಂಡಿತನಿಗೆ ಆಹಾರವಾಗಿ ಕೊಟ್ಟರೆ ಆತ "ಸಮದರ್ಶಿ" ಯಾಗಿರಬೇಕೆಂದು ಹುಲ್ಲನ್ನು ಮೇಯಲಾದೀತೇ? "ಸಮ" ಎನ್ನುವ ಶಬ್ದಕ್ಕೆ ಎಲ್ಲ ಸಂದರ್ಭಗಳಲ್ಲೂ ಒಂದೇ ಅಭಿಪ್ರಾಯವಿಲ್ಲ. ರಾಮನು ಸಮವಿಭಕ್ತಾಂಗನೆಂದರೆ, ಅವನ ಕೈಯೂ ಮೂಗೂ ಒಂದೇ ಅಳತೆಯವು ಎಂದಲ್ಲ. ಶರೀರದ ಅಂಗಾಂಗಗಳು ಸೂಕ್ತಪ್ರಮಾಣಾನುಗುಣವಾಗಿ (proportionate) ಇದ್ದವೆಂದೇ ಅರ್ಥ.

ಯಾವುದೇ ವ್ಯಕ್ತಿಯ ಮಾತಿಗೆ ಅರ್ಥವನ್ನು ಕಂಡುಕೊಳ್ಳಬೇಕಾದಲ್ಲಿ, ಆ ವ್ಯಕ್ತಿಯು ಯಾವ ಸಂದರ್ಭದಲ್ಲಿ ಈ ಮಾತನ್ನು ಆಡಿದ ಎನ್ನುವುದು ಮುಖ್ಯವಷ್ಟೆ. ಭಗವದ್ಗೀತಾಧಾರೆಯು ಶ್ಲೋಕಗಳ ರೂಪದಲ್ಲಿ ಹರಿಯುತ್ತಿರುವುದರಿಂದ ಈ ಶ್ಲೋಕದ ಹಿಂದು ಮುಂದಿನ ಶ್ಲೋಕಗಳನ್ನು ಒಟ್ಟಾರೆಯಾಗಿ ನೋಡಿದಾಗ ಕೃಷ್ಣನ ಅಭಿಪ್ರಾಯವು ಅರಿವಿಗೆ ಬಂದೀತು.





