Monday, September 2, 2019

ಶ್ರೀಕೃಷ್ಣ ಜನ್ಮ ದಿನೋತ್ಸವ- ಒಂದು ಚಿಂತನೆ (Shree krishna janma dinotsava - ondu chinthane)

ಲೇಖಕರು: ತಾರೋಡಿ ಸುರೇಶ


ಪೀಠಿಕೆ:

ಶ್ರೀಕೃಷ್ಟಾಷ್ಟಮಿ ( ಅಥವಾ ಶ್ರೀಕೃಷ್ಣಜಯಂತಿ)ಯು ಭಾರತದ ಎಲ್ಲ ಭಾಗಗಳಲ್ಲೂ ಭಕ್ತಿಸಂಭ್ರಮಗಳಿಂದ ಆಚರಿಸಲ್ಪಡುತ್ತಿರುವ ಮಹೋತ್ಸವ. ಎಲ್ಲ ವರ್ಣ, ಆಶ್ರಮಗಳ ಜನರೂ ಆಚರಿಸುತ್ತಿರುವ ಮಹಾಪರ್ವ. ಇದು ಶ್ರಾವಣಮಾಸದ ಒಂದು ವಿಶೇಷ ಹಬ್ಬವೂ ಆಗಿದೆ

ಶ್ರೀಕೃಷ್ಣನು ದಶಾವತಾರಗಳನ್ನು ಎತ್ತಿರುವ ಮಹಾವಿಷ್ಣು. ತನ್ನೆಲ್ಲಾ ಸೊಬಗನ್ನು,ಶಕ್ತಿಯನ್ನು ಆತ್ಮಗುಣಗಳನ್ನು ಸಂಪೂರ್ಣವಾಗಿ ಆಭಿವ್ಯಕ್ತಗೊಳಿಸಿದ ಮಹಾಪುರುಷ. ಧರ್ಮಿಷ್ಠರಾದ ಪಾಂಡವರ ಆಪ್ತ. ಪಾರ್ಥನನ್ನು ನಿಮಿತ್ತವಾಗಿಟ್ಟುಕೊಂಡು ಗೀತೆಯಂತಹ ಕಾಲದೇಶಗಳನ್ನು ಮೀರಿನಿಲ್ಲಬಲ್ಲ , ಆಧ್ಯಾತ್ಮಗ್ರಂಥಗಳ ಮುಕುಟಮಣಿಯನ್ನು ದಯಪಾಲಿಸಿದ ಯೋಗಾಚಾರ್ಯ. ಇವೆಲ್ಲ ಶ್ರೀಕೃಷ್ಣನ ಬಗ್ಗೆ ನಮ್ಮಲ್ಲಿ ಸಹಜವಾಗಿ ಮೂಡಿರುವ ಚಿತ್ರ.

ಶ್ರೀಕೃಷ್ಣ ಚರಿತೆಯ ಬಗ್ಗೆ ಆರೋಪಗಳು;

ಶ್ರೀರಾಮಚರಿತೆಯಂತೆಯೇ ಶ್ರೀಕೃಷ್ಣಚರಿತೆಯೂ ರಸ್ಯವೂ, ಬೋಧಕವೂ ಆದ ವಿವಿಧ ರೂಪಗಳಲ್ಲಿ ಪ್ರಸ್ತುತಗೊಳಿಸಲ್ಪಟ್ಟು ಆರ್ಷಸಾಹಿತ್ಯವನ್ನೂ, ಜನಜೀವನವನ್ನೂ ಶ್ರೀಮಂತಗೊಳಿಸಿದೆ. ಹತ್ತು ಸಾವಿರಕ್ಕೂ ಹೆಚ್ಚು ಪ್ರಕಾರಗಳಲ್ಲಿ ಜನಮಾನಸವನ್ನು ಪ್ರಭಾವಗೊಳಿಸಿವೆ ಎಂಬುದು ವಿದ್ವಾಂಸರ ಪರಿಗಣನೆ.

ಇಂತಹ ಮಹನೀಯನು ಅವನು ಆಡಿದ ದೇಶದಲ್ಲಿಯೇ ಇಂದು ಒಂದು ರೀತಿಯಲ್ಲಿ ಅಪರಿಚಿತನಾಗುತ್ತಿದ್ದಾನೆ. ಸಾಕಷ್ಟು ಆಪಾದನೆಗಳಿವೆ. ಇದಕ್ಕೆ ಬೇಕಾದ ಅನೇಕ ಕುತರ್ಕಗಳನ್ನು ನೋಡುತ್ತಿದ್ದೇವೆ. ಸಾಹಿತ್ಯ, ಉಪನ್ಯಾಸ ಹಾಗೂ ಅನೇಕ ಮಾದ್ಯಮಗಳ ಮೂಲಕ ಚಿತ್ರವಿಚಿತ್ರವಾದ ಪ್ರಚಾರಗಳಿಗೆ ತುತ್ತಾಗಿದ್ದಾನೆ ಎಂಬುದನ್ನೂ ನೋಡುತ್ತೇವೆ. ಋಗ್ವೇದದಲ್ಲಿ ಬರುವ ಒಬ್ಬ ಕೃಷ್ಣನೆಂಬ ಅಸುರನಿಗೂ ಅವತಾರಪುರುಷ ಶ್ರೀಕೃಷ್ಣನನ್ನು ಹೋಲಿಸುತ್ತಾರೆ. ಗೀತೆಯಲ್ಲಿ ಧರ್ಮವನ್ನೂ, ನೀತಿಯನ್ನೂ ಪಾಂಡವರಿಗೆ ಬೋಧಿಸಿದರೂ, ಮೋಸದಿಂದ ಶತ್ರುಗಳನ್ನು ವಂಚಿಸುವ ನೀತಿಯನ್ನೂ ಪ್ರಯೋಗಿಸಿದವನೆಂದು ಭಾವಿಸುತ್ತಾರೆ. ದಕ್ಷಿಣದಲ್ಲಿ ಶ್ರೀಕೃಷ್ಣನ ಕೊಳಲನ್ನು ಅಡ್ಡಡ್ಡಲಾಗಿ ಹಿಡಿದು ಊದಿದರೆ,ಉತ್ತರ ಭಾರತದಲ್ಲಿ ಕೊಳಲನ್ನು ಮುಂದಕ್ಕೆ ಚಾಚಿಕೊಂಡು ಊದುತ್ತಾನೆ. ಹಾಗಾಗಿ  ಉತ್ತರಭಾರತದ ಕೃಷ್ಣನು ಕ್ಷತ್ರಿಯ. ಆದರೆ ಇನ್ನೊಬ್ಬ ಕೃಷ್ಣನು ದಕ್ಷಿಣದ ಗೊಲ್ಲನು ಎಂದು ಕೆಲವರು ವಿಮರ್ಷಿಸುತ್ತಾರೆ. ಶ್ರೀಕೃಷ್ಣನಲ್ಲಿಯ ಬಾಲಲೀಲೆಗಳ ಕೆಲವು ಸಾಮ್ಯವು ,  ಕ್ರಿಸ್ತನಲ್ಲಿಯೂ ಕಂಡುಬರುವುದರಿಂದ ಕ್ರಿಸ್ತನೇ ಮುಂದೆ ಶ್ರೀಕೃಷ್ಣ ಎನ್ನಿಸಿಕೊಂಡ ಎಂಬ ಪ್ರಚಾರವೂ ಇದೆ.

