Sunday, September 29, 2019

ಸಾರ್ಥಕ ಜೀವನಕ್ಕೆ ಗೃಹಸ್ಥಾಶ್ರಮ (Saarthaka jeevanakke gruhasthaashrama)

ಲೇಖಕರು:  ನಾಗರಾಜ್ ಗುಂಡಪ್ಪ


ಭಾರತೀಯರ ಚಿಂತನೆಯ ವೈಶಿಷ್ಟ್ಯ, ಯೋಗ ಭೋಗಗಳ ಸಾಮರಸ್ಯದಿಂದೊಡಗೂಡಿದ ಜೀವನವೆಂಬುದನ್ನು ಹಿಂದಿನ ಲೇಖನದಲ್ಲಿ ಸ್ಮರಿಸಿಕೊಂಡಿದ್ದೆವು. ಇದಕ್ಕಾಗಿ ವ್ಯಕ್ತಿಯು ಬಾಲ್ಯದಲ್ಲಿ ಇಂದ್ರಿಯ ಸಂಯಮ ಹಾಗೂ ಕಟ್ಟುನಿಟ್ಟಿನ ನಿಯಮಗಳಿಂದ ಕೂಡಿದ ಬ್ರಹ್ಮಚರ್ಯಾಶ್ರಮದಲ್ಲಿ ಬ್ರಹ್ಮ ಜ್ಞಾನವನ್ನು ಸಂಪಾದಿಸುತ್ತಾನೆ. ನಂತರ, ಯೌವನಾವಸ್ಥೆಯಲ್ಲಿ ಸಂಪಾದಿಸಿದ ಜ್ಞಾನವು ಸಂತಾನದ ಮೂಲಕ ವೃದ್ಧಿಸಲಿ ಎಂದು ವಿವಾಹವಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸುತ್ತಾನೆ. ಗೃಹಸ್ಥಾಶ್ರಮದಲ್ಲಿ ಯೋಗಕ್ಕೆ ವಿರೋಧವಲ್ಲದ ಇಂದ್ರಿಯ ಸುಖಗಳಿಗೆ ಅವಕಾಶವುಂಟು.

ಗೃಹಸ್ಥಾಶ್ರಮಕ್ಕೆ ಪ್ರವೇಶ ದ್ವಾರವಾದ ವಿವಾಹದಲ್ಲಿಯೇ ಮುಂದಿನ ಜೀವನದ ರೂಪುರೇಷೆಗಳಿಗೆ ಅನುಗುಣವಾದ ಬುನಾದಿಯಿರುತ್ತದೆ. ಇಂದು ವಿವಾಹದಲ್ಲಿ ಕಾಶೀಯಾತ್ರೆ ಎನ್ನುವ ಅಂಗವುಂಟು. ಗುರುಕುಲವಾಸದ ನಂತರ, ಬ್ರಹ್ಮಚಾರಿಗೆ ಇಂದ್ರಿಯ ಸಂಯಮದ ಜೀವನ ಅಭ್ಯಾಸವಾಗಿ, ಜ್ಞಾನದ ಕಡೆಗೇ ಹೆಚ್ಚು ಆಕರ್ಷಣೆ ಇರುತ್ತದೆ. ಆದುದರಿಂದ ಜ್ಞಾನಪರನಾಗಿಯೇ ಇದ್ದು, ಅದರಲ್ಲಿಯೇ ಹೆಚ್ಚು ವಿಶೇಷತೆಯನ್ನು ಪಡೆಯುವುದಕ್ಕಾಗಿ ಕಾಶಿಗೆ ಹೋಗುತ್ತೇನೆ ಎಂದು ಅತ್ತ ಹೆಜ್ಜೆ ಇಟ್ಟಿರುತ್ತಾನೆ. ಆಗ ಕನ್ಯಾಪಿತನು ಬೇಡಪ್ಪಾ, ನನ್ನ ಬಳಿ ಜ್ಞಾನವನ್ನು ಸಂತತಿಯ ರೂಪದಲ್ಲಿ ವಿಸ್ತಾರಗೊಳಿಸುವುದಕ್ಕೆ ಯೋಗ್ಯಳಾದ ಕನ್ಯೆಯಿದ್ದಾಳೆ, ಆಕೆಯನ್ನು ವಿವಾಹವಾಗಿ ಆಕೆಯನ್ನೂ ಜ್ಞಾನಿಯನ್ನಾಗಿ ಮಾಡಿ, ಆಕೆಯಲ್ಲಿ ಸಂತತಿಯನ್ನು ಪಡೆದು ಜ್ಞಾನವು ಸಂತಾನದ ಮೂಲಕವೂ ವಿಸ್ತಾರವಾಗುವಂತೆ ಮಾಡು ಎಂದು ಒಲಿಸಿ ತನ್ನ ಕನ್ಯೆಯನ್ನು ಧಾರೆ ಎರೆದು ಕೊಡುತ್ತಾನೆ. ಇಂದು ನಿಜವಾದ ಗುರುಕುಲವಾಸ, ಜ್ಞಾನ ಪ್ರಾಪ್ತಿ ಹಾಗೂ ಕಾಶಿಗೆ ಹೊರಡಬೇಕೆಂಬ ನೈಜವಾದ ಉದ್ದೇಶವಿಲ್ಲದೇ, ಕಾಶೀಯಾತ್ರೆ ಪದ್ಧತಿಯು ಕೇವಲ ಅನುಕರಣೆಯಾಗಿ ಉಳಿದುಕೊಂಡಿದ್ದರೂ ಸಹಾ, ತಾನು ಜ್ಞಾನಿಯಾಗಿರಬೇಕಾಗಿತ್ತು, ಜ್ಞಾನವನ್ನು ಕನ್ಯೆಯಲ್ಲಿ ಮತ್ತು ಸಂತತಿಯಲ್ಲಿ ಬೆಳೆಸುವ ಜವಾಬ್ದಾರಿಯಿದೆಯೆಂಬ ಸಂಸ್ಕಾರವನ್ನು ವರನಲ್ಲಿ ಉಂಟುಮಾಡುತ್ತದೆ ಎಂದು ಶ್ರೀರಂಗ ಮಹಾಗುರುಗಳು ಕಾಶೀಯಾತ್ರೆಯ ಒಳ ಮರ್ಮವನ್ನು ತಿಳಿಸಿಕೊಟ್ಟಿದ್ದರು.  

