Tuesday, August 6, 2019

ನೂರ್ಕಾಲ ಬಾಳುವ ಬಯಕೆ (Noorkala baluva bayake)

ಲೇಖಕರು: ಡಾ|| ಕೆ.ಎಸ್. ಕಣ್ಣನ್


ಕೆಲಸ ಮಾಡುತ್ತಿರಬೇಕು, ಸುಮ್ಮನಿರುವುದಲ್ಲ – ಎಂಬುದು ಸರಿಯೇ. ಆದರೆ ಎಷ್ಟು ಕಾಲ? ಇರುವಷ್ಟು ಕಾಲವೂ!

ಈಶೋಪನಿಷತ್ತು ಹೇಳುವುದು “ನೂರ್ಕಾಲ”: ಜಿಜೀವಿಷೇತ್ ಶತಂ ಸಮಾಃ – ಎಂದು. ನೂರು ವರ್ಷ ಬದುಕಬೇಕು. ಮಾತ್ರವಲ್ಲ, ಅದನ್ನು ಬಯಸಬೇಕು- ಎಂದು! ಅರ್ಥಾತ್, ಆಸೆಪಟ್ಟು ಬಾಳಬೇಕು!

ಹಿರಿಯರಿಗೆ ವಂದಿಸಿದಾಗಲೆಲ್ಲ ಬರುವ ಆಶೀರ್ವಾದ: ದೀರ್ಘಾಯುಷ್ಮಾನ್ ಭವ! ದೀರ್ಘಕಾಲ ಬಾಳು.
ಜೀವನದಲ್ಲಿ ಏಳು-ಬೀಳುಗಳನ್ನು ಸಾಕಷ್ಟು ಕಂಡ ಮೇಲೆ ಎಷ್ಟೋ ವೇಳೆ, “ಸಾಕಪ್ಪಾ ಈ ಜೀವನ. ಈ ಜೀವನಪಯಣ ಅದೆಂದು ಮುಗಿಯುವುದೋ?” ಎಂಬ ಬೇಸರವೂ ಬಂದೀತು. ಎಷ್ಟೋ ಮಂದಿಗೆ ಜೀವನವನ್ನು ಕಡೆಗಾಣಿಸೋಣ – ಎಂಬ ಆತ್ಮಹತ್ಯೆಯ ಚಿಂತನವೂ ಬಂದೀತು! ಈ ಜುಗುಪ್ಸೆ ಆರೋಗ್ಯದ ಲಕ್ಷಣವಲ್ಲ. ಆರೋಗ್ಯವಿದೆಯೆಂದರೆ ಜೀವನೋತ್ಸಾಹವಿದೆಯೆಂದೇ. ಗುರಿಮುಟ್ಟುವವರೆಗೂ ಪಯಣ. ಜೀವನದಲ್ಲಿ ಮಾಡಬೇಕಾದದ್ದು ಸ್ವಲ್ಪವೇನಲ್ಲವಲ್ಲ!

ಆತ್ಮಜ್ಞಾನವು ಬರುವವರೆಗೂ ಕರ್ತವ್ಯ ಬಿಡಲಾಗದು. ಕರ್ತವ್ಯಗಳನ್ನು ಮಾಡುತ್ತಿರುವಾಗ ಕರ್ಮಬಂಧವೂ ಜೊತೆಗೇ ಏರ್ಪಡುತ್ತಿರುವುದಲ್ಲಾ ಎಂಬ ಪ್ರಶ್ನೆ ಬರಬಹುದು. ಅದಕ್ಕೂ ಉತ್ತರವಿದೆ. ಕರ್ಮ ಮಾಡು, ಆದರೆ ಕರ್ಮದ ಲೇಪ (ಅಂದರೆ ಅಂಟು) ಉಂಟಾಗದಂತೆ ಮಾಡು – ಎಂಬುದು.