ಇವೆಲ್ಲಕ್ಕೂ ಹೆಚ್ಚಾಗಿ ಅವನು ಜಾರ, ಚೋರ ಮೋಸಗಾರ ಎಂಬ ವ್ಯಂಗ್ಯ ಬಿರುದಾವಲಿಂದಲೂ ಅವನನ್ನು ಸ್ತುತಿಸುತ್ತಾರೆ. ನೀತಿ ಹೇಳಬೇಕಾದವನೇ ಅನೀತಿಯ ಮಾರ್ಗ ಹಿಡಿಯುವುದು ಘೋರ ಅಪರಾಧವಲ್ಲವೇ?. ಇದರಿಂದ ಸಮಾಜದ ವ್ಯವಸ್ಥೆಯು ಉದ್ಧ್ವಸ್ತಗೊಳ್ಳುವುದಲ್ಲವೇ? ಎಂಬ ಬಲವಾದ ಆಪಾದನೆಯನ್ನೂ ನೋಡುತ್ತೇವೆ.

ಈ ಎಲ್ಲ ಗೊಂದಲಗಳ ಕಾರಣದಿಂದ ಶ್ರೀಕೃಷ್ಣನು ಕೇವಲ ಕಾಲ್ಪನಿಕ ವ್ಯಕ್ತಿ ಮಾತ್ರ ಎಂಬ ಅಭಿಪ್ರಾಯಕ್ಕೂ ಕಾರಣವಾಗಿದೆ. ಶ್ರೀಕೃಷ್ಣನು ಕೇವಲ ಒಬ್ಬ ಅಸಾಧಾರಣ ಮನುಷ್ಯನೋ ಅಥವಾ ಸಾಕ್ಷಾತ್ ಪರಮಾತ್ಮನ ಅವತಾರವೋ ಎಂಬ ಪ್ರಶ್ನೆಗೂ ಎಡೆಮಾಡಿಕೊಟ್ಟಿದೆ.

ತ್ರೇತಾಯುಗದ ಸಾರಳ್ಯ. ಪ್ರಾಮಾಣಿಕತೆ, ಧರ್ಮಪ್ರೀತಿ. ಆತ್ಮಗುಣಸಂಪತ್ತು  ಶ್ರೀಕೃಷ್ಣನ ದ್ವಾಪರದ ಅಂತ್ಯದಲ್ಲಿ ಅಷ್ಟಾಗಿ ಕಾಣದು. ಹೊಲಸಿನ ಕೂಪದಲ್ಲಿ ಅಡಗಿರುವ ಕಳ್ಳನನ್ನು ಅಲ್ಲಿಗೇ ಹೋಗಿ ಬಂಧಿಸಬೇಕಾದ ಸಂದರ್ಭ. ಆಪ್ತವಾಕ್ಯದಲ್ಲಿ ಅಪನಂಬಿಕೆ, ಮರೆಯಾದ ಪಾಪಭೀತಿ, ಸ್ವಾರ್ಥ,ಡಂಭಾಚಾರ ಇವುಗಳ ನಡುವೆ ಧರ್ಮೋದ್ಧಾರಕ್ಕೆ ಸೂಕ್ತಮಾರ್ಗವನ್ನು ಅನುಸರಿಸಬೇಕಾದ ಯುಗಧರ್ಮದ ಅನಿವಾರ್ಯತೆ. ಆದ್ದರಿಂದ ಕೆಲವೊಮ್ಮೆ ರೂಢಿಗತ ಮಾರ್ಗಗಳನ್ನು ಬದಲಾಯಿಸಿ ವಿಭಿನ್ನ ಮಾರ್ಗಗಳನ್ನು ಅನುಸರಿಸುವುದು ಅಗತ್ಯವಾಗುತ್ತದೆ. ಅದು ನಾವು ರೂಢಿಯಲ್ಲಿ ಭಾವಿಸುವ ಸನ್ಮಾರ್ಗವೇ ಆಗಿರಬೇಕೆಂಬುದಿಲ್ಲ. ಅನಿವಾರ್ಯವಾದಾಗ ಪರ್ಯವಸಾನದಲ್ಲಿ ಸತ್ಫಲವನ್ನು ಕೊಟ್ಟರೂ ಸಾಕು.

ಅವತಾರದ ಪರಿಕಲ್ಪನೆ;

ಬುದ್ಧಿಜೀವಿಗಳನ್ನು ಪ್ರಧಾನವಾಗಿ ಗೊಂದಲಕ್ಕೆ ಈಡು ಮಾಡಿರುವ ಇನ್ನೊಂದು ವಿಷಯವೆಂದರೆ ಅವತಾರದ ಪರಿಕಲ್ಪನೆ. ಅವತಾರವೆಂದರೆ ಪದಶಃ “ಇಳಿದುಬರುವಿಕೆ”ಎಂದರ್ಥ. ಭಗವಂತನು ತನ್ನ ಧಾಮದಿಂದ ಈ ಭುವಿಗೆ ಇಳಿದುಬರುವಿಕೆಯನ್ನೇ ಅವತಾರವೆಂದು ಕರೆದಿದೆ. ಇಳಿದುಬರುವುದು ಎಂದರೆ ಇಂದ್ರಿಯಗಳಿಗೆ ಅಗೋಚರನಾಗಿರುವ ಪರಮಾತ್ಮನು ನಮ್ಮ ಇಂದ್ರಿಯಗಳಿಗೆ ಗೋಚರವಾಗುವಂತೆ ಅಭಿವ್ಯಕ್ತನಾಗುವುದು. ವಿದ್ಯುಚ್ಛಕ್ತಿಯು ಎಲ್ಲೆಡೆ ಇರುವುದಾದರೂ ಅದು ಬೆಳಕಿನ ರೂಪದಲ್ಲಿ ಪ್ರಕಟಗೊಂಡಾಗ ಗುರುತಿಸುತ್ತೇವೆ. ಅದು ಹಾಗೆ ಪ್ರಕಟಗೊಂಡಾಗ ಮೂಲದಲ್ಲಿ ಅದು ಇಲ್ಲವೆಂದು ಅರ್ಥವಲ್ಲ. ಪರಮಾತ್ಮನು ತನ್ನ ಸಂಕಲ್ಪಕ್ಕನುಗುಣವಾಗಿ ಇಂದ್ರಿಯ ಪ್ರಪಂಚದ ಜೀವಿಗಳಿಗೆ ಅವರವರ ಕಾಲದೇಶಗಳಲ್ಲಿ ಕಾಣಿಸಿಕೊಳ್ಳುವುದೇ ಅವತಾರ.

ಅವತಾರ ಎಂದೊಡನೆ ಅದರದೇ ಆದ ಕೆಲ ವೈಶಿಷ್ಟ್ಯಗಳಿವೆ. ಅವತಾರ ಪುರುಷನು ಸಾಧಕರ, ಭಕ್ತರ, ಉಪಾಸಕರ ಧ್ಯಾನಕ್ಕೆ ಶುಭಾಶ್ರಯನಾಗಿ ಯೋಗಭೋಗವೆರಡನ್ನು ಅನುಗ್ರಹಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಅವನ ದಿವ್ಯದೇಹವು ಪ್ರಂಜ್ಯೋತಿಯ ಮೂರ್ತಾಕಾರ.ಆದ್ದರಿಂದಲೇ ಅದು ನಿತ್ಯ,ಶುದ್ಧ, ಬುದ್ಧ ಮುಕ್ತಸ್ವರೂಪ. ಅವನ ಮೂರ್ತರೂಪವು ಅವತಾರಕ್ಕೆ ಮೊದಲೂ, ಅವತಾರಕಾಲದಲ್ಲಿಯೂ ಮತ್ತು ಅನಂತರವೂ ಒಂದೇ ಆಗಿರುತ್ತದೆ. ಯಾವ ಪರಮಾತ್ಮನ ಅಡಿದಾವರೆಯಿಂದ ಜೀವಿಗಳು ಅರಳಿಬಂದಿರುತ್ತವೆಯೋ ಅವು ಮೂಲವನ್ನು ಶಠ ಎಂಬ ಮಾಯೆಯಕಾರಣದಿಂದ ಮರೆತುಬಿಡುತ್ತವೆ. ಅಂತಹ ಜೀವಿಗಳನ್ನು ಇಂದ್ರಿಯಕ್ಷೇತ್ರದಿಂದ ಅತೀಂದ್ರಿಯಕ್ಷೇತ್ರಕ್ಕೆ ಕರೆದೊಯ್ಯುವ ಸಹಜ ಸಾಮರ್ಥ್ಯವನ್ನು ಅವತಾರ ಪುರುಷರು ಹೊಂದಿರುತ್ತಾರೆ. ಅದಕ್ಕೆ ಬೇಕಾದ ಸಮಸ್ತ ಜ್ಞಾನ-ವಿಜ್ಞಾನಗಳನ್ನು ಮೈಗೂಡಿಸಿಕೊಂಡೇ ಅವತರಿಸಿರುತ್ತಾರೆ. 

