Sunday, August 25, 2019

ಮೋಕ್ಷ ಎಲ್ಲರಿಗೂ ಬೇಕೇ? (Moksha ellarigu beke?)

ಲೇಖಕರು:  ನಾಗರಾಜ ಗುಂಡಪ್ಪ



ಮೋಕ್ಷವೆಂಬ ಪದ ಬಹಳ ಪರಿಚಿತವಾದರೂ, ಮೋಕ್ಷವು ಯಾರೋ ಕೆಲವು ಅಧ್ಯಾತ್ಮಪರರಾದ ವ್ಯಕ್ತಿಗಳಿಗೆ ಮೀಸಲಾದ ವಿಷಯ ಎನ್ನುವ ಅಭಿಪ್ರಾಯ ಜನಮನದಲ್ಲಿದೆ. ಆದರೆ, ಇದು ಎಲ್ಲರಿಗೂ ಅಗತ್ಯವೇ ಎನ್ನುವುದು ಪರಿಶೀಲನಾರ್ಹವಾದ ಪ್ರಶ್ನೆ.

ಮೋಕ್ಷ ಪದದ ಅರ್ಥ ಬಿಡುಗಡೆ ಎಂದು. ಯಾವುದರಿಂದ ಬಿಡುಗಡೆ? ಅವಿದ್ಯಾಕಾಮಕರ್ಮ ಸಂಕೋಲೆಯ ಬಂಧನದಿಂದ ಬಿಡುಗಡೆ. ಅವಿದ್ಯೆ ಎಂದರೆ ಅಜ್ಞಾನ; ಅದರಿಂದಾಗಿ ಬಗೆಬಗೆಯಾದ ಕಾಮನೆಗಳುಂಟಾಗಿ ಅವುಗಳನ್ನು ಪೂರ್ಣಗೊಳಿಸಿಕೊಳ್ಳುಲು ಕರ್ಮಗಳಲ್ಲಿ ತೊಡಗಬೇಕಾಗುತ್ತದೆ ಮತ್ತು ಈ ಕರ್ಮಗಳೇ ನಮ್ಮ ಜೀವನವನ್ನು ಬಂಧಿಸುತ್ತವೆ. ಉದಾಹರಣೆಗೆ, ನಾವು ಅಂತರ್ಮಗ್ನರಾಗಿ ಸುಮ್ಮನೆ ಇಚ್ಛೆ ಇರುವಷ್ಟು ಕಾಲ ಕುಳಿತಿರೋಣ ಎಂದುಕೊಳ್ಳುತ್ತೇವೆಂದಿಟ್ಟುಕೊಳ್ಳೋಣ. ಹೀಗೆ ಕುಳಿತಿರಲು ಸಾಧ್ಯವಿಲ್ಲ ಏಕೆಂದರೆ ಮನೆಯ ಕೆಲಸಗಳೋ ಅಥವಾ ಶಾಲಾ, ಕಾಲೇಜು, ಆಫೀಸಿನ ಕೆಲಸಗಳು ನಮ್ಮನ್ನು ಎಬ್ಬಿಸುತ್ತವೆ. ನಮ್ಮನ್ನು ಸ್ವತಂತ್ರರಾಗಿ ನಮ್ಮ ಇಚ್ಛೆಗನುಸಾರವಾದ ಸ್ಥಿತಿಯಲ್ಲಿರಲು ಬಿಡುವುದಿಲ್ಲ. ಹೀಗೆ ಇನ್ನೂ ಅನೇಕಾನೇಕ ಕಾಮ-ಕರ್ಮಗಳ ಅವಶ್ಯಕತೆಗಳಿಗನುಸಾರವಾಗಿ ನಾವು ಜೀವನಕ್ರಮ ಇಟ್ಟುಕೊಳ್ಳಬೇಕಾಗುತ್ತದೆ.

ಈ ಬಂಧನದಿಂದ ಬಿಡುಗಡೆ ಹೇಗೆ?