ಭಗವದ್ಗೀತೆಯಲ್ಲಿ ಶ್ರೀಕೃಷ್ಣನು "ಸಮದರ್ಶಿ"ಯನ್ನು ವಿವರಿಸಿ, ಮುಂದಿನ ಶ್ಲೋಕದಲ್ಲೇ ಬ್ರಹ್ಮವಸ್ತುವಿನ ಬಗ್ಗೆ ಹೇಳುತ್ತಾ, "ನಿರ್ದೋಷಂ ಹಿ ಸಮಂ ಬ್ರಹ್ಮ" ಎಂದಿದ್ದಾನೆ. ಈ ಮಾತು ನಮ್ಮ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಲ್ಲದು. ಬ್ರಹ್ಮವಸ್ತುವು ದೋಷವಿಲ್ಲದ್ದೂ, ಸಮವೂ ಆಗಿದೆ ಎಂದು ಶ್ರೀಕೃಷ್ಣನ ಮಾತಿನ ಅಭಿಪ್ರಾಯ. ಇಂತಹ ಸಮವಾದ ಬ್ರಹ್ಮವನ್ನೇ ಎಲ್ಲದರಲ್ಲೂ ಪಂಡಿತರು ನೋಡುತ್ತಾರೆ, ಎನ್ನುವುದು ಅತ್ಯಂತ ಸರಳ ಸುಂದರ ವಿವರಣೆ. ಇಂತಹ ವಿವರಣೆಯನ್ನು ಕೊಟ್ಟ ಶ್ರೀರಂಗಮಹಾಗುರುಗಳು ಒಮ್ಮೆ ಒಂದು ಸಣ್ಣ ಪ್ರಯೋಗವನ್ನು ಮಾಡಿದ್ದರು. ಬ್ರಾಹ್ಮಣ, ಹಸು, ಆನೆ, ನಾಯಿ ಹಾಗೂ ನಾಯಿಯನ್ನು ತಿನ್ನುವವನು – ಇವರೆಲ್ಲರ ಚಿತ್ರವನ್ನು ಬರೆದಿಟ್ಟು, ಈ ಚಿತ್ರಗಳಲ್ಲಿ ಸಮವಾದ ಅಂಶವಿದೆಯೇ ಎಂದು ಅಲ್ಲಿದ್ದ ಶಿಷ್ಯರನ್ನು ಪ್ರಶ್ನಿಸಿದರು. ಶಿಷ್ಯರಿಗೆ ತಿಳಿಯದಾದಾಗ, ಈ ಎಲ್ಲಾ ಚಿತ್ರಗಳಲ್ಲೂ ತಾವು ಸಮಾನವಾಗಿ ಇಟ್ಟಿದ್ದ ಒಂದು ಬಿಂದುವಿನ ಬಗ್ಗೆ ಗಮನವನ್ನು ಸೆಳೆದಿದ್ದರು. ಆ ಎಲ್ಲ ಚಿತ್ರಗಳಲ್ಲಿ ಬರೆದಿದ್ದ ಬಿಂದುವು ಹೇಗೆ ಸಮವೋ (common factor), ಹಾಗೆ ಸೃಷ್ಟಿಯಲ್ಲಿ ಎಲ್ಲೆಡೆಯಲ್ಲಿಯೂ ಬ್ರಹ್ಮವು ಇದ್ದೇ ಇದೆ ಎಂಬುದನ್ನು ಸ್ಪಷ್ಟಪಡಿಸಿದ್ದರು.




ಇಲ್ಲಿ ಪಂಡಿತ ಎನ್ನುವ ಶಬ್ದಕ್ಕೆ ಒಬ್ಬ "ವಿದ್ವಾಂಸ" ಎಂಬ ಸೀಮಿತವಾದ ಅರ್ಥವಲ್ಲ. ಆತ್ಮಜ್ಞಾನಕ್ಕೇ "ಪಂಡಾ" ಎನ್ನುತ್ತಾರೆ. ಅಂತಹ ಆತ್ಮಜ್ಞಾನಸಂಪನ್ನನಿಗೇ ಪಂಡಿತನೆನ್ನುವುದು.

ಚಿತ್ರವಿಚಿತ್ರವಾಗಿ ಸೃಷ್ಟಿಯು ಬೆಳೆದಿದ್ದರೂ ಒಬ್ಬ ವಿಜ್ಞಾನಿಯು ಎಲ್ಲದರಲ್ಲೂ ಆಟಮ್ (atom) ಎನ್ನುವುದನ್ನು ಹೇಗೆ ಸಮವಾಗಿ ಕಾಣುತ್ತಾನೆಯೋ ಹಾಗೆ ಪಂಡಿತರು ಬ್ರಹ್ಮವು ಎಲ್ಲೆಡೆಯಲ್ಲಿಯೂ ಸಮವಾಗಿ ಇದೆ ಎಂದು ತಿಳಿಯುತ್ತಾರೆ.

ನಮ್ಮ ದೇಶವಾಸಿಗಳು ಪರಸ್ಪರ ತಾರತಮ್ಯ ಮಾಡಬಾರದೆನ್ನುವ ಆಶಯದಿಂದ ನಮ್ಮ ಸಂವಿಧಾನವು ಹೊರಟಿದೆ. ಆದರೆ ಭಗವದ್ಗೀತೆಯ “ಸಮದರ್ಶಿತ್ವ” ಬಹಳ ಆಳವಾದ ಚಿಂತನೆಯಿಂದ ಹೊರಹೊಮ್ಮಿದೆ. ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.