Sunday, January 26, 2020

ಕಾಲಚಕ್ರದ ರಹಸ್ಯ (Kaalachakrada rahasya)

ಲೇಖಕರು: ಶ್ರೀರಾಮ ಚಕ್ರವರ್ತಿ
(ಪ್ರತಿಕ್ರಿಯಿಸಿರಿ : lekhana@ayvm.in)



ಕಾಲವು, ಪ್ರಕೃತಿಯ ಎಲ್ಲ ವಸ್ತುಗಳು ಹಾಗು ಜೀವಿಗಳ ಮೇಲೆ ಪ್ರಭಾವ ಬೀರುವಂತಹ ಒಂದು ಸೃಷ್ಟಿಯ ನಿಯಮ. ಅದೆಷ್ಟಿದ್ದರೂ ಸಾಲದೆಂದು ಬಯಸುವ ಮತ್ತು  ನಮ್ಮೆಲ್ಲರಿಗೂ ಅತ್ಯಮೂಲ್ಯವಾದ ಒಂದು ದ್ರವ್ಯ ಪದಾರ್ಥವೆಂದರೆ ಅತಿಶಯವಾಗಲಾರದು. ಲೋಕದ ಎಲ್ಲ ವ್ಯಾಪಾರಗಳು ಮತ್ತು ವ್ಯವಹಾರಗಳು, ಕಾಲವನ್ನು ಅವಲಂಬಿಸಿ ಅದರ ಸುತ್ತಲೂ ಸಹಜವಾಗಿಯೇ ತಮ್ಮನ್ನು ನಿಯೋಜಿಸಿಕೊಂಡಿವೆ. ಸೂರ್ಯೋದಯವಾಗುತ್ತಿದ್ದಂತೆಯೇ, ವಾತಾವರಣದಲ್ಲಿ  ಹಕ್ಕಿಗಳ ಕಲರವ ಕೇಳಿಬರುತ್ತದೆ , ಪ್ರಾಣಿ-ಪಕ್ಷಿಗಳ ಸಂಚಾರ, ಜೊತೆ-ಜೊತೆಗೆ ನಿಸರ್ಗದಲ್ಲೇ ಒಂದು ರೀತಿಯ ಲವಲವಿಕೆಯನ್ನು ಗಮನಿಸಬಹುದು. ದಿನ ಕಳೆದಂತೆ ಎಲ್ಲಾ ಚಟುವಟಿಕೆಗಳಲ್ಲೂ ಮಂದಗತಿಯುಂಟಾಗಿ ನಂತರ ದಿನದ ಕೊನೆಯಲ್ಲಿ ಒಂದು ವಿಧವಾದ ಸ್ಥಬ್ದತೆ ಹಾಗು ನಿಶಬ್ಧ ಸಹಜವಾಗಿ ಮೂಡಿಬರುವುದನ್ನು ಕಾಣಬಹುದು. ಚಂದ್ರನ ಉದಯ-ಅಸ್ತ, ವೃದ್ಧಿ-ಕ್ಷಯವನ್ನನುಸರಿಸಿ ಸಮುದ್ರವು ಉಕ್ಕಿ-ಅಡಗುತ್ತದೆ. ಪಕ್ಷ-ಮಾಸಗಳು ಉರುಳುತ್ತ ಋತುಗಳ ಬದಲಾವಣೆ. ವಸಂತ ಋತುವಿನಲ್ಲಿ ಗಿಡ-ಮರಗಳಲ್ಲಿ ಚಿಗುರನ್ನು , ಮಳೆಗಾಲದಲ್ಲಿ ನದಿಗಳು ತುಂಬಿ ಹರಿಯುವುದನ್ನು , ಶರತ್ಕಾಲದಲ್ಲಿ ಧಾನ್ಯ ಸಮೃದ್ಧಿ ಹಾಗು ಶಿಶಿರ ಋತುವಿನಲ್ಲಿ ವೃಕ್ಷಗಳಲ್ಲಿ ಹೂವು ಮತ್ತು ಎಲೆಗಳು ಬಾಡುವುದೆಲ್ಲವನ್ನೂ ಪ್ರತಿ ಸಂವತ್ಸರವೂ ನೋಡುತ್ತಿದ್ದೇವೆ. ಆಹಾರವು ಪುಷ್ಕಳವಾಗಿ ದೊರಕುವ ಋತುವಿನಲ್ಲಿ ಪಶುಪಕ್ಷಿಗಳು ಮರಿಗಳನ್ನುಹಾಕುತ್ತವೆ. ಮಳೆ ಬಂದಕೂಡಲೇ ಕಪ್ಪೆಗಳು ವಟಗುಟ್ಟುತ್ತವೆ, ನವಿಲುಗಳು ಗರಿಗಳನ್ನು ಬಿಚ್ಚುತ್ತವೆ.

