Monday, January 13, 2020

ಪಾಕ ತಯಾರಿಕೆ ಯಾರ ಹೊಣೆ? (Paaka thayarike yaara hone?)

ಲೇಖಕರು:  ತಾರೋಡಿ ಸುರೇಶ
(ಪ್ರತಿಕ್ರಿಯಿಸಿರಿ lekhana@ayvm.in)


ಇದೊಂದು ಅನೇಕರನ್ನು ಗೊಂದಲಕ್ಕೀಡು ಮಾಡಿರುವ ಪ್ರಶ್ನೆ. ಈ ಗೊಂದಲಕ್ಕೆ ಒಂದು ಮುಖ್ಯ ಕಾರಣ ಇದರ ನಿರ್ಣಯವನ್ನು ಭೌದ್ಧಿಕವಾಗಿ ಹುಡುಕಹೊರಟಿದ್ದು. ಆದರೆ ಜೀವನದ ಅನ್ಯಾನ್ಯ ವ್ಯವಹಾರಗಳನ್ನು ನಿರ್ಣಯಿಸಿರುವಂತೆಯೇ ಇಲ್ಲಿಯೂ ನಿಸರ್ಗದ ಜಾಡನ್ನು ಅನುಸರಿಸಿಯೇ ಋಷಿಗಳ ಯೋಜನೆಯನ್ನು ಕಾಣುತ್ತೇವೆ.

ಅದು ಕೇವಲ ಶ್ರಮದ ಹಂಚಿಕೆ ಎಂದಾಗಲೀ, ಬಲ್ಲವರು ಮಾಡಿದರೆ ಸರಿ ಎಂದಾಗಲೀ ತಳ್ಳಿಹಾಕುವುದು ಪ್ರತಿಗಾಮೀ ವಿಚಾರವಾಗುವುದಿಲ್ಲವೇ? ಭಾರತದಲ್ಲಿ ಹೆಂಗಸರನ್ನು ಅಡುಗೆಮನೆಯ ಸೆರೆಗೆ ತಳ್ಳಿದರು ಎಂಬ ಆರೋಪವು ಹುರುಳುಳ್ಳದ್ದೇ? ಎಂಬುದನ್ನೂ ಪರಿಶೀಲಿಸಬೇಕು.
ಪಾಕಕಲೆಯು ಜೀವಿಗಳನ್ನು ಪೋಷಿಸುವ ಕಲೆ. ಹೇಗೆ ನಿಸರ್ಗವು ಸಮಸ್ತ ಜೀವಿಗಳನ್ನೂ ಪೋಷಿಸುತ್ತದೆಯೋ ಅದೇ ರೀತಿ ತಾಯಿಯು ಕೂಡ ತನ್ನ ಕಂದಗಳನ್ನು ಪೊರೆಯುತ್ತಾಳೆ. ಜೀವಿಯು ಗರ್ಭದಲ್ಲಿರುವಾಗಲೇ ತಾಯಿಯ ಹೊಕ್ಕಳ ಕುಡಿಯ ಮೂಲಕ ಶಿಶುವಿಗೆ ಬೇಕಾದ ಆಹಾರಸಾಮಗ್ರಿಯು ದೊರೆಯುವುದು. ನಂತರ ಪ್ರಸವದ ನಂತರವೂ ತಾಯಿಯ ಸ್ತನ್ಯಪಾನದಿಂದಲೇ ಶಿಶುವಿನ ಮುಂದಿನ ಜೀವನ ಸಾಧ್ಯ. ಹೀಗೆ ಶಿಶುವನ್ನು ಬೆಳೆಸುವ ಹೊಣೆಯನ್ನೂ, ಅದಕ್ಕೆ ಅಗತ್ಯವಾದ ಶರೀರರಚನೆಯನ್ನೂ ನಿಸರ್ಗವು ಸ್ತ್ರೀಗೆ ಸಹಜವಾಗಿಯೇ ಕೊಟ್ಟಿದೆ.

