Tuesday, April 23, 2019

ಒಂದು “ಎಲೆ”ಯ ವಿಷಯ (Ondu eleya vishaya)

ಲೇಖಕರು:  ಸುಬ್ರಹ್ಮಣ್ಯ ಸೋಮಯಾಜಿ



ಪುರಾಣದಲ್ಲಿ ಬರುವ ಕಥೆ. ಯಯಾತಿ- ನಹುಷನೆಂಬ ಪ್ರಸಿದ್ಧನಾದ ರಾಜನ ಮಗ. ಇನ್ನೊಬ್ಬ ದೇವಗುರುಗಳಾದ ಬೃಹಸ್ಪತಿ ಆಚಾರ್ಯರ ಮಗ- ಕಚದೇವ. ಒಬ್ಬರಾಜಕುಮಾರ, ಇನ್ನೊಬ್ಬ ಋಷಿಕುಮಾರ. ಯಯಾತಿಯದು ಜೀವನದಲ್ಲಿ ಇಂದ್ರಿಯಸುಖಗಳೆಲ್ಲವನ್ನೂ ಅನುಭವಿಸುವ ಮನಸ್ಸು. ಕಚನಾದರೋ ಇಂದ್ರಿಯಗಳ ಹಿಂಬದಿಯಲ್ಲಿ ಬೆಳಗುತ್ತಿರುವ ಆತ್ಮಸುಖದವರೆಗೂ ಕಣ್ಣಿಟ್ಟ ದೂರದೃಷ್ಟಿಯುಳ್ಳವನು. ಇಬ್ಬರೂ ಸ್ನೇಹಿತರು, ಸಹಪಾಠಿಗಳು.

ಒಮ್ಮೆ ಇಬ್ಬರೂ ಮಾತನಾಡುತ್ತಾ ಆಂಗೀರಸಮಹರ್ಷಿಗಳ ಆಶ್ರಮ ಪ್ರದೇಶದಲ್ಲಿ ಹೋಗುತ್ತಿರುವಾಗ ಸಣ್ಣನೆ ಗಾಳಿಬೀಸಿತು. ಅಲ್ಲೇ ಇದ್ದ ಒಂದು ಕೇಸರ ವೃಕ್ಷದ ಎಲೆಯೊಂದು ಕಚದೇವನ ಮುಂದೆ ಬಿದ್ದುಬಿಟ್ಟಿತು. ಆ ಎಲೆಯನ್ನು ಅತ್ಯಂತ ಪ್ರೀತಿಯಿಂದ ಕೈಯಲ್ಲಿ ಹಿಡಿದು ಕಚದೇವನು ಹೇಳಿದ್ದೇನು ಗೊತ್ತೇ? “ಎಲೈ ಸುಂದರವಾದ ಎಲೆಯೇ- ನೀನು ನಿನ್ನ  ಮೃತ್ಯುವಿಗಾಗಿ  ಪರಿತಪಿಸಬೇಕಾಗಿಲ್ಲ. ನೀನು ಇದ್ದಷ್ಟೂ ದಿನಗಳೂ ಆ ವೃಕ್ಷಕ್ಕೆ ಒಂದು ಸೌಂದರ್ಯವನ್ನು ಕೊಟ್ಟಿರುವೆ. ನನ್ನಂತಹ ಅನೇಕರಿಗೆ ನೀನಿದ್ದಷ್ಟೂ ದಿನ ನೆರಳನ್ನೂ ನೀಡಿರುವೆ. ನಿನ್ನ ಶಕ್ತಿ ಕ್ಷೀಣವಾದಾಗ ನಿನ್ನ ಸ್ಥಾನಕ್ಕೆ ಅಂಟಿಕೊಂಡು ಕೂತಿರದೇ ಕೆಳಗೆ ಉದುರಿ ಇನ್ನೊಂದು ಚಿಗುರೆಲೆಗೆ ಜಾಗ ಮಾಡಿಕೊಟ್ಟೆ. ಎಷ್ಟು ಲೋಕೋಪಕಾರದ ಮತ್ತು ನಿಸ್ಪೃಹ ಜೀವನ ನಿನ್ನದು! ಸ್ವರ್ಗದಲ್ಲಿ ನಿನ್ನ ಸ್ಥಾನ ಭದ್ರವಾಗಿದೆ” ಎನ್ನುತ್ತಾನೆ.

ಎಂತಹ ಜೀವನ ದೃಷ್ಟಿ! ದಿನ ಬೆಳಗಾದರೆ ಎಷ್ಟು ಎಲೆಗಳು ಬೀಳುತ್ತವೆ, ಆದರೆ ಅದನ್ನು ಗಮನಿಸಿ ಅದರ ಮಹತ್ತನ್ನು ತಿಳಿಯುವ ಪ್ರಯತ್ನ ಎಷ್ಟು ಜನ ಮಾಡುತ್ತಾರೆ? ಯಯಾತಿಯ ಎದುರಿಗೂ ಆ ಎಲೆ ಇತ್ತಲ್ಲವೇ? ಆದರೆ ಕಚನ ಉದಾತ್ತವಾದ ಚಿಂತನೆ ಅವನಿಗೆ ಆ ಘಟನೆಯಿಂದ ಬರಲಿಲ್ಲ. ನಿಜಕ್ಕೂ ನಮ್ಮ ಜೀವನಗಳೂ ಆ ಎಲೆಯಂತೆ ಲೋಕೊಪಕಾರಕವಾಗಿ ನಿಸ್ಪೃಹವಾಗಿ ಇರುವುದಕ್ಕೆ ಪ್ರೇರಣೆ ನೀಡುವ ಸಂಗತಿಯಿದಲ್ಲವೇ?

