Wednesday, April 3, 2019

ಅಭಿಜಾತ ಶಿಶುವಿಗೆ ಜಾತಕರ್ಮ ಸಂಸ್ಕಾರ-1 (Abhijatha shishuvige jatakarma samskara-1)

ಲೇಖಕರು: ತಾರೋಡಿ ಸುರೇಶ



ಜಾತಕರ್ಮವು ಶಿಶುವು ಜನಿಸಿದಾಗ, ಶಿಶುವನ್ನು ಉದ್ದೇಶಿಸಿ ಮಾಡುವ ಸಂಸ್ಕಾರವಾಗಿದೆ. ಅನೇಕರು ಇದರ ಹೆಸರನ್ನೇ ಕೇಳಿಲ್ಲ. ಪ್ರಸ್ತುತ ಕಾಲದಲ್ಲಿ ಬಹುತೇಕ ಹೆರಿಗೆಗಳು ಆಸ್ಪತ್ರೆಯಲ್ಲಿಯೇ ಆಗುತ್ತವೆ. ಅಲ್ಲಿ ಪೂರ್ವಭಾವಿಯಾಗಿ ತಕ್ಕ ವ್ಯವಸ್ಥೆ ಮಾಡಿಕೊಂಡಿದ್ದರೆ ಅಲ್ಪಸ್ವಲ್ಪ ಪ್ರಮಾಣದಲ್ಲಿಯಾದರೂ ಸಂಸ್ಕಾರದ ಆಚರಣೆ ಸಾಧ್ಯ. ಇವೆಲ್ಲ ಸಮಾಜದಲ್ಲಿ ಜೀವದ ಗತಾಗತಿಗಳ ಬಗ್ಗೆ, ಪುರುಷಾರ್ಥಮಯವಾದ ಬಾಳ್ವೆಯ ಬಗ್ಗೆ ಪರಿಚಯ ಇದ್ದರೆ ಮಾತ್ರ ಸಂಭವ. ಜಾತಕರ್ಮವು ಸ್ತ್ರೀ ಮತ್ತು ಪುರುಷಸಂತಾನವೆರಡಕ್ಕೂ ಮಾಡಬೇಕಾದದ್ದು. ಈ ಸಂಸ್ಕಾರವನ್ನು ಶಿಶು ಜಾತಾವದೊಡನೆಯೇ ಮಾಡಬೇಕೆಂದರೆ ಆಗ ಆಶೌಚವಿರುತ್ತದೆಯಲ್ಲ.ಮಂಗಳಕರ್ಮವನ್ನು ಆಶೌಚದಲ್ಲಿ ಮಾಡಬಾರದಲ್ಲವೇ? ಎಂಬ ಪ್ರಶ್ನೆ ಹುಟ್ಟಬಹುದು. ಸೂಕ್ಷ್ಮವಾದ ವಿಷಯವೆಂದರೆ  ಹೊಕ್ಕಳಬಳ್ಳಿಯನ್ನು ಕತ್ತರಿಸುವವರೆಗೆ ಸೂತಕವು ತಂದೆಗೆ ಇರುವುದಿಲ್ಲ. ಜೊತೆಗೆ ತಿಥಿ-ವಾರ-ನಕ್ಷತ್ರಗಳನ್ನೂ ನೋಡಬೇಕಾಗಿಲ್ಲ. ಆದರೆ ಸ್ತನ್ಯಪಾನಕ್ಕೆ ಮೊದಲು ಇದು ಜರುಗಬೇಕು.  ಪರಿಣಾಮದ ದೃಷ್ಟಿಯಿಂದ ಜನಿಸಿದ ಕಾಲವೇ ಸೂಕ್ತವಾದದ್ದು.  ಅನ್ಯದುಷ್ಟಸಂಸ್ಕಾರಗಳಿಗೆ ಒಳಗಾಗುವ ಮುನ್ನವೇ ನಡೆಸುವುದು ಆವಶ್ಯಕವೂ ಹೌದು. ಪೂರ್ಣ ಲಾಭಕಾರಿಯೂ ಹೌದು. ದುಷ್ಟಶಕ್ತಿಗಳ ಆಘಾತದಿಂದ ರಕ್ಷಣೆ ಪಡೆಯುವುದರ ಜೊತೆಯಲ್ಲಿ ಜ್ಞಾನಪ್ರಬುದ್ಧವಾಗಿ ಬೆಳೆಯಲಿ ಎಂಬ ಆಶಯದಿಂದ ಮಾಡಬೇಕಾದ ಕರ್ಮವಿದು.

ಇತ್ತೀಚೆಗೆ ಉಪನಯನದ ಜೊತೆ ಸೇರಿಸಿಕೊಂಡು ಮಾಡುವುದು ರೂಢಿಯಾಗುತ್ತಿದೆ. ಅಲ್ಲಿ ಬರುವ ಮಂತ್ರಸಾಹಿತ್ಯಗಳ ಅರ್ಥವೂ ಗೊತ್ತಿರುವುದಿಲ್ಲ. ಅಜ್ಞಾನವೇ ವರವಾಗಿದೆ. ಇದು ಸರಿಯಲ್ಲ. ಹುಟ್ಟಿದೊಡನೆಯೇ ಮಾಡದಿದ್ದರೆ, ಮುಹೂರ್ತ ನೋಡಿ ನಡೆಸಬೇಕಾಗುತ್ತದೆ. ಪ್ರಾಯಶ್ಚಿತ್ತವೂ ಉಂಟು. ಗರ್ಭ ಮತ್ತು ಬೀಜದಿಂದ ಉಂಟಾಗಿರುವ ದೋಷಗಳ ಪರಿಹಾರ, ಭೂತಪ್ರೇತಪಿಶಾಚಿಗಳಿಂದ ಸಂರಕ್ಷಣೆ, ಆಪದ್ಭಯಶಾಂತಿ, ಸಂಪತ್ಸಮೃದ್ಧಿ. ಶಿಶುಸಂರಕ್ಷಣೆ- ಇವುಗಳಿಗಾಗಿ ಜಾತಕರ್ಮವನ್ನು ಮಾಡಬೇಕು ಎಂದು ಶಾಸ್ತ್ರಗಳು ಸೂಚಿಸುತ್ತವೆ. ಅದಕ್ಕೆ ತಕ್ಕ ಮಂತ್ರ-ತಂತ್ರ-ಪ್ರಯೋಗಗಳನ್ನೂ ಋಷಿಗಳು ಜೋಡಿಸಿದ್ದಾರೆ.

