Sunday, March 10, 2019

ವಾಗ್ವೈಖರೀ (Vaagvaikhari)

ಲೇಖಕರು : ಡಾ. ಎಂ. ಜಿ. ಪ್ರಸಾದ್
ನಿವೃತ್ತ ಪ್ರಾಧ್ಯಾಪಕರು, ಸ್ಟೀವನ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
ನ್ಯೂಜರ್ಸಿ, ಅಮೇರಿಕಾ






ಪರಿಚಯ:
ಸಾಮಾನ್ಯವಾಗಿ ಮನುಷ್ಯನಿಗೆ ಮಾತನಾಡುವುದು ಹುಟ್ಟಿನಿಂದ ಬರುವ ಶಕ್ತಿ. ಅದರಲ್ಲಿಯೂ ಮಕ್ಕಳಾಡುವ ಮಾತು ಚೆನ್ನ. ಹಾಗೆಯೇ ಮಕ್ಕಳು ಬೆಳೆಯುತ್ತಿದ್ದಂತೆ ಅವರು ಮಾತನಾಡುವ ಶಕ್ತಿಯನ್ನೂ ಬೆಳೆಸಿಕೊಳ್ಳಬೇಕು. ನಮಗೆಲ್ಲಾ ತಿಳಿದಂತೆ ಮಾತನಾಡುವ ಕಲೆ ಜೀವನದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮಾತು ಎಂಬ ಪದಕ್ಕೆ ಸಂಸ್ಕೃತ ಭಾಷೆಯಲ್ಲಿ ‘ವಾಕ್ ‘ ಎಂದಾಗುತ್ತದೆ. ಅಂತೆಯೇ ಯಾರಾದರೂ ವೇದಿಕೆಯ ಮೇಲೆ ಅಥವಾ ಸಾಮಾನ್ಯವಾಗಿಯಾದರೂ ಪ್ರಭಾವಶಾಲಿಯಾಗಿ ಮಾತನಾಡಿದಾಗ ಅವರ ವಾಗ್ವೈಖರೀ ಎಷ್ಟು ಚೆಂದ ಎನ್ನುತೇವೆ. ಆದ್ದರಿಂದ ಯಾವ ಶಕ್ತಿಯಿಂದ ಇಂತಹ ವಾಗ್ವೈಖರೀ ಹೊರಬರುತ್ತದೆ? ಎಂಬ ಪ್ರಶ್ನೆ ಕುತೂಹಲವನ್ನು ಉಂಟುಮಾಡುತ್ತದೆ. ಇದಕ್ಕೆ ಉತ್ತರವಾಗಿ ನಮ್ಮ ಸನಾತನ ಧರ್ಮದ ಮೂಲವಾದ ವೇದಗಳಲ್ಲಿ ವಾಕ್ಕಿಗೆ ನಾಲ್ಕು ಹಂತಗಳಿವೆ ಎಂದು ಹೇಳಿದೆ.

ಮಾತಿನ ನಾಲ್ಕು ಹಂತಗಳು:
ಮಾತನಾಡುವುದು ಸಾಮಾನ್ಯವಾಗಿ ಸುಲಭವೆಂದು ಕಂಡುಬಂದರೂ ನಮ್ಮ ಬಾಯಿನಿಂದ ಹೊರಬರುವ ಮಾತನ್ನು ಆಳವಾದ ದೃಷ್ಟಿಯಿಂದ ನಮಗೆ ವೇದಗಳನ್ನು ನೀಡಿದ ಋಷಿಗಳು ನೋಡಿದ್ದಾರೆ. ಋಗ್ವೇದದ ಒಂದು ಮಂತ್ರದ ಭಾವಾರ್ಥ ಹೀಗಿದೆ. ಮಾತಿಗೆ ನಾಲ್ಕು ಹಂತಗಳಿವೆ ಎಂದು ಜ್ಞಾನಿಗಳು ಹೇಳುತ್ತಾರೆ. ಅದರಲ್ಲಿ ಮೂರು ಹಂತಗಳು ಮನುಷ್ಯನ ದೇಹದೊಳಗೆ ಗುಹೆಯಲ್ಲಿ ಇರುವಂತೆ ಅಡಗಿವೆ. ಮನುಷ್ಯನ ಬಾಯಿನಿಂದ ಹೊರಬರುವ ಮಾತು ನಾಲ್ಕನೆಯ ಹಂತ.  ಈ ನಾಲ್ಲಕು ಹಂತಗಳನ್ನೇ ಪರಾ, ಪಶ್ಯಂತೀ, ಮಧ್ಯಮಾ ಹಾಗು ವೈಖರೀ ಎಂದು ಶಾಸ್ತ್ರಗಳಲ್ಲಿ ಗುರುತಿಸುತ್ತಾರೆ.

