Tuesday, October 22, 2019

ದೈವಾನುಗ್ರಹದ ಜೊತೆಗೆ ಪುರುಷ ಪ್ರಯತ್ನವೂ ಬೇಕು. (Daivanugrahada jothege purusha prayathnavu beku)

ಲೇಖಕರು:  ಮೈಥಿಲೀ ರಾಘವನ್ 



ಒಂದು ಗ್ರಾಮದಲ್ಲಿ ಸನ್ಯಾಸಿಯೊಬ್ಬ ವಾಸವಾಗಿದ್ದ. ದೈವಭಕ್ತನಾಗಿ ದೈವವನ್ನೇ ಸರ್ವದಾ ನಂಬಿದ್ದ ಆತನನ್ನು ಗ್ರಾಮದ ಜನರೆಲ್ಲರೂ ಅತ್ಯಂತ ಗೌರವದಿಂದ ಕಾಣುತ್ತಿದ್ದರು.

ಒಮ್ಮೆ ಪಕ್ಕದಲ್ಲಿನ ನದಿಯು ಉಕ್ಕಿಬಂದು ಗ್ರಾಮವನ್ನೆಲ್ಲ ಆವರಿಸತೊಡಗಿತು. ಜನರು ಗಾಬರಿಗೊಂಡು ಗ್ರಾಮದಿಂದಾಚೆ ಸುರಕ್ಷಿತ ಸ್ಥಳಸೇರಲು ಉದ್ಯುಕ್ತರಾದರು. ತಮ್ಮೆಲ್ಲರ ಗೌರವಕ್ಕೆ ಪಾತ್ರನಾದ ಸಂನ್ಯಾಸಿಯ ಬಳಿ ಬಂದು “ಸ್ವಾಮಿ, ನದಿ ಉಕ್ಕಿ ಬರಿತ್ತಿದೆ. ಸ್ವಲ್ಪ ಕಾಲದಲ್ಲೇ ಗ್ರಾಮವು ಮುಳುಗಿಹೋಗುವುದು. ನಾವೆಲ್ಲರೂ ಗ್ರಾಮದಿಂದಾಚೆ ಹೋಗುತ್ತಿದ್ದೇವೆ. ತಾವೂ ನಮ್ಮ ಜೊತೆಯಲ್ಲಿ ಸುರಕ್ಷಿತ ಸ್ಥಾನಕ್ಕೆ ತೆರಳಬೇಕು” ಎಂದರು. ಎಷ್ಟೇ ಪ್ರಾರ್ಥಿಸಿದರೂ ಸಂನ್ಯಾಸಿಯು “ನನಗೆ ಭಗವಂತನ ಮೇಲೆ ಅಪಾರ ನಂಬಿಕೆಯಿದೆ. ಅವನು ಅವಶ್ಯವಾಗಿ ನನ್ನನ್ನು ಕಾಪಾಡುವನು. ಆದ್ದರಿಂದ ನಾನು ಇಲ್ಲೇ ಉಳಿಯುತ್ತೇನೆ” ಎಂದು ತಾನು ಕುಳಿತಿದ್ದ ಮರದ ಕೆಳಗಿನ ಕಲ್ಲಿನ ಮೇಲೇ ಕುಳಿತಿದ್ದ. ಎಷ್ಟು ಬೇಡಿದರೂ ಆತ ಕೇಳಲಿಲ್ಲವಾಗಿ ಜನರು ಹೊರಟುಹೋದರು.

ಕ್ರಮೇಣ ಗ್ರಾಮವೆಲ್ಲವೂ ಮುಳುಗತೊಡಗಿತು. ಆತನು ಮಾತ್ರ ಭಗವಂತ ಕಾಯುತ್ತಾನೆಂದು ಅಲ್ಲಿಯೇ ಕುಳಿತಿದ್ದ. ಸ್ವಲ್ಪ ಹೊತ್ತಿನಲ್ಲಿ ದೋಣಿಯೊಂದು ಅಲ್ಲಿಗೆ ಬಂದಿತು. ದೋಣಿಗಾರನು ಸಂನ್ಯಾಸಿಯನ್ನು ಕಂಡು “ಸ್ವಾಮಿ, ಬನ್ನಿ. ತಮ್ಮನ್ನು ಬೇರೆಡೆಗೆ ಒಯ್ಯುತ್ತೇನೆ” ಎಂದ. ಆಗಲೂ ಆತನು ಕುಳಿತಲ್ಲೇ ಕುಳಿತು “ದೈವ ನನ್ನನ್ನು ಕಾಪಾಡುವುದು, ಹೆದರಬೇಡ” ಎಂದ. ಬೇರಾರೂ ಅಲ್ಲಿ ಕಾಣಲಿಲ್ಲವಾಗಿ ದೋಣಿಗಾರನು ಹೊರಟುಹೋದ.

