Monday, January 27, 2020

ಈ ಜಗತ್ತೆಲ್ಲ ಮಾಯೆಯಂತೆ! (Ee jagattella mayeyante)

ಲೇಖಕರು:  ಡಾ || ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)




ದೇವರ್ಷಿ ನಾರದರು ಶ್ರೀಕೃಷ್ಣನಲ್ಲಿ ವಿಚಿತ್ರವಾದೊಂದು ಬೇಡಿಕೆಯನ್ನಿತ್ತರು. “ಕೃಷ್ಣಾ ! ನಿನ್ನ ಮಾಯೆಯ ಪರಿಚಯ ಮಾಡಿಕೊಡಪ್ಪ !’. ಶ್ರೀಕೃಷ್ಣ ಮಂದಹಾಸದಿಂದ ಆಗಲಿಯೆಂದ. ಇಬ್ಬರೂ ಯಾತ್ರೆಗಾಗಿ ಹೊರಟರು. ನಡೆಯುತ್ತಾ ಒಂದೆಡೆ ಆಯಾಸ ಬಾಯಾರಿಕೆಗಳಿಂದ ಪೀಡಿತನಾಗಿ ಕೃಷ್ಣ ಕುಳಿತೇಬಿಟ್ಟ. ನಂತರ  “ನಾರದ ನನಗಾಗಿ ನೀರು ತರುವೆಯ ?” ಎಂದು ಕೇಳಿದನು. ನಾರದರು ನೀರನ್ನು ಹುಡುಕುತ್ತ ಹಳ್ಳಿಯನ್ನು ಪ್ರವೇಶಿಸಿ ಭಾವಿಯ ಹತ್ತಿರ ನೀರು ಸೇದುತ್ತಿದ್ದ ಸ್ತ್ರೀಯನ್ನು ಯಾಚಿಸಿದರು. ಬೊಗಸೆ ನೀರು ಕುಡಿಯುತ್ತಿದ್ದಂತೆ ಆಕೆಯ ಸೌಂದರ್ಯ ನಾರದರ ಹೃದಯ ನಾಟಿತು. “ನನ್ನನ್ನು ವಿವಾಹವಾಗುವೆಯಾ ?” ಎಂದು ಕೇಳೇಬಿಟ್ಟರು. ನಾಚಿಕೊಂಡಾಕೆ ತಂದೆಯ ಕಡೆ  ಸಂಜ್ಞೆ ಮಾಡಿದಳು. ತಂದೆಯವರು “ಮನೆ ಅಳಿಯನಾಗಿ ಇರುವುದಾದರೆ ಒಪ್ಪುವೆ” ಎಂದು ಶರತ್ತಿಟ್ಟರು. ನಾರದರು ಒಪ್ಪಿಕೊಂಡು, ವಿಜೃಂಭಣೆಯಿಂದ ವಿವಾಹ ಸಂಪನ್ನವಾಯಿತು. ಕಾಲ ಉರುಳುತ್ತ, ಸಂತೋಷದಿಂದ ವಿಹರಿಸುತ್ತ ದಂಪತಿಗಳು ಕಾಲ ಕಳೆದರು. ಅನೇಕ ಮಂದಿ ಮಕ್ಕಳೂ ಜನಿಸಿದವು. ಮಕ್ಕಳ ಮಧುರವಾದ, ತೊದಲು ನುಡಿ, ಗೃಹಕೃತ್ಯಗಳ ಪಾಲನೆ, ಗದ್ದೆ-ತೋಟಗಳ ವ್ಯವಸಾಯ ಹೀಗೆ ವ್ಯಸ್ಥವಾಗಿ, ವರ್ಷಗಳು ಕಳೆದವು. ಒಮ್ಮೆ ಮಳೆಗಾಲದಲ್ಲಿ ರಾತ್ರಿಯ ಸಮಯ. ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ನದಿಯ ಪ್ರವಾಹ ಊರನ್ನು ಕೊಚ್ಚಿಕೊಂಡು ಹೋಯಿತು. ನಾರದರು, ಹೆಂಡತಿ, ಮಕ್ಕಳೆಲ್ಲರನ್ನೂ ಭದ್ರವಾಗಿ ಹಿಡಿದು, ಪ್ರವಾಹದ ರಭಸದಿಂದ ಕಾಪಾಡುವ ಪ್ರಯತ್ನಮಾಡಿ ವಿಫಲರಾದರು. ಕಣ್ಣೆದುರಿಗೆ ಪರಿವಾರ ಛಿನ್ನಭಿನ್ನವಾಯಿತು. ದಡದ ಮರಳಲ್ಲಿ ನಾರದರು ಕುಳಿತು ಬಿಕ್ಕಿ-ಬಿಕ್ಕಿ ಅಳುತ್ತಿದ್ದರು. ಆಗ  “ನಾರದ !” ಎಂಬ ಪರಿಚಿತವಾದ ಧ್ವನಿಯೊಂದು ಕೇಳಿಸಿತು. ತಲೆಯೆತ್ತಿ  ನೋಡಲು  ನೀರು, ಊರು ಯಾವುದೂ ಕಾಣಲಿಲ್ಲ. ಕೃಷ್ಣ ನಗುತ್ತ ಬಂಡೆಯಮೇಲೆ ಕುಳಿತು “ನೀರು ತಂದೇಯಾ ? ” ಎಂದನು. ನಾರದರಿಗೆ ಕ್ಷಣಕಾಲದಲ್ಲಿ ಅರ್ಥವಾಯಿತು. “ ಈ ಜಗತ್ತೆಲ್ಲಾ ಮಾಯೆಯೆಂದು ತಿಳಿದೇ  ಪರಮಾತ್ಮ !”      

