Thursday, January 2, 2020

ಗೌರವ ದೇಹಕ್ಕಲ್ಲ, ಒಳಬೆಳಗುವ ಭಗವಂತನಿಗೆ. (Gourava dehakkalla. Olabelaguva bhagavanthanige)

ಲೇಖಕರು:  ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)




ದಕ್ಷಯಜ್ಞದ ಸಂದರ್ಭ. ದಕ್ಷನ ಪ್ರಿಯ ಪುತ್ರಿ ಸತೀ ದೇವಿಗೆ ತನ್ನ ತಂದೆಯು ಮಹಾಯಜ್ಞವೊಂದನ್ನು ಆಯೋಜಿಸಿದ್ದಾನೆ ಎಂದು  ದೇವತೆಗಳಿಂದ ತಿಳಿದುಬರುತ್ತದೆ. ಇತ್ತ ದಕ್ಷನಿಗೆ ಶಿವನಲ್ಲಿ  ಅಹಂಕಾರಪೂರಿತವಾದ ದ್ವೇಷ. ಅದಕ್ಕೆ ಕಾರಣ ಕ್ಷುಲ್ಲಕ. ಹಿಂದೆ ಬ್ರಹ್ಮನು ಆಯೋಜಿಸಿದ ಯಜ್ಞಕ್ಕೆ ದಕ್ಷಪ್ರಜಾಪತಿಯು ಆಗಮಿಸುತ್ತಾನೆ. ಅವನಿಗೆ ಗೌರವವಾಗಿ ಶಿವ ಮತ್ತು ಬ್ರಹ್ಮನನ್ನು ಉಳಿದು ಎಲ್ಲರೂ ಎದ್ದು ನಿಲ್ಲುತ್ತಾರೆ. ತನ್ನ ಅಳಿಯನಾಗಿ ತನಗೆ ಎದ್ದುನಿಂತು ನಮಸ್ಕಾರ ಮಾಡಲಿಲ್ಲ ಎಂಬುದು ಅಹಂಕಾರಿಯಾದ ದಕ್ಷನ ಕೋಪಕ್ಕೆ ಕಾರಣ. ಶಿವನು ದೇವರ ದೇವ ಮಹಾದೇವ.

