Monday, January 13, 2020

ತೆರೆಯ ಮರೆಯಲ್ಲಿನ ರಹಸ್ಯ (Thereya mareyallina rahasya)

ಲೇಖಕರು:  ಶ್ರೀಮತೀ ಸುಮೇಧಾ
 B. Com, CA  
(ಪ್ರತಿಕ್ರಿಯಿಸಿರಿ lekhana@ayvm.in)




ಕಾಲವೆಷ್ಟು ಬದಲಾದರೂ, ಕೆಲವು ಸಂಗತಿಗಳು ಮಾತ್ರ ಅಂತೆಯೇ ಉಳಿಯುತ್ತವೆ. ಉದಾಹರಣೆಗೆ, ಪರದೆಗಳ ಬಳಕೆ. ಅನೇಕರಿಗೆ ಸೊಳ್ಳೆ ಪರದೆಯಿಲ್ಲದೆ ನಿದ್ದೆ ಬರುವುದಿಲ್ಲ. ಬಿಸಿಲಿನಿಂದ ರಕ್ಷಿಸಿಕೊಳ್ಳಲು, ವಾಹನಗಳ ಗಾಜಿಗೂ, ಮನೆಯ ಕಿಟಕಿಗಳಿಗೂ ಬಳಸುತ್ತೇವೆ. ಮನೆ-ಶಾಲಾ-ಕಚೇರಿಗಳಲ್ಲಿ ಪ್ರತ್ಯೇಕತೆ ಬೇಕಾದಾಗ ಪರದೆ, ಬೀರುಗಳನ್ನು ಅಡ್ಡಗೋಡೆಯಾಗಿ ಬಳಸಿ ತೆರೆಮರೆಯಲ್ಲಿ ಅವಿತುಕೊಳ್ಳುತ್ತೇವೆ. ಆದರೆ ಗಾಳಿ ಬೇಕೆಂದಾಗ ಆ ಪರದೆಯನ್ನು ಸರಿಸುವುದೂ ಅಂತೆಯೇ ಸಹಜ. ಹೊರಗೆ ಮೋಡ ಕವಿದಿದ್ದಾಗ ತೆರೆಯನ್ನು ಸರಿಸಿ ಬೆಳಕು ಬರುವಂತೆ ಮಾಡುತ್ತೇವೆ. ಪರದೆಗಳು ಹಾಕುವುದು ತೆರೆಯುವುದು ನಮ್ಮ ಜೀವನದ ಪರದಾಟದಲ್ಲಿ ಸೇರಿಕೊಂಡಿದೆ. 

ಇದೇ ರೀತಿ ನಮ್ಮ ಜೀವನದಲ್ಲೂ ಅನೇಕ ಪರದೆ ಅಥವಾ ಕವಚಗಳುಂಟು. ದೇಹ ಸಂರಕ್ಷಣೆಗೆ ಬಟ್ಟೆಯೇ ಪರದೆ. ಅಲ್ಲದೆ ಸೃಷ್ಟಿ, ಸಹಜವಾಗಿ ಕರುಣಿಸಿರುವ ಕವಚಗಳುಂಟು - ನಮ್ಮ ದೇಹವನ್ನು ರಕ್ಷಿಸುವ ಚರ್ಮ ಮೊದಲ ಕವಚ, ಹಾಗೆ ಒಳಗಿರುವ ಹೃದಯ, ಒಳಾಂಗಗಳನ್ನು ಸಂರಕ್ಷಿಸುವ ಇಡೀ ದೇಹವೆ ಕವಚರೂಪದಲ್ಲಿದೆ. ಇನ್ನು ದೇಹದ ಒಡೆಯನಾದ ಪರಮಾತ್ಮನಿಗೆ ಈ ದೇಹ, ಮನಸ್ಸು ಬುದ್ಧಿ ಇಂದ್ರಿಯಗಳು ಪೋಷಕವಾದ ಕವಚಗಳು. ಆದರೆ ಆತ್ಮರಕ್ಷಣೆಗಾಗಿ ಹಾಕಿಕೊಂಡ ಈ ತೆರೆಯನ್ನು ಸರಿಸಲು ಮರೆತಿದ್ದೇವೆ. ತಮಸ್ಸಿನ ಮೋಡಗಳು ಕವಿದಿದ್ದು ಆತ್ಮಭಾಸ್ಕರನ ಬೆಳಕಿನಿಂದ ವಂಚಿತರಾಗಿದ್ದೇವೆ. ಪರದೆಯೆ ಅಂಟಿಕೊಂಡು ಒಳಗಿನ ಪದಾರ್ಥವೇ ಕಾಣದೆ ಹೊಗಿದೆ. ಆತ್ಮವಸ್ತುವಿನ ನಿಜ ರೂಪ ದರ್ಶನ ಆಗುತ್ತಿಲ್ಲ. ಆತ್ಮನನ್ನು ನೋಡಲಾರದೆ ಕಷ್ಟಕ್ಕೆ ಸಿಕ್ಕಿ ಈ ಪರದೆಯೇ ಪರದಾಟಕ್ಕೆ ಕಾರಣವಾಗಿದೆ.

ಇದರ ಪ್ರತೀಕವನ್ನು ದೇವಾಲಯಗಳಲ್ಲಿ ನೋಡುತ್ತೇವೆ. ನಾವು ದೇವಸ್ಥಾನಗಳಿಗೆ ಭಗವದ್ದರ್ಶನಕ್ಕಾಗಿ ಹೋಗುತ್ತೇವೆ. ಆದರೆ ಆಗಮ ಶಾಸ್ತ್ರಾನುಸಾರವಾಗಿ ದೇವತಾ ಮೂರ್ತಿಗಳ ಎದುರು ಮೂರು ಬಣ್ಣದ ತೆರೆಗಳುಂಟು. ಇವು ಕಪ್ಪು, ಕೆಂಪು ಹಾಗೂ ಬಿಳಿ ಬಣ್ಣದ ತೆರೆಗಳು. ಈ ತೆರೆಗಳ ಸರಿಸಿದ ಹೊರತು ದೇವರ ದರ್ಶನ ಲಭಿಸುವುದಿಲ್ಲ. ಅಲ್ಲಿಯ ವರೆಗೆ ಹೋದದ್ದಾಯಿತು, ಅಲ್ಲಿ ದೇವನಿರುವ ಅರಿವುಂಟು, ನೋಡುವ ಬಯಕೆಯೂ ಇದೆ. ಆದರೆ ಅಲ್ಲಿನ ತೆರೆ ಸರಿಸಲು ಬಾರದಿದ್ದಾಗ ದೇವಸ್ಥಾನಕ್ಕೆ ಹೋಗಿದ್ದು ವ್ಯರ್ಥ.  ತೆರೆಗಳ ಮೂರು ಬಣ್ಣಗಳು  ಕ್ರಮವಾಗಿ ತಮೋಗುಣ, ರಜೋಗುಣ ಹಾಗು ಸತ್ವಗುಣಗಳ ಪ್ರತೀಕ. ರಜಸ್ಸು ನಮ್ಮನ್ನು ಕಾರ್ಯಪ್ರವೃತ್ತವನ್ನಾಗಿಸುತ್ತದೆ. ತಮಸ್ಸು ