Saturday, February 2, 2019

ಸಂಸ್ಕಾರ-ಋಷಿಗಳ ನೋಟ (Sanskara - rishigala nota)


'ಸಂಸ್ಕಾರ' ಎಂಬ ಪದದ ಬಳಕೆ ಅಲ್ಲಲ್ಲಿ ಕಂಡುಬಂದರೂ ಸರಿಯಾದ ಅರ್ಥದಲ್ಲಿ ಬಳಕೆಯಾಗುತ್ತಿದೆಯೇ ಎಂಬ ಪ್ರಶ್ನೆ ಇದ್ದೇಇದೆ. ಅನೇಕರು ಶವಸಂಸ್ಕಾರವನ್ನು ಮಾತ್ರ ಸಂಸ್ಕಾರ ಎಂದುಕೊಂಡು ಭೀತರಾಗುವುದೂ ಇದೆ.

ಆದರೆ ಭಾರತದಲ್ಲಿ ಈ ಪದವು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ. ಮೌಲಿಕವಾಗಿ ನಮ್ಮ ಪರಂಪರೆಯಲ್ಲಿ ಇದನ್ನು ಶುದ್ಧಿ ಎಂಬರ್ಥದಲ್ಲಿ ಪ್ರಯೋಗಿಸಿದ್ದಾರೆ. ಒಂದು ಪದಾರ್ಥದ ದೋಷಗಳನ್ನು ತೊಳೆದು ಗುಣವನ್ನು ತುಂಬಿ ಮೂಲರೂಪಕ್ಕೆ ತರುವ ಪ್ರಕ್ರಿಯೆಯೇ ಸಂಸ್ಕಾರ. ಕೊಳೆಯನ್ನು ತೊಳೆದು ಹೊಳೆಯುವಂತೆ ಮಾಡುವುದೇ ಸಂಸ್ಕಾರ. ಸಂಸ್ಕಾರದಿಂದ ವಸ್ತುವಿನಲ್ಲಿ ಸಹಜತೆ, ಶುದ್ಧಿ, ಪವಿತ್ರತೆ, ಸೌಂದರ್ಯ, ಪರಿಷ್ಕಾರಗಳುಂಟಾಗುತ್ತವೆ.

ಮಹರ್ಷಿಗಳು ತಂದುಕೊಟ್ಟಿರುವ ಸಂಸ್ಕಾರಗಳು ಪರಿಪೂರ್ಣವಾಗಿವೆ. ಉದ್ಧಿಷ್ಟವಾದ ಜ್ಞಾನವನ್ನುಕೊಡುವ, ವಿಜ್ಞಾನಪೂರ್ಣವಾದ ಕರ್ಮಗಳಾಗಿವೆ. ಮನುಷ್ಯನ ದೇಹಕ್ಕೂ, ಮನಸ್ಸಿಗೂ, ಸಪ್ತಧಾತುಗಳಿಗೂ -ಹೀಗೆ ಎಲ್ಲವಕ್ಕೂ ಸಂಸ್ಕಾರವಿದೆ. ರಜಸ್ತಮೋಗುಣ ದೋಷಗಳನ್ನು ಕಳೆದು, ದೇಹಕ್ಕೆ, ದೇಹಿಗೆ ಶೋಭೆಯನ್ನೂ, ಸ್ವರೂಪವನ್ನೂ ತಂದುಕೊಡುವ ಕರ್ಮಗಳೆಲ್ಲವೂ ಸಂಸ್ಕಾರಗಳೇ. ಸಂಸ್ಕಾರವು ವಿಸ್ಮೃತಿಯನ್ನು ಹೋಗಲಾಡಿಸಿ ಸ್ವರೂಪದ ಸ್ಮೃತಿಯನ್ನುಂಟುಮಾಡುವುದು.

ಶುದ್ಧಿ ಎಂದರೇನು? ಜೀವಮೂಲದಲ್ಲಿರುವ ಪರತತ್ವದ ತಾದಾತ್ಮ್ಯದಲ್ಲಿರುವುದು ಮತ್ತು ಭಗವದ್ಧರ್ಮವನ್ನು ನಖಶಿಖಾಂತವಾಗಿ ತುಂಬಿಕೊಂಡಿರುವುದೇ ಶುದ್ಧಿ. ನಾವು ಬಳಸುವ ಪದಾರ್ಥಗಳನ್ನು ಸಂಸ್ಕರಿಸಿ, ಶುದ್ಧಗೊಳಿಸಿ ಸೇವಿಸುವುದರಿಂದ ನಮ್ಮ ಸಪ್ತಧಾತುಗಳಲ್ಲಿಯೂ.ಮನಸ್ಸು,ಬುದ್ಧಿ,ಇಂದ್ರಿಯಗಳಲ್ಲಿಯೂ ಮೌಲಿಕವಾದ ಶುದ್ಧಿಯು ಏರ್ಪಡುತ್ತದೆ. ಬೇಕಾದ ಫಲಕ್ಕಾಗಿ ತಕ್ಕ ಮಂತ್ರ, ತಂತ್ರ, ಕಾಲ, ದ್ರವ್ಯಗಳನ್ನು ಬಳಸಿಕೊಂಡಿರುವ ಕೌಶಲ್ಯವನ್ನೂ ಇಲ್ಲಿ ಕಾಣಬಹುದು.

ಎಲ್ಲಕ್ಕೂ ಶುದ್ಧಿಯಾಗುವುದು ವಿಕಾರವಿಲ್ಲದ ಪರಬ್ರಹ್ಮನಿಂದಲೇ. ಶುದ್ಧ ಎಂದರೆ ವಿಕಾರವಿಲ್ಲದ್ದು.'ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ,,,,' ಎಂಬ ಮಾತೂ ಇದನ್ನೇ ಸಾರುತ್ತದೆ. ಇದು ಮೂಲಭೂತವಾದದ್ದು. ಜೊತೆಗೆ ಪರಮಾತ್ಮನ ಸ್ಮರಣೆಯೊಂದಿಗೆ ವೈಜ್ಞಾನಿಕವಾದ ಮಹರ್ಷಿಪ್ರೋಕ್ತವಾದ ವಿಧಿವಿಧಾನಗಳೂ ಸೇರಿವೆ.

ಅಶುದ್ಧಿಯೇ ನಮ್ಮ ಸ್ವರೂಪವಲ್ಲ. ಶುದ್ಧಿಯನ್ನು ನಮ್ಮ ಸ್ವರೂಪವೆಂದು ನಮ್ಮ ಅನುಭವವೇ ಹೇಳುತ್ತದೆ. ಆರೋಗ್ಯವೇ ನಮ್ಮ ಮೌಲಿಕತೆಯೇ ಹೊರತು ರೋಗವಲ್ಲ. ರೋಗವು-Foreign body. ಈ ಉದಾಹರಣೆಯನ್ನು ಶ್ರೀರಂಗಮಹಾಗುರುಗಳು ಪದೇಪದೇ ಕೊಡುತ್ತಿದ್ದರು. ಆದ್ದರಿಂದ ಸಂಸ್ಕಾರವು ಅತ್ಯಗತ್ಯವಾದದ್ದು. ಆತ್ಮನು ಸ್ವತಃ ಶುದ್ಧನಾಗಿದ್ದರೂ ಪಾಪಸಂಬಂಧದಿಂದ ಅಶುದ್ಧನೆಂಬಂತೆ ಭಾಸವಾಗುತ್ತಾನೆ. ಸಂಸ್ಕಾರಗಳು ಈ ಪಾಪಗಳನ್ನು ತೊಳೆದು ಶುದ್ಧಿಯನ್ನುಂಟುಮಾಡಿ ಆತ್ಮಸಾಕ್ಷಾತ್ಕಾರಕ್ಕೆ ಕಾರಣವಾಗುತ್ತದೆ.




ಗರ್ಭಾದಾನದಿಂದ ಆರಂಭಿಸಿ ಅಂತ್ಯೇಷ್ಟಿಯವರೆಗೆ ಪ್ರಧಾನವಾಗಿರುವ ಒಟ್ಟು 16 ಸಂಸ್ಕಾರಗಳಿವೆ. ಜೀವನದ ಪ್ರತಿಹಂತದಲ್ಲಿಯೂ ಆಗಬೇಕಾಗಿರುವ ಪರಿಣಾಮವನ್ನನುಸರಿಸಿ ಸಂಸ್ಕಾರಗಳು ಅಳವಡಿಸಲ್ಪಟ್ಟಿವೆ. ಗರ್ಭಾದಾನ, ಪುಂಸವನ, ಸೀಮಂತೋನ್ನಯನ,ಜಾತಕರ್ಮ, ನಾಮಕರಣ, ಅನ್ನಪ್ರಾಶನ,ಚೂಡಾಕರ್ಮ,ಉಪನಯನ, ನಾಲ್ಕುವ್ರತಗಳು, ಗೋದಾನ ಸ್ನಾನ,ವಿವಾಹಸ್ನಾನ,ವಿವಾಹ ಮತ್ತು ಅಂತ್ಯೇಷ್ಟಿ(ಮರಣಾನಂತರದ ಸಂಸ್ಕಾರ) ಇವೇ ಆ ಷೋಡಶ ಸಂಸ್ಕಾರಗಳು. ಇವುಗಳಲ್ಲಿ ಕೆಲವನ್ನು ಬಿಟ್ಟು ಬೇರೆ ಕೆಲವನ್ನು ಸೇರಿಸಿರುವುದೂ ಉಂಟು. ಪೂರ್ವಸಂಸ್ಕಾರ ಮತ್ತು ಉತ್ತರಸಂಸ್ಕಾರ ಇತ್ಯಾದಿಯಾಗಿ ವಿಭಾಗಿಸಿರುವುದೂ ಇದೆ. ಆದರೆ ಸಂಸ್ಕಾರಗಳನ್ನು ಇಷ್ಟೇ ಎಂದು ತೀರ್ಮಾನಿಸುವಂತಿಲ್ಲ. ದುಷ್ಟ ಸಂಸ್ಕಾರಗಳು ಅನಂತವಾಗಿರುವುದರಿಂದ ಅವುಗಳನ್ನು ತೊಳೆಯಬಲ್ಲ ಸಂಸ್ಕಾರಗಳೂ ಅನಂತವಾಗಿವೆ.

ಇವುಗಳಿಂದ ಗರ್ಭ(ಸ್ತ್ರೀ) ಮತ್ತು ಬೀಜಕ್ಕೆ(ಪುರುಷ) ಸಂಬಂಧಪಟ್ಟ ದೋಷಗಳು ಪರಿಹಾರವಾಗುತ್ತದೆ.ಶುದ್ಧವಾದ ವಂಶ ಬೆಳೆಯುತ್ತದೆ. ವಂಶದಲ್ಲಿರುವ ಶುದ್ಧಿಯಿಂದ ಸ್ವರೂಪಪ್ರಾಪ್ತಿ ಮತ್ತು ಜೀವದಿಂದಾರಂಭಿಸಿ ದೇಹದವರೆಗಿನ ಅಂತರ್ಭಾಹ್ಯಶುದ್ಧಿಯು ಏರ್ಪಡುತ್ತದೆ. ಉತ್ತಮ ಸಮಾಜವೂ ರೂಪುಗೊಳ್ಳುತ್ತದೆ. ಜ್ಞಾನಿಗಳು ಹೇಳುವಂತೆ ಲಭ್ಯವಾಗುವ ಇನ್ನೊಂದು ಮಹಾಲಾಭವೆಂದರೆ, ದಯೆ, ಕ್ಷಮೆ, ಅನಸೂಯ ಇತ್ಯಾದಿ ಅಷ್ಟ ಆತ್ಮಗುಣಗಳು. ಇವು ಸಂಸ್ಕಾರದಿಂದ ಪ್ರಬೋಧಗೊಳ್ಳುವುದು. ಹಾಗೆಯೇ ಸಂಸ್ಕಾರಗಳ ಸಾರ್ಥಕ್ಯಕ್ಕೆ ವ್ಯಕ್ತಿಯಲ್ಲಿ ಇವುಗಳಿರುವುದು ಆವಶ್ಯಕವೂ ಹೌದು.ವಾಸ್ತವಿಕವಾಗಿ ಅಂತಹ ವ್ಯಕ್ತಿಗಳ ಸಮೂಹವೇ ಸಮಾಜ. ಸಂಸ್ಕಾರದ ಸಮಾರಂಭಗಳಲ್ಲಿ ಭಾಗವಹಿಸಿದವರಿಗೂ ಸಂಸ್ಕಾರವು ದೊರೆಯುತ್ತದೆ. ಅನ್ನದಾನ,ಧನದಾನ ಇತ್ಯಾದಿ ಪುಣ್ಯವೂ ಪ್ರಾಪ್ತವಾಗುವುದು. 

ದೇವಪ್ರೀತಿಕರವಾಗಿ ನಿಲ್ಲುವುದರಿಂದ ಸಂಸ್ಕಾರಗಳು ಯಜ್ಞವೇ. ಮಂತ್ರ, ತಂತ್ರ,ದ್ರವ್ಯ, ಕಾಲ ಇವೆಲ್ಲವೂ ಶುದ್ದಿಯನ್ನೂ, ದೇವತಾಪ್ರೀತಿಯನ್ನೂ, ಪರಮಾತ್ಮಸಾಯುಜ್ಯವನ್ನೂ ಅನುಗ್ರಹಿಸುವ ಮಹರ್ಷಿದತ್ತವಾದ ವರಗಳಾಗಿವೆ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.