ಒಬ್ಬ ವ್ಯಕ್ತಿಯು ಭಗವಂತನ ಅವತಾರವೆಂದು ನಿರ್ಣಯಿಸುವ ಬಗೆ ಹೇಗೆ? ಏಕೆಂದರೆ ನಮ್ಮ ಮತಿಯಾದರೋ ಕೇವಲ ಇಂದ್ರಿಯಕ್ಷೇತ್ರದಲ್ಲಿ ಸಂಚರಿಸಬಲ್ಲುದು. ಆದರೆ ಭಗವದವತಾರವು ಸ್ಥೂಲ-ಸೂಕ್ಷ್ಮ-ಪರಕ್ಷೇತ್ರಗಳ  ವ್ಯಾಪ್ತಿಯುಳ್ಳದ್ದು. ಆದ್ದರಿಂದ ಅದನ್ನು ಸೂಕ್ತ ಮಾನದಂಡವಿಲ್ಲದೇ ನಿರ್ಧರಿಸುವುದು ಹೇಗೆ?  ವಾಸ್ತವವಾಗಿ ಅವತಾರಪುರುಷರನ್ನು ಗುರುತಿಸುವುದು  ಕಷ್ಟಸಾಧ್ಯ. ಅವತಾರಪುರುಷನೇ ತನ್ನನ್ನು ತಾನು ಪ್ರಕಟಪಡಿಸಿಕೊಂಡರೆ ಮಾತ್ರ ತಿಳಿಯಲು ಸಾಧ್ಯ. ಅವನೇ ತನ್ನ ಪರಿಚಯವನ್ನು ನೀಡದಿದ್ದರೆ ಅವನನ್ನು ಸಾಮಾನ್ಯ ಮನುಷ್ಯ ಎಂದೇ ಭಾವಿಸುತ್ತೇವೆ.

ಅವಜಾನಂತಿ ಮಾಂ ಮೂಡಾಃ ಮಾನುಷೀ ತನುಮಾಶ್ರಿತಮ್!

ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್!!

ಎಂದು ಅವನೇ ಈ ಸತ್ಯವನ್ನು ತನ್ನದೇ ರೀತಿಯಲ್ಲಿ ಹೇಳಿಕೊಂಡಿದ್ದಾನೆ. ಜೊತೆಗೆ ಅವನ ಭಕ್ತರು,ಜ್ಞಾನಿಗಳು ಬಹುಕಾಲಾನಂತರವೂ ತಮ್ಮ ಹೃದಯದಲ್ಲಿ ಶ್ರೀಕೃಷ್ಣನ ದರ್ಶನ ಮಾಡಿ ನಲಿದಾಡಿ ಅವನ ಶಾಶ್ವತತೆಯನ್ನೂ, ಅವತಾರತ್ವವನ್ನೂ ಕೊಂಡಾಡಿದ ಸಾಹಿತ್ಯಗಳನ್ನು ನೋಡುತ್ತೇವೆ.ಕೆಲವೇ ದಶಕಗಳ ಹಿಂದೆ ಶ್ರೀರಂಗಮಹಾಗುರುಗಳು “ಅವನು ಭ್ರೂಯುಗಾತೀತ ದೃಷ್ಟಿಗೆ ಮಾತ್ರ ಗೋಚರ. ಸಾಮಾನ್ಯರ ದೃಷ್ಟಿಯು ಹುಬ್ಬಿನ ಕೆಳಗೇ ಇರುತ್ತದೆ”ಎಂದು ಹೇಳಿದ್ದರು.

ಅವತಾರದ ಉದ್ದೇಶ:

ಅವತಾರದ ಉದ್ಧೇಶವಾದರೋ ಧರ್ಮದ ಪುನರುಜ್ಜೀವನ. ಶ್ರೀಕೃಷ್ಣನ ಲೀಲೆಗಳು, ಕರ್ಮಗಳು, ಮಾತುಗಳು  ಆಲೋಚನೆಗಳು ಎಲ್ಲವೂ ಅವತಾರದ ಉದ್ಧೇಶವನ್ನೇ ಸಮರ್ಥಿಸುತ್ತವೆ. ದುಷ್ಟರ ದಮನ, ಧರ್ಮರಾಜ್ಯದ ಸಂಸ್ಥಾಪನೆಯನ್ನು ಕಾಣುತ್ತೇವೆ. ಅವನ ಸ್ಪರ್ಷ, ದರ್ಶನಕ್ಕೆ ಒಳಗಾದವೆಲ್ಲವೂ ಧರ್ಮಮಯವಾದದ್ದನ್ನು ನೋಡುತ್ತೇವೆ. ಪುರುಷಾರ್ಥಮಯವಾದ ಬಾಳ ವ್ಯವಸ್ಥೆಯು ರೂಪುಗೊಳ್ಳತ್ತದೆ. ಹಾಗೆಯೇ ಕಾಲದ ಗತಿಯಿಂದ ಕಬಳಿಸಲ್ಪಡದೆ ಇಂದಿಗೂ ಉಳಿದು ಭಕ್ತರಿಗೆ ಅವನು ಆಶ್ರಯನಾಗಿರುವ ಇತಿಹಾಸಕ್ಕೆ ಸಾಕ್ಷಿಗಳಾಗಿದ್ದೇವೆ.

ಧರ್ಮವೆಂದರೇನು;

ಭಗವಂತನ ಸೃಷ್ಟಿಯಲ್ಲಿ ಅರಳಿಬಂದ ಸಮಸ್ತವೂ ತನ್ನತನದಿಂದ, ಸದಾಕಾಲವೂ ಇರಬೇಕು. ಹಾಗಿದ್ದಾಗ ಅವು ತಮ್ಮ ಸ್ವಭಾವ-ಸ್ಥಿತಿಯಲ್ಲಿದ್ದು ಭಗವತ್ಕಾರ್ಯಕ್ಕೆ ಸಲ್ಲುತ್ತವೆ. ಮಾನವನ ಪುರುಷಾರ್ಥಮಯವಾದ ಬಾಳ್ವೆಗೂ ಒದಗಿಬರುತ್ತವೆ. ಹಾಗೆ ಮಾನವನ ಜೀವವೂ ಸೇರಿದಂತೆ ಸಮಸ್ತ ವಸ್ತುಜಾತಗಳಿಗೂ ಅನ್ವಯಿಸಬೇಕಾಗುತ್ತದೆ. ಆದರೆ ಒಮ್ಮೆ ಧರ್ಮಗ್ಲಾನಿಯಾಯಿತೆಂದರೆ ಅವುಗಳನ್ನು ಪೂರ್ವಸ್ಥಿತಿಗೆ ತರಲು ಸಾಕ್ಷಾತ್ ಪರಮಾತ್ಮನ ಅವತಾರವೇ ಬೇಕಾಗುತ್ತದೆ. ಏಕೆಂದರೆ ವಿಶ್ವಸ್ತರದಲ್ಲಿ ಧರ್ಮೋದ್ಧಾರವಾಗಲು ಭಗವಂತನಿಂದಲೇ ಸಾಧ್ಯ. ಆದ್ದರಿಂದಲೇ ಇಂತಹ ಧರ್ಮೋದ್ಧಾರಕ್ಕಾಗಿಯೂ, ಭಕ್ತರಿಗೂ ಶಾಶ್ವತವಾದ ಅವಲಂಬನೆಯನ್ನು ನೀಡಲೂ ಅವತಾರವನ್ನು ಎತ್ತುತ್ತಾನೆ.

