Monday, November 4, 2019

ಆಹಾರದಲ್ಲಿ ವಿಧಿ-ನಿಷೇಧಗಳು (Aharadalli vidhi-nishedhagalu)

ಲೇಖಕರು: ತಾರೋಡಿ ಸುರೇಶ


ಹಿಂದಿನ ಲೇಖನದಲ್ಲಿ ಆಹಾರ ಪದದ ವ್ಯಾಪ್ತಿಯನ್ನು ನೋಡಿದೆವು. ಅದು ಪರಮಾತ್ಮನವರೆಗೂ ಮುಟ್ಟುವಂತೆ ಸ್ವೀಕರಿಸಲ್ಪಡಬೇಕು. ಇಹ-ಪರ ಸೌಖ್ಯಗಳೆರಡನ್ನೂ ಕೊಡಬೇಕು. ಇದು ಸರ್ವೇಂದ್ರಿಯಗಳಿಂದಲೂ ಸ್ವೀಕರಿಸುವ ವಿಷಯಗಳಿಗೆ ಅನ್ವಯಿಸುವುದಾದರೂ ವಿಶೇಷವಾಗಿ ಬಾಯಿಯ ಮೂಲಕ ಸ್ವೀಕರಿಸುವ ಆಹಾರವ್ಯವಸ್ಥೆಯು ಹೇಗಿರಬೇಕು ಎಂಬುದನ್ನು ಮಾತ್ರ ಈ ಲೇಖನಸರಣಿಯಲ್ಲಿ ಪರಿಶೀಲಿಸಲಾಗಿದೆ.

ಆಹಾರದ ವ್ಯವಸ್ಥೆಯಲ್ಲಿ ಜೀವರಕ್ಷಣೆ, ದೇಹಪುಷ್ಟಿ ಮತ್ತು ಸಂತೃಪ್ತಿ ಈ ಎಲ್ಲವೂ ಸೇರಿರಬೇಕು. ಜೀವವು ತನಗಾಗಿ ಒಂದು ದೇಹವನ್ನು ರಚಿಸಿಕೊಂಡಿದೆ. ಶ್ರೀಶಂಕರರು ‘ಸ್ವದೇಶೋ ಭುವನತ್ರಯಮ್’ಎಂದು ಹಾಡಿರುವಂತೆ ಭೌತಿಕ-ದೈವಿಕ-ಆಧ್ಯಾತ್ಮಿಕ ಮೂರು ಲೋಕಗಳಲ್ಲಿಯೂ ಸಂಚರಿಸುವ ಯೋಗ್ಯತೆ ಮಾನವದೇಹದಲ್ಲಿ ಜೀವಕ್ಕೆ ನಿಸರ್ಗಸಹಜವಾಗಿಯೇ ಇರುವಂತಹದ್ದು. ಅದಕ್ಕೆ ಎಲ್ಲಿಯೂ ಅಡ್ಡಿಯಾಗದಂತೆ ನಮ್ಮ ಬಾಳಾಟವಿರಬೇಕಷ್ಟೆ. ಆಗ ತಾನೇ ಪೂರ್ಣಜೀವನವನ್ನು ನಡೆಸಿದಂತಾಗುತ್ತದೆ. ಅದೇ ನಿಯಮವು ಆಹಾರಕ್ಕೂ ಸಲ್ಲುತ್ತದೆ. ಆಹಾರವು ಒಂದೆಡೆ ಆತ್ಮಜೀವನಕ್ಕೂ ಇನ್ನೊಂದೆಡೆ ಲೋಕಜೀವನಕ್ಕೂ ಹೊಂದುವಂತಿರಬೇಕು. ಆತ್ಮೇಂದ್ರಿಯಮನೋಬುದ್ಧಿಗಳಲ್ಲಿ ಯಾವುದರ ಮೇಲೂ ಧಾಳಿನಡೆಸದೆ ಆತ್ಮನವರೆಗೂ ತಲುಪುವಂತಹದ್ದೇ ಆಹಾರ ಎನ್ನುವುದು ಋಷಿಗಳ ತೀರ್ಮಾನ.

