Monday, January 13, 2020

ಇಂದ್ರಿಯ ಸೆಳೆತದ ಸಾಮರ್ಥ್ಯ (Indriya selethada samarthya)

ಲೇಖಕರು:  ತಾರೋಡಿ ಸುರೇಶ
(ಪ್ರತಿಕ್ರಿಯಿಸಿರಿ lekhana@ayvm.in)



ವಿಶಾಲಬುದ್ಧಿಗಳಾದ ವೇದವ್ಯಾಸರು ಹೇಳಿದ್ದನ್ನು ಅವರ  ಪ್ರಿಯ ಶಿಷ್ಯರಾದ ಜೈಮಿನಿಗಳು  ಶ್ರದ್ಧೆಯಿಂದ ಬರೆಯುತ್ತಿದ್ದರು.  ಇಂದ್ರಿಯ ಸಂಯಮವೆಷ್ಟು ಕಠಿಣ ಎಂಬುದನ್ನು  ಬಲ್ಲ ವ್ಯಾಸರು “ಬಲವಾನ್ನಿಂದ್ರಿಯಗ್ರಾಮೋ, ವಿದ್ವಾಂಸಮಪಿಕರ್ಷತಿ” ಎಂದು  ಉಚ್ಛರಿಸಿದರು. ಈ ಘಟ್ಟದಲ್ಲಿ ಜೈಮಿನಿಗಳಿಗೆ-.”ಇದು ಹೇಗೆ ಸಾಧ್ಯ, ಇಂದ್ರಿಯಗಳು ಸಾಮಾನ್ಯ ಮಾನವರನ್ನು ಆಕರ್ಷಿಸಿ ದುರ್ಬಲಗೊಳಿಸಬಹುದು. ಆದರೆವಿಶೇಷವಾದ ಸಾಧನೆ ಇರುವ ವಿದ್ವಾಂಸರನ್ನು ಜಾರಿಸಲಾರದಲ್ಲವೇ?” ಎನ್ನಿಸಿತು. ತಕ್ಷಣವೇ  ಜೈಮಿನಿಗಳು “ವಿದ್ವಾಂಸಮಪಿಕರ್ಷತಿ ಎಂದು ವ್ಯಾಸರು ಹೇಳಿದ್ದರೆ ಅದನ್ನು ‘ವಿದ್ವಾಂಸಂ ನಾಪಕರ್ಷತಿ’ ಎಂದು ಬದಲಾಯಿಸಿದರು. ವ್ಯಾಸರೂ, ಏನೂ ತಿಳಿಯದವರಂತೆ ಮೌನವಹಿಸಿಬಿಟ್ಟರು.