ಹಾಗೆಂದು ಶ್ರೀಕೃಷ್ಣ ಚಾರಿತ್ರಿಕ ಪುರುಷ ಅಲ್ಲವೆಂದಲ್ಲ.ಒಂದೆಡೆ ಅವನನ್ನು ಸಾಕ್ಷಾತ್ ಭಗವಂತ, ಯೋಗೇಶ್ವರ, ಪರಮಸುಂದರ  ದಿವ್ಯಮಂಗಳವಿಗ್ರಹ, ಭಕ್ತಜನಪರಿಪಾಲಕ ಮತ್ತು ಕಾಲದೇಶಗಳನ್ನು ಮೀರಿನಿಂತಿರುವ ಸತ್ಯ ಎಂದು ನಂಬಿದವರೂ ಇದ್ದಾರೆ. ಇಂದಿಗೂ ಈ ಭಾವವೇ ಸಂಸ್ಕಾರಿಗಳನ್ನು ಎಷ್ಟೋ ಮಟ್ಟಿಗೆ ಅರಳಿಸುತ್ತಿರುವುದು ಕಾಣುತ್ತಿದೆ. 

ಇನ್ನೊಂದೆಡೆ ದ್ವಾರಕೆಯಲ್ಲಿ ಕಂಡುಬರುವ ಅವಶೇಷಗಳು, ಕುರುಹುಗಳು, ಕೋಟೆಯ ತಳಪಾಯ ಇತ್ಯಾದಿಗಳು ಪ್ರಾಚ್ಯಸಂಶೋಧಕರಿಗೆ ದೊರಕಿವೆಯಾಗಿ ಶ್ರೀಕೃಷ್ಣನು ಐತಿಹಾಸಿಕ ವ್ಯಕ್ತಿ ಎನ್ನುವುದೂ ಸಂಶಯಾತೀತವಾಗಿ ಸಿದ್ಧವಾಗಿದೆ. ಭಾರತೀಯ ವಿದ್ಯಾಭವನದಿಂದ ಪ್ರಕಟಗೊಂಡ ಡಾ ತ್ರಿವೇದಿಯವರ ಇಂಡಿಯನ್ ಕ್ರೋನೋಲಜಿ ಎಂಬ ಗ್ರಂಥದಲ್ಲಿ ಕ್ರಿಸ್ತಪೂರ್ವ 8000 ದಿಂದ 1947ರವರೆಗೆ ನಡೆದ ಮಹತ್ವಪೂರ್ಣ ಘಟನೆಗಳಿಗೆ ಜ್ಯೌತಿಷಾಧಾರಗಳ ಮೇಲೆ ವಿವರಗಳನ್ನು ನೀಡಿದ್ದಾರೆ. ಆಯಾ ಸಂದರ್ಭಗಳಲ್ಲಿನ ಗ್ರಹಗಳ ಸ್ಥಾನನಿರ್ದೇಶವನ್ನು ಕೊಟ್ಟು ಅದಕ್ಕೆ ಸಂವಾದಿಯಾದ ಕಾಲನಿರ್ಣಯಗಳನ್ನು ಮಾಡಿದ್ದಾರೆ. ಅದರ ಪ್ರಕಾರ ಶ್ರೀಕೃಷ್ಣನನ್ನು ಐತಿಹಾಸಿಕ ವ್ಯಕ್ತಿಯೆಂದೇ ನಿರ್ಣಯಿಸಿದ್ದಾರೆ.ಈ ಹಿನ್ನೆಲೆಯಲ್ಲಿಯೇ ದ್ವಾಪರ ಮತ್ತು ಕಲಿಯುಗದ ಸಂಧಿಕಾಲವನ್ನು ಮಹಾಭಾರತದ ಯುದ್ಧಕಾಲವೆಂದೂ,ಶ್ರೀಕೃಷ್ಣನು ಹೆಚ್ಚುಕಡಿಮೆ ಇದೇ ಕಾಲದವನೆಂದು ಊಹಿಸಿದ್ದಾರೆ.

ಚರಿತ್ರೆ ಮತ್ತು ಕಾವ್ಯ;

ಮಹಾಭಾರತಗ್ರಂಥವು ಇಂದಿನ ಬೃಹದ್ಗ್ರಂಥದ ರೂಪಕ್ಕೆ ಬಂದಿದ್ದು ಸುಮಾರು ಮೂರನೆಯ ಶತಮಾನದಲ್ಲಿ.ಈ ರೂಪಕ್ಕೆ ಬರುವ ಮುನ್ನ ಇದು ‘ಜಯ’ಎಂಬ ಚಿಕ್ಕ ಕೃತಿಯಾಗಿತ್ತು ಎಂದು ಕೆಲವರ ಊಹೆ.

ಚರಿತ್ರೆಗೂ ಕಾವ್ಯಕ್ಕೂ ಇರುವ ಒಂದು ಮೂಲಭೂತ ವ್ಯತ್ಯಾಸವೆಂದರೆ ಕಾವ್ಯವು ಆದರ್ಶ-ಸೌಂದರ್ಯಗಳನ್ನು ಪ್ರಧಾನವಾಗಿ ಪರಿಗಣಿಸಿದರೆ ಚರಿತ್ರೆಯು ಬಾಹ್ಯ ಆಗುಹೋಗುಗಳ ನಿಗಾವಹಿಸುತ್ತದೆ. ಕಾವ್ಯವು ಸಹೃದಯರ ಅಂತರಂಗವನ್ನು ಸಂಸ್ಕರಿಸಿದರೆ, ಸಮೃದ್ಧಗೊಳಿಸಿದರೆ ಚರಿತ್ರೆಯು ಮಾಹಿತಿಯನ್ನು ನೀಡುತ್ತದೆ. ಕಾವ್ಯವೆಂದಾಗ ಐತಿಹಾಸಿಕ ಘಟನೆಗಳನ್ನು ಕವಿಯು ಕ್ರಾಂತದರ್ಶಿಯಾಗಿ ಮೆರಗುಗೊಳಿಸಬಾರದೆಂದಲ್ಲ. ಹಾಗಾಗಿ ಕಾವ್ಯರೂಪವನ್ನು ತಾಳಿ ಹೊರಬಂದಿರುವ ರಾಮಾಯಣ, ಮಹಾಭಾರತಗಳಲ್ಲಿ ಕವಿಕಲ್ಪಿತ ವಿಷಯಗಳು ಇಲ್ಲವೇ ಇಲ್ಲ  ಎಂದು ಸಾಧಿಸಬೇಕಾಗಿಲ್ಲ. ಜೀವನದ ಯೋಗದೃಷ್ಟಿಗೆ ಗೋಚರವಾಗುವ ಮೌಲ್ಯಗಳನ್ನೂ ಮತ್ತು ಸಾಮಾನ್ಯದೃಷ್ಟಿಗೆ ಅಗೋಚರವಾದ ಮೌಲ್ಯಗಳನ್ನೂ ಪ್ರಚುರಪಡಿಸಲು ಕವಿಯು ಐತಿಹಾಸಿಕ ವ್ಯಕ್ತಿಯ  ಜೀವನವನ್ನು ಬಳಸಿಕೊಳ್ಳಬಹುದು. 

ಶ್ರೀಕೃಷ್ಣನ ಚರಿತ್ರೆಯನ್ನು ಬರೆದವರು ವಿಶಾಲಬುದ್ಧಿಗಳಾದ ವೇದವ್ಯಾಸರು. ವ್ಯಾಸರು ಸ್ಪರ್ಷಿಸದ ಕ್ಷೇತ್ರವಿಲ್ಲ. ಜೀವನ ನಿರ್ಣಯ ಹಾಗೂ ಜೀವನವ್ಯವಸ್ಥೆಯ ವಿಷಯಗಳಲ್ಲಿ ಅವರು ಎಸಗಿದ ಕಾರ್ಯ ಅಷ್ಟು ವ್ಯಾಪಕ. ಶ್ರೀಕೃಷ್ಣನ ಹೃದಯವನ್ನು ಬಲ್ಲವರು ಎಂಬರ್ಥದಲ್ಲಿಯೇ ಅವರಿಗೆ ಕೃಷ್ಣ ಎಂಬ ಹೆಸರೇ ಬಂದಿದೆ.

ಇಂತಹ ಕೃಷ್ಣಕಥೆಯನ್ನು, ಪ್ರಾಯೋಪವೇಶದಲ್ಲಿದ್ದ ಪರೀಕ್ಷಿದ್ರಾಜನಿಗೆ ಮಹಾಯೋಗಿಗಳೂ, ಪರಮಭಾಗವತರೂ, ಕವಿಗಳು, ರಸಜ್ಞರೂ ಆದ ಶುಕಮಹರ್ಷಿಗಳು ಶ್ರವಣ ಮಾಡಿಸುತ್ತಾರೆ. ಶುಕರು ವರ್ಣಿಸುವ ಕ್ರಮವು ಶ್ರಾವಕರ ಹೃದಯಗಳಲ್ಲಿ ರಸ-ಭಾವಗಳನ್ನು ತುಂಬಿಸಿಬಿಡುತ್ತದೆ. ಅವರು ಬಳಸುವ ರಸಾರ್ದ್ರವಾದ ಮಾತುಗಳು ಕೃಷ್ಣರಸ-ವಾಪಿಯಲ್ಲಿ ಮಿಂದು ಅಭಿವ್ಯಕ್ತಗೊಂಡ ಸಾಹಿತ್ಯವಾದುದರಿಂದ ಕೇಳುವವರ ಹೃದಯದಲ್ಲಿ ಸಹಜವಾಗಿಯೇ ಅಂತಹದೊಂದು ಪರಿಣಾಮ ಮಾಡಲೇಬೇಕಲ್ಲವೇ? ಇನ್ನೊಂದು ವಿಶೇಷವೆಂದರೆ ಶ್ರೀಕೃಷ್ಣನ ಲೀಲಾವಿಲಾಸಗಳು ಹೃದಯಕ್ಕೆ ಮಾತ್ರ ರಸಸಿಂಚನವಾಗದೇ ಬುದ್ಧಿಗೂ ಬಲ ನೀಡುವ ವಿಚಾರ-ವಿವೇಕಗಳಿಂದ ಕೂಡಿವೆ. ಸಾತ್ವಿಕರಿಗೆ ಪ್ರಿಯವಾದ ಆಹಾರದಂತೆ ಇಂದ್ರಿಯಗಳಿಗೂ ಆಸ್ವಾದನೆ, ಆತ್ಮಕ್ಕೂ ಸಂತೋಷ. ಒಟ್ಟಾರೆ ಪುರುಷಾರ್ಥಪ್ರದವಾದ ಕಲ್ಪವೃಕ್ಷ ! ಹೀಗಿರುವುದರಿಂದಲೇ ಅದು ಆಚಂದ್ರಾರ್ಕವಾಗಿ,ಜೀವಲೋಕಕ್ಕೆ ನೆಮ್ಮದಿ ತುಂಬುವ ತೆಗೆದಷ್ಟೂ ಮುಗಿಯದ ಜ್ಞಾನದ ಆಕರವಾಗಿದೆ.

ಶ್ರೀಕೃಷ್ಣನ ಕಳ್ಳತನ:

ಶ್ರೀಕೃಷ್ಣನು ಬೆಣ್ಣೆ ಕದ್ದಿದ್ದರ ಬಗ್ಗೆ ಪ್ರಶ್ನಿಸಿದಾಗ ಶ್ರೀರಂಗಮಹಾಗುರುಗಳು ”ಅವನು ಗುಟ್ಟಾಗಿ ಗೋಪಿಯರ ಮನೆಗಳನ್ನು ಹೊಕ್ಕು ಅಲ್ಲಿದ್ದ ಹಾಲು,ಮೊಸರು ಬೆಣ್ಣೆ ಮುಂತಾದವುಗಳನ್ನು ನೋಡಿದಾಗ.ಮುಟ್ಟಿದಾಗ ಮತ್ತು ಸೇವಿಸಿದಾಗ ಅವು ಆ ಯೋಗಪುರುಷನ ಮಹಾಪ್ರಸಾದಗಳೇ ಆದವಪ್ಪಾ! ಆ ಶೇಷಪ್ರಸಾದವನ್ನು ಸೇವಿಸಿದವರ ಪ್ರಕೃತಿಯೇ ಶುದ್ಧವಾಯಿತು. ಪರಮಾನಂದಲಾಭವನ್ನು ಪಡೆಯಲು ಸಿದ್ಧವಾಯಿತು. ಇದಕ್ಕಾಗಿಯೇ ಕರುಣಾಳುವಾದ ಗೋವಿಂದನು ಚೌರ್ಯ ಮಾಡಿದ” ಎಂಬ ಉತ್ತರವನ್ನು ಅನುಗ್ರಹಿಸಿದ್ದರು. ಭಕ್ತರಕ್ಷಣೆ ಅವನ ಅವತಾರದ ಸಂಕಲ್ಪವೇ ಆಗಿರುವುದರಿಂದ ಅದು ಅವನ ಕರುಣಾವಿಲಾಸವೇ ಆಗಿದೆ.

ರಾಸಕ್ರೀಡೆಯ ವಿವಾದ:


ಶ್ರೀಕೃಷ್ಣನು ಗೋಪಿಯರೊಡನೆ ನಡೆಸಿದ ರಾಸಕ್ರೀಡೆಯು ಪರಮನಿಂದನೀಯ ಕಾರ್ಯ ಎಂಬುದಾಗಿ ಕೆಲವರ ಅಭಿಪ್ರಾಯವಿದೆ. ಇನ್ನು ಕೆಲವರಲ್ಲಿ ಗೊಂದಲಕ್ಕೂ ಕಾರಣವಾಗಿದೆ. ಈ ರಾಸಕ್ರೀಡೆಯ ಸ್ವರೂಪವನ್ನೂ, ಅದರ ಹಿಂದುಮುಂದಿನ ಘಟನೆಗಳನ್ನು ಭಾಗವತದಲ್ಲಿ ವಿಸ್ತಾರವಾಗಿಯೂ, ರಮಣೀಯವಾಗಿಯೂ ವರ್ಣಿಸಿದ್ದಾರೆ. ಇಲ್ಲಿ ಗೋಪಿಕೆಯರ ಮೇಲೆ ಆದ ಪರಿಣಾಮವೇನು? ಎಂಬುದು ಮುಖ್ಯ. ಅದುವರೆಗೆ ನಂದನಪುತ್ರನಾಗಿ ತೋರುತ್ತಿದ್ದ. ಗೊಲ್ಲತಿಯ ಮಗನಾಗಿ ಕಾಣುತ್ತಿದ್ದ. ಆದರೆ ರಾಸ-ಕ್ರೀಡೆಯ ನಂತರ ಅವರಿಗೆ  ಶ್ರೀಕೃಷ್ಣನು ಕಂಡ ಪರಿಯೇ ಬೇರೆ. ಅವನಲ್ಲಿ ತನ್ಮಯೀ-ಭಾವವನ್ನು ಹೊಂದಿದ ಅವರಿಂದ ಶ್ರೇಷ್ಠವಾದ ಗೋಪಿಕಾಗೀತೆಯೇ ಹೊರಹೊಮ್ಮಿತು!!

‘ನಿನ್ನನ್ನು ಸಾಮಾನ್ಯ ಗೊಲ್ಲನೆಂದು ಅಂದುಕೊಂಡೀದ್ದೆವಪ್ಪ. ಎಲ್ಲರ ಹೃದಯದಲ್ಲಿ ವಿರಾಜಮಾನನಾಗಿರುವ ಒಳಗಣ್ಣು ನೀನಾಗಿದ್ದೀಯೇ. ಋಷಿಗಳ ಮೊರೆಗೆ ಕರಗಿ, ಲೋಕಕಲ್ಯಾಣಾರ್ಥವಾಗಿ ಯದುಕುಲದಲ್ಲಿ ಬಂದವನಪ್ಪ ನೀನು’ ಎಂದು ತಮ್ಮ ಹೃದಯದ ಭಾವಕ್ಕೆ ಭಾಷೆಯನ್ನು ಕೊಡುತ್ತಾರೆ. ಋಷಿಗಳು,ಭೀಷ್ಮಾದಿಗಳು ಶ್ರೀಕೃಷ್ಣನನ್ನು ಹೇಗೆ ಸ್ತುತಿಸುತ್ತಾರೆಯೋ ಅದೇ ಮಾತು ಗೋಪಿಕೆಯರಲ್ಲೂ. ಯಾವ ವಿಶೇಷವಾದ ಸಾಧನೆಯಿಲ್ಲದೆ ಪರಮಪುರುಷನ ವಿದ್ಯಾಮಯವಾದ ಕ್ರೀಡೆಯ ಪರಿಣಾಮವಾಗಿ ಯೋಗಿಗಳ ಸಮಾಧಿಯಲ್ಲಿ ಅನುಭವಗೋಚರವಾಗುವ ಸ್ಥಿತಿಯನ್ನು ಪಡೆದ ಗೋಪಿಕೆಯರು ಅದೆಷ್ಟು ಧನ್ಯರು.

ಶ್ರೀಕೃಷ್ಣನ ಮಹಿಮೆಯನ್ನು ಅರಿತ ಬ್ರಹ್ಮನೂ ಕೂಡ ಪರಮಾನಂದನೂ, ಪೂರ್ಣನೂ, ಸನಾತನನೂ ಆದ ಪರಬ್ರಹ್ಮನನ್ನು ಪುತ್ರನನ್ನಾಗಿ ಪಡೆದ ನಂದನ ಹಾಗೂ ಮಿತ್ರನನ್ನಾಗಿ ಪಡೆದ  ವ್ರಜವಾಸಿಗಳ ಭಾಗ್ಯವು ಅದೆಷ್ಟು ದೊಡ್ಡದು ಎಂದು ಉದ್ಗರಿಸುತ್ತಾನೆ. ನಿನ್ನ ಕಥಾಮೃತವು ಶುದ್ಧವಾದ ಜೀವನವನ್ನು ಪ್ರಶಂಸಿಸುತ್ತದೆ. ಅದು ಎಲ್ಲ ಕಶ್ಮಲಗಳನ್ನೂ ನಾಶಪಡಿಸುತ್ತದೆ. ನಿನ್ನ ಸ್ತುತಿಯು ಕೇಳಲು ಮಂಗಳಕರವಾದದ್ದು ಎಂದುಗೋಪಿಕೆಯರು ಪುನಃ ಪುನಃ ಕೊಂಡಾಡುತ್ತಾರೆ.

ಅವನ ಕ್ರೀಡೆಗಳೆಲ್ಲವೂ ಆತ್ಮವಿಜ್ಞಾನಸಹಿತವಾಗಿಯೇ ಇರುತ್ತಿತ್ತು. ಗೋಪಿಯರ ನಡುವೆ ಒಂದು ವಿಶಿಷ್ಟವಾದ ಭಂಗಿಯಲ್ಲಿ ಕುಳಿತುಕೊಳ್ಳುತ್ತಾನೆ. ಶ್ರೀಕೃಷ್ಣನ ಈ ಮೂರ್ತಿಯು ಧ್ಯಾನಕ್ಕೆ ಶುಭಾವಲಂಬನವಾದ ಮೂರ್ತಿಯಾಗಿರುವುದರಿಂದಲೇ ಶುಕಬ್ರಹ್ಮರ್ಷಿಗಳು ಇದನ್ನು ಎತ್ತಿ ಉಲ್ಲೇಖಿಸುತ್ತಾರೆ. ರಾಸಕ್ರೀಡೆಯ ಸನ್ನಿವೇಶವನ್ನು ನೋಡಿದಾಗ, ಯೋಗಸಮಾಧಿಯ ಸ್ಥಿತಿಗೆ ಗೋಪಿಕೆಯರನ್ನು ಕರೆದೊಯ್ಯಲು ಇದೊಂದು ಸೋಪಾನವಾಗಿತ್ತು ಎನ್ನುವುದು ಬಹು ಸ್ಪಷ್ಟ. ಅದೊಂದು ಜೀವ-ದೇವರ ಕ್ರೀಡೆಯಾಗಿತ್ತು.ಸ್ವಯಂ ಪರಂಜ್ಯೋತಿ ಪರಮಾತ್ಮನೇ ತನ್ನ ಅನುಗ್ರಹಾಮೃತವನ್ನು ವರ್ಷಿಸಿ ಬ್ರಹ್ಮಾನಂದರಸದಲ್ಲಿ ಅವರನ್ನು ಅವಗಾಹನಮಾಡಿಸಿದ ಪರಮಾದ್ಭುತವಾದ ದಿವ್ಯ ಘಟನೆ. ಒಂದೆಡೆ ತಮ್ಮ ತನುಮನಜೀವನವನ್ನು ಅವನಿಗೆ ಸಮರ್ಪಿಸಿಕೊಂಡ ಜೀವಿಗಳು, ಇನ್ನೊಂದೆಡೆ ವಿದ್ಯಾಪುರುಷ. ಇವರ ನಡುವಣ ದಿವ್ಯವಾದ ಕ್ರೀಡೆಯ ಫಲ ಬೇರೆ ಏನಾಗಲು ಸಾಧ್ಯ.

ಮಹಾತ್ಮರ ಎಲ್ಲ ನಡುವಳಿಕೆಗಳೂ ಸಾಮಾನ್ಯರಿಗೆ ಅನುಕರಣೀಯವಲ್ಲ. ಅವರ ಕ್ರಿಯೆಗಳು ಮೇಲುನೋಟಕ್ಕೆ ಅಧರ್ಮದಂತೆ ತೋರಿದರೂ ಅದು ಆದರ್ಶವಾಗಿ ಸಂಪನ್ನವಾಗುವಂತೆ ನಿರ್ವಹಿಸಬಲ್ಲ ಅತಿಮಾನುಷವಾದ ಸಾಮರ್ಥ್ಯ ಅವರಿಗಿರುತ್ತದೆ. ಉದಾಹರಣೆಗೆ “ಭಾರ್ಗವೇಣ ಹತಾ ಮಾತಾ ಏಕಜಾಯಾಶ್ಚ ಪಾಂಡವಾಃ! ಪರದಾರಾರತಃ ಕೃಷ್ಣೋ ನ ದೇವಚರಿತಂ ಚರೇತ್!!

ಪರಶುರಾಮನು ತಾಯಿಯನ್ನೇ ಕೊಂದ. ಪಂಚಪಾಂಡವರು ಒಬ್ಬಳೆ ಭಾರ್ಯೆಗೆ ಭರ್ತರಾಗಿದ್ದರು. ಕೃಷ್ಣನು ಪರಪತ್ನಿಯರಲ್ಲಿ ಕ್ರೀಡಿಸಿದ. ಅಂದರೆ ದೇವಾಂಶ-ಸಂಭೂತರು ನಡೆದಂತೆ ಇತರರು ನಡೆಯತಕ್ಕದ್ದಲ್ಲ. ವಿಧಿನಿಷೇಧಗಳು ಸಾಮಾನ್ಯರ ಯೋಗಕ್ಷೇಮಕ್ಕಾಗಿ.