ಅತಿಯಾದ ಕಾಫಿ, ಚಹಾಗಳು ನಮ್ಮ ನಿದ್ದೆಯನ್ನೇ ಕೆಡಿಸುತ್ತವೆ. ಕೆಲವೆಡೆಯ ನೀರು  ಗಂಟಲನ್ನು ಕಟ್ಟಿಸುತ್ತದೆ. ಮದ್ಯವು ಬುದ್ಧಿಯನ್ನೇ ಕೆಡಿಸಿಬಿಡುತ್ತದೆ. ಹೀಗೆ ಲೌಕಿಕಜೀವನದ ನಿದ್ರೆ-ಸ್ವಪ್ನ-ಎಚ್ಚರ ಇತ್ಯಾದಿ ಅವಸ್ಥೆಗಳನ್ನೇ, ಸಲ್ಲದ ಆಹಾರವು ನುಂಗಿಬಿಡಬಲ್ಲುದು. ಜ್ಞಾನಿಗಳು ಮಾನವನಿಗೆ ಈ ಮೂರು ಅವಸ್ಥೆಗಳಲ್ಲದೆ ತುರೀಯ ಎಂಬ ನಾಲ್ಕನೆಯ ಸ್ಥಿತಿಯೂ ಉಂಟು, ಅದು ದೇವರೊಡನೆ ಸೇರಿ  ಪರಮಾನಂದವನ್ನು ಅನುಭವಿಸುವ ಸ್ಥಿತಿ ಎಂದು ಕೊಂಡಾಡುತ್ತಾರೆ. ಶ್ರೀರಂಗಮಹಾಗುರುಗಳು “ಆಹಾರವನ್ನು ಭಗವಂತನಿಗೆ ತಲುಪುವಂತೆ ಕೊಡಿ, ಬೇರಿಗೆ ನೀರು ಹಾಕಿ” ಎನ್ನುತ್ತಿದ್ದರು.

ಆದ್ದರಿಂದಲೇ ಮಹರ್ಷಿಗಳ ಸಾಹಿತ್ಯಗಳು ಆಹಾರವನ್ನು ಕುರಿತಾದ ಅನೇಕ ವಿಧಿನಿಷೇಧಗಳನ್ನು ಹೇಳಿವೆ. ಇಹ-ಪರ ಸೌಖ್ಯಗಳು ಅಂದರೆ ಧರ್ಮಾರ್ಥಕಾಮಮೋಕ್ಷಗಳೆಂಬ ಪುರುಷಾರ್ಥಗಳು ನಾಲ್ಕೂ ದೊರಕಬೇಕಾದರೆ ಅಂತಹ ವಿಧಿನಿಷೇಧಗಳನ್ನು ಅನುಸರಿಸುವುದು ಅವಶ್ಯಕ. ಉದಾಹರಣೆಗೆ ಈರುಳ್ಳಿ, ಬೆಳ್ಳುಳ್ಳಿಗಳನ್ನು ನಿಷೇಧಿಸಿದೆ. ವಾಸ್ತವಿಕವಾಗಿ ಆರೋಗ್ಯಕ್ಕೆ ಇವು ಅನುಕೂಲವೇ. ವ್ಯಾದಿಗಳನ್ನೂ ಪರಿಹರಿಸುತ್ತವೆ. ಈ ನಿಷೇಧ ವೈಜ್ಞಾನಿಕವೇ? ಅಂದರೆ ಎಲ್ಲರಿಗೂ ಇದನ್ನು ನಿಷೇಧಿಸಿಲ್ಲ ಎಂಬುದನ್ನು ಗಮನಿಸಬೇಕು. ಧೂಳಿನಲ್ಲಿ ಕೆಲಸ ಮಾಡುವವರು ಇವುಗಳನ್ನು ಸೇವಿಸಬೇಕೆಂದೇ ಆಯುರ್ವೇದವು ಸಾರುತ್ತದೆ. ಈರುಳ್ಳಿಯು ಮೂತ್ರದ ಮೂಲಕ ಧೂಳನ್ನು ಹೊರಹಾಕುತ್ತದೆ. ಬೆಳ್ಳುಳ್ಳಿಯು ವಾತರೋಗನಿವಾರಕ. ಆದರೆ ಇವು ತಮಸ್ಸನ್ನು ವೃದ್ಧಿಗೊಳಿಸಿ ಮನಸ್ಸನ್ನು ಚಂಚಲಗೊಳಿಸುವುದರಿಂದ ಧ್ಯಾನ,ಪೂಜೆಗಳಲ್ಲಿ ನಿರತವಾಗಿರುವವರಿಗೆ ನಿಷೇಧಿಸಲ್ಪಟ್ಟಿದೆ. ಮಧ್ಯಪಾನವೇ ಆದರೂ ‘ಔಷಧಾರ್ಥಂ ಪಿಬೇನ್ಮದ್ಯಮ್’ಎಂದೇ ಆಯುರ್ವೇದವು ಅನುಮತಿಸಿದೆ.

ತುರೀಯವು ಎಂದಿಗೂ ನಂದದ ನಂದಾದೀಪದಂತೆ ಲಭ್ಯವಿರಬೇಕೆಂಬ ಹಿನ್ನೆಲೆಯಲ್ಲಿ ಆಹಾರ-ವಿಹಾರಗಳೆಲ್ಲವನ್ನೂ ಮಹರ್ಷಿಗಳು ಅಳವಡಿಸಿಕೊಟ್ಟಿದ್ದಾರೆ 


ಸೂಚನೆ: 2/11/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.