ಮಾತು ಎಲ್ಲಿ ಹುಟ್ಟುತ್ತದೆ?
ಮಾತಿನ ಅಥವಾ ವಾಕ್ಕಿನ ಹುಟ್ಟು ಎಲ್ಲಿಂದಾಗುತ್ತದೆ? ಎಂಬ ಪ್ರಶ್ನೆಗೆ ಉತ್ತರವೇ ಎಲ್ಲಿ ‘ಪರಾ’ ಎಂಬ ಮೂಲವಾದ ಹಂತದ ಸ್ಥಾನವೋ ಅಲ್ಲಿಂದ ಮಾತು ಶಕ್ತಿ ರೂಪದಲ್ಲಿ ಹುಟ್ಟುತ್ತದೆ. ನಮ್ಮ ದೇಹದಲ್ಲಿ ಯೋಗದೃಷ್ಟಿಯಿಂದ ನೋಡಿದಾಗ ನಮ್ಮಲ್ಲಿ ಉದ್ದೀಪನಗೊಳ್ಳುವ ಶಕ್ತಿಗಳಿಗೆ ಮೂಲಸ್ಥಾನವಾಗಿ ಮೂಲಾಧಾರ ಚಕ್ರವಿದೆ. ಈ ಮೂಲಾಧಾರ ಚಕ್ರವು ಗುದ ಮತ್ತು ಲಿಂಗಗಳ ಮಧ್ಯೆ ಇರುವ ತ್ರಿಕೋನ ಪ್ರದೇಶದಲ್ಲಿರುತ್ತದೆ. ಮಾತನಾಡಬೇಕೆಂಬ ಇಚ್ಛೆಯು ವ್ಯಕ್ತಿಯಲ್ಲಿ ಬಂದಾಗ ಈ ಇಚ್ಛಾಶಕ್ತಿಯೂ ಮನಸ್ಸಿನ ಮೂಲಕ ಮೂಲಾಧಾರದಲ್ಲಿ ಅಡಗಿರುವ ಪರಾ ಹಂತದಲ್ಲಿ ಮಾತಿನ ಶಕ್ತಿಯ ರೂಪದಲ್ಲಿ ಮೇಲ್ಮುಖವಾಗಿ ಚಲಿಸುತ್ತದೆ. ನಂತರ ಆ ಶಕ್ತಿಯು ನಾಭಿ ಎಂದರೆ ಹೊಕ್ಕಳಿನ ಸ್ಥಾನಕ್ಕೆ ಚಲಿಸುತ್ತದೆ. ನಾಭಿ ಸ್ಥಾನದಲ್ಲಿ ಈ ಶಕ್ತಿಯು ಪಶ್ಯಂತೀ ಎನಿಸಿಕೊಳ್ಳುತ್ತದೆ. ಹಾಗೆಯೇ ಮಾತಿನ ಶಕ್ತಿಯು ಮೇಲ್ಮುಖವಾಗಿ ಚಲಿಸಿ ಹೃದಯ ಸ್ಥಾನಕ್ಕೆ ಬರುತ್ತದೆ. ಆಗ ಅದು ಮಧ್ಯಮಾ ಎನಿಸಿಕೊಳ್ಳುತ್ತದೆ. ಕೊನೆಗೆ ಈ ಶಕ್ತಿಯು ಮೇಲ್ಮುಖವಾಗಿ ಚಲಿಸಿ ಗಂಟಲಿನ ಸ್ಥಾನಕ್ಕೆ ಬಂದು ನಾಲಗೆ, ಹಲ್ಲು, ಮೂಗು, ದವಡೆಗಳು ಹಾಗು ತುಟಿಗಳ ಸಹಾಯದಿಂದ ಬಾಯಿಯ ಮೂಲಕ ಹೊರಬಂದು ವೈಖರೀ ಎಂದೆನಿಸಿಕೊಳ್ಳುತ್ತದೆ.

ಮಾತಿನ ಮಹತ್ವ:
ವ್ಯಕ್ತಿಯ ಮನಸ್ಸಿನಲ್ಲಿ ಏಳುವ ಭಾವನೆಗಳು ಒಂದು ಭಾಷೆಯ ಮೂಲಕ ಮಾತಿನ ರೂಪದಲ್ಲಿ ವ್ಯಕ್ತವಾಗುವುದಕ್ಕೆ ವ್ಯಕ್ತಿಯ ದೇಹದಲ್ಲಿ ಇಷ್ಟು ಕ್ರಿಯೆಗಳಾಗಬೇಕು. ಇದಕ್ಕೆ ಪೂರಕವಾಗಿ ವ್ಯಕ್ತಿಯು ತನ್ನಲ್ಲಿರುವ ಜ್ಞಾನ, ಮಾತಿನ ದೃಷ್ಟಿ ಹಾಗು ಪದಗಳ ಭಂಡಾರ ಇವುಗಳನ್ನು ಉಪಯೋಗಿಸಿಕೊಂಡು ಮಾತನ್ನಾಡಬೇಕು. ಆದ್ದರಿಂದಲೇ ತ್ರಿಕರಣಗಳ ಶುದ್ಧಿ ಎಂದಾಗ ಕಾಯಾ, ವಾಚಾ ಹಾಗು ಮನಸಾ ಶುದ್ಧತೆ ಎಂದೆನಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಕರ್ಮಣ್ಯೇಕಂ ವಚಸ್ಯೇಕಂ ಮನಸ್ಯೇಕಂ ಮಹಾತ್ಮಾನಾಮ್  ಎಂದರೆ ಮಹಾತ್ಮರ ಕಾರ್ಯ, ಮಾತು ಹಾಗು ಮನಸ್ಸು ಒಂದಾಗಿರುತ್ತದೆ. ಅದಕ್ಕಾಗಿಯೇ ಮಾತಿಗೆ ಇಷ್ಟು ಮಹತ್ವ. ಆದ್ದರಿಂದಲೇ ನಮ್ಮ ಸನಾತನ ಧರ್ಮದಲ್ಲಿ ವಾಕ್ಕಿನ ಶಕ್ತಿಯನ್ನು ವಾಗ್ದೇವಿ ಅಥವಾ ಸರಸ್ವತಿ ದೇವಿಯೆಂದು ಆರಾಧಿಸುತ್ತೇವೆ. ಒಬ್ಬ ವ್ಯಕ್ತಿಯ ವಾಗ್ವೈಖರೀ ಚೆನ್ನಾಗಿದೆ ಎನ್ನಬೇಕಾದರೆ ಅದರ ಹಿಂದಿರುವ ಈ ಎಲ್ಲಾ ಅಂಶಗಳನ್ನು ನೋಡಬೇಕು.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.