ಶ್ರೀಕೃಷ್ಣನ ಸಂಕ್ಷಿಪ್ತ ಚರಿತ್ರೆ:

ಚಂದ್ರವಂಶದಲ್ಲಿ ಶ್ರೀಕೃಷ್ಣನ ಅವತಾರವಾಗುತ್ತದೆ. ವಸುದೇವ ದೇವಕಿಯರೇ ಅವನ ಮಾತಾಪಿತೃಗಳು. ಕಾಲನೇಮಿಯೂ ಕಂಸನಾಗಿ ಇದೇ ವಂಶದಲ್ಲಿ ಹುಟ್ಟಿರುತ್ತಾನೆ. ವಸುದೇವ ದೇವಕಿಯರ ಅಷ್ಟಮ ಪುತ್ರನಿಂದ ತನಗೆ ಮೃತ್ಯು ಎಂಬುದು ಅವನಿಗೆ ತಿಳಿದಿತ್ತು. ಆದರಿಂದಲೇ ಅವರಿಬ್ಬರನ್ನು ಕಾರಾಗೃಹದಲ್ಲಿ ಇರಿಸಿರುತ್ತಾನೆ. ಅವರ ಮೊದಲ ಆರೂ ಮಕ್ಕಳನ್ನು ನಿರ್ದಯೆಯಿಂದ ವಧಿಸುತ್ತಾನೆ. ಏಳನೆಯ ಯೋಗಮಾಯೆಯು ದೇವಕಿಯಿಂದ ಗರ್ಭವನ್ನು ಆಕರ್ಷಿಸಿ ನಂದಗೋಕುಲದಲ್ಲಿರುವ ರೋಹಿಣಿಯಲ್ಲಿರಿಸುತ್ತಾಳೆ. ಅವರ ಅಷ್ಟಮ ಪುತ್ರನಾಗಿ ಭಗವಂತನು ಪರಮಕರುಣೆಯಿಂದ ಭೂಲೋಕದಲ್ಲಿ ಅವತರಿಸಿದನು. ದೇವಕಿಯಾದರೋ “ಯಾವ ಒಂದು ನಿರುಪಾಧಿಕವಾದ, ಅವ್ಯಕ್ತವೂ, ಮೊಟ್ಟಮೊದಲನೆಯದೂ, ಜಗದ್ಬೀಜವೂ, ಸ್ವಯಂಜ್ಯೋತೀರೂಪವೂ, ಗುಣವಿಕಾರಗಳ ಸೊಂಕಿಲ್ಲದ್ದೂ, ಆಭಾಧಿತವಾದ ಅಸ್ತಿತ್ವವುಳ್ಳದ್ದೂ, ಯಾವುದೇ ವಿಶೇಷಗಳ ಮಿತಿಗೆ ಒಳಪಡದೇ, ಸರ್ವಕಾಲದೇಶಸಾಮಾನ್ಯವಾಗಿರುವುದೂ ಅಂತಹ ಸಾಕ್ಷಾತ್ ಅಧ್ಯಾತ್ಮ-ದೀಪನಾದ ವಿಷ್ಣುವೇ ನೀನಾಗಿದ್ದೀಯೆ” ಎಂದು ಅವನ ದಿವ್ಯದೃಷ್ಟಿಯ ಅನುಗ್ರಹ ಸಂಪನ್ನಳಾದ ಸಾಕ್ಷಾತ್ ದೇವಕಿಯೇ ಕೊಂಡಾಡುತ್ತಾಳೆ. ಹಾಗೆ ಅವರು ಅವನ ತಾತ್ವಿಕ ಸ್ವರೂಪವನ್ನು ನೋಡಲು ಸಮರ್ಥರಾಗುತ್ತಾರೆ. ಅರ್ಜುನ, ಯಶೋಧೆಯರಲ್ಲಿಯೂ ನಾವು ಇಂತಹ ರೂಪವನ್ನು ನೋಡಿದ ಧನ್ಯತಾಭಾವವನ್ನು ನೋಡುತ್ತೇವೆ. 

ಶ್ರೀಕೃಷ್ಣನನ್ನು ವಸುದೇವನು ವ್ರಜೆಯಲ್ಲಿ ಬಿಟ್ಟುಬರುತ್ತಾನೆ. ಪೂತನಿ ಮುಂತಾದ ಅಸುರರು ವಧಿಸಲು ಬಂದು ತಾವೇ ನಾಶವಾಗುತ್ತಾರೆ.

ಆನಂತರ ರಹಸ್ಯವಾಗಿ ಗರ್ಗಮುನಿಗಳಿಂದ ಶ್ರೀಕೃಷ್ಣ-ಬಲರಾಮರಿಗೆ ಉಪನಯನ ಸಂಸ್ಕಾರವು ನಡೆಯುತ್ತದೆ. ಶ್ರೀಕೃಷ್ಣನ ಲೀಲಾವಿಲಾಸಗಳನ್ನು ಸಮಸ್ತರೂ ಅನೇಕ ರೂಪಗಳಲ್ಲಿ ಭಾವಿಸಿ ಸುಖಿಸುತ್ತಾರೆ. ಮೂರೂ ಲೋಕಗಳನ್ನು ವ್ಯಾಪಿಸುವ ಅವನ ಲೀಲೆಗಳ ವಿವರಣೆಯ ವ್ಯಾಖ್ಯಾನವನ್ನು ಅವನೇ ಬಿಚ್ಚಿಡಬೇಕು ಅಥವಾ ಅವನ ಹೃದಯವನ್ನು ಬಲ್ಲ ಮಹಾತ್ಮರು ತಿಳಿಸಬೇಕು. ಹೀಗೆ ಭಗವಂತನು ತನ್ನ ಬಾಲಲೀಲೆಗಳಿಂದ ಗೋಪ-ಗೋಪಿಕೆಯರ ಹೃದಯವನ್ನೂ ಸಂಪೂರ್ಣ-ವ್ರಜವನ್ನೂ ವ್ಯಾಪಿಸಿಕೊಂಡುಬಿಟ್ಟನು. ಕೆಲವರು ಅವನಲ್ಲಿ ಬೆಳೆದ ಸ್ನೇಹದಿಂದ, ಕೆಲವರು ಅವನ ಸಾಹಸದಿಂದ, ಕೆಲವರು ಅವನ ತುಂಟಾಟಗಳಿಂದ, ಅವನ ಬಲದಿಂದ, ರೂಪದಿಂದ, ಜಾಣತನದಿಂದ, ವಾತ್ಸಲ್ಯಗಳಿಂದ, ಮಂದಹಾಸದಿಂದ, ಕರುಣೆಯಿಂದ ವೇಣುಗಾನದಿಂದ -ಹೀಗೆ ಅನ್ಯಾನ್ಯ ಪ್ರಕೃತಿಯುಳ್ಳವರೆಲ್ಲರಿಗೂ ಹೊಂದುವ ಭಾವದಿಂದ,ಅವರ ಹೃದಯಗಳನ್ನು ಒಳ-ಹೊರಗೆ ತುಂಬಿಕೊಂಡು ತನ್ನಂತೆ ಮಾಡಿಕೊಂಡ ದಿವ್ಯಲೀಲೆಗಳ ಕಾರಣದಿಂದ ಸದಾ,ಸರ್ವದಾ ವ್ರಜವು ಕೃಷ್ಣಮಯವಾಗಿಬಿಟ್ಟಿತು.

ನಂತರ ಅಕ್ರೂರನು ಕಂಸನ ಆದೇಶವನ್ನೇ ನೆಪಮಾಡಿಕೊಂಡು ವ್ರಜಕ್ಕೆ ಬರುತ್ತಾನೆ. ಅವರು ಅಕ್ರೂರನೊಡನೆ ಮಧುರೆಗೆ ತೆರಳಲು ಸಿದ್ಧರಾಗುತ್ತಾರೆ.ಆಗ ಗೋಪಿಕೆಯರು “ನೀನು ಹೆಸರಿಗೆ ಮಾತ್ರ ಅಕ್ರೂರ”ಎಂದು ನಿಂದಿಸುತ್ತಾ ದುಃಖಿಸುತ್ತಾರೆ.ಮುಂದೆ ಕಂಸನ ವಧೆಯಾಗುತ್ತದೆ.