ನಿತ್ಯನು,ಹುಟ್ಟಿಲ್ಲದವನು. ಅವನಿಗೇ ಎಲ್ಲರೂ ನಮಸ್ಕರಿಸಬೇಕು. ಲೋಕದ ಜನರಂತೆ ಅವನು ಎದ್ದು ನಿಂತು ದೆಹಾಭಿಮಾನಿಯಾದ ದಕ್ಷನಿಗೆ ನಮಸ್ಕರಿಸುವುದು ದಕ್ಷನಿಗೇ ಶ್ರೆಯಸ್ಕರವಾಗದು. ಅಷ್ಟಲ್ಲದೇ ಮುಂದೆ ಸತಿಗೆ ಶಿವನೇ ತಿಳಿಸುವಂತೆ, ಜ್ಞಾನಿಗಳಾದವರು ಗೌರವವನ್ನು ತೋರಿಸುವ ರೀತಿಯೇ ಬೇರೆಯಾಗಿರುತ್ತದೆ. ಅವರು ನಮಸ್ಕಾರಾದಿಗಳನ್ನು ಅಂತರ್ಯಾಮಿಯಾಗಿ ಹೃದಯ ಗುಹೆಯಲ್ಲಿರುವ ಶ್ರೀ ವಾಸುದೇವನಿಗೇ ಮನಸ್ಸಿನಿಂದ ಸಮರ್ಪಿಸುತ್ತಾರೆ. ಅದರಿಂದ ಲೋಕಕ್ಕೆಲ್ಲ ಮಂಗಳವಾಗುತ್ತದೆ.
ಆದರೆ  ಅಹಂಕಾರಿ ದಕ್ಷನಿಗೆ ಈ ನಿಜದ ಅರಿವಾಗಲಿಲ್ಲ. ತನ್ನ ಸ್ವಸ್ವರೂಪವಾದ ಶಿವನನ್ನೇ ಅನ್ಯಥಾ ಭಾವಿಸಿದನು. ಶ್ರೀರಂಗ ಮಹಾಗುರುಗಳು ತಿಳಿಸಿದಂತೆ-“ಜೀವನ ಪದರ ಪದರವಾಗಿ ಬೆಳೆಯುತ್ತಿರುವುದರಿಂದ ಮುಂದು ಮುಂದಣ ಪದರ ತನ್ನ ಹಿಂದಿನದನ್ನು ಮುಚ್ಚಿಹಾಕಿದೆ.” ಇಲ್ಲಿ ದಕ್ಷನ ದೇಹ, ಅದಕ್ಕಂಟಿಕೊಂಡ ಅಹಂಕಾರ ತನ್ನ ಹಿಂದಿನ ಶಿವ ಸ್ವರೂಪವನ್ನು ಮರೆಯುವಂತೆ ಮಾಡಿತು. ಎಂದೇ ದುರುದ್ದೇಶದಿಂದಲೇ ಶಿವ-ಸತಿಯರನ್ನು ಯಜ್ಞಕ್ಕೆ ಆಹ್ವಾನಿಸಲಿಲ್ಲ. ಆದರೂ ಹೆಣ್ಣಿಗೆ ತವರುಮನೆಯ ಸೆಳೆತವಿರುವುದು ಸ್ವಾಭಾವಿಕವಲ್ಲವೇ? ತಮ್ಮಿಬ್ಬರನ್ನೂ ಯಜ್ಞಕ್ಕೆ ಆಮಂತ್ರಿಸದಿದ್ದರೂ ಹೋಗಲೇ ಬೇಕೆಂಬ ಹಂಬಲ.ಭಗವಂತನಾದ ಮಹಾದೇವನನ್ನು ದಕ್ಷಯಜ್ಞಕ್ಕೆ ಹೋಗುವ ಬಗ್ಗೆ ಬಗೆ ಬಗೆಯಾಗಿ ಪ್ರಾರ್ಥಿಸುತ್ತಾಳೆ. ತನ್ನ ನಿರ್ಧಾರವನ್ನು ಪುಷ್ಟೀಕರಿಸಲು ಒಂದು ಮಾತನ್ನು ಹೇಳುತ್ತಾಳೆ- “ಅನಾಹುತಾ ಅಪ್ಯಭಿಯಂತಿ ಸೌಹೃದಂ”- ಬಂಧುಗಳ ಮನೆಗೆ ಆಹ್ವಾನವಿಲ್ಲದಿದ್ದರೂ ಹೋಗಬಹುದು ಎಂಬುದಾಗಿ.