ನಾವು ಮನುಷ್ಯರೂ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನ್ನೇ  ಕೇಂದ್ರವಾಗಿಟ್ಟುಕೊಂಡು, ನಮ್ಮ ಧ್ಯೇಯಕ್ಕನುಗುಣವಾಗಿ ಜೀವನ ಶೈಲಿಯನ್ನು ರೂಪಿಸಿಕೊಂಡಿದ್ದೇವೆ. ಗಡಿಯಾರದ ಘಂಟೆಗನುಗುಣವಾಗಿ, ವಿದ್ಯಾಭ್ಯಾಸ, ವೃತ್ತಿ, ನಿದ್ರೆ ಇತ್ಯಾದಿಯಾದ ನಮ್ಮ ದೈನಂದಿನ ಚಟುವಟಿಕೆಗಳನ್ನು  ಅಳವಡಿಸಿಕೊಂಡಿದ್ದೇವೆ. ಇಷ್ಟೇ ಅಲ್ಲದೆ, ಕಾಲಮಾನಕ್ಕೆ ತಕ್ಕಂತೆ ನಮ್ಮ ಉಡುಗೆ-ತೊಡುಗೆಗಳನ್ನು, ಆಹಾರ-ವಿಹಾರಗಳನ್ನು ಮತ್ತು ನಮ್ಮ ಅಭ್ಯಾಸ-ವ್ಯಾಪಾರಗಳನ್ನೂ ಯೋಜಿಸಿಕೊಂಡಿದ್ದೇವೆ. ಕೃಷಿಕರಿಗೆ ಮಳೆ-ಮೋಢ, ಬಿಸಿಲು-ಶೈತ್ಯ ಇತ್ಯಾದಿಗಳನ್ನವಲಂಬಿಸಿ ಕ್ರಿಯಾಕಲಾಪ. ಸಮುದ್ರಕ್ಕೆ ಹೋಗುವ ನಾವಿಕನಾಗಲೀ,   ಹಿಮಾಲಯದ ಗಗನಚುಂಬಿ ಶಿಖರಗಳನ್ನು ಹತ್ತುವರಾಗಲೀ ಹವಾಮಾನದ ಕಡೆ ಗಮನವಿಟ್ಟು ಸೃಷ್ಟಿ ನೀಡುವ ಕುರುಹುಗಳನ್ನು ಆಲಿಸುತ್ತಲೇ ಇರಬೇಕು.