ಅದೊಂದು ದಿನ ವರ್ಷಧಾರೆ ಸುರಿಯುತ್ತಿತ್ತು. ಬಹು ಪ್ರಶಾಂತವಾದ ವಾತಾವರಣ. ಜೈಮಿನಿಗಳು ಸಂಧ್ಯಾಕಾಲದ ನಿತ್ಯಕರ್ಮಗಳನ್ನು ನೆರವೇರಿಸಿ ನೆಮ್ಮದಿಯಿಂದ ಆಸೀನರಾಗಿದ್ದರು. ಎದುರಿನಲ್ಲಿ ಅಗ್ನಿದೇವ ಪ್ರಜ್ವಲಿಸುತ್ತಿದ್ದ. ಪರಂಜ್ಯೋತಿಯನ್ನು ಪ್ರತಿನಿಧಿಸುವ ಜ್ಯೋತಿಯೊಂದು ದೀಪಸ್ಥಂಭದಲ್ಲಿ ಬೆಳಗುತ್ತಿತ್ತು. ಆ ಸಂದರ್ಭದಲ್ಲಿ ಹೆಣ್ಣೊಬ್ಬಳ ಮೊರೆ ಕೇಳಿಸಿತು. ಬಾಗಿಲಲ್ಲಿ ಮಳೆಯಲ್ಲಿ ನೆನೆದ  ಒಬ್ಬ ಸುಂದರಳಾದ ಸ್ತ್ರೀ ನಿಂತಿದ್ದಳು. ಅವಳು ಅಲ್ಲಿಂದಲೇ ಮಹರ್ಷಿಗಳನ್ನು ಮಳೆ ನಿಲ್ಲುವವರೆಗೆ ಆಶ್ರಮದಲ್ಲಿ ತನಗೆ ಆಶ್ರಯ ದೊರೆಯಬಹುದೇ ಎಂದು ಪ್ರಾರ್ಥಿಸಿದಳು. ಮಹರ್ಷಿಗಳಿಗೆ ಅವಳ ಪರಿಸ್ಥಿತಿಯನ್ನು ನೋಡಿ ದಯೆ ಹುಟ್ಟಿತು. ತಕ್ಷಣವೇ ಅವರು ಆಕೆಗೆ ಅನುಮತಿಯನ್ನಿತ್ತರು. ನಂತರ ಆಕೆಯನ್ನು ಅಗ್ನಿಕುಂಡದ ಎದುರಿನಲ್ಲಿ ಕುಳ್ಳಿರಿಸಿದರು. ಆ ಸುಂದರಳಾದ ಸ್ತ್ರೀಯನ್ನು ನೋಡುತ್ತಾ, ಕ್ರಮೇಣ ಜೈಮಿನಿಗಳ ಮನಸ್ಸು ವಿಚಲಿತವಾಯಿತು. ಅವರು ಆ ಸ್ತ್ರೀಯನ್ನು ತನ್ನ ಪತ್ನಿಯಾಗಲು ಪ್ರಾರ್ಥಿಸಿದರು.ಆಗ ಆಕೆ- ನನ್ನನ್ನು ಎತ್ತಿಕೊಂಡು ಮೂರು ಭಾರಿ ಅಗ್ನಿಪ್ರದಕ್ಷಿಣೆ ಮಾಡಿದರೆ ವಿವಾಹಕ್ಕೆ ತನ್ನ ಅನುಮತಿ ಇದೆ ಎಂದಳು. ಅದರಂತೆಯೇ ಜೈಮಿನಿಗಳು ಮಾಡಲಾಗಿ, ಕೊನೆಯ ಪ್ರದಕ್ಷಿಣೆಯಲ್ಲಿ ವಿದ್ವಾಂಸಂ ನಾಪಕರ್ಷತಿ? ಎಂದು ಕೇಳಿದಳು. ಏನಾಶ್ಚರ್ಯ! ಅವರ ಕೈಯಲ್ಲಿ ಹೆಂಗಸಿನ ಬದಲಾಗಿ ಇದ್ದವರು ವ್ಯಾಸರು. ಜೈಮಿನಿಗಳಿಗೆ ಸೂಕ್ತ ಪಾಠ ಕಲಿಸಲು ವ್ಯಾಸರು ಈ ಪ್ರಯೋಗವನ್ನು ನಡೆಸಿದರು.

ಇಂದ್ರಿಯನಿಯಂತ್ರಣ ಸುಲಭಸಾಧ್ಯವಲ್ಲ. ಶ್ರೀಗುರುವಿನ ಅನುಗ್ರಹ, ಮಾರ್ಗದರ್ಶನ, ಅದರಂತೆ ನಡೆಸಬೇಕಾದ ನಿರಂತರವಾದ ಅಭ್ಯಾಸ -ಇವೆಲ್ಲವುಗಳಿಂದ ಕೂಡಿಬರಬೇಕು. “ಜೀವನ ಎನ್ನುವುದು ‘ಜೀವ’ಎನ್ನುವುದು ಇದ್ದರೆ ತಾನೇ? ಜೀವವು ತನಗನುಗುಣವಾಗಿ ಇಂದ್ರಿಯಗಳನ್ನಿಟ್ಟುಕೊಂಡರೆ ಜೀವನ”ಎನ್ನುವುದು ಶ್ರೀರಂಗಮಹಾಗುರುಗಳ ಎಚ್ಚರಿಕೆ.   

ಸೂಚನೆ:  11/1/2020 ರಂದು ಈ ಲೇಖನ ಉದಯ ವಾಣಿಯ ಬಹುಮುಖಿಯ ಮಹರ್ಷಿ ಬೆಳಕು ಅಂಕಣದಲ್ಲಿ ಪ್ರಕಟವಾಗಿದೆ.