ನಂತರ ಸಾಂದೀಪನಿಗಳ ಗುರುಕುಲದಲ್ಲಿ ದಿನಕ್ಕೊಂದರಂತೆ 64 ದಿನಗಳಲ್ಲಿ 64 ವಿದ್ಯೆಗಳನ್ನು ಕಲಿಯುತ್ತಾರೆ. ವಿದರ್ಭದೇಶದ ರಾಜಕುಮಾರಿ ರುಕ್ಮಿಣಿಯೊಡನೆ ವಿವಾಹವಾಗುತ್ತದೆ. ಸ್ಯಮಂತಕ ಮಣಿಯ ಪ್ರಕರಣದಲ್ಲಿ ಸತ್ಯಭಾಮೆ ಮತ್ತು ಜಾಂಬವತಿಯರೊಡನೆ ವಿವಾಹವಾಗುತ್ತದೆ. ಮುಂದೆ ಮಹಾಭಾರತದಲ್ಲಿ ಧರ್ಮಸಂಸ್ಥಾಪನೆಯ ಹಿನ್ನೆಲೆಯಲ್ಲಿ ಬಹುಗಂಭೀರವಾದ ಶ್ರೀಕೃಷ್ಣನ ನಡೆಯನ್ನು ನೋಡುತ್ತೇವೆ. ಅವತಾರದ ಉಪಸಂಹಾರದ ಸಂದರ್ಭದಲ್ಲಿ ಬಲರಾಮನು ಯೋಗಸ್ಥಿತಿಯಲ್ಲಿ ಸಹಸ್ರಫಣಾಯುಕ್ತನಾಗಿ ಸಾಗರವನ್ನು ಪ್ರವೇಶಿಸಿದರೆ, ಶ್ರೀಕೃಷ್ಣನು ಬೇಡನೊಬ್ಬನ ಬಾಣದ ನೆಪದಿಂದ ತನ್ನ ಮೂಲಸ್ವರೂಪದಲ್ಲಿ ಲಯಗೊಳ್ಳುತ್ತಾನೆ.

ಉತ್ಸವಾಚರಣೆ;

ಜನ್ಮಾಷ್ಟಮೀ ಮತ್ತು ಶ್ರೀಜಯಂತೀ ಇವೆರಡೂ ಬೇರೆ ಬೇರೆ ಪರ್ವಗಳು. ಮೊದಲನೆಯದರಲ್ಲಿ ಅಷ್ಟಮೀ ತಿಥಿಗೆ ಪ್ರಾಮುಖ್ಯ ಮತ್ತು ಎರಡನೆಯದರಲ್ಲಿ ರೋಹಿಣೀನಕ್ಷತ್ರಕ್ಕೆ ಪ್ರಾಧಾನ್ಯ. ಹಾಗೆಯೇ ಸೋಮವಾರ ಮತ್ತು ಬುಧವಾರಗಳಲ್ಲಿ ಶ್ರೀಕೃಷ್ಣ ಮತ್ತು ಶ್ರೀರಾಮನ ಸಾಕ್ಷಾತ್ಕಾರಕ್ಕೆ ಬೇಕಾದ ವಿಶೇಷವಾದ ಪ್ರಕೃತಿಯ ಅನುಕೂಲ ಒದಗಿಬರುತ್ತದೆ”ಎಂದು ಯೋಗಿಗಳ ಅನುಭವದಿಂದ ಸಿದ್ಧವಾದ ವಿವರಣೆಯನ್ನು ಶ್ರೀರಂಗಮಹಾಗುರುಗಳು ತಿಳಿಸಿದ್ದರು. ಶ್ರಾವಣಮಾಸವು ಜನ್ಮಾಷ್ಟಮಿಗೂ ಮತ್ತು ಭಾದ್ರಪದ ಮಾಸವು ಶ್ರೀಜಯಂತಿಗೂ ಪ್ರಶಸ್ತ. ಹಾಗೆಯೇ ಅವತಾರವು ಯಾವ ಸಮಯದಲ್ಲಿ ಆಯಿತೋ ಆದೇ ಸಮಯದಲ್ಲಿ ಆಚರಿಸುವುದು ಉತ್ತಮಪಕ್ಷ.

ಅಂದು ಶುಚಿಯಾಗಿದ್ದು, ಭಕ್ತಿಶ್ರದ್ಧೆಗಳಿಂದ ವಿಶೇಷವಾಗಿ ಶ್ರೀಕೃಷ್ಣಪರಮಾತ್ಮನ ಆರಾಧನೆಯನ್ನು ಮಾಡಬೇಕು. ಭಕ್ತಿ, ಸೌರಭ ಮತ್ತು ರಸಗಳೇ ಅಂತರ್ಯಾಮಿಯಾದ ಸ್ವಾಮಿಗೆ ಪ್ರಿಯವಾದ ದ್ರವ್ಯಗಳು.ದಾಮೋದರನಿಗೆ ಅರ್ಪಿತವಾಗುವ ಆ ನೈವೇಧ್ಯಗಳಲ್ಲಿ ಶುಂಠಿಬೆಲ್ಲದ ಪ್ರಸಾದವು ಅಂದು ಭಗವಂತನ ಬಗೆಬಗೆಯ ನೈವೇದ್ಯಪ್ರಸಾದಗಳನ್ನು ಸ್ವೀಕರಿಸುವ ಭಕ್ತರ ಎಲ್ಲ ಬಗೆಯ ಆರೋಗ್ಯಕ್ಕೂ ಒಳ್ಳೆಯ ಔಷಧಿಯೆಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಅಂದು ಮಹಾಮಂಗಳಾರತಿಯ ನಂತರ ಭಗವಂತನ ಮನಸ್ತತ್ವದ ಅವತಾರವಾಗಿರುವ ಚಂದ್ರನಿಗೂ ಅರ್ಘ್ಯವನ್ನು ಸಮರ್ಪಿಸುತ್ತಾರೆ. ಶ್ರೀಕೃಷ್ಣನ ಉತ್ಸವಾಚರಣೆಯ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ನೀಡಿದೆ. ಇನ್ನೂ ಬಗೆಬಗೆಯ ಕ್ರಮದಲ್ಲಿ ಆತನ ಉತ್ಸವವನ್ನು ಆಚರಿಸುವ ಪದ್ಧತಿಗಳು ದೇಶದ ವಿವಿಧ ಭಾಗಗಳಲ್ಲಿ ಇವೆ. ಶ್ರೀಕೃಷ್ಣಜಯಂತಿಯಂದೇ ರಾತ್ರಿಯಲ್ಲಿ ಪೂಜೆ ಮುಗಿದೊಡನೆಯೇ ಪಾರಣೆಯನ್ನು ಮಾಡಬೇಕು ಎಂಬ ಅಭಿಪ್ರಾಯಗಳನ್ನೂ ಶಾಸ್ತ್ರಗಳಲ್ಲಿ ನೋಡುತ್ತೇವೆ.

ಈ ಮೂಲಕ ನಿಗಮಕ್ಕೆ ಸಿಲುಕದ ಅಗಣಿತ ಮಹಿಮನ ಅತ್ಯಂತ ಸಂಕ್ಷಿಪ್ತತಮವಾದ ವಿವರಗಳನ್ನು ನೀಡಿದೆ. ಅವನ ಸ್ಮರಣೆಯಿಂದ ನಮ್ಮ ಮೈ ಮನಗಳನ್ನು ಪವಿತ್ರಗೊಳಿಸಿಕೊಳ್ಳೋಣ.