Tuesday, January 7, 2020

ಆತ್ಮಪ್ರಶಂಸೆಯೆಂಬ ಹೊನ್ನ ಶೂಲವ ಏರುವುದೇಕೆ? (Aathma prashamseyemba honna shoolava Eruvudeke?)

ಲೇಖಕರು:  ಶ್ರೀ. ಕೆ. ಎಸ. ರಾಜಗೋಪಾಲನ್.
(ಪ್ರತಿಕ್ರಿಯಿಸಿರಿ lekhana@ayvm.in)



ಮಹಾಭಾರತದ ಯುದ್ಧ ನಡೆಯುತ್ತಿತ್ತು. ಕರ್ಣನ ಪರಾಕ್ರಮದಿಂದ ಬಹಳವಾಗಿ ಗಾಯಗೊಂಡ ಧರ್ಮರಾಜ ರಣಾಂಗಣದಿಂದ ಹೊರಟು ಶಿಬಿರಕ್ಕೆ ಹೋಗಿಬಿಡುತ್ತಾನೆ. “ಅವನನ್ನು ಒಮ್ಮೆ ನೋಡಿ ಸಮಾಧಾನ ಪಡಿಸಿ ಬಳಿಕ ಕರ್ಣನನ್ನು ವಧಿಸುವೆಯಂತೆ” ಎಂಬ ಕೃಷ್ಣನ ಮಾತನ್ನು ಒಪ್ಪಿ, ಶ್ರೀಕೃಷ್ಣನೊಡನೆ ಅರ್ಜುನನು ಶಿಬಿರಕ್ಕೆ ಹೋಗಿ ಧರ್ಮರಾಜನನ್ನು ಕಾಣುತ್ತಾನೆ.  ಕೃಷ್ಣಾರ್ಜುನರಿಬ್ಬರೂ ಬಂದುದನ್ನು ನೋಡಿ,  ಧರ್ಮರಾಜನು ಕರ್ಣನು ಹತನಾದನೆಂದೇ ಭಾವಿಸಿ ಹರ್ಷಿತನಾಗುತ್ತಾನೆ. ಆದರೆ ಕರ್ಣನಿನ್ನೂ ಹತನಾಗಿಲ್ಲವೆಂದು ಅರಿತು ಅರ್ಜುನನನ್ನು ನಿಂದಿಸುತ್ತಾನೆ. ಗಾಂಡೀವ ಧನುಸ್ಸನ್ನು ಕೃಷ್ಣನಿಗೆ ಕೊಟ್ಟು ಅವನ ಸಾರಥಿಯಾಗೆಂದು ಮೂದಲಿಸುತ್ತಾನೆ. ‘ಅರ್ಜುನನ ಗಾಂಡೀವಕ್ಕೆ ಧಿಕ್ಕಾರವಿರಲಿ’ ಎನ್ನುತ್ತಾನೆ. ಆಗ ಕೋಪಗೊಂಡ ಅರ್ಜುನನು ಧರ್ಮರಾಜನನ್ನು ಸಂಹರಿಸಲು ಉದ್ಯುಕ್ತನಾಗುತ್ತಾನೆ. “ನಿನ್ನ ಗಾಂಡೀವ ಧನುಸ್ಸನ್ನು ಬೇರೆಯವರಿಗೆ ಕೊಟ್ಟುಬಿಡು” ಎಂದು ಯಾರಾದರೂ ನಿಂದಿಸಿದರೆ ಅವರನ್ನು ಸಂಹರಿಸುವುದಾಗಿ ತಾನು ಪ್ರತಿಜ್ಞೆ ಗೈದಿರುವುದಾಗಿ ಕೃಷ್ಣನಿಗೆ ಅರ್ಜುನನು ಹೇಳುತ್ತಾನೆ. ಆಗ ಕೃಷ್ಣನು ಅರ್ಜುನನ ಪ್ರಾರ್ಥನೆಯ ಮೇರೆಗೆ ಹೀಗೊಂದು ಉಪಾಯವನ್ನು ಸೂಚಿಸುತ್ತಾನೆ.

“ಮಾನವಂತನಾದ ಮನುಷ್ಯನು ಯಾವಾಗ ತನ್ನವರಿಂದಲೇ ಮಹಾ ಅವಮಾನವನ್ನು ಹೊಂದುತ್ತಾನೆಯೋ ಅವನು ಬದುಕಿದ್ದರೂ ಸತ್ತಂತೆಯೇ ಸರಿ; ಆದ್ದರಿಂದ ಧರ್ಮರಾಜನನ್ನು ಕುರಿತು ಸ್ವಲ್ಪ ಅವಮಾನಕರವಾದ ಮಾತುಗಳನ್ನು ಹೇಳು. ಆಗ ಧರ್ಮರಾಜನು, ತನ್ನನ್ನು ಅರ್ಜುನನು ಕೊಂದಂತೆಯೇ ಎಂದು ಭಾವಿಸಿಕೊಳ್ಳುತ್ತಾನೆ. ಹೀಗೆ ಮಾಡುವುದರಿಂದ ನಿನ್ನ ಪ್ರತಿಜ್ಞೆಯೂ ನೆರವೇರಿದಂತಾಗುತ್ತದೆ; ಧರ್ಮರಾಜನೂ ಸಾಯದಂತಾಗುತ್ತದೆ”  ಎನ್ನುತ್ತಾನೆ.

