Sunday, January 26, 2020

ದೋಷಾಪನಯನ ಮತ್ತು ಗುಣಾಧಾನ (Doshaapanayana mattu ginaadhana)

ಲೇಖಕರು: ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ 
(ಪ್ರತಿಕ್ರಿಯಿಸಿರಿ : lekhana@ayvm.in)



ಮನಸ್ಸಿನ ದೋಷಗಳನ್ನು ತೆಗೆದು ಮೂಲದ ಆಶಯವನ್ನು ಎಲ್ಲೆಲ್ಲೂ ಬೆಳೆಸುವ ವಿಧಾನಗಳನ್ನು ಅವರು “ಸಂಸ್ಕಾರ”ಎಂಬ ಹೆಸರಿನಿಂದ ಕರೆದರು.  ನಮ್ಮ ಮನಸ್ಸು-ಬುದ್ಧಿಗಳಲ್ಲಿ ಉಂಟಾಗಿರುವ ನಮ್ಮ ಮೂಲಸ್ವರೂಪದ ವಿಸ್ಮರಣೆಯೇ ಆ ದೋಷ. ನಾವೆಲ್ಲಾ ಈ ವಿಶ್ವವೆಂಬ ಸಂತೆಗೆ ಬಂದಿದ್ದೇವೆ.
ಮನೆಯನ್ನು ಮರೆತಿದ್ದೇವೆ. “ನಾವು ಸಂತೆ ವ್ಯಾಪಾರಕ್ಕೆ ಬಂದಿರುವುದು ಸರಿಯೇ.ಹಾಗೆಂದು
ವ್ಯಾಪಾರದಲ್ಲಿ ನಿರುತ್ಸಾಹ ಪಡಬೇಕಾಗಿಲ್ಲ. ಆದರೆ ವ್ಯಾಪಾರದ ಉತ್ಸಾಹದಲ್ಲಿ ತನ್ನ ಮನೆಗೆ ಹೋಗಿ
ಸೇರಬೇಕಾದ್ದನ್ನು ಮಾತ್ರ ಮರೆಯಬಾರದು” ಎಂಬ ಶ್ರೀರಂಗಮಹಾಗುರುಗಳ ಮಾತು ನಮ್ಮ ಜೀವನಗಳ ವಿಷಯದಲ್ಲಿ ಸದಾ ನೆನಪಿಡಬೇಕಾಗಿದೆ. ಮೂಲ ಮನೆಯನ್ನು ಮರೆತಿರುವ ನಮ್ಮ ಸ್ಥಿತಿಯನ್ನು ಗಮನಿಸಿ, ಮತ್ತೆ ನಮಗೆ ನೆನಪಾಗಲು ಜ್ಞಾನಿಗಳು ಮಾಡಿದ ಉಪಾಯವೇ ಸಂಸ್ಕಾರಗಳು. ಅಂತಹ ವಿಸ್ಮರಣೆಯ ತಮಸ್ಸನ್ನು ತೊಡೆದುಹಾಕುವ, ಸ್ಮರಣೆಯನ್ನುಂಟುಮಾಡುವ ಕೆಲಸವೆಲ್ಲವೂ ಸಂಸ್ಕಾರವೇ ಆಗುತ್ತದೆ.