ಅದಕ್ಕೆ ಮಹಾದೇವನ ಸಮಾಧಾನ ಸಾರ್ವಕಾಲಿಕ ಸತ್ಯವಾಗಿದೆ.- “ಬಂಧುಗಳ ಮನೆಗೆ ಆಹ್ವಾನವಿಲ್ಲದಿದ್ದರೂ ಹೋಗಬಹುದು ಎಂಬ ಮಾತು ಸರಿಯಾಗಿಯೇ ಇದೆ. ಆದರೆ ಆ ಬಂಧುಗಳ ದೃಷ್ಟಿಯು ದುರಭಿಮಾನದಿಂದ ಉಂಟಾದ ಮದ, ಕ್ರೋಧ, ದ್ವೇಷಗಳೆಂಬ ದೋಷಗಳಿಂದ ಕೂಡಿರದಿದ್ದರೆ ಮಾತ್ರ ಹಾಗೆ ಮಾಡಬೇಕು. ವಿದ್ಯೆ, ತಪಸ್ಸು, ಸಂಪತ್ತು, ಆಕರ್ಷಕವಾದ ದೇಹ, ಯೌವನದ ವಯಸ್ಸು ಮತ್ತು ಉಚ್ಚವಾದ ಕುಲ-ಈ ಆರೂ ಸತ್ಪುರುಷರಲ್ಲಿ ಗುಣಗಳಾಗಿ ಶೋಭಿಸುತ್ತದೆ. ಆದರೆ ದುಷ್ಟನಲ್ಲಿ ಇವು ಅವಗುಣಗಳಾಗಿಬಿಡುತ್ತವೆ. ಅವುಗಳಿಂದ ದುಷ್ಟನ ಗರ್ವವು ಹೆಚ್ಚುವುದು, ವಿವೇಕಶಕ್ತಿಯು ನಷ್ಟವಾಗುವುದು, ಆಗ ಮಹಾಪುರುಷರ ಪ್ರಭಾವವನ್ನು ನೋಡಲು ಅವನು ಅಸಮರ್ಥನಾಗುತ್ತಾನೆ. ಅದರಿಂದ ಯಾರು ತಮ್ಮ ಬಳಿಗೆ ಬರುವವರನ್ನು ಕುಟಿಲಬುದ್ಧಿಯಿಂದಲೇ ನೋಡುತ್ತಾರೆಯೋ ಅಂತಹ ಅವ್ಯವಸ್ಥಿತಚಿತ್ತರಾದ ಜನರ ಮನೆಗೆ “ ಎಷ್ಟಾದರೂ ನಮ್ಮ ಬಂಧುಗಳಲ್ಲವೇ” ಎಂಬ ಕಾರಣದಿಂದ ಎಂದಿಗೂ ಹೋಗಕೂಡದು. ಅಂತಹ ಬಂಧುಗಳು ಆಡುವ ಚುಚ್ಚುಮಾತುಗಳು ಶತ್ರುಗಳ ಬಾಣಗಳಿಗಿಂತ ಹೆಚ್ಚು ದುಷ್ಪರಿಣಾಮಕಾರಿ”. ಇಷ್ಟೂ ಮಾತುಗಳು ದಕ್ಷನ ಅಂದಿನ ಮಾನಸಿಕತೆಗೆ ಹಿಡಿದ ಕೈಗನ್ನಡಿಯಾಗಿತ್ತು.

ಆದರೆ ತವರಿನ ವ್ಯಾಮೋಹ ಶಿವನ ಸತ್ಯಾರ್ಥದ ಮಾತುಗಳನ್ನೂ ಮೀರಿ ಅವಳನ್ನು ಅಲ್ಲಿಗೆ ಹೋಗುವಂತೆ ಮಾಡಿತು.ಅಲ್ಲಿ ತಂದೆಯ ಉಪೇಕ್ಷೆ, ಶಿವನ ಬಗೆಗಿನ ಅವನ ತಿರಸ್ಕಾರ, ದುರಹಂಕಾರ ಇತ್ಯಾದಿಗಳನ್ನು ಸಹಿಸಲಾರದೇ ಆತ್ಮಸಮರ್ಪಣೆ ಮಾಡುವುದರಲ್ಲಿ ಪರ್ಯವಸಾನವಾದುದು ನಮಗೆಲ್ಲರಿಗೂ ಗೊತ್ತೇ ಇದೆ. ಈ ಕಥೆಯು ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಅಹಂಕಾರ ಎಲ್ಲ ಗುಣಗಳನ್ನೂ ಮೆಟ್ಟಿ ಮೆರೆಯುತ್ತದೆ. ನಮ್ಮ ನಮ್ಮ ದೇಹದ ಬಗ್ಗೆ ನಮಗೆ ದುರಭಿಮಾನ ಇರಬಾರದು. ಬಂಧುಗಳು ಎಂದಾಗ ಅವರು ಹೇಗಿದ್ದರೂ ಸರಿ ಎಂಬ ಮನೋಭಾವ ಸಲ್ಲದು. ಗೌರವ ಒಳಗೆ ಬೆಳಗುವ ಪರಮಾತ್ಮನಿಗೇ ಹೊರತು ದೇಹಕ್ಕಲ್ಲ. ಜ್ಞಾನೀ ಜನರ ಸಲಹೆಯನ್ನು ಎಂದಿಗೂ ತಿರಸ್ಕರಿಸಬಾರದು. ಇಂತಹ ಸದ್ಗುಣಗಳನ್ನು  ಆ ಪರಶಿವನು ಕರುಣಿಸಲಿ ಎಂದು ಪ್ರಾರ್ಥಿಸೋಣ.

ಸೂಚನೆ: 02/01/2019 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ.