Tuesday, October 22, 2019

ಮನಸ್ಸೇ ಬಂಧ-ಮೊಕ್ಷಗಳಿಗೆ ಕಾರಣ (Manasse bandha-mokshagalige kaarana)

ಲೇಖಕರು:  ಸುಬ್ರಹ್ಮಣ್ಯ ಸೋಮಯಾಜಿ



ಒಂದೂರಿನಲ್ಲಿ ಒಬ್ಬಳು ವೇಶ್ಯೆ. ಅವಳಲ್ಲಿಗೆ ಆ ವ್ಯಸನಕ್ಕೆ ಸಿಲುಕಿದವರೆಲ್ಲ ಹೋಗಿಬರುತ್ತಿದ್ದರು. ಆ ವೇಶ್ಯೆಯ ಮನೆಯ ಎದುರು ಒಬ್ಬ ಸಂತರು. ಅವರ ಹತ್ತಿರ ಧರ್ಮಜಿಜ್ಞಾಸೆ ಮಾಡಲು, ಒಳ್ಳೆಯ ಉಪನ್ಯಾಸಗಳನ್ನು ಕೇಳಲು ಸಜ್ಜನರೆಲ್ಲ ಬರುತ್ತಿದ್ದರು. ಅದನ್ನು ವೇಶ್ಯೆ ನಿತ್ಯವೂ ನೋಡುತ್ತಿದ್ದಳು. ಅವಳ ಮನಸ್ಸಿನಲ್ಲಿ-“ ಇವರು ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸದಾ ಭಗವಂತನ ಸ್ಮರಣೆಯಲ್ಲಿ ಕಳೆಯುತ್ತಾರೆ. ಬಂದವರಿಗೆಲ್ಲ ದೇವರ ವಿಷಯಗಳನ್ನು ಹೇಳುತ್ತಾರೆ. ಜೀವಿತದ ಎಲ್ಲ ಅವಧಿಯೂ ಎಷ್ಟು ಪಾವನ! ನಾನಾದರೋ ಧರ್ಮಬಾಹಿರವಾದ ಕೆಲಸವನ್ನು ಮಾಡುತ್ತಿದ್ದೇನೆ. ನನ್ನ ಜೀವನದಲ್ಲಿ ಅವರಂತೆ ಸದಾ ಭಗವಂತನನ್ನು ಆರಾಧಿಸುವ, ಸನ್ನಿವೇಶ ಒದಗಲೇ ಇಲ್ಲವಲ್ಲ. ಎಷ್ಟು ಪಾಪಿ ನಾನು. ಮುಂದಿನ ಜನ್ಮದಲ್ಲಾದರೂ ನನಗೆ ನಿನ್ನನ್ನು ಪೂಜಿಸುವ ಅವಕಾಶ ಕರುಣಿಸಪ್ಪಾ ದೇವ” ಎಂದು ನಿತ್ಯವೂ ಪ್ರಾರ್ಥಿಸುತ್ತಿದ್ದಳು.

ಇತ್ತ ಈ ಸಂತರು ಆ ವೇಶ್ಯೆಯ ಮನೆಗೆ ಹೋಗಿ ಬರುವವರನ್ನೆಲ್ಲಾ ನಿತ್ಯವೂ ನೋಡುತ್ತಿದ್ದರು. ಆ ವೇಶ್ಯೆಯನ್ನು ತುಚ್ಚವಾಗಿ ನಿಂದಿಸುತ್ತಿದ್ದರಾದರೂ, ಹೀಗೆ ಯೋಚಿಸುತ್ತಿದ್ದರು -“ನಿತ್ಯವೂ ಇವಳಲ್ಲಿಗೆ ಬಂದು ಈ ಜನರೆಲ್ಲಾ ಎಲ್ಲ ಬಗೆಯ ಸುಖವನ್ನು ಪಡೆಯುತ್ತಿದ್ದಾರೆ. ನಾನು ಯಾವುದೋ ಕಾರಣಕ್ಕೆ ಸಂತನಾಗಿ  ಜೀವನದ ಸುಖವನ್ನೆಲ್ಲ ಕಳೆದುಕೊಂಡೆ. ನೀರಸವಾದ ಬದುಕಾಯಿತು ನನ್ನದು. ಇವರೆಲ್ಲರಂತೆ ಸಾಮಾನ್ಯ ಮನುಷ್ಯನಾಗಿದ್ದಿದ್ದರೆ ನಾನೂ ಆ ಸುಖವನ್ನೆಲ್ಲ ಅನುಭವಿಸಬಹುದಿತ್ತು” ಎಂದು ಪಶ್ಚಾತ್ತಾಪ ಪಡುತ್ತಿದ್ದರು.

