Tuesday, July 23, 2019

ಮನುಷ್ಯನ ನಿಜ ಯೋಗ್ಯತೆಯನ್ನರಿತು ಬಾಳೋಣ (Manushyana nija yogyatheyannaritu baalona)

ಲೇಖಕರು: ವಿಜಯಲಕ್ಷ್ಮೀ ಬಿ. ಆರ್, 
ಬೆಂಡೇಹಕ್ಲು, ಚಿಕ್ಕಮಗಳೂರು 


“ಸಮಜ” ಎಂದರೆ ಪ್ರಾಣಿಗಳ ಗುಂಪು, “ಸಮಾಜ” ಎಂದರೆ ಸಮಾನ ಧರ್ಮವುಳ್ಳ ಮನುಷ್ಯರ ಸಂಘ ಎಂದರ್ಥ.ಶ್ರೀರಂಗ ಮಹಾ ಗುರುಗಳು ಹೇಳುತ್ತಿದ್ದರು -ಮನುಷ್ಯಜೀವನದಲ್ಲಿ ಮೂರು ಕ್ರಮಗಳುಂಟು. ಒಂದು ನಿಸರ್ಗದ ವೇಗಕ್ಕೆ ತಕ್ಕಂತೆ ನಡೆಯುವುದು. ಎರಡನೆಯದು ನೆರೆಹೊರೆಯವರನ್ನು ನೋಡಿ ಅನುಕರಣೆ ಮಾಡುವುದು. ಇವೆರಡರಲ್ಲೂ ವಿಮರ್ಶೆ ಇಲ್ಲ. ಮೂರನೆಯದು ವಿಚಾರಪೂರ್ವಕವಾಗಿ ಒಂದು ಧ್ಯೇಯವನ್ನಿಟ್ಟುಕೊಂಡು, ನಿಸರ್ಗದ ನಡೆಯನ್ನೂ ಗಮನಿಸಿ ಜೀವನ ಮಾಡುವುದು. ಜೀವನವನ್ನು ಪ್ರಾಣಿ-ಪಕ್ಷಿಗಳೂ ಮಾಡುತ್ತವೆ. ನಾವೂ ಮಾಡುತ್ತೇವೆ. ಮನುಷ್ಯರು ಬುದ್ಧಿಜೀವಿಗಳು, ಮಾತನಾಡುವ ಶಕ್ತಿಯುಂಟು, ಮುಂದಾಲೋಚನೆಯುಂಟು, ಯೋಚನಾಶಕ್ತಿಯುಂಟು, ಪ್ರಾಣಿಗಳನ್ನು ಬಗ್ಗಿಸಿ ಹತೋಟೀಯಲ್ಲಿಟ್ಟುಕೊಳ್ಳುತ್ತಾರೆ - ಮುಂತಾಗಿ ನಾವು ಹೆಮ್ಮೆಪಡುತ್ತೇವೆ. ಆದರೆ ಪಶುಪಕ್ಷಿಗಳ ಜೀವನದ ಮಹತ್ವದ ಅಂಶವನ್ನು ಗಮನಿಸೋಣ: 