ಕೊನೆಗೆ ಸಂನ್ಯಾಸಿಯು ಪ್ರವಾಹದಲ್ಲಿ ಮುಳುಗಿ ಪ್ರಾಣತ್ಯಾಗ ಮಾಡಿದ. ಸ್ವರ್ಗಕ್ಕೆ ಹೋದ ಆತ ದೇವರನ್ನು ಕೇಳಿದ “ಭಗವಂತ, ನಿನ್ನನ್ನೇ ನಂಬಿದ್ದ ನನ್ನನ್ನು ಮುಳುಗಿಸಿಬಿಟ್ಟೆಯಲ್ಲಾ? ಇದು ನ್ಯಾಯವೇ?” ಭಗವಂತ ಮುಗುಳ್ನಕ್ಕು ಹೇಳಿದ. “ನನ್ನನ್ನೇ ನಂಬಿದ್ದೆಯಾದ್ದರಿಂದಲೇ ಗ್ರಾಮದ ಜನರ ಗೌರವಕ್ಕೆ ಪಾತ್ರನಾಗಿ ಪ್ರವಾಹ ಬರುವ ಮುನ್ನ ಸೂಚನೆಯನ್ನು ಪಡೆದೆ. ನಂತರ ನಿನಗಾಗಿ ದೋಣಿಯನ್ನೂ ಕಳುಹಿಸಿದೆ. ಆದರೆ ಅದರಲ್ಲಿ ಹತ್ತಿ ಕುಳಿತುಕೊಳ್ಳುವಷ್ಟು ಪ್ರಯತ್ನವನ್ನಾದರೂ ನೀನು ಮಾಡಬೇಕಿತ್ತಲ್ಲವೇ! ಏಕೆ ಮಾಡಲಿಲ್ಲ?” ಎಂದ. ಸಂನ್ಯಾಸಿ ನಿರುತ್ತರನಾದ. ದೈವವನ್ನೇ ನಂಬಿರಬೇಕೆನ್ನುವುದು ಸರಿಯಾದರೂ ಜೊತೆಗೆ ನಮ್ಮದಾದದ್ದೊಂದು ಪ್ರಾಮಾಣಿಕವಾದ ಪ್ರಯತ್ನವೂ ಜರುಗಲೇ ಬೇಕೆನ್ನುವುದು ಇಲ್ಲಿಯ ಆಶಯ. ಈ ಸತ್ಯವನ್ನೇ ಸ್ಪಷ್ಟಪಡಿಸುತ್ತ ಸುಭಾಷಿತವೊಂದು ಸಾರುತ್ತದೆ `ನಿದ್ರಿಸುವ ಸಿಂಹದ ಬಾಯೊಳಗೆ ಆಹಾರಾರ್ಥವಾಗಿ ಮೃಗಗಳು ಬಂದು ಬೀಳುವುದಿಲ್ಲ’.

ಶ್ರೀರಂಗಮಹಾಗುರುಗಳು ತಿಳಿಸಿರುವಂತೆ ದೈವಾನುಗ್ರಹ-ಪುರುಷಪ್ರಯತ್ನಗಳು ರಥದ ಚಕ್ರಗಳಂತೆ. ಹೇಗೆ ಎರಡು ಚಕ್ರಗಳೂ ಒಟ್ಟಿಗೆ ಉರುಳಿದಾಗ ಮಾತ್ರ ರಥವು ಮುನ್ನಡೆಯುವುದೋ ಅಂತೆಯೇ ದೈವಾನುಗ್ರಹದ ಜೊತೆಯಾಗಿ ಪುರುಷಪ್ರಯತ್ನವೂ ಇದ್ದಾಗ ಮಾತ್ರ ಜೀವನ ರಥವು ಸುಗಮವಾಗಿ ಸಾಗುವುದು. ಕಾರ್ಯಸಿದ್ಧಿಯಾಗುವುದು. ಜೀವನದಲ್ಲಿ ಭಗವಂತನಿಂದಲೇ ಅನುಗ್ರಹಿಸಲ್ಪಟ್ಟ ಬುದ್ಧಿಯನ್ನುಪಯೋಗಿಸಿಕೊಂಡು ವಿವೇಕದಿಂದ ಸಾಗಬೇಕಾಗಿದೆ. ‘ದೇವತೆಗಳು ದನಕಾಯುವವರಂತೆ ದಂಡವನ್ನು ಹಿಡಿದು ಎದುರಿಗೆ ಬಂದು ಕಾಯುವುದಿಲ್ಲ. ನಮ್ಮ ಬುದ್ಧಿಯನ್ನು ಪ್ರಚೋದಿಸಿ ಸಹಾಯವನ್ನು ಮಾಡುವರಷ್ಟೆ’ ಎಂಬ ಆರ್ಷವಾಣಿಯನ್ನೂ ಸ್ಮರಿಸಬಹುದಾಗಿದೆ. ಆದ್ದರಿಂದ ಪ್ರತಿಹೆಜ್ಜೆಯಲ್ಲೂ ಭಗವಂತನಲ್ಲಿ ಪ್ರಾರ್ಥನೆಯೊಂದಿಗೆ ಪ್ರಯತ್ನಶೀಲರಾಗುವುದೇ ಸಫಲತೆಯ ಮಾರ್ಗ. ಇದು ಲೌಕಿಕ-ಪಾರಮಾರ್ಥಿಕಗಳೆರಡಕ್ಕೂ ಅನ್ವಯಿಸುವ ಸಾರ್ವಕಾಲಿಕ ಸೂತ್ರ.   

ಸೂಚನೆ:  19/10/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.