ಶ್ರೀರಂಗಮಹಾಗುರುಗಳು ಇನ್ನೊಂದು ವಿವರಣೆಯನ್ನು ಕೊಟ್ಟಿದ್ದರು. ಜಾತಕರ್ಮದಲ್ಲಿ ಮಗುವನ್ನು ದೃಷ್ಟಿಸಿ ನೋಡಿ, ಸ್ಪರ್ಷಮಾಡಿ, ಅದರ ಶಿರಸ್ಸನ್ನು ತಂದೆಯಾದವನು ಮೂರುಭಾರಿ  ಪರಮಾತ್ಮಸ್ಮರಣೆಯಿಂದ ಪ್ರಬೋಧಗೊಂಡ ಆತ್ಮಪ್ರೀತಿಯಿಂದ ಆಘ್ರಾಣಿಸುತ್ತಾನೆ. ತಂದೆಯಾದವನು ಭಗವತ್ಸಾಕ್ಷಾತ್ಕಾರವನ್ನು ಪಡೆದ ಜ್ಞಾನಿಯಾಗಿದ್ದಲ್ಲಿ, ಶಿಶುವಿಗೆ ಅಲ್ಲಿಯೇ ಒಂದು ಜ್ಞಾನದೀಕ್ಷೆಯಾಗುತ್ತದೆ. ಹಾಗೂ ನೆತ್ತಿಯನ್ನು ಆಘ್ರಾಣಿಸುವಾಗ ತಂದೆಯ ಪ್ರಾಣಾಪಾನಗಳ ಜೊತೆಯಲ್ಲಿ ಶಿಶುವಿನ ಪ್ರಾಣಗಳೂ ಊರ್ಧ್ವಮುಖವಾದ ಗತಿಯನ್ನು ಪಡೆಯುತ್ತವೆ. ಶಿರಸ್ಸಿನಲ್ಲಿನ ಸಹಸ್ರಾರದತ್ತ ಗತಿಯನ್ನು ಪಡೆದು, ಒಂದು ತೀವ್ರತರವಾದ ಸಾಧನೆಯಿಂದ ಮಾತ್ರ ದೊರೆಯುವ ಸ್ಥಿತಿ ಅಥವಾ ಅಂತಹ ಒಂದು ಪಾಕವು ಸಿದ್ಧಿಸುವುದು. ಸಂಸ್ಕಾರದ ಫಲಪ್ರಾಪ್ತಿಯ ಹಿನ್ನೆಲೆಯಲ್ಲಿ ಇದೊಂದು ಅದ್ಭುತವಾದ ಪ್ರಯೋಗವಿಜ್ಞಾನ.

ಈ ಸಂಸ್ಕಾರವನ್ನು ತಂದೆಯೇ ಮಾಡುವುದು ಉತ್ತಮ ಕಲ್ಪ. ತಂದೆ ಮೃತನಾಗಿದ್ದರೆ ಜಾತಕರ್ಮವನ್ನು ನಿಲ್ಲಿಸಬಾರದು. ದೊಡ್ಡಪ್ಪ,ಚಿಕ್ಕಪ್ಪ, ಸೋದರಮಾವ ಇವರುಗಳು ನಡೆಸಬಹುದು. ರಾಮಾಯಣದಲ್ಲಿ, ಜಾತಕರ್ಮದ ಮರ್ಮವನ್ನು ಬಲ್ಲ ಭಗವಾನ್ ವಾಲ್ಮೀಕಿಗಳು ಲವಕುಶರಿಗೆ ಜಾತಕರ್ಮ ಸಂಸ್ಕಾರವನ್ನು ನಡೆಸಿದ ಉದಾಹರಣೆಯಿದೆ. ಅಂತಹ ಜ್ಞಾನಿಗಳ ಸಾನ್ನಿಧ್ಯವಿದ್ದರಂತೂ ಶ್ರೇಷ್ಠವಾದ ಲಾಭವೇ. ತಂದೆಯೇ ಸ್ವತಃ ಜ್ಞಾನಿಯಾಗಿದ್ದರೆ ಉತಮೋತ್ತಮವಾದ ಫಲ. ಒಂದೊಮ್ಮೆ ಜ್ಞಾನಿಯಾಗಿರದಿದ್ದರೂ ದೇಹಸಂಬಂಧವಿರುವುದರಿಂದ ತಂದೆ-ತಾಯಿಯರ ಸಂಕಲ್ಪ,ಆಶೀರ್ವಾದಗಳಿಗೆ ವಿಶೇಷ ಫಲವಿರುತ್ತದೆ.ಲೋಕಜೀವನದ ಏಳ್ಗೆ, ಪಿತೃಲೋಕದ ಸುಖಪ್ರಾಪ್ತಿಯೊಡನೆ ಆಚಾರ್ಯನ ಆಶೀರ್ವಾದದಿಂದ ಧರ್ಮಲಾಭ.

ಸೂಚನೆ: ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.