ಜೇನುಹುಳು, ಗೀಜಗ, ದುಂಬಿ, ಜೇಡ ಮುಂತಾದವುಗಳನ್ನು ಗಮನಿಸಿದಾಗ ಅವು ತುಂಬ ವ್ಯವಸ್ಥಿತವಾಗಿರುವುದನ್ನು ಕಾಣಬಹುದು. ಇರುವೆಗಳು ಚಾತುರ್ಯದಿಂದ ಆಹಾರ ಸಂಗ್ರಹ ಮಾಡುತ್ತವೆ. ಪಶು ಪಕ್ಷಿಗಳು ಆಹಾರದ ಉಪಯೋಗದಲ್ಲೂ ನಮ್ಮಂತೆ ಹೆಚ್ಚುತಿಂದು ಅಜೀರ್ಣ ಮಾಡಿಕೊಳ್ಳುವುದಿಲ್ಲ. ಮರಿಗಳನ್ನು ತುಂಬ ಆಸ್ಥೆಯಿಂದ ಪಾಲಿಸುತ್ತವೆ. ಶಿಸ್ತಿನ ವಿಚಾರ ತೆಗೆದುಕೊಂಡರೆ ಸಕಾಲದಲ್ಲಿ ಏಳುತ್ತವೆ, ದುಡಿಯುತ್ತವೆ, ಸ್ನಾನಮಾಡುತ್ತವೆ, ಸಕಾಲದಲ್ಲಿ ಗೂಡು ಸೇರುತ್ತವೆ. ಕೌಶಲದಿಂದ ಬೇಟೆಯಾಡುತ್ತವೆ. ಪರೇಂಗಿತಜ್ಞಾನಕ್ಕೆ ಕುದುರೆ, ನಾಯಿ, ಗಿಳಿ, ಪಾರಿವಾಳಗಳು, ಶಿಕ್ಷಣ ಮತ್ತು ತಾಯಿತನದ ನಿರ್ವಹಣೆಗೆ ಕೋಳಿ, ಬೆಕ್ಕು ಮುಂತಾದವುಗಳಲ್ಲಿನ ಸಾಮರ್ಥ್ಯವನ್ನು ಗಮನಿಸಬಹುದು. ಸ್ವಾವಲಂಬಿ ಜೀವನ, ಸ್ವಾಮಿನಿಷ್ಠೆ, ಕೃತಜ್ಞತೆ, ಸ್ಮರಣಶಕ್ತಿ, ಗುರುತು ಹಿಡಿಯುವಶಕ್ತಿ, ಅನುಕರಣಕಲೆಗಳನ್ನು ಪಶು-ಪಕ್ಷಿಗಳಲ್ಲಿಯೂ ಕಾಣಬಹುದು. ಕಲಿತ ವಿದ್ಯೆಗಳನ್ನೆಲ್ಲ ಜೀವನಕ್ಕೆ ಬಳಸಿಕೊಳ್ಳುತ್ತವೆ. ಯಾವುದರಲ್ಲೂ ಅವು ಮನುಷ್ಯುರಿಗಿಂತ ಕಡಿಮೆ ಇಲ್ಲ. ಕೋಗಿಲೆಯಂತೆ ಧ್ವನಿ, ನವಿಲಿನಂತೆ ನಡಿಗೆ ಮುಂತಾದ ನುಡಿಗಳೂ “ಸಮಜ”ದ ಹಿರಿಮೆಯನ್ನೇ ಸಾರುತ್ತವೆ. ಜಾಗ್ರತ್-ಸ್ವಪ್ನ-ನಿದ್ರೆ ಮೂರು ಸ್ಥಿತಿಗಳು ನಮ್ಮಂತೆಯೇ ಅವುಗಳಿಗೂ ಉಂಟು

ಮಾನವಜನ್ಮದ ಹಿರಿಮೆ: 

