Friday, July 19, 2019

ನಿತ್ಯ ಬ್ರಹ್ಮಚಾರಿ, ನಿತ್ಯ ಉಪವಾಸಿ. (Nithya brahmachari, nithya upavasi)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ


ಯಮುನಾ ನದಿಯ ಆಚೆಯ ತೀರದಲ್ಲಿ ದುರ್ವಾಸರರು ಶಿಷ್ಯರ ಸಹಿತ ಬಿಡಾರ ಹೂಡಿದ್ದರು. ಈಚೆಯ ಗೋಕುಲದಲ್ಲಿದ್ದ ಶ್ರೀ ಕೃಷ್ಣನಿಗೆ ವಿಷಯ ತಿಳಿಯಿತು. ಶ್ರೀ ಕೃಷ್ಣನು ಗೋಪಿಕೆಯರನ್ನು ಕರೆದು, ದುರ್ವಾಸರಿಗೆ ಊಟೋಪಚಾರಗಳನ್ನು ಸಮರ್ಪಿಸಿಬರಬೇಕೆಂದು ಆಜ್ಞಾಪಿಸಿದನು. ಸರಿ. ಆದರೆ ತುಂಬಿ ಹರಿಯುತ್ತಿರುವ ಯಮುನೆಯನ್ನು ದಾಟಿ ಹೋಗುವುದಾದರೂ ಹೇಗೆ ಎಂದು ಅವರು ಕೃಷ್ಣನನ್ನೇ ಕೇಳಿದರು. ಆಗ ಶ್ರೀ ಕೃಷ್ಣನು - “ನಿತ್ಯ ಬ್ರಹ್ಮಚಾರಿಯಾದ ಕೃಷ್ಣನು ಹೇಳಿದ್ದಾನೆ, ದಾರಿ ಬಿಡಬೇಕು“  ಎಂದು ಯಮುನೆಯನ್ನು ಪ್ರಾರ್ಥಿಸಲು ಹೇಳಿದ. ಗೋಪಿಕೆಯರಿಗೆ ಆಶ್ಚರ್ಯ. ಸಾಲದೆಂಬಂತೆ ಯಮುನೆಯೂ ಅವರು ಆಚೆಯ ದಡ ಸೇರುವವರೆಗೂ ದಾರಿ ಬಿಟ್ಟಳು. ಅಲ್ಲಿ ಇವರು ತೆಗೆದುಕೊಂಡು ಹೋಗಿದ್ದ ಭಕ್ಷ್ಯ ಭೋಜ್ಯ ಸಹಿತವಾದ ಭೋಜನವನ್ನು ದುರ್ವಾಸರಿಗೆ ಮತ್ತು ಅವರ ಶಿಷ್ಯರಿಗೆಲ್ಲ ಪುಷ್ಕಳವಾಗಿ ಬಡಿಸಿದರು. ನಂತರ ಮತ್ತೆ ಯಮುನಾ ನದಿಯನ್ನು ದಾಟುವುದು ಹೇಗೆಂದು ದುರ್ವಾಸರನ್ನೇ ಕೇಳಿದರು. ಆಗ ದುರ್ವಾಸರು-“ ನಿತ್ಯ ಉಪವಾಸಿಯಾದ ದುರ್ವಾಸನು ಹೇಳಿದ್ದಾನೆ, ದಾರಿ ಬಿಡಬೇಕು ಎಂದು ಯಮುನೆಯನ್ನು ಪ್ರಾರ್ಥಿಸಿ” ಎಂದರು. ಗೋಪಿಕೆಯರಿಗೆ ಆಶ್ಚರ್ಯವೋ ಆಶ್ಚರ್ಯ. ಯಮುನೆಯು ಈ ಬಾರಿಯೂ ದಾರಿ ಬಿಟ್ಟಳು. ಇದೇನಿದು, ನಿತ್ಯವೂ ನಮ್ಮೊಡನೆ ವಿಹರಿಸುವ ಕೃಷ್ಣನು ನಿತ್ಯ ಬ್ರಹ್ಮಚಾರಿ ಹೇಗಾದಾನು? ಹಾಗೆಯೇ ನಮ್ಮೆದುರಿಗೇ ಪುಷ್ಕಳವಾದ ಭೋಜನವನ್ನು ಸ್ವೀಕರಿಸಿದ ದುರ್ವಾಸರು ನಿತ್ಯ ಉಪವಾಸಿ ಹೇಗಾದಾರು? ಎಂಬುದಾಗಿ ಕಾಡಿದ ಪ್ರಶ್ನೆಯನ್ನು ಶ್ರೀ ಕೃಷ್ಣನನ್ನೇ ಕೇಳಿದರು. ಶ್ರೀ ಕೃಷ್ಣನ ಅದ್ಭುತವಾದ ಉತ್ತರವನ್ನು ಕೇಳಿ-“ ನಾನು ನಿಮ್ಮೆಲ್ಲರ ಜೊತೆಗಿದ್ದರೂ ಅರೆ ಕ್ಷಣವೂ ಬ್ರಹ್ಮ ಭಾವವನ್ನು ಬಿಟ್ಟಿಲ್ಲ. ಸದಾ ಬ್ರಹ್ಮನಲ್ಲೇ ಸಂಚರಿಸುವವನು. ಹಾಗಾಗಿ ನಿತ್ಯ ಬ್ರಹ್ಮಚಾರಿ. ದುರ್ವಾಸರು ನಿತ್ಯದಲ್ಲೂ ಭಗವಂತನ ಬಳಿಯಲ್ಲೇ ವಾಸ ಮಾಡುವವರು. ಉಪ-ಹತ್ತಿರದಲ್ಲಿ ವಾಸ. ಮಾತ್ರವಲ್ಲ ತಾನು ಸ್ವೀಕರಿಸುವ ಒಂದೊಂದು ತುತ್ತನ್ನೂ ಕೃಷ್ಣಾರ್ಪಣ ಭಾವದಿಂದಲೇ ಸ್ವೀಕರಿಸುತ್ತಾರೆ. ಹಾಗೆಂದೇ ಅವರು ನಿತ್ಯ ಉಪವಾಸಿ. ಎರಡೂ ಸರಿಯಾಗಿರುವುದರಿಂದಲೇ ಯಮುನೆಯು ನಮ್ಮ ಮಾತುಗಳನ್ನು ಗೌರವಿಸಿ ದಾರಿ ಬಿಟ್ಟಳು”

