Saturday, August 3, 2019

ನಮ್ಮ ಜೀವನಕ್ಕೆ ಯೋಗ ಅಗತ್ಯವಾಗಿರಬೇಕು (Namma jeevanakke yoga agatyavaagirabeku)

ಲೇಖಕರು: ಡಾ. ಎಂ. ಜಿ. ಪ್ರಸಾದ್, ಅಮೇರಿಕಾ


ವಿಶ್ವದ ಎಲ್ಲೆಡೆಯಲ್ಲಿಯೂ ಮನುಷ್ಯನು ಜೀವನದಲ್ಲಿ ಸುಖ ಹಾಗೂ ಸಂತೋಷವನ್ನು  ಪಡೆಯಲು ಪ್ರಯತ್ನಿಸುತ್ತಿರುತ್ತಾನೆ. ಇದಕ್ಕಾಗಿ ಬಹಳ ಹಿಂದಿನ ಕಾಲದಿಂದಲೂ ಜೀವನ ವಿಧಾನವನ್ನು ರೂಪಿಸುವ ಮಾರ್ಗಕ್ಕಾಗಿ ಅನ್ವೇಷಣೆ ನಡೆದಿದೆ. ಇಂತಹ ಅನ್ವೇಷಣೆಗಳ ಇತಿಹಾಸದಲ್ಲಿ ಸನಾತನ ಧರ್ಮದ ಋಷಿಗಳಿಂದ ರೂಪುಗೊಂಡ ಯೋಗಮಾರ್ಗವು ವಿಶ್ವವಿಖ್ಯಾತವಾಗಿದೆ.

ಯೋಗವೆಂದರೇನು?

'ಯೋಗ' ಎನ್ನುವ ಪದ ' ಯುಜ್ ' ಎಂದರೆ ' 'ಕೂಡಿಸು' ಎಂಬ ಧಾತುವಿನಿಂದಾಗಿದೆ. ಇಲ್ಲಿ 'ಕೂಡಿಸು' ಎಂದರೆ ಸಾಧಕನನ್ನು ಗುರಿಯೊಂದಿಗೆ ಒಂದುಗೂಡಿಸುವುದು. ಶ್ವೇತಾಶ್ವತರ ಮತ್ತು ಕಠೋಪನಿಷತ್ತುಗಳಿಂದ ಆರಂಭಿಸಿ ಭಗವದ್ಗೀತಾ ಹಾಗು ಪಾತಂಜಲ ದರ್ಶನದ ಮೂಲಕ ಯೋಗದ ತತ್ವ ಮತ್ತು ಅನುಷ್ಠಾನಗಳನ್ನು ಋಷಿಗಳು ನಮಗೆ ನೀಡಿದ್ದಾರೆ. ಯೋಗವೆಂದರೇನು ಎಂಬ ಪ್ರಶ್ನೆಗೆ ಕೆಲವು ಉತ್ತರಗಳು ಕೆಳಗಿನಂತಿವೆ. 

(೧) ಯೋಗವೆಂದರೆ ಚಿತ್ತದ (ಮನಸ್ಸಿನ) ವೃತ್ತಿಯನ್ನು (ಓಡಾಟಗಳನ್ನು) ಹತೋಟಿ ಯಲ್ಲಿಟ್ಟುಕೊಳ್ಳುವುದು. 
(೨) ಯೋಗವೆಂದರೆ ದುಃಖದ ಜೊತೆ ಸಂಬಂಧವನ್ನು ಕಡಿಯುವುದು. 
(೩) ಯೋಗವೆಂದರೆ ಎಲ್ಲವನ್ನು ಸಮತ್ವದಿಂದ ನೋಡುವುದು. 
(೪) ಯೋಗವೆಂದರೆ ಜೀವಾತ್ಮ (ತನ್ನ) ಹಾಗೂ ಪರಮಾತ್ಮನ ಒಂದುಗೂಡುವಿಕೆ (ಅಂದರೆ ಪರಮಾತ್ಮನ ದರ್ಶನ ಹಾಗು ಅನುಭವ).

