Sunday, October 13, 2019

ವಾನಪ್ರಸ್ಥಾಶ್ರಮ (Vaana prasthaashrama)

ಲೇಖಕರು:  ನಾಗರಾಜ್ ಗುಂಡಪ್ಪ



ಬ್ರಹ್ಮಚರ್ಯಾಶ್ರಮದಲ್ಲಿ ಇಂದ್ರಿಯ ಸಂಯಮದಿಂದ ಕೂಡಿ ಬ್ರಹ್ಮಜ್ಞಾನವನ್ನು ಸಂಪಾದಿಸಿ, ಗೃಹಸ್ಥಾಶ್ರಮದಲ್ಲಿ ಯೋಗ-ಭೋಗಮಯ ಜೀವನವನ್ನು ನಡೆಸಿದ ನಂತರ ಮುಪ್ಪಿನಲ್ಲಿ ಪಾರಮಾರ್ಥಿಕ ಚಿಂತನೆಯೇ ಮುಖ್ಯವಾಗಿರುವ ಜೀವನ ಶೈಲಿಯತ್ತ ಹೆಜ್ಜೆ ಇಡಬೇಕಾಗುತ್ತದೆ. ಇಂದು ಅಧ್ಯಾತ್ಮ ಚಿಂತನೆ ಕೇವಲ ವೃದ್ಧಾಪ್ಯದಲ್ಲಿ ಮಾತ್ರ, ಬಾಲ್ಯ ಯೌವನಗಳಲ್ಲಲ್ಲಾ ಎನ್ನುವ ತಪ್ಪು ಅಭಿಪ್ರಾಯ ಕೆಲವೆಡೆ ಮನೆ ಮಾಡಿದೆ. ಇದು ಸರಿಯಲ್ಲಾ; ಏಕೆಂದರೆ, ಬಾಲ್ಯದಲ್ಲಿ ಬ್ರಹ್ಮಜ್ಞಾನವನ್ನು ಸಂಪಾದಿಸದೇ, ಯೌವನದಲ್ಲಿ ಸಂಪಾದಿಸಿದ ಜ್ಞಾನವನ್ನು ಕಾಪಾಡಿಕೊಳ್ಳದೇ ಇದ್ದರೆ, ವೃದ್ಧಾಪ್ಯದಲ್ಲಿ ಅಧ್ಯಾತ್ಮ ಸಾಧನೆ ಮಾಡಲು ದೇಹ-ಮನಸ್ಸುಗಳ ಬಲವಿರುವುದಿಲ್ಲ. ಹೀಗಾಗಿ, ವೃದ್ಧಾಪ್ಯದಲ್ಲಿ ಭಗವದ್ಧ್ಯಾನ, ಸಮಾಧಿ ಸ್ಥಿತಿಯಲ್ಲಿಯೇ ಹೆಚ್ಚು ಕಾಲ ಕಳೆಯಬೇಕೆಂದರೆ, ಆ ಸ್ಥಿತಿಯನ್ನು ಬಾಲ್ಯದಲ್ಲಿಯೇ ಸಂಪಾದಿಸಿ ಯೌವನದಲ್ಲಿ ಕಾಪಾಡಿಟ್ಟುಕೊಂಡಿರಬೇಕಾಗುತ್ತದೆ.

ಹೀಗೆ ಪ್ರಾಪಂಚಿಕ ವ್ಯವಹಾರಗಳಿಂದ ದೂರ ಸರಿದು ಪಾರಮಾರ್ಥಿಕ ಜೀವನ ವ್ಯವಸ್ಥೆಗೆ ಅನುಕೂಲವಾದ ವನದ ಕಡೆಗೆ ಪ್ರಸ್ಥಾನ ಮಾಡಿ, ಅಂದರೆ ಹೊರಟು, ವನದಲ್ಲಿಯೇ ನೆಲೆಸಿ ನಡೆಸುವ ಜೀವನಕ್ರಮಕ್ಕೆ ವಾನಪ್ರಸ್ಥಾಶ್ರಮ ಎಂದು ಹೆಸರು. ಈ ಆಶ್ರಮದ ಹೆಸರಿನಲ್ಲಿಯೇ ವನದಲ್ಲಿ ವಾಸ ಎಂದು ಇದ್ದರೂ ಸಹಾ ಅದರ ಮುಖ್ಯ ಗುರಿ ಧ್ಯಾನ-ಸಮಾಧಿಗಳನ್ನೊಳಗೊಂಡ ಪರಮಾತ್ಮ ಚಿಂತನೆಯಾಗಿದ್ದು ವನವಾಸ ಪಾರಮಾರ್ಥಿಕ ಜೀವನಕ್ಕೆ ಸಾಧನವಾಗಿದೆಯಷ್ಟೇ!