ಮೃತ್ಯು ಯಾರನ್ನು ಬಿಡುತ್ತದೆ? ಆಶ್ಚರ್ಯವೆಂಬಂತೆ ಇಬ್ಬರೂ ಒಂದೇ ದಿನ ಮರಣ ಹೊಂದಿದರು. ವೇಶ್ಯೆಯ ಹೆಣವನ್ನು ನಾಯಿ ನರಿಗಳಿಗೆ ಆಹಾರವಾಗುವಂತೆ ಊರ ಹೊರಗೆ ಎಸೆಯಲಾಯಿತು. ಸಂತರ ದೇಹಕ್ಕೆ ಪೂರ್ಣಕುಂಭದ ಮರ್ಯಾದೆ. ಅಂತಿಮ  ಯಾತ್ರೆಯಲ್ಲಿ ಸಾವಿರಾರು ಜನರ ಮೆರವಣಿಗೆ.

ಆದರೆ ಆಶ್ಚರ್ಯವೊಂದು ನಡೆಯಿತು. ವೇಶ್ಯೆಯ ಜೀವವನ್ನು ಕೊಂಡೊಯ್ಯಲು ವಿಷ್ಣುದೂತರೂ, ಸಂತರ ಜೀವವನ್ನು ಕೊಂಡೊಯ್ಯಲು ಯಮದೂತರೂ ಬಂದರು. ಆತಂಕದಿಂದ ಸಂತರ ಆತ್ಮವು ಕೇಳಿತು - ಏನಿದು ಅನ್ಯಾಯ? ಜೀವನವಿಡೀ ಧರ್ಮ ಕಾರ್ಯದಲ್ಲೇ ಕಳೆದ ನನ್ನನ್ನು ನೀವೇಕೆ ಕೊಂಡೊಯ್ಯುತ್ತಿದ್ದೀರಿ? ಜೀವನಪೂರ್ತಿ ಅಸಹ್ಯವಾದ ಕೆಲಸವನ್ನು ಮಾಡುತ್ತಿದ್ದ ಆ ವೇಶ್ಯೆಯ ಆತ್ಮವನ್ನು ವೈಕುಂಠಕ್ಕೆ ಹೇಗೆ ಕರೆದೊಯ್ಯಲಾಗುತ್ತಿದೆ? ಅಶರೀರ ವಾಣಿಯೊಂದು ಉತ್ತರಿಸಿತು-“ನೀನು ದೇಹದಿಂದ ಧರ್ಮ ಕಾರ್ಯವನ್ನೇ ಮಾಡಿದ್ದರಿಂದ ನಿನ್ನ ದೇಹಕ್ಕೆ ನೋಡು -ಪೂರ್ಣಕುಂಭದ ಮರ್ಯಾದೆ. ಆದರೆ ಮನಸ್ಸಿನಲ್ಲಿ ಸದಾ ವಿಷಯ ಸುಖಗಳನ್ನೇ ಚಿಂತಿಸಿದೆ. ಅದಕ್ಕಾಗಿ ನರಕವೇ ಗತಿ. ಹಾಗೆ ಅವಳು ದೇಹದಿಂದ ಅಸಹ್ಯವಾದ ಕೆಲಸ ಮಾಡಿದಳು. ಅವಳ ದೇಹ ಅನಾಥವಾಗಿ ಬಿದ್ದಿದೆ. ಆದರೆ ಮನಸ್ಸು ಸದಾ ಭಗವಂತನನ್ನೇ ಸ್ಮರಿಸುತ್ತಿತ್ತು ಎಂದೇ ಅವಳಿಗೆ ವೈಕುಂಠ”.

“ಮಾನವ ತನ್ನ ಹೃದಯದಲ್ಲಿ ಭಗವಂತನಿಗೆ ಜಾಗ ಕೊಟ್ಟಷ್ಟೂ ಆ ತೇಜೋನಿಧಿಯು ತನ್ನ ಮಡಿಲಿನಲ್ಲಿ ಅವನಿಗೆ ಜಾಗ ಕೊಡುತ್ತಾನೆ” ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಸದ್ಗತಿ, ದುರ್ಗತಿಗಳಿಗೆ ಮನಸ್ಸೇ ಕಾರಣ. ನಮ್ಮ ಮನಸ್ಸುಗಳನ್ನು ನಿನ್ನ ಸ್ಮರಣೆಯಲ್ಲಿರಿಸು ಎಂದು ಆ ಸರ್ವೆಶ್ವರನನ್ನು ಪ್ರಾರ್ಥಿಸೋಣ.    



ಸೂಚನೆ:  21/10/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.