ನಂತರ ವರನು ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ ಎಂದು ಪ್ರತಿಜ್ಞೆ ಮಾಡಿ ಕನ್ಯೆಯನ್ನು ವಿವಾಹವಾಗುತ್ತಾನೆ. ಅಂದರೆ ಪತ್ನಿಯನ್ನು ಬಿಟ್ಟು ಧರ್ಮಾರ್ಥಕಾಮಗಳನ್ನು ಅನುಭವಿಸುವುದಿಲ್ಲ ಎಂದು ಘೋಷಿಸಿ ಮುಂದೆ ಪತ್ನಿಯ ಜೊತೆ ಧರ್ಮಾರ್ಥಕಾಮಮಯವಾದ ಜೀವನವನ್ನು  ನಡೆಸುವುದಕ್ಕಾಗಿ ಸಿದ್ಧನಾಗುತ್ತಾನೆ. ಧರ್ಮಾರ್ಥಕಾಮಗಳು ಮೋಕ್ಷಕ್ಕೆ ಕಾರಣವಾಗುತ್ತವೆ. ಹೀಗೆ ಗೃಹಸ್ಥಾಶ್ರಮವು ನಾಲ್ಕೂ ಪುರುಷಾರ್ಥಗಳನ್ನು ಸಂಪಾದಿಸುವ ಶ್ರೇಷ್ಠವಾದ ಆಶ್ರಮವಾಗಿದೆ. ಉಳಿದ ಮೂರೂ ಆಶ್ರಮಗಳಿಗೆ ಆಶ್ರಯ ಕೊಡುವ ತಾಯಿಯ ಸ್ಥಾನದಲ್ಲಿರುತ್ತದೆ. ಇಂದಿಗೂ ಸಹಾ ಮಹರ್ಷಿಗಳ ಗೃಹಸ್ಥಾಶ್ರಮವು ನಾವು ಅಧ್ಯಯನ ಮಾಡಿ ವೈವಾಹಿಕ ಜೀವನವನ್ನು ಪರಿಷ್ಕರಿಸಿಕೊಳ್ಳುವ ಅನೇಕ ಅಂಶಗಳನ್ನು ಒಳಗೊಂಡು ಸಾರ್ಥಕ ಜೀವನಕ್ಕೆ ಕೈ ದೀವಿಗೆಯಾಗಿದೆ.

ಸೂಚನೆ: 28/09/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.