Saturday, August 3, 2019

ಜೀವಾಳವೋ? ತಂಬುರವೋ? (Jeevalavo? Tamburavo?)

ಲೇಖಕರು: ವಿದ್ವಾನ್ ಬಿ. ಜಿ. ಅನಂತ 


ಜೀವನದಲ್ಲಿ ಯಾವುದು ಮುಖ್ಯ ಯಾವುದು ಅಮುಖ್ಯ ಎಂದು ತೀರ್ಮಾನಿಸಿ ಕೊಳ್ಳುವುದು ಬಹಳ ಮುಖ್ಯ.  ಇರುವ ಪದಾರ್ಥಗಳಲ್ಲಿ ಅತಿ ಮುಖ್ಯವಾದದ್ದನ್ನು ಗುರುತಿಸಲು ನಮಗೇ ಸ್ವತಃ ಒಂದು ತಿಳುವಳಿಕೆ ಬೇಕು.  ಅದನ್ನು 'ವಿವೇಕ' ಎನ್ನುತ್ತಾರೆ.  ಅದು ಎಲ್ಲರಿಗೂ ಎಲ್ಲ ಕಾಲಗಳಲ್ಲಿಯೂ ಇರಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಜ್ನಾನಿಗಳಿಂದ, ಮಹಾತ್ಮ ರಿಂದ ಅದನ್ನು ಕೇಳಿ ತಿಳಿಯಬೇಕು. ಜೀವನದಲ್ಲಿ ಮುಖ್ಯವಾದದ್ದನ್ನು ಗೌಣ ಎಂದು ಕೊಳ್ಳುವುದು, ಗೌಣವಾದದ್ದನ್ನು ಮುಖ್ಯ ಎಂದುಕೊಳ್ಳುವುದು ಈ ಎರಡೂ ಅನರ್ಥಕಾರಿಯೇ.  ಶ್ರೀರಂಗ ಮಹಾಗುರುಗಳು ಈ ಕುರಿತು ಹಾಸ್ಯಮಯವಾದ ಕಥೆಯೊಂದನ್ನು ಹೇಳುತ್ತಿದ್ದರು-

   ಒಬ್ಬ ದಾಸಯ್ಯನಿದ್ದ.  ಯಾವಾಗಲೂ ದೇವರ ಧ್ಯಾನ ಜಪ ಭಜನೆಗಳನ್ನು ಮಾಡಿಕೊಂಡಿರುವುದು, ಹೊಟ್ಟೆಪಾಡಿಗಾಗಿ ನಾಲ್ಕಾರು ಮನೆಗಳ ಮುಂದೆ ಹಾಡುತ್ತಾ ಭಿಕ್ಷೆ ಬೇಡುವುದು- ಹೀಗೆ ಜೀವನ ಸಾಗಿಸುತ್ತಿದ್ದ. ಹಾಡುವಾಗ ಶ್ರುತಿ ಹಿಡಿಯಲೆಂದು ಒಂದು ತಂಬೂರವನ್ನು ಇಟ್ಟುಕೊಂಡಿದ್ದ. ಇಂದು ಈ ಊರು, ನಾಳೆ ಮುಂದಿನ ಊರು ಹೀಗೆ ಅವನ ಜೀವನ ಸಾಗಿತ್ತು. 

    ಒಮ್ಮೆ ಹೀಗೆಯೇ ಭಿಕ್ಷೆಗಾಗಿ ಒಂದು ಹಳ್ಳಿಯ ಕಡೆಗೆ ಸಾಗುತ್ತಿದ್ದ. ಕಾಡಿನ ದಾರಿ.  ಕೈಯಲ್ಲಿ ತಂಬೂರಿಯನ್ನು ಮೀಟಿಕೊಂಡು ದೇವರ ನಾಮ ಹಾಡುತ್ತಾ ನಡೆಯುತ್ತಿದ್ದ.  ಇದ್ದಕ್ಕಿದ್ದಂತೆ ದರೋಡೆಕಾರರ ಗುಂಪೊಂದು ಇವನನ್ನು ಹಿಡಿಯಿತು. ಎಲ್ಲಾ ಹುಡುಕಿದರು. ಇವನ ಬಳಿ ಏನೂ ಸಿಗಲಿಲ್ಲ. ಆದರೆ ಹಿಡಿದಮೇಲೆ ಏನನ್ನಾದರೂ ಕಿತ್ತುಕೊಳ್ಳದೇ ಕಳುಹಿಸುವುದು ಅಪಮಾನವಲ್ಲವೇ.  ಹಾಗಾಗಿ ದರೋಡೆಕೋರರ ನಾಯಕನು  ಇವನಿಂದ ಏನನ್ನು ಕಿತ್ತುಕೊಳ್ಳಬಹುದು ಎಂದು ನೋಡುತ್ತಿದ್ದ. ಅವನ ಕಣ್ಣಿಗೆ ದಾಸಯ್ಯನ ಕೈಯಲ್ಲಿದ್ದ ತಂಬೂರ ಕಾಣಿಸಿತು. ಸರಿ ಅದನ್ನೇ ಕಿತ್ತುಕೊಂಡ.  ಪಾಪ, ನಮ್ಮ ದಾಸಯ್ಯನಿಗೆ ಜಂಘಾಬಲವೇ ಉಡುಗಿಹೋಯಿತು.  ತಂಬೂರವಿಲ್ಲದಿದ್ದರೆ ಹಾಡುವಾಗ ಶ್ರುತಿ ತಪ್ಪಬಹುದು, ಭಿಕ್ಷೆ ಬೇಡಲೂ ತೊಂದರೆ. ತಂಬೂರವನ್ನು ಹೇಗಾದರೂ ಪಡೆಯಬೇಕು. ಆದರೆ ಹೇಗೆ?  ದಾಸಯ್ಯ ಬಹಳ ಬುದ್ಧಿವಂತನಿದ್ದ. ಅವನು ಕಳ್ಳರ ನಾಯಕನನ್ನು ಕುರಿತು ಹೇಳಿದನಂತೆ, 'ಅಯ್ಯಾ! ತಂಬೂರವನ್ನು ಬೇಕಾದರೆ ನೀವೇ ಇಟ್ಟುಕೊಳ್ಳಿ.  ನನಗೇನೂ ತೊಂದರೆ ಇಲ್ಲ. ಆದರೆ ಅದರಲ್ಲಿರುವ ಜೀವಾಳವನ್ನು ಮಾತ್ರ ಕೊಟ್ಟುಬಿಡಿ. ನನ್ನ ಹೊಟ್ಟೆ ತುಂಬಿಸುವುದು ಅದೇ. ಅದನ್ನು ಕೊಟ್ಟು ಪುಣ್ಯಕಟ್ಟಿಕೊಳ್ಳಿ' ಎಂದು ಗೋಗರೆದ. 
   
      ವಾಸ್ತವವಾಗಿ ಜೀವಾಳವೆಂದರೆ  ಕಂಬಳಿಯ ಸಣ್ಣ ದಾರ. ನಾದವು ಚೆನ್ನಾಗಿ ಬರಲಿ ಎಂದು ತಂಬೂರಕ್ಕೆ ಅಳವಡಿಸಿರುತ್ತಾರೆ. ಈ ಕಳ್ಳರ ನಾಯಕನಿಗೆ ತಂಬೂರದ ಬಗ್ಗೆ ಯಾವ ತಿಳುವಳಿಕೆಯೂ ಇರಲಿಲ್ಲ. ಅವನು ಯೋಚಿಸಿದ, 'ಇವನು ಇಷ್ಟೊಂದು ಕೇಳುತ್ತಿರುವುದನ್ನು ನೋಡಿದರೆ ಇದರಲ್ಲಿ ಈ ಜೀವಾಳ ಎಂಬುದೇ ಮುಖ್ಯ ಎನಿಸುತ್ತದೆ' ಎಂದು. ಹಾಗಾಗಿ ಆ ಜೀವಾಳವನ್ನು ತಾನು ಇಟ್ಟುಕೊಂಡು ತಂಬೂರವನ್ನು ದಾಸಯ್ಯನಿಗೆ ಕೊಟ್ಟುಬಿಟ್ಟನಂತೆ. ದಾಸಯ್ಯನು ಬದುಕಿದೆ ಎಂದುಕೊಂಡು ಜಾಗ ಖಾಲಿ ಮಾಡಿದ.  ಮುಂದೆ ತನ್ನ ಬಳಿ ಇದ್ದ ಕಂಬಳಿಯಿಂದ ಒಂದು ದಾರವನ್ನು ತೆಗೆದು ತಂಬೂರಕ್ಕೆ ಜೀವಾಳ ಮಾಡಿಕೊಂಡನಂತೆ.

     ಇದು ಜ್ಞಾನಿಗಳ ಕಡೆಯಿಂದ ಬಂದ ಕಥೆ. ಪದಾರ್ಥಗಳ ವಿಜ್ಞಾನವನ್ನು ತಿಳಿಯದಿದ್ದರೆ ಜೀವನದಲ್ಲಿ ಸುಖವಿಲ್ಲ ಎಂಬ ಸಂದೇಶವನ್ನು ಕೊಡುವಂತೆ ಮೇಲ್ನೋಟಕ್ಕೆ ಕಾಣುತ್ತದೆ.  ಆದರೆ ಒಳಗಿನ ಅರ್ಥವು ಬೇರೊಂದೇ ಇದೆ. ಜೀವನದಲ್ಲಿರುವ ಬಗೆಬಗೆಯಾದ ಸುಖ ಸಂತೋಷಗಳನ್ನು ಅನುಭವಿಸೋಣ;  ಆದರೆ ಇವೆಲ್ಲಕ್ಕಿಂತ ಅತ್ಯಂತ ಪ್ರಧಾನವಾದುದು ಭಗವಂತನ ಸಾಕ್ಷಾತ್ಕಾರ ಸುಖ. ಅದನ್ನು ಬಿಟ್ಟು ಉಳಿದ ಸಣ್ಣಪುಟ್ಟ  ಪದಾರ್ಥಗಳೇ ಬಹಳ ಮುಖ್ಯ ಎಂದು ಭ್ರಮಿಸಿ ಜೀವನವನ್ನು ಕಳೆದುಬಿಡುವುದು ಬುದ್ಧಿವಂತಿಕೆಯಲ್ಲ.  ಹಾಗೊಂದು ವೇಳೆ ನಡೆದರೆ ಅದು, ತಂಬೂರವನ್ನು ಬಿಟ್ಟು ಕಂಬಳಿಯ ನೂಲೇ ಮುಖ್ಯ ಎಂದುಕೊಂಡಂತೆ ಆಗುತ್ತದೆ  ಎಂಬುದು ಜ್ಞಾನಿಗಳ ಹೃದಯದ ಮಾತು. 

ಸೂಚನೆ:  03/08/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.