ತಾತ್ವಿಕವಾಗಿಯೂ ಭಗವಂತನು ತನ್ನನ್ನು ಮೊಟ್ಟಮೊದಲಿಗೆ ಪ್ರಕೃತಿ-ಪುರುಷಾತ್ಮಕವಾಗಿ ಬೆಳೆಸಿಕೊಳ್ಳುತ್ತಾನೆ. ಆ ಎರಡು ಅರ್ಧಗಳೇ ಸ್ತ್ರೀಪುರುಷರು. ವಿಸ್ತಾರಕ್ಕೆ ಬೀಜರೂಪನಾಗಿ ಪರಬ್ರಹ್ಮವಸ್ತುವಿದ್ದರೆ ವಿಸ್ತಾರದ ಕ್ರಿಯೆಯಲ್ಲಿ ಪ್ರಕೃತಿಮಾತೆಯದು ಬಹುಮುಖ್ಯ ಪಾತ್ರವಿರುತ್ತದೆ. ಅಂತೆಯೇ ಬೆಳೆಸುವ ಪ್ರಕ್ರಿಯೆಯಲ್ಲಿ ಪಾಕಕಲೆಯದು ಬಹುಮುಖ್ಯ ಪಾತ್ರ. ಆದ್ದರಿಂದಲೇ ನಿಸರ್ಗಮಾತೆಯೇ ತನ್ನದೇ ಆದ ಭಾಷೆಯಲ್ಲಿ “ಪಾಕಕಲೆ ಸ್ತ್ರೀಪ್ರಕೃತಿಗೆ ಸಹಜವಾದ ಕಲೆ” ಎಂದು ಘೋಷಿಸುತ್ತಿದ್ದಾಳೆ.

ಮನೋವೈಜ್ಞಾನಿಕವಾಗಿ ಪರಿಶೀಲಿಸಿದಾಗಲೂ ಜೀವಿಗಳನ್ನು ಬೆಳೆಸಲು ಅತ್ಯವಶ್ಯವಾದ ವಾತ್ಸಲ್ಯ, ಕೋಮಲತೆಗಳೆಲ್ಲವೂ ಪ್ರಕೃತಿಸಹಜವಾಗಿಯೇ ಬೆಳೆದು ಬಂದಿರುವುದನ್ನು ಗಮನಿಸಬಹುದು. ಪಾಕಕಲೆಯು ಸ್ತ್ರೀಯ ಸಹಜವಾದ ಹಕ್ಕು. ಅಂತೆಯೇ ಪಾಕಶಾಲೆಯು ಅವಳ ಹಕ್ಕಿನ ಎಡೆ. ಅಷ್ಟೇ ಅಲ್ಲದೆ ಪಾಕೋಪಕರಣಗಳನ್ನು ಅಳವಡಿಸುವ ಮತ್ತು ಬಳಸುವ ಕೌಶಲ್ಯಗಳು, ಅದಕ್ಕೆ ತಕ್ಕ ಬಳಕುಬಾಗುಗಳು ಸ್ತ್ರೀಗೆ ಸಹಜವಾಗಿಯೇ ಇರುತ್ತವೆ. ಆಕೆಯ ಮನಸ್ಸೂ ಸಹಜವಾಗಿಯೇ ಗೃಹಾಲಂಕಾರದ ಕಡೆ ಹರಿಯುತ್ತದೆ. ಗೃಹಿಣಿಯ ಮನಸ್ಸನ್ನೇ ಮನೆಯು ಪ್ರತಿಬಿಂಬಿಸುವುದು. ಗೃಹಿಣೀ ಗೃಹಮುಚ್ಯತೇ ಎಂಬ ಮಾತೂ ಆ ಕಾರಣದಿಂದಲೇ ಬಂದಿದೆ.

ನಮ್ಮ ಸಂಸ್ಕೃತಿಯಲ್ಲಿಯೂ ಜ್ಞಾನಸಂಪದನೆಗೆ ಹೊರಟಿರುವ ಬ್ರಹ್ಮಚಾರಿಗೆ ಮೊದಲಭಿಕ್ಷೆ ನೀಡುವ ಹಕ್ಕೂ ತಾಯಿಯದೇ. ಜ್ಞಾನೈಕನಿಷ್ಠನಾದ ಸನ್ಯಾಸಿಗೆ ನೀಡಬೇಕಾದ ರಸಪರಿಣಿತಿಯೂ ಆಕೆಗಿರುತ್ತದೆ. ಹಾಗೆಯೇ ಆಕೆ ಯೋಗ-ಭೋಗವೆರಡನ್ನೂ ಅನುಭವಿಸುವ ಗೃಹಸ್ಥನಿಗೆ ಸಿದ್ಧಪಡಿಸಬೇಕಾದ ಪಾಕಕುಶಲೆಯವಳಾಗಿರಬೇಕು. ಅಂತಹ ಸರ್ವಕಲಾಪೋಷಕವಾದ ಪಾಕಕಲೆಯ ಮರ್ಮವರಿತ ಭಾರತೀಯ ನಾರಿಗೆ ನಮೋನ್ನಮಃ   


ಸೂಚನೆ: 31/12/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.