ಆದರೆ ಇಂದು ನಾವು ಕಂಡರಿಯದ ಒಂದು ವಿಶೇಷವಾದ ಧ್ಯೇಯವನ್ನು ನಮ್ಮ ಸಂಸ್ಕೃತಿಯ ಶಿಲ್ಪಿಗಳಾದ ಋಷಿ-ಮಹರ್ಷಿಗಳು ಹೊಂದಿದ್ದರು. ಇಂದ್ರಿಯ ತುಷ್ಟಿಯೊಡನೆ ಆತ್ಮದ ತುಷ್ಟಿಯನ್ನೂ ಬಯಸಿದವರವರು. ತಪಸ್ಯೆಯಿಂದ ತಮ್ಮೊಳಗಿನ ಮನೋವೃತ್ತಿಯ ಅಲೆಗಳನ್ನಡಗಿಸಿ, ಒಳ ಮೇರುಪರ್ವತವನ್ನು ಹತ್ತಿ, ಆನಂದಸಾಗರದಲ್ಲಿ ಮುಳುಗುವ ಹವ್ಯಾಸ ಅವರದು. ತಮ್ಮ ಈ ಆರೋಹಣಕ್ಕೆ ಪೋಷಕವಾದ ಕಾಲಗಳನ್ನು ಅವರು ಕೂಲಂಕುಷವಾಗಿ ಆರಿಸಿಕೊಂಡಿದ್ದರು. ಅಂತಹ ವಿಶೇಷವಾದ ಕಾಲ ‘ಪರ್ವ’ ಗಳನ್ನು ತದ್ಭವರೂಪದಲ್ಲಿ ‘ಹಬ್ಬ’ ಎಂದು ನಾವಿಂದು ಕರೆಯುತ್ತೇವೆ. ನಿತ್ಯವೂ ಬರುವ  ಮುಂಜಾನೆ, ಮುಸ್ಸಂಜೆಯ ಸಂಧಿಕಾಲಗಳು ಅಂತಹ ಪರ್ವಕಾಲಗಳು. ಪಕ್ಷ-ಮಾಸ-ನಕ್ಷತ್ರ-ತಿಥಿಗಳ ವಿಶೇಷ ಯೋಗಗಳನ್ನು ಹಬ್ಬ-ಹರಿದಿನಗಳ ರೂಪದಲ್ಲಿ ಆಚರಣೆಗೆ ತಂದರು. ಮಕರ ಸಂಕ್ರಾಂತಿ, ದೀಪಾವಳಿ, ಗಣೇಶ ಚತುರ್ಥಿ ಮುಂತಾದ ಹಬ್ಬಗಳು ಪ್ರಸಿದ್ಧವೇ ಆಗಿವೆ. ಆತ್ಮಸಾಧನೆಗೆ ಗ್ರಹಣಕಾಲಗಳು ಅತ್ಯಂತ ವಿಶೇಷವಾದ ಪರ್ವಕಾಲವೆಂದು ಶ್ರೀರಂಗ ಮಹಾಗುರುಗಳು ಜ್ಞಾಪಿಸುತ್ತಿದ್ದರು. ಸೂರ್ಯ-ಚಂದ್ರ-ತಾರಾದಿಗಳ ನಿಯಾಮಕನಾದ ಕಾಲಪುರುಷನನ್ನು ಕೃತಜ್ಞತೆಯಿಂದ ನೆನೆದು ಅವನು ಕೊಡುವ ಪ್ರಸಾದವನ್ನು ಸ್ವೀಕರಿಸುವ ಕಾಲವೇ ಹಬ್ಬವಾಗಿದೆ. ಆತ್ಮಸಾಧನೆಗೆ ಈ ಪರ್ವ ಕಾಲಗಳೆಲ್ಲ ಅತ್ಯಂತ ಪೋಷಕವಾದವುಗಳು ಎಂದು ಶ್ರೀರಂಗ ಮಹಾಗುರುಗಳು ಜ್ಞಾಪಿಸುತ್ತಿದ್ದರು. ಈ ಪರ್ವಕಾಲಗಳಲ್ಲಿ ಋಷಿಗಳು ಕಂಡರುಹಿದ ಮಹಿಮೆಯನ್ನು ಅರಿತು ನಮ್ಮ ಇಹ ಪರಗಳ ಒಳಿತಿಗಾಗಿ ಬಳಸಿಕೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳೋಣ.

ಸೂಚನೆ: 25/1/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.