Wednesday, September 11, 2019

ಭಾರತೀಯ ಜೀವನ ವ್ಯವಸ್ಥೆ (Bharatheeya jeevana vyavasthe)

ಲೇಖಕರು:  ಡಾ.ಆರ್. ಮೋಹನ.



ಜೀವನದ ಪ್ರತಿಯೊಂದು ಹಂತವೂ ವಿಶೇಷವೇ. ಬಾಲ್ಯದಲ್ಲಿ ಆಟ  ಪಾಠಗಳ ಸಡಗರ; ಯೌವನದ ಸೊಬಗು ಎಲ್ಲರಿಗೂ ಚಿರಸ್ಮರಣೀಯವೆ; ಮುಪ್ಪು ಬೇಡವೆಂದರೂ ಬಂದೆ ಬಿಡುತ್ತೆ. ಹಳೆಯ ಸ್ಮರಣೆಗಳು, ಖಾಯಲೆಗಳ ಚಿಕಿತ್ಸೆಯಷ್ಟೇ ಉಳಿಯುವುದು. ಮೃತ್ಯು ಜೀವನದ ಕೊನೆಯ ಸತ್ಯ. ಆದರೂ ಈ ಸತ್ಯವನ್ನು ಎದುರಿಸುವ ಧೈರ್ಯ ಯಾರಿಗೂ ಇರುವುದಿಲ್ಲ. ಬೇಡ-ಬೇಡವೆಂದರೂ ಬಲವಂತವಾಗಿ ಶಾಲೆಗ ಮಕ್ಕಳನ್ನು ಎಳೆದೊಯ್ಯುವ ಹಾಗೆ ಮೃತ್ಯುವೂ ನಮ್ಮನ್ನು ಕೊಂಡೊಯ್ಯುತ್ತದೆ. ಆ ಸತ್ಯವನ್ನು ಎದುರಿಸುವ ಧೈರ್ಯ ಇಲ್ಲದ ಕಾರಣ ಮುಪ್ಪು ಕಹಿಯೆಂದನ್ನಿಸುತ್ತದೆ. ಮಕ್ಕಳ-ಮೊಮ್ಮಕ್ಕಳ ಬಾಲ್ಯ-ತಾರುಣ್ಯಗಳನ್ನು ನೋಡುತ್ತ ಈ ಕಹಿಯನ್ನು ಕೊಂಚ ಮರೆಯುವ ಪ್ರಯತ್ನವೂ ಮಾಡುತ್ತಾರೆ. ಪಾರಿವಾರಿಕ ಸಂಬಂಧಗಳು ಸಡಿಲವಾಗಿರುವ ಪಾಶ್ಚಾತ್ಯ ದೇಶಗಳಲ್ಲಿ ಮುಪ್ಪಿನ ಕಹಿಗೆ ಬೆಲ್ಲ ನೀಡಲು ಮಕ್ಕಳು-ಮರಿಮಕ್ಕಳು ಇರುವುದಿಲ್ಲ. ಹಾಗಾಗಿ ‘ನಾವು ಮನಸ್ಸಿನಿಂದ ಯಾವಾಗಲೂ ಯುವಕರೇ - ಕೊನೆಯ ಘಳಿಗೆಯವರೆಗೂ ಮೋಜು ಮಾಡಿ - ಮುಪ್ಪನ್ನು ಸ್ವೀಕರಿಸಬೇಡಿ’ ಎಂಬ ಸಿದ್ಧಾಂತ. 

ಭಾರತೀಯರು ಮುಪ್ಪನ್ನು ಎದುರಿಸುತ್ತಿದ ಬಗೆ ರೋಮಾಂಚಕಾರಿಯಾಗಿದೆ.  ಮಹಾಕವಿ ಕಾಳಿದಾಸ  ಹೇಳುತ್ತಾನೆ    “ ಬಾಲ್ಯದಲ್ಲಿ ವಿದ್ಯೆಗಳನ್ನು ಕಲಿತು, ಯೌವನದಲ್ಲಿ ವಿಷಯಸುಖವ ಭೋಗಿಸಿ, ಮುಪ್ಪಿನಲ್ಲಿ ಮುನಿಯಂತಿದ್ದು, ಕೊನೆಯಲ್ಲಿ  ಯೋಗಬಲದಿಂದ ಶರೀರವನ್ನು ಕಳಚಿ ಹಾಕುವರು” ಎಂದು. ಮುಪ್ಪಿನಲ್ಲಿ ಮುನಿಯಂತೆ ಶಾಂತವಾಗಿದ್ದರು; ಹಳೆಯ ಬಟ್ಟೆ ಕಳಚಿದಂತೆ ಅನಾಯಾಸವಾಗಿ ಶರೀರತ್ಯಾಗ ಮಾಡುತ್ತಿದ್ದರು.  ವಿಚಿತ್ರವಾಗಿ ಕಂಡರೂ ಇದು ಸತ್ಯವಾಗಿತ್ತು. ಅದರ ಗುಟ್ಟು ಭಾರತೀಯರು ಕಲ್ಪಿಸಿಕೊಂಡಿದ್ದ ಬ್ರಹ್ಮಚರ್ಯ- ಗೃಹಸ್ಥ- ವಾನಪ್ರಸ್ಥ - ಸನ್ಯಾಸ ಎಂಬ ನಾಲ್ಕು ಹಂತಗಳ ಜೀವನ ವ್ಯವಸ್ಥೆಯಲ್ಲಿ ಅಡಗಿದೆ ಎಂದು ಹೇಳುತ್ತಿದ್ದರು ಶ್ರೀರಂಗ ಮಹಾಗುರುಗಳು. ಮುಪ್ಪಿನಲ್ಲೂ ಮುನಿಯ ಮನಸ್ಥೈರ್ಯ ಇರಬೇಕಾದರೆ ಬಾಲ್ಯದಿಂದಲೇ ತಕ್ಕ ತರಭೇತಿ ಕೊಡುವ ವ್ಯವಸ್ಥೆಯಾಗಬೇಕು. ಬಟ್ಟೆಯಂತೆ ಶರೀರತ್ಯಾಗ ಮಾಡಲು, ಶರೀರವನ್ನು ಧರಿಸಿದವನು ಯಾರೆಂದು ಕಂಡಿರಬೇಕು. ಇದರ ಕಲಿಕೆ ಬ್ರಹ್ಮಚರ್ಯದಲ್ಲಿ. ಆ ಕಲಿಕೆಯನ್ನು ಮರೆಯದ ರೀತಿಯಲ್ಲಿ ಸಂಸಾರದ ಸುಖ ಭೋಗಿಸುವ ಕೌಶಲ್ಯ ಗೃಹಸ್ಥ ಜೀವನದಲ್ಲಿರಬೇಕು. ಹಾಗಾದರೆ ಮೃತ್ಯುಭಯವಿಲ್ಲ. ಮುನಿಯಂತೆ ಮೌನ, ಶಾಂತಿ, ನೆಮ್ಮದಿ ಉಂಟು.     

ಸೂಚನೆ: 10/09/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.