Tuesday, January 14, 2020

ಭಾರತೀಯ ಸಂಸ್ಕೃತಿಯಿಂದ ಸಂಭ್ರಮ (Bharatheeya samskruthiyinda sambhrama)

ಲೇಖಕರು:  ಡಾ. ಆರ್. ಮೋಹನ
(ಪ್ರತಿಕ್ರಿಯಿಸಿರಿ lekhana@ayvm.in)



ನಮ್ಮ ದೇಶದಲ್ಲಿ ಪ್ರತಿಯೊಂದು ಸಂಗತಿಯೂ ಒಂದು ಸಂಭ್ರಮಕ್ಕೆ ಕಾರಣ.  ಒಂದು ಮಗು ಹುಟ್ಟಿದರೆ ಒಂದು ಸಂಭ್ರಮ, ಮಗು ಹೊಸಲು ದಾಟಿದರೊಂದು ಸಡಗರ, ವಿದ್ಯಾಭ್ಯಾಸದ ಪ್ರಾರಂಭಕ್ಕೊಂದು, ಕಿವಿ ಚುಚ್ಚಿದರೆ ಮತ್ತೊಂದು ಹಬ್ಬ.  ಮುಂಜಿ, ಮದುವೆಗಳಂತೂ ಕೇಳುವುದೇ ಬೇಡ. ಇನ್ನು ಕಾಲ ಕಾಲಕ್ಕೆ  ವರ್ಷವಿಡೀ ಬರುವ ಹಬ್ಬ-ಉತ್ಸವಗಳು ನಮ್ಮೆಲ್ಲರಿಗೂ ಚಿರಪರಿಚಿತವಷ್ಟೇ.  ಗಣೇಶನ ಹಬ್ಬದಲ್ಲಿ ಬೀದಿ-ಬೀದಿಗೂ ಉದ್ಭವಿಸುವ ಶಾಮಿಯಾನಗಳು, ಛಾವಣಿಗಳು, ಅಲ್ಲಿ ನಡೆವ ಕಾರ್ಯಕ್ರಮಗಳು ಪೂಜೆ-ಮನೋರಂಜನೆಗೆ ವಿಷಯಗಳು. ದಸರಾ ಹಬ್ಬದಲ್ಲಿನ ಬೊಂಬೆಗಳು, ಮೆರೆವಣಿಗೆ, ವಸ್ತು ಪ್ರದರ್ಶನಗಳು, ದೀಪಾವಳಿಯ ಪಟಾಕಿ ಸಡಗರ, ಸಂಕ್ರಾಂತಿಯಲ್ಲಿ  ಎಳ್ಳು ಬೀರುತ್ತಾ ಮನೆ ಮನೆ ತಿರುಗುವುದು, ಯುಗಾದಿ- ರಾಮ ನವಮಿಯ ಸಂಗೀತ ಕಚೇರಿಗಳು ಸಾಂಸ್ಕೃತಿಕ ಹಾಗೂ  ಸಾಮೂಹಿಕ ಉತ್ಸವಗಳಾಗಿವೆ.  ಹೀಗೆ ಪ್ರತಿ ಹಂತದಲ್ಲೂ ಪೂಜೆ, ವ್ರತ,  ಶಾಸ್ತ್ರಗಳ  ಜೊತೆಯಲ್ಲಿ ಊಟ ಉಪಚಾರ, ತಿಂಡಿ, ತಿನಿಸುಗಳು, ದೂರ ದೂರ ಹರಡಿದ ಪರಿವಾರಗಳ ಒಕ್ಕೂಟ,  ಉತ್ಸಾಹ, ಹರಟೆ, ಆಟ ಓಟದಿಂದ ಕೂಡಿದ ಸಂಸ್ಕೃತಿ ನಮ್ಮದು. ಪ್ರತಿಯೊಂದು ಹಳ್ಳಿ, ಊರಿನಲ್ಲೂ ಒಂದು ದೇವಾಲಯ ಇರುವುದು ಖಡ್ಡಾಯ.  ಊರ ಹಬ್ಬ, ಜಾತ್ರೆ, ರಥೋತ್ಸವ ಮುಂತಾದುವು ಊರಿನ ಜನರನ್ನು ಒಂದು ಪರಿವಾರದಂತೆ ಕಟ್ಟಿಡುತ್ತವೆ. ದೇವಾಲಯಗಳು ಹಳ್ಳಿಗಳಲ್ಲಿ ಚಟುವಟಿಕೆಯ ಕೇಂದ್ರಬಿಂದುವಾಗಿವೆ. ದೇವಾಲಯ ಸೇರಿದಂತಿರುವ  ಸಭಾಂಗಣ ಮತ್ತು ಧರ್ಮ ಸತ್ರಗಳು, ಮದುವೆ, ನಾಟ್ಯ, ಬಯಲಾಟ, ಯಕ್ಷಗಾನ, ಸಂಗೀತ ಮುಂತಾದ ಕಾರ್ಯಕ್ರಮಗಳಿಗೆ ನೆಲೆವೀಡು. ಪವಿತ್ರವಾದ ಅರಳೀಕಟ್ಟೆಗಳು, ಉದ್ಯಾನವನಗಳು, ಸ್ನಾನ ಘಟ್ಟಗಳು ಪೂಜೆ, ವ್ರತ, ಹರಕೆಗಳೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರವು  ಹೇಗೋ , ಊರಿನ ಮಕ್ಕಳ ಆಟ, ಪಾಠ ಮೋಜುಗಳಿಗೆ ತಾಣವೂ ಹೌದು. ಒಂದಾನೊಂದು ಕಾಲದಲ್ಲಿ ಇಂಥ ಪುಣ್ಯ ರಮಣೀಯ ಕ್ಷೇತ್ರಗಳಲ್ಲಿ ಹಲವಾರು ಮಂದಿ ವಿದ್ಯಾಭ್ಯಾಸ ಪಡೆಯುತ್ತಿದ್ದ ಗುರುಕುಲಗಳೂ ಬೆಳಗಿದವು. 