“ ಮೌಲಿಸ್ಥ ಕುಂಭ ಪರಿರಕ್ಷಣ ಧೀರ್ನಟೀವಾ.....” – ಎಂಬ ಶ್ರೀ ಶಂಕರರ ಮಾತಿನಂತೆ-ನಿಪುಣೆಯಾದ ನರ್ತಕಿಯೊಬ್ಬಳು ಕುಂಭವನ್ನು ತಲೆಯಮೇಲೆ ಧರಿಸಿ ನಾನಾ ಹಾವ ಭಾವಗಳಿಂದ ನರ್ತನ ಮಾಡುತ್ತಿದ್ದರೂ ಆ ಕುಂಭವು ಕೆಳಗೆ ಬೀಳದಂತೆ ಜಾಗ್ರತೆ ವಹಿಸುತ್ತಾಳೆ. ಹಾಗೆಯೇ ನಮ್ಮ ಜೀವನದಲ್ಲಿ ಯಾವ ಕೆಲಸಗಳನ್ನು ಮಾಡುತ್ತಿದ್ದರೂ ನಮ್ಮ ಜೀವನ ಮೂಲನಾದ ಭಗವಂತನನ್ನೂ ಅವನ ಆಶಯವನ್ನೂ ತಲೆಯ ಮೇಲೆ ಧರಿಸಿಯೇ ಎಲ್ಲವನ್ನೂ ನಿರ್ವಹಿಸಲು ಕಲಿತೆವಾದರೆ ಜೀವನ ಸಾರ್ಥಕ. ಮೇಲಿನ ಮಹಾತ್ಮರ ಕಥೆಯ ಆದರ್ಶವೂ ಇದೇ ಆಗಿದೆ. ನಮಗೆ ಕೃಷ್ಣನ ಜಗದ್ವಂದ್ಯವಾದ ವ್ಯಕ್ತಿತ್ವದ ಪರಿಚಯವಿಲ್ಲದೇ ಅವನ ಹೊರ ಜೀವನದ ಆಚರಣೆಗಳ ಮೇಲೆ ಅವನನ್ನು ಅಳೆದುಬಿಡುತ್ತೇವೆ. ಹಾಗೆಯೇ ದುರ್ವಾಸರಂತಹ ಮಹಾತ್ಮರನ್ನೂ ಸಹ. ಬ್ರಹ್ಮವೇ ಲೋಕೋದ್ಧಾರಕ್ಕಾಗಿ ಇಳೆಗಿಳಿದು ಬಂದು ಕೃಷ್ಣರೂಪಿಯಾಗಿದ್ದಾನೆ ಎಂಬುದನ್ನು ಅವನ ಕಾಲದಲ್ಲಿಯೇ ಅರ್ಥ ಮಾಡಿಕೊಂಡವರು ಬೆರಳೆಣಿಕೆಯಷ್ಟು ಜನ. ಶ್ರೀರಂಗ ಮಹಾಗುರುಗಳ ಈ ಮಾತು ಇಲ್ಲಿ ಸ್ಮರಣೀಯ-  'ಸಂಸಾರಕ್ಕೆ ಬಿದ್ದಿರುವ ನಮ್ಮನ್ನು ಮೇಲೆತ್ತಲು ಭಗವಂತನೂ ಸಂಸಾರಕ್ಕೆ ಇಳಿದಿದ್ದಾನೆ ಎಂಬುದನ್ನು ನಾವು ಅರಿಯುವುದಿಲ್ಲ'  ಮಹಾತ್ಮರ ಮಾಹಾತ್ಮೆಯನ್ನು ಅರಿಯಲು ಆ ದಿಕ್ಕಿನಲ್ಲಿ ನಮ್ಮ ಸಾಧನೆಇರಬೇಕು. ಜ್ಞಾನೀ ಜನರ ಮಾರ್ಗದರ್ಶನ ಬೇಕು. ಅಂತಹ ಅವಕಾಶಗಳು ನಮ್ಮೆಲ್ಲರಿಗೂ ಒದಗಿಬರಲಿ ಎಂದು ಪ್ರಾರ್ಥಿಸೋಣ.  


ಸೂಚನೆ:  19/07/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.