ತಾತ್ಕಾಲಿಕ ಬಿಡುಗಡೆ ಕಾಮನೆಗಳ ತೃಪ್ತಿಯಿಂದ ಉಂಟಾಗುತ್ತದೆ. ಆದರೆ, ಎಲ್ಲ ಕಾಮನೆಗಳನ್ನು ಈಡೇರಿಸಿಕೊಂಡೇ ಬಿಡುಗಡೆಯನ್ನು ಪಡೆಯಲು ಸಾಧ್ಯವಿಲ್ಲ ಏಕೆಂದರೆ, ಅವುಗಳನ್ನು ಈಡೇರಿಸುವ ಪ್ರಯತ್ನದಲ್ಲಿ ಮತ್ತಷ್ಟು ಕಾಮನೆಗಳು ಮತ್ತು ಕರ್ಮಗಳು ಉಂಟಾಗುತ್ತವೆ. ಆದುದರಿಂದ ಕಾಮನೆಗಳ ಸಮೂಹವನ್ನು ಉತ್ಪತ್ತಿ ಮಾಡುವ ಅಜ್ಞಾನವನ್ನೇ ತೊಡೆದು ಹಾಕುವುದರಿಂದ ಶಾಶ್ವತವಾದ ಬಿಡುಗಡೆ ಅಂದರೆ ಆತ್ಯಂತಿಕ ಮೋಕ್ಷವು ಸಿಗುತ್ತದೆ.

ಕಾಮನೆಗಳು ಯಾವಾಗ ತೃಪ್ತಿಗೊಳ್ಳುತ್ತವೆ ಎಂದರೆ ಅದನ್ನು ಧರ್ಮದ ಚೌಕಟ್ಟಿನಲ್ಲಿ ಅನುಭವಿಸಿದಾಗ. ಜೀವನದ ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳಲ್ಲಿ, ಅರ್ಥ ಕಾಮಗಳು ಧರ್ಮ-ಮೋಕ್ಷಗಳ ಚೌಕಟ್ಟಿನಲ್ಲಿರಬೇಕೆಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ಉದಾಹರಣೆಗೆ, ನಮಗೆ ಮಾವಿನಹಣ್ಣು ತಿನ್ನಬೇಕೆನ್ನುವ ಕಾಮನೆಯುಂಟಾದರೆ ಶರೀರದ ಸುಸ್ಥಿತಿ ಎನ್ನುವ ಧರ್ಮವನ್ನು ಸಂಪಾದಿಸಬೇಕು. ನಂತರ ಮಾವಿನಹಣ್ಣು ಎನ್ನುವ ಅರ್ಥವನ್ನು ಸಂಪಾದಿಸಬೇಕು. ನಂತರ ಮಾವಿನಹಣ್ಣನ್ನು ತಿಂದು ಆಸ್ವಾದಿಸಿದರೆ, ಕಾಮನೆ ಪೂರ್ಣವಾಗುತ್ತದೆ ಮತ್ತು ಕಾಮನೆಯಿಂದ ಬಿಡುಗಡೆ ಅಥವಾ ಮೋಕ್ಷ ಸಿಗುತ್ತದೆ. ಈ ಬಿಡುಗಡೆ ತಾತ್ಕಾಲಿಕವಾದರೂ, ಅಂದರೆ, ಮಾವಿನ ಹಣ್ಣನ್ನು ತಿನ್ನಬೇಕೆಂಬ ಆಸೆ ಪುನಃ ಉಂಟಾದರೂ ಸಹಾ, ಜೀವನಕ್ರಮದಲ್ಲೇ ಯಾವಾಗಲೂ ಧರ್ಮವನ್ನೇ ಎಲ್ಲಕ್ಕೂ ಪೂರ್ವಭಾವಿಯಾಗಿಟ್ಟುಕೊಂಡಿದ್ದರೆ ಒಂದು ಹಂತದ ನಂತರ ಈ ಕಾಮನೆಗಳ ಒತ್ತಡ ಬಾಧಿಸುವುದಿಲ್ಲ. ಉದಾಹರಣೆಗೆ, ಮಕ್ಕಳಾಗಿದ್ದಾಗ ಚೆನ್ನಾಗಿ ಆಟಗಳನ್ನು ಆಡಿ ತೃಪ್ತಿ ಹೊಂದಿದ್ದರೆ, ದೊಡ್ಡವರಾದ ಬಳಿಕ ಆಟಗಳನ್ನು ಆಡಬೇಕೆನಿಸುವುದಿಲ್ಲ. ಹೀಗೆ ಧರ್ಮಮಯವಾಗಿ ಜೀವನ ಮಾಡಿದಾಗ ಬಹುತೇಕ ಕಾಮನೆಗಳು ಪೂರ್ಣಗೊಂಡು ತೃಪ್ತಿಯಿಂದ ಮೋಕ್ಷದ ಹಾದಿಯಲ್ಲಿರಬಹುದು.