ಜ್ಞಾನಿಶ್ರೇಷ್ಠರಾದ ಶಂಕರಭಗವತ್ಪಾದರು ಸಂಸ್ಕಾರ ವೆಂದರೆ- “ದೋಷಾಪನಯನ “ ಮತ್ತು “ಗುಣಾಧಾನ “ ಎಂದಿದ್ದಾರೆ. ಒಂದು ತಾಮ್ರದ ಪಾತ್ರೆಯಲ್ಲಿನ ಕೊಳೆಯನ್ನು ತೊಳೆಯುವುದು ದೋಷಾಪನಯನದ ಕೆಲಸವಾದರೆ ಅದಕ್ಕೆ ಹೊಳಪು ಬರುವಂತೆ ಪಾಲಿಷ್ ಮಾಡುವುದು ಗುಣಾಧಾನ. ಜೀವನದಲ್ಲಿ ಇವೆರಡೂ ನಿರಂತರವಾಗಿ ಆಗುತ್ತಿರಬೇಕಾದ ಕ್ರಿಯೆ ಅಥವಾ ಕರ್ಮವಾಗಿದೆ. ದೋಷಗಳು ಸೇರಿಕೊಳ್ಳುವುದು ನಿಸರ್ಗ ಸಹಜ. ಒಂದು ಮೇಜನ್ನು ಒರೆಸಿಟ್ಟರೆ ಸಂಜೆಯವೇಳೆಗೆ ಮತ್ತೆ ಧೂಳಾಗಿರುತ್ತದೆ. ಪಾಂಚಭೌತಿಕವಾದ ಜಗತ್ತಿನಲ್ಲಿ ಈ ಬಗೆಯ ದೋಷಗಳು ಅನಿವಾರ್ಯ. ಎಂದೇ ಅವುಗಳನ್ನು ತೊಡೆದುಹಾಕುವ ಸಂಸ್ಕಾರದ ಕೆಲಸವೂ ನಿರಂತರವಾಗಿ ಆಗಬೇಕಾಗುತ್ತದೆ.

ಮನಸ್ಸಿನ ಮೂಲಸ್ವರೂಪದ ವಿಸ್ಮರಣೆಯನ್ನು ತೊಡೆದುಹಾಕಿ ಮನಸ್ಸಿಗೆ ತನ್ನ ಸ್ವಸ್ವರೂಪವಾದ
ಆನಂದವನ್ನು ಸ್ಮರಣೆಗೆ ತಂದುಕೊಡಲೆಂದೇ ಇಲ್ಲಿನ ಸಮಸ್ತ ಆಚಾರ-ವಿಚಾರಗಳೂ ಬಂದಿವೆ.
ಪ್ರಧಾನವಾಗಿ ಹದಿನಾರು ಸಂಸ್ಕಾರಗಳನ್ನು ಹೇಳಿದ್ದರೂ ಸಂಸ್ಕಾರಗಳು ನಿರಂತರ ನಡೆಯುವ ಪ್ರಕ್ರಿಯೆ. “ನಿಷೇಕಾದ್ಯೈಃ ಸ್ಮಶಾನಾಂತೈ: ಬ್ರಾಹ್ಮೀಯಂ ಕ್ರಿಯತೇ ತನುಃ”–ಗರ್ಭಾಧಾನದಿಂದಾರಂಭಿಸಿ-ಜಾತಕರ್ಮ, ನಾಮಕರಣ, ವಿವಾಹವೇ ಮುಂತಾಗಿ ಶವಸಂಸ್ಕಾರದವರೆಗಿನ ಎಲ್ಲ ಸಂಸ್ಕಾರಗಳ ಉದ್ದೇಶವೂ ಈ ಶರೀರವನ್ನು ಬ್ರಹ್ಮಮಯವನ್ನಾಗಿಸುವುದರ ಜೊತೆಗೆ ಇದಕ್ಕೆ ಅವಿರೋಧವಾದ ಇಂದ್ರಿಯ ಸುಖಗಳನ್ನೂ ಅನುಭವಿಸುವುದೇ ಆಗಿದೆ. ಈ ಎಲ್ಲ ಸಂಸ್ಕಾರಗಳ ಕಲಾಪಗಳಲ್ಲಿ ಮತ್ತು ಉಪಯೋಗಿಸುವ ದ್ರವ್ಯಗಳಲ್ಲಿ, ಮಂತ್ರಗಳಲ್ಲಿ ಆಯಾ ಕಾಲಘಟ್ಟಗಳಲ್ಲಿ ಜೀವಿಗೆ ತನ್ನ ಮೂಲ ಬೆಳಕಾದ ದೇವನನ್ನು ನೆನಪಿಸುವ ಮತ್ತು ಜೀವನದಲ್ಲಿ ಆ ಬೆಳಕನ್ನು ಅನುಸರಿಸಿ ಬದುಕುವ ಅಭ್ಯಾಸ ಮಾಡಿಸಲಾಗುತ್ತದೆ.

ಸೂಚನೆ: 25/1/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.