ಹಾಗಾದರೆ “ಮಾನವ ಜನ್ಮ ದೊಡ್ಡದು”, “ಜಂತೂನಾಂ ನರಜನ್ಮ ದುರ್ಲಭಂ” ಎಂಬ ಜ್ಞಾನಿಗಳ ಮಾತಿಗೇನರ್ಥ ಎಂಬುದು ವಿಚಾರಣೀಯವಾಗಿದೆ. ಮನುಷ್ಯನಲ್ಲಿ ಎಚ್ಚರದ ಸ್ಥಿತಿ –ಸ್ವಪ್ನ ಮತ್ತು ಗಾಢ ನಿದ್ರೆ  ಈ ಮೂರು ಸ್ಥಿತಿಗಳು ಇಂದ್ರಿಯಕ್ಷೇತ್ರಕ್ಕೆ ಸಂಬಂಧಪಟ್ಟವು. ಆದರೆ ಇವನ್ನೂ ಮೀರಿದ ಮತ್ತೊಂದು ಸ್ಥಿತಿ ಇದೆ. ಅದನ್ನು ಅನುಭವಿಸಿದವರು ಅದನ್ನು “ ತುರೀಯಾ” ನಾಲ್ಕನೆಯ ಸ್ಥಿತಿ ಎಂದಿದ್ದಾರೆ. ಅದರ ಆನಂದ ಯಾವ ಹೋಲಿಕೆಗೂ ಸಿಗದಿರುವುದರಿಂದ ಈ ಹೆಸರು. ಅದೇ  ಸಮಾಧಿಸ್ಥಿತಿಯೂ ಸಹ. ಇದರಲ್ಲಿ ದೊರೆಯುವುದು ಪೂರ್ಣವಾದ, ಶುದ್ಧವಾದ, ನಿತ್ಯವಾದ, ಪರಾವಲಂಬನೆ ಇಲ್ಲದ, ಸಹಜ ಸುಖ. ಈ ನಾಲ್ಕೂ ಸ್ಥಿತಿಯನ್ನು ಅನುಭವಿಸುವ, ಆನಂದಿಸುವ ಹಕ್ಕು ಮತ್ತು ಯೋಗ್ಯತೆ ಮನುಷ್ಯನಿಗೆ ಮಾತ್ರ. ಪ್ರಾಣಿಗಳಿಗೆ ಇಲ್ಲ.  ಈ ನಾಡಿನ ಮಹರ್ಷಿಗಳು ಮನುಷ್ಯನು ಈ ನಾಲ್ಕೂ ಸ್ಥಿತಿಗಳನ್ನು ಅನುಭವಿಸಿ ಸುಖಿಸಲು ಉಪಾಯವನ್ನು  ಕಂಡರುಹಿದರು. ಅವೇ ಧರ್ಮ,ಅರ್ಥ ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು.

 ನಾಲ್ಕು ಪುರುಷಾರ್ಥಗಳನ್ನು ಜೀವನದಲ್ಲಿ ಸಾಧಿಸಿ ಇನ್ನಿಲ್ಲದ ಸುಖ, ನೆಮ್ಮದಿಯನ್ನು ಪಡೆಯುವ ಚಿಂತನೆ ಇರುವ ಮನುಷ್ಯರ ಗುಂಪನ್ನೇ “ಸಮಾಜ “ ಎಂದಿರುವುದು. ಆಹಾರ ನಿದ್ರಾ ಭಯ ಮೈಥುನಂ ಚ ಸಾಮಾನ್ಯಮೇತತ್ ಪಶುಭಿರ್ನರಾಣಾಮ್ – ಆಹಾರ, ನಿದ್ರೆ,ಭಯ,ಮೈಥುನ ಇವುಗಳು ಪ್ರಾಣಿಗಳಿಗೆ ಮತ್ತು ಮನುಷ್ಯನಿಗೆ ಸಾಮಾನ್ಯ ಸ್ಥಿತಿಗಳು. ಮತ್ತೆ ಇವನ ವಿಶೇಷವೇನೆಂದರೆ-ಧರ್ಮೋ ನರಾಣಾಮ್  ಅಧಿಕೋ ವಿಷೇಶಃ, ಜ್ಞಾನಂ ನರಾಣಾಮ್  ಅಧಿಕೋ ವಿಷೇಶಃ  ಧರ್ಮ, ಜ್ಞಾನಗಳೇ ಮನುಷ್ಯನ ವಿಶೇಷತೆ. ಅದಿಲ್ಲದಿದ್ದರೆ ಅವನು ಪಶು ಸಮಾನ ಎಂದಿವೆ ನಮ್ಮ ಶಾಸ್ತ್ರಗಳು. ಹಾಗೆಂದೇ ಸರ್ವ ಪ್ರಯತ್ನದಿಂದಲೂ ಧರ್ಮ, ಜ್ಞಾನಗಳನ್ನು ಸಂಪಾದಿಸಿ ಸುಖದಿಂದಿರುವುದೇ ಮನುಷ್ಯ ಜನ್ಮದ ಸಾರ್ಥಕ್ಯ ಎಂಬ ಶ್ರೀರಂಗಮಹಾಗುರುಗಳ ವಿಚಾರವನ್ನು ಮರೆಯದಿರೋಣ.  

ಸೂಚನೆ: 23/07/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.