ಅಂಟಿಕೊಂಡರೆ ಬಂಧ. “ಅಂಟಿದರೂ ಅಂಟದಂತಿರಬೇಕು!”. ಅದು ಹೇಗೆ ಸಾಧ್ಯ? ಅದಕ್ಕೊಂದು ಹೋಲಿಕೆಯಿದೆ. ಕಮಲವು ಸದಾ ನೀರಿನಲ್ಲೇ ಇರುವುದೇ ಆದರೂ ಅದರ ಎಲೆಗೆ ನೀರು ಅಂಟದು. ಗೀತೆಯಲ್ಲೂ ಈ ಉಪಮೆಯಿದೆ. ಹಲವು ಉಪನಿಷತ್ತುಗಳಲ್ಲೂ ಇದೆ.

ಕಮಲಕ್ಕೆ ನೀರೇಕೆ ಅಂಟುವುದಿಲ್ಲ? – ಎಂಬುದಕ್ಕೆ ಶ್ರೀರಂಗಮಹಾಗುರುಗಳು ಒಂದು ವಿಶಿಷ್ಟವಾದ ವಿವರಣೆಯನ್ನುಕೊಟ್ಟಿದ್ದರು:  “ಕಮಲದ ಎಲೆಗೆ ನೀರು ಅಂಟದಿರುವ ಕಾರಣ ಅದರಲ್ಲಿರುವ ವಿಶೇಷವಾದ ಸ್ನೇಹ!” ಮಿತ್ರಭಾವಕ್ಕೆ, ಪ್ರೀತಿಗೆ, ನಾವು ಸ್ನೇಹ ಎನ್ನುತ್ತೇವೆ. ಆದರೆ ಸ್ನೇಹ ಎಂಬುದಕ್ಕೆ ಮತ್ತೊಂದು ಅರ್ಥವೂ ಇದೆ. ಅದು ಸಂಸ್ಕೃತದಲ್ಲಿ ಪ್ರಸಿದ್ಧ. ಸ್ನೇಹ ಎಂದರೆ ಎಣ್ಣೆ ಅಥವಾ ಜಿಡ್ಡು. ಕಮಲದ ಎಲೆಯನ್ನು ಮುಟ್ಟಿ ನೋಡಿದರೂ ಇದು ಗೊತ್ತಾಗುತ್ತದೆ. ಅಲ್ಲಿ ಕಿಂಚಿತ್ತಾದ ಎಣ್ಣೆಯಿದೆ. ಎಂದೇ ಅದಕ್ಕೆ ನೀರು ಅಂಟದು. ಶ್ರೀರಂಗಮಹಾಗುರುಗಳು ಪ್ರತಿಭಾಸಂಪನ್ನರು. ಎಂದೇ ’ಸ್ನೇಹ’ ಎಂಬ ಪದದ ಇನ್ನೊಂದು ಅರ್ಥವನ್ನೂ ಬಳಸಿದ್ದರು.

“ಭಗವಂತನಲ್ಲಿ ಸ್ನೇಹವನ್ನು, ಎಂದರೆ ಪ್ರೀತಿಯನ್ನು, ಹೊಂದಿದ್ದಲ್ಲಿ ಅಂಟಿಯೂ ಅಂಟದಂತಿರಬಹುದು” ಎಂದು ಅವರು ವಿವರಿಸಿದ್ದರು. ನೀರಿನಲ್ಲಿಯೇ ವಾಸ, ನೀರಿನಿಂದಲೇ ತ್ರಾಣ. ನೀರಿಲ್ಲವೋ ಪ್ರಾಣವೂ ಇಲ್ಲ ಕಮಲಕ್ಕೆ! ಆದರೂ ನೀರಿನ ಅಂಟಿಲ್ಲ ಕಮಲಪತ್ರಕ್ಕೆ! ಕರ್ಮಮಾಡಿಯೇ ಜೀವನ. ಮರ್ಮವರಿತು ಮಾಡಿದರೆ ಕರ್ಮಲೇಪವಿಲ್ಲ. ಉತ್ಸಾಹದ ಬಾಳಾಟ, ಅಂಟದ ಬಾಳಾಟ. “ನ ಕರ್ಮ ಲಿಪ್ಯತೇ” – ಎಂಬುದೂ ಇದೇ ಉಪನಿಷತ್ತಿನ ಮಾತೇ.

ಸೂಚನೆ: 06/08/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.