ಅರ್ಜುನ, ಧರ್ಮರಾಜನನ್ನು ಹೀಯಾಳಿಸುತ್ತಾನೆ. ಆದರೆ ಒಡನೆಯೇ ಪಶ್ಚಾತ್ತಾಪಪಟ್ಟು ಆತ್ಮಹತ್ಯೆಗೆ ಉದ್ಯುಕ್ತನಾಗುತ್ತಾನೆ. ಇದನ್ನು ತಡೆಯಲು ಧರ್ಮಜ್ಞನಾದ ಕೃಷ್ಣನು, ಆತ್ಮಹತ್ಯೆಗೆ ಸಮಾನವಾದ, ಆದರೆ ಅರ್ಜುನನು ಸಾಯಬೇಕಿಲ್ಲದ ಒಂದು ಉಪಾಯವನ್ನು ತಿಳಿಸಿಕೊಡುತ್ತಾನೆ. “ಅರ್ಜುನ, ನಿನ್ನನ್ನು ನೀನು ಹೊಗಳಿಕೋ. ಅದು ನಿನ್ನನ್ನು ನೀನೇ ಕೊಂದುಕೊಂಡಂತೆ” ಎನ್ನುತ್ತಾನೆ. ಅರ್ಜುನನು ಹಾಗೆಯೇ ಮಾಡುತ್ತಾನೆ. ಆದರೆ ಅರ್ಜುನನ ಮಾತುಗಳಿಂದ ನೊಂದಿದ್ದ ಧರ್ಮರಾಜನನ್ನು ಸಮಾಧಾನಪಡಿಸಲು “ಸತ್ಯದ ಸಂರಕ್ಷಣಾರ್ಥವಾಗಿ ಮಾಡಿದ ನನ್ನ ಮತ್ತು ಅರ್ಜುನನ ಅಪರಾಧವನ್ನು ಕ್ಷಮಿಸು” ಎಂದು  ಶ್ರೀಕೃಷ್ಣನು ಧರ್ಮರಾಜನ ಕಾಲಿಗೆರಗುತ್ತಾನೆ. ಪರಿಸ್ಥಿತಿ ತಿಳಿಯಾಗುತ್ತದೆ. ಅರ್ಜುನ, ಕರ್ಣಸಂಹಾರಕ್ಕೆ ತೆರಳುತ್ತಾನೆ.

ಈ ಪ್ರಸಂಗವನ್ನು ಓದಿದ ಬಳಿಕ, ಇಂದು ಪರನಿಂದೆಯನ್ನು ಮಾಡುವವರು, ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುವವರು ಆತ್ಮಾವಲೋಕನ ಮಾಡಿಕೊಳ್ಳುವುದು ಉಚಿತವಾದೀತು. ಸಾಮಾನ್ಯವಾಗಿ ಮನುಷ್ಯನಲ್ಲಿ ತನ್ನನ್ನು ಯಾರಾದರೂ ಹೊಗಳಬೇಕೆಂಬ ಆಸೆ ಅತ್ಯಂತ ತೀವ್ರವಾಗಿರುತ್ತದೆ. ಯಾರೂ ಹೊಗಳದಿರುವವರಿದ್ದಲ್ಲಿ ಕೊನೆಗೆ ತನ್ನನ್ನು ತಾನೇ ಹೊಗಳಿಕೊಳ್ಳಲು ಹೇಸುವುದಿಲ್ಲ!

ಶ್ರೀರಂಗಮಹಾಗುರುಗಳು “ಒಳ್ಳೆಯದನ್ನು ಪ್ರಶಂಸಿಸುವುದು ಜನರ ಪಾಲಿಗೆ ಬಿಟ್ಟದ್ದು; ಆದರೆ ಕರ್ತವ್ಯನಿಷ್ಠನಾದವನು ಹೊಗಳಿಕೆಗೆ ಹಾತೊರೆಯಬಾರದು. ಮಕ್ಕಳಿಗೆ ತಾಯಿ ಊಟ ಹಾಕಿ ಅದನ್ನು ಜಾಹಿರಾತಿನ ಮೂಲಕ ಊರಲ್ಲೆಲ್ಲಾ ಪ್ರಚಾರ ಮಾಡಬೇಕೆ? ತಾಯಿತನ ಅವಳಲ್ಲಿ ಮಕ್ಕಳಿಗೆ ಉಣಬಡಿಸುವ ಕೆಲಸ ಮಾಡಿಸುತ್ತೆ. ಹೊಗಳಿಕೆ ಎಂಥೆಂಥವರ ಮೈಮನಗಳನ್ನೂ ಉಬ್ಬಿಸಿ ಪ್ರಮಾದಭಾಗಿಗಳನ್ನಾಗಿ ಮಾಡುವಂತಹುದು. ಆದ್ದರಿಂದ ಹೊಗಳಿಕೆಗೆ ಎನಿತೂ ಗಮನ ಕೊಡಬೇಡಿ. ಈಶ್ವರ ಪ್ರೀತಿಗಾಗಿ ಲೋಕಹಿತವಾಗುವಂತೆ ಪ್ರಶಂಸನೀಯವಾದ ಕೆಲಸ ಮಾಡಿ” ಎಂದು ಎಚ್ಚರಿಸುತ್ತಿದ್ದರು. ಈ ಮಾತುಗಳು ನಮ್ಮ ಜೀವನದುದ್ದಕ್ಕೂ ದಾರಿದೀಪವಾಗಿರಲಿ.  

ಸೂಚನೆ:  07/01/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.