ಆತ್ಯಂತಿಕ ಮೋಕ್ಷಕ್ಕಾಗಿ ಆತ್ಮ ಸಾಧನೆಯಿಂದ ಒಳಗೆ ಬೆಳಗುವ ಜ್ಯೋತಿಯ ದರ್ಶನ ಆಗಬೇಕು. ಆತ್ಮಜ್ಞಾನಿಯು ಜ್ಞಾನಬಲದಿಂದ ಅವಿದ್ಯಾಕಾಮಕರ್ಮಗಳ ರಾಶಿಯನ್ನು ಭಸ್ಮ ಮಾಡಿ, ಎಲ್ಲ ಕಾಮನೆಗಳಿಂದಲೂ ಬಿಡುಗಡೆ ಪಡೆಯುತ್ತಾನೆ.

ಇನ್ನು ಆರಂಭದ, ಮೋಕ್ಷ ಎಲ್ಲರಿಗೂ ಬೇಕೇ ಎನ್ನುವ ಪ್ರಶ್ನೆಗೆ ಉತ್ತರ ಹೌದು, ಎಲ್ಲರಿಗೂ ಅವಶ್ಯ ಎಂದೇ. ಆತ್ಮ ಸಾಧನೆ ಮತ್ತು ಆತ್ಯಂತಿಕ ಮೋಕ್ಷ ಬಯಸದಿದ್ದರೂ, ಬಂಧನ ಇರುವುದರಿಂದ ಎಲ್ಲರೂ ತಾತ್ಕಾಲಿಕ ಬಿಡುಗಡೆಯನ್ನಂತೂ ಬಯಸಿಯೇ ಬಯಸುತ್ತಾರೆ. ಉದಾಹರಣೆಗೆ, ಔತಣಕೂಟಕ್ಕೆ ಹೋದರೆ, ಅಲ್ಲಿ ತೃಪ್ತಿಹೊಂದಿ, ಆಸೆಯು ಪೂರ್ಣವಾಗಬೇಕೆಂದು ಬಯಸುತ್ತಾರೆಯೇ ಹೊರತು ಅತೃಪ್ತಿಯಿಂದ ಹಿಂದಿರುಗಬೇಕೆಂದು ಯಾರೂ ಬಯಸುವುದಿಲ್ಲ. ಹೀಗೆ ತೃಪ್ತಿಯಿಂದ ದೊರೆಯುವ ತಾತ್ಕಾಲಿಕ ಮೋಕ್ಷವು ಎಲ್ಲರೂ ಬಯಸುವಂತಹಾದ್ದಾಗಿದೆ. ವಿವೇಕದಿಂದ ಕಾಮನೆಗಳನ್ನು ಇತಿಮಿತಿಗೊಳಿಸಿಕೊಂಡು ಧರ್ಮದಿಂದೊಡಗೂಡಿ ತೃಪ್ತ ಜೀವನ ನಡೆಸುತ್ತಿದ್ದರೆ ಒಂದು ದಿನ ಆತ್ಮ ಸಾಧನೆಯಲ್ಲಿ ಅಭಿರುಚಿಯುಂಟಾಗಿ ಆತ್ಯಂತಿಕ ಮೋಕ್ಷವೇ ದೊರಕುವುದು ಅಸಾಧ್ಯವೇನಲ್ಲಾ. ಹೀಗೆ ಎಲ್ಲರೂ ಮೋಕ್ಷದ ಹಾದಿಯಲ್ಲಿದ್ದು ಕಾಲಕ್ರಮದಲ್ಲಿ ಆತ್ಯಂತಿಕ ಮೋಕ್ಷವನ್ನೇ ಪಡೆಯುವಂತಾಗಲೆಂದು ಆಶಿಸೋಣ.

ಸೂಚನೆ:  24/08/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.