ನಮಗೂ ಈ ಜಗತ್ತಿಗೂ ಇರುವ ಕೊಂಡಿ ನಮ್ಮ ಇಂದ್ರಿಯಗಳು. ಎಚ್ಚರವಿದ್ದಾಗ, ಇಂದ್ರಿಯಗಳು ಕೊಡುವ ವರ್ತಮಾನದ ಆಧಾರದ ಮೇಲೆ ಜಗತ್ತಿನ ಚಿತ್ರವನ್ನು ಮೆದುಳು  ಕಲ್ಪಿಸಿಕೊಳ್ಳುತ್ತದೆ. ಸ್ವಪ್ನದಲ್ಲಿ ಮೆದುಳು ಈಗಾಗಲೇ ಶೇಖರಿಸಿದ ವರ್ತಮಾನಗಳ ಆಧಾರದಮೇಲೆ ಮತ್ತೊಂದು ಸ್ವಂತ ಜಗತ್ತನ್ನು ಕಲ್ಪಿಸುತ್ತದೆ. ಸ್ವಪ್ನದಲ್ಲಿ ಸಿಂಹ ಬಂದರೂ ಹೃದಯಬಡಿತ ವೇಗವಾಗಿ, ಓಡುವುದೇ ಪ್ರತಿಕ್ರಿಯೆ ! ಆದರೆ ಎಚ್ಚರಗೊಂಡಮೇಲೆ, ಸ್ವಪ್ನದ ಜಗತ್ತು ಮಸುಕು-ಮಾಯೆ-ಸುಳ್ಳು ಎಂದನ್ನಿಸುತ್ತದೆ. ಜಾಗ್ರತ್, ಸ್ವಪ್ನ ಸುಷುಪ್ತಿಎಂಬ ಪ್ರಸಿದ್ಧವಾದ ಮೂರು ಅವಸ್ಥೆಗಳ ಜೊತೆಗೆ ಸಮಾಧಿ ಎಂಬ ನಾಲ್ಕನೆಯ ಅವಸ್ಥೆಯೂ ಉಂಟು. ಅಲ್ಲಿ, ಹೊರ ಜಗತ್ತು ಮರೆಯಾಗಿ ಬೆಳಕಿನ ಜಗತ್ತು ಕಾಣಿಸುತ್ತದೆ. ಆ ಬೆಳಕಿನ ಅನುಭವ ಕೋಟಿ-ಕೋಟಿ ಸೂರ್ಯರಿಗಿಂದಲೂ ಪ್ರಖರವಾಗಿದ್ದರೂ, ಬೆಳದಿಂಗಳಂತೆ ತಂಪಾಗಿ ಆನಂದದಾಯಕವಾಗಿರುವುದೆಂದು ಶ್ರೀರಂಗ ಮಹಾಗುರುಗಳು ಸ್ಮರಿಸಿಕೊಂಡಿದ್ದರು. ಆ ಬೆಳಕಿನ ಜಗತ್ತು ಪ್ರಖರ-ನಿಖರವಾದ ದರ್ಶನದಿಂದ ಕೂಡಿರುತ್ತದೆ. ಅದರ ಜೊತೆ ಹೋಲಿಸಿದರೆ, ಈ ಇಂದ್ರಿಯ ಜಗತ್ತು ಸ್ವಪ್ನದಂತೆ, ಮಸುಕು-ಮಸುಕಾಗಿದೆ ಎಂದನ್ನಿಸುತ್ತದೆ. ಅಂತಹ ಸಮಾಧಿಸಾಮ್ರಾಜ್ಯದಲ್ಲಿ ಸದಾ ಮುಳುಗಿರುತ್ತಿದ್ದ ಮಹರ್ಷಿಗಳು, ಈ ಜಗತ್ತು ಮಿಥ್ಯೆಯಪ್ಪ, ಆ ಬ್ರಹ್ಮವೊಂದೇ ಸತ್ಯ ಎಂದು ಹೇಳುತ್ತಾರೆ !   

ಸೂಚನೆ:  27/01/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.