ಒಟ್ಟಾರೆ ನೋಡುವುದಾದರೆ ನಮ್ಮ ಸಂಸ್ಕೃತಿ ಎಂದರೆ ದಿನನಿತ್ಯ ನಡೆವ ಒಂದು ಉತ್ಸವ. ಪೂಜೆ, ಜಪ ತಪಗಳ ಜೊತೆಜೊತೆಯಲ್ಲೇ ಊಟ, ಪಾಠ, ಆಟ, ಸಂಭ್ರಮಗಳಿಗೂ ಸಮವಾದ ಅವಕಾಶ ಇಲ್ಲುಂಟು. ಆದರೆ ಇವೆರಡನ್ನೂ ಒಂದು ಸಮತೂಕದಲ್ಲಿ ಸೇವಿಸುವುದು ಅತಿಮುಖ್ಯ. ಈ ಚಿಂತನೆಯನ್ನು ಚೆನ್ನಾಗಿ ಎತ್ತಿ ತೋರಿಸುವ ಪದವೆಂದರೆ ‘ಉತ್ಸವ’. ಉತ್ಸವದಲ್ಲಿನ ಉಲ್ಲಾಸ, ಉತ್ಸಾಹ, ಸಂಭ್ರಮಗಳು ಎಲ್ಲರಿಗೂ ಇಷ್ಟ. ಆದರೆ ಈ ಪದ ಆಳವಾದ ಅರ್ಥವನ್ನೂ ಸಾರುತ್ತಿದೆ. ‘ಉತ್’ ಎಂದರೆ ಮೇಲೆ. ಸವ ಎಂದರೆ ಯಜ್ಞ. ಉತ್ಸವ ಎಂದರೆ ನಮ್ಮನ್ನು ಮೇಲಕ್ಕೆ ಹತ್ತಿಸುವ ಯಜ್ಞ. ಭುವಿಯ ಮಾನವನು ದಿವಿಗೆ ಹತ್ತಿ ದೈವದತ್ತ ಸಂತೋಷವನ್ನು ಆಸ್ವಾದಿಸುವ ಸದವಕಾಶ ಉತ್ಸವ. ಈ ಉತ್ಸವ-ಹಬ್ಬಗಳಲ್ಲಿ ಉದರಕ್ಕೆ ತೃಪ್ತಿಯಾಗುವಂತೆ ಊಟ ಮಾಡುವುದು ಇದ್ದೇ ಇದೆ. ಆ ತಿನಿಸುಗಳನ್ನು ದಾಮೋದರನಿಗೆ ಅರ್ಪಿಸಿ ಸ್ವೀಕರಿಸಿದರೆ ಉದರದ ಜೊತೆಗೆ ಮನಸ್ಸು, ಆತ್ಮಗಳಿಗೂ ತಂಪು. ಹಾಡು-ಕುಣಿತದ ಮಹದಾನಂದದ ನಡುವೆ ಮಹಾದೇವನ ಡಮರುಗದೊಂದಿಗೆ ಶ್ರುತಿ ಸೇರಿಸೋಣ. ತಾಂಡವದ ಹೆಜ್ಜೆಗೆ ಗೆಜ್ಜೆಯಂತೆ ನಮ್ಮಕುಣಿತವಿರಲಿ ಎಂದು ಪ್ರಾರ್ಥಿಸೋಣ. ನಮ್ಮ ಮನೋರಥಗಳಲ್ಲಿ ಮನಸ್ಸಿನ ಒಡೆಯನಾದ ಹರಿಯನ್ನು ಬಿಜೆಯ ಮಾಡಿಸಿದರೆ ಸಿಗುವುದು ಸಂತೋಷ ಮತ್ತು ನೆಮ್ಮದಿಗಳು. ಬಂಧು ಬಳಗ ಒಗ್ಗೂಡಿದಾಗ ಹರಟೆ ಕಚೇರಿಯ ಜೊತೆಯಲ್ಲಿ ಭಜನೆ ಗೋಷ್ಠಿಯೂ ಸೇರಲಿ. ಸ್ನಾನ, ನೀರಾಟಗಳ ಜೊತೆ, ಹೃದಯ ಗುಹೆಯಲ್ಲಿ  ಬೆಳಗುವ ದೇವದೇವನ ಅಭಿಷೇಕವನ್ನೂ ಮಾಡೋಣ. ನಮ್ಮ ಸಂಸ್ಕೃತಿಯಲ್ಲಿ  ಸಂಭ್ರಮ ತುಂಬಿದೆ. ಆದರೆ ಇದು ನಮ್ಮ ಮನಸ್ಸು ಬುದ್ಧಿಗಳನ್ನು ಭ್ರಮೆಯೊಳಗೆ ಸಿಲುಕಿಸದಿರಲಿ.  ಜೋಕೆ ! ಈ ಸಂಭ್ರಮವು ನಮ್ಮ ಪಾಲಿಗೆ  ಉತ್ಸವವಾಗಲಿ. ಮನಸ್ಸಿನ ವೇಗವನ್ನು ನೀಗಿಸಲಿ  ಅಂತರಂಗಕ್ಕೆ ತಂಪು, ನೆಮ್ಮದಿ ಶಾಂತಿಗಳನ್ನು ಉಂಟುಮಾಡಲಿ.

ಸೂಚನೆ:  11/1/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.