ವಾನಪ್ರಸ್ಥಾಶ್ರಮದ ಜೀವನದಲ್ಲಿಯೂ ದಂಪತಿಗಳು ಒಟ್ಟಿಗೇ ಜೀವನ ಮಾಡುತ್ತಾರೆ ಆದರೆ  ಯೋಗ-ಭೋಗಗಳೆರಡನ್ನೂ ಒಳಗೊಂಡಂತಹಾ ಗೃಹಸ್ಥ ಜೀವನದಿಂದ ಯೋಗ ಪ್ರಧಾನವಾದ ಜೀವನದ ಕಡೆಗೆ ಕ್ರಮೇಣವಾಗಿ ಸಾಗುತ್ತಾರೆ. ಉದಾಹರಣೆಗೆ, ಗೃಹಸ್ಥಾಶ್ರಮದಲ್ಲಿ, ಹಿಂದೆ ಸಂಪಾದಿಸಿದ ಜ್ಞಾನವನ್ನು ಕಾಪಾಡಿಕೊಳ್ಳಲು ಪಂಚ ಮಹಾಯಜ್ಞವನ್ನು ಆಚರಿಸುತ್ತಾರೆ. ಯಾವುವೆಂದರೆ, ದೇವತಾರಾಧನೆ, ಪಿತೃ ಯಜ್ಞ, ಜ್ಞಾನ ಯಜ್ಞ, ಮನುಷ್ಯ ಯಜ್ಞ ಅಂದರೆ ಅತಿಥಿ ಅಭ್ಯಾಗತರನ್ನು ನಿತ್ಯದಲ್ಲೂ ಸತ್ಕರಿಸುವುದು ಮತ್ತು ಭೂತ ಯಜ್ಞ ಅಂದರೆ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದು. ವಾನಪ್ರಸ್ಥಾಶ್ರಮದಲ್ಲಿಯೂ ಈ ಐದು ಯಜ್ಞಗಳುಂಟು ಆದರೆ ಅದರಲ್ಲಿ ಸಡಿಲತೆಯುಂಟು. ಮನೆಗೆ ಯಾರಾದರೂ ಬಂದರೆ, ವಿಶೇಷ ಅಡುಗೆ ಮಾಡುವ ಬದಲು ಹಣ್ಣು ಹಂಪಲುಗಳಿಂದಲೇ ಸತ್ಕರಿಸಬಹುದು.

ಗೃಹಸ್ಥಾಶ್ರಮದಲ್ಲಿ ಆಗಾಗ್ಗೆ ಕ್ಷೌರ ಮಾಡಿಸಿಕೊಳ್ಳುತ್ತಿದ್ದವರು ವಾನಪ್ರಸ್ಥದಲ್ಲಿ ಜಟಾಧಾರಿಯಾಗಬಹುದು. ಬಗೆ ಬಗೆಯ ರುಚಿ ತಿಂಡಿಗಳನ್ನು ಮಾಡಿ ಸೇವಿಸುವ ಬದಲು ಕಂದ, ಮೂಲ ಫಲಾದಿಗಳನ್ನು ಹೆಚ್ಚು ಸೇವಿಸುವುದು. ಹೀಗೆ ಭೋಗದಿಂದ ಹೆಚ್ಚು ಹೆಚ್ಚು ಯೋಗದ ಕಡೆಗೆ ವಾಲುತ್ತಾ ನಡೆಸುವ ಜೀವನ ವಾನಪ್ರಸ್ಥಾಶ್ರಮದ ಮುಖ್ಯ ಲಕ್ಷಣವಾಗಿರುತ್ತದೆ.

ಸೂಚನೆ: 12/10/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.