ನಮ್ಮ ಈ ಅಶಾಶ್ವತವಾದ ದೇಹದಲ್ಲಿ ಶೈಶವ, ಯೌವನ ವಾರ್ಧಕ್ಯಗಳು ನಿಸರ್ಗ ನಿಯಮ.ಅಂತಹ ದೇಹದೊಳಗೆ ಅಮರವಾಗಿ ಶಾಶ್ವತವಾಗಿ ಬೆಳಗುವ ಚೈತನ್ಯದ ಸ್ರೋತಸ್ಸು ಒಂದುಂಟು. ದೇಹ ಬೀಳುವ ಮುನ್ನ ಆ ಸತ್ಯವನ್ನು ಹಿಡಿಯಬಲ್ಲೆವಾದರೆ ನೆಮ್ಮದಿ,ಸುಖ ಎಲ್ಲವೂ. ಅದಿಲ್ಲದೇ ಬಿದ್ದುಹೋಗುವ ದೇಹದ ಬಗೆಗೇ ನಮ್ಮೆಲ್ಲ ಅಭಿಮಾನವನ್ನು ಸೀಮಿತಗೊಳಿಸಿದರೆ ನಮಗೆ ದುಃಖ ಅನಿವಾರ್ಯ. ಹಾಗೆಂದು ದೇಹವನ್ನು ಕಡೆಗಣಿಸಬೇಕೆಂದಲ್ಲ. ಆ ಎಲೆಯಂತೆ ಇದ್ದಷ್ಟೂ ದಿನ ಆನಂದವಾಗಿ ನಮ್ಮ ಪಾತ್ರವನ್ನು ನಿರ್ವಹಿಸಬೇಕು. ಹಾಗೆ ಬದುಕುವಾಗ ಇಲ್ಲಿ ನಿತ್ಯವಾದದ್ದೇನು? ಅನಿತ್ಯವಾದದ್ದೇನು ಎಂಬುದರ ಅರಿವಿನಿಂದ ನಿತ್ಯವಾದದ್ದಕ್ಕೆ ಅನಿತ್ಯವಾದದ್ದನ್ನು ಬಳಸಿಕೊಳ್ಳುವ ಮಹರ್ಷಿಗಳ ಕಲೆಯನ್ನು ಕಲಿತೆವಾದರೆ ನಮ್ಮ ಜೀವನಗಳು ಸಾರ್ಥಕ.

ನಮ್ಮ ಜೀವನವನ್ನು ಅರಳಿಸುವ ಇಂತಹ ಎಷ್ಟೋ ಸಂಗತಿಗಳು, ವಿಷಯಗಳು,ನಿದರ್ಶನಗಳು, ದಿನಂಪ್ರತಿ ನಿಸರ್ಗದಲ್ಲಿ ನಡೆಯುತ್ತಲೇ ಇರುತ್ತದೆ. ಅವೆಲ್ಲದರಿಂದ ಪಾಠ ಕಲಿತು ನಮ್ಮ ಜೀವನವನ್ನು ಬೆಳಗಿಸಿಕೊಳ್ಳುವ ವ್ಯವಧಾನ, ವಿವೇಕಗಳು ನಮಗಿರಬೇಕು. ಹಾಗೆ ನಿಸರ್ಗದ ವಿಷಯಗಳೆಲ್ಲವನ್ನೂ ತಮ್ಮ ಒಳಬೆಳಕಿನಿಂದ ಅಳೆದು ನೆಮ್ಮದಿಯ ಆನಂದದ ಜೀವನವನ್ನು ಕಟ್ಟಿಕೊಟ್ಟ ಮಹರ್ಷಿಗಳ ದೇಶ ನಮ್ಮದು.

ಭಾರತೀಯರ ಸಂಸ್ಕೃತಿ ಇಂತಹ ಉದಾತ್ತವಾದ ಜೀವನದೃಷ್ಟಿಯಿಂದ ಸಮೃದ್ಧವಾಗಿದೆ. ಶ್ರೀರಂಗ ಮಹಾಗುರುಗಳು ಜೀವನಕ್ಕೆ ಏನಾದರೂ ಅರ್ಥವಿದೆಯೇ ಎಂದು ಯಾರೋ ಕೇಳಿದಾಗ “ ಜೀವನಕ್ಕೆ ಅರ್ಥವಷ್ಟೇ ಅಲ್ಲ ಪರಮಾರ್ಥವಿದೆಯಪ್ಪಾ” ಎಂದಿದ್ದರು. ಜೀವನದ ಹಿಂಬದಿ ಬೆಳಗುತ್ತಿರುವ ಚೈತನ್ಯದ ವರೆವಿಗೂ, ಅಲ್ಲಿಂದ ಇಲ್ಲಿಯವರೆಗೆ ವಿಕಾಸವಾದ ಜೀವನದ ಬಗೆಗಿನ ದೃಷ್ಟಿ ಇದ್ದಾಗ ಇಂತಹ ಮಾತು ಬರುತ್ತದೆ.

ನಮ್ಮ ಋಷಿ ಸಮಾಜದಲ್ಲಿ ಒಂದು ಮರದಿಂದ ಉದುರಿದ ಎಲೆಯಿಂದ ಇಷ್ಟು ಉದಾತ್ತವಾದ ಜೀವನ ಪಾಠವನ್ನು ಕಂಡರುಹಿದ ಮಹಾತ್ಮರಿದ್ದಾರೆ. ಅಂತಹ ಹೆಮ್ಮೆಯ ಋಷಿಗಳ ವಿಚಾರದ ಬೆಳಕಿನಲ್ಲಿ ನಾವೆಲ್ಲರೂ ನಡೆಯುವಂತಾಗಲಿ ಅಲ್ಲವೇ?

ಸೂಚನೆ:  23/04/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.