ಯೋಗಸಾಧನೆಯಲ್ಲಿ ಮನಸ್ಸಿನ ಪಾತ್ರ ಬಹಳ ದೊಡ್ಡದು. ನಮ್ಮ ಜೀವನದಲ್ಲಿ ಉಲ್ಲಾಸಕ್ಕೆ ಹಾಗೂ ಕೊರಗುವಿಕೆಗೆ ಮನಸ್ಸೇ ಪ್ರಧಾನ ಕಾರಣ. ಆದ್ದರಿಂದಲೇ ಯೋಗದ ಉಪಯೋಗ ಮನುಷ್ಯರೆಲ್ಲರಿಗೂ ಆಗಲೆಂದು ಪತಂಜಲಿ ಮಹರ್ಷಿಗಳು ವಿಶ್ವ ವಿಖ್ಯಾತವಾದ  'ಅಷ್ಟಾಂಗ ಯೋಗ' ಕ್ರಮ ನೀಡಿದ್ದಾರೆ. 

ಅಷ್ಟಾಂಗಯೋಗವೆಂದರೇನು? 

ಯೋಗಾಚಾರ್ಯರಾದ ಮಹರ್ಷಿ ಪತಂಜಲಿ ನೀಡಿರುವ ೧೯೬ ಯೋಗಸೂತ್ರ ಗಳಲ್ಲಿ ನಿರೂಪಿತವಾಗಿರುವ ಎಂಟು ಅಂಗಗಳಿಂದ ಕೂಡಿರುವುದೇ 'ಅಷ್ಟಾಂಗಯೋಗ'.ಇದರ ಉದ್ದೇಶವೇ ಜೀವನವನ್ನು ಉಲ್ಲಾಸದಿಂದ ನಡೆಸಿ ಮೂಲಲಕ್ಷ್ಯವಾದ ಪರಮಾತ್ಮನ ದರ್ಶನಾನುಭವ ಪಡೆಯುವುದು. ಮೊದಲನೆಯದಾದ 'ಯಮ' ಎಂಬ ಅಂಗದಲ್ಲಿರುವ  'ಅಹಿಂಸೆ, ಸತ್ಯ, ಕದಿಯದಿರುವುದು, ಬ್ರಹ್ಮಚರ್ಯ ಹಾಗು ಅಪರಿಗ್ರಹ' ಗಳ ಆಚರಣೆಗಳಿಂದ  ಮನಸ್ಸನ್ನು ಶುದ್ಧಸ್ಥಿತಿಯಲ್ಲಿಟ್ಟುಕೊಳ್ಳುವುದು.ಎರಡನೆಯದಾದ 'ನಿಯಮ' ದಲ್ಲಿ 'ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರಪ್ರಣಿಧಾನ' ಗಳ ಆಚರಣೆಯಿಂದ  ಮನಸ್ಸು ಯೋಗಮಾರ್ಗದಲ್ಲಿ ಮುಂದುವರೆಯಲು ಅಣಿಯಾಗುತ್ತದೆ. ಮೂರನೆಯ ಅಂಗವಾದ 'ಆಸನ' ಗಳಿಂದ ಮನಸ್ಸು ಹಾಗೂ ದೇಹಕ್ಕೆ ಸ್ಥಿರತೆ ಮತ್ತು ಸುಖವುಂಟಾಗುತ್ತದೆ. ಆಸನ ಮಾಡುವುದನ್ನೇ ಯೋಗ ಎಂದುಕೊಳ್ಳಬಾರದು. ನಾಲ್ಕನೆಯದಾದ 'ಪ್ರಾಣಾಯಾಮ' ದ ಅಭ್ಯಾಸದಿಂದ ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ಹೊಂದಿ ಯೋಗದ  ಉನ್ನತ ಮಟ್ಟಕ್ಕೆ ಹೋಗಲನುವಾಗುವುದು. 

ಐದನೆಯ ಅಂಗವಾದ 'ಪ್ರತ್ಯಾಹಾರ' ದಲ್ಲಿ ಇಂದ್ರಿಯಗಳ ಮೂಲಕ ಮನಸ್ಸನ್ನು ಆಕರ್ಷಿಸುವ  ವಸ್ತುಗಳಿಂದ ಮನಸ್ಸನ್ನು ಹಿಂತೆಗೆದುಕೊಳ್ಳುವ ಶಕ್ತಿಯನ್ನು ಪಡೆದುಕೊಳ್ಳುವುದು. ಆರನೆಯದಾದ'ಧಾರಣೆ' ಯಲ್ಲಿ ಒಳಸೆಳೆದ ಮನಸ್ಸನ್ನು ಪರಮಾತ್ಮನಲ್ಲಿ ನಿಲ್ಲಿಸುವುದು. ಏಳನೆಯದಾದ 'ಧ್ಯಾನ' ದಲ್ಲಿ ಮನಸ್ಸನ್ನು ನಿರಂತರವಾಗಿ ಮತ್ತು ಏಕಾಗ್ರವಾಗಿ ಪರಮಾತ್ಮನಲ್ಲಿ ಇರಿಸುವುದು. ಎಂಟನೆಯದಾದ 'ಸಮಾಧಿ' ಯಲ್ಲಿ ತಾನು ಪರಮಾತ್ಮನಲ್ಲಿ ಒಂದಾಗಿ ಶಾಂತಿ ಹಾಗೂ ಆನಂದದ ಇಂದ್ರಿಯಾತೀತ ಅವರ್ಣನೀಯ ಸ್ಥಿತಿಯಲ್ಲಿರುವುದು.  

ಮಹಾಯೋಗಿಗಳಾದ ಶ್ರೀರಂಗ ಮಹಾಗುರುಗಳ ಮಾತಿನಲ್ಲಿ "ಭಾರತೀಯರ ಆಹಾರ, ವಿಹಾರ, ಆಚಾರ-ವಿಚಾರ, ಉಡಿಗೆ-ತೊಡಿಗೆ, ನಡೆ-ನುಡಿ, ಪುಣ್ಯ ಪಾಪ ವಿವೇಚನೆ, ವಿದ್ಯೆ, ಸಾಹಿತ್ಯ, ಸಂಗೀತ ಮುಂತಾದ ಕಲೆಗಳು, ರಾಜನೀತಿ, ಕರ್ಮಮೀಮಾಂಸೆ, ಸಂಸ್ಕಾರ ಮುಂತಾದವುಗಳೆಲ್ಲವೂ ಅಷ್ಟಾಂಗಯೋಗದಿಂದ ಹಾಸುಹೊಕ್ಕಾಗಿ ಹೆಣೆಯಲ್ಪಟ್ಟಿವೆ".

ಸಾರಾಂಶ 

ಮನುಷ್ಯನ ಜೀವನದಲ್ಲಿ ಮನಸ್ಸನ್ನು ಉಲ್ಲಾಸದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಅದು ಅಷ್ಟು ಸುಲಭವಲ್ಲ. ಅಷ್ಟಾಂಗಯೋಗ ಸಾಧನೆಯಿಂದ ಮನಸ್ಸನ್ನು ಉಲ್ಲಾಸದಲ್ಲಿಟ್ಟುಕೊಳ್ಳುವುದಷ್ಟೇ ಅಲ್ಲದೆ ಜೀವನದ ಮೂಲಲಕ್ಷ್ಯವಾದ ಪರಮಾತ್ಮನ ದರ್ಶನ ಹಾಗು ಅನುಭವವನ್ನು ಪಡೆಯುವುದು ಮನುಷ್ಯರೆಲ್ಲರಿಗೂ ಸಾಧ್ಯ.   

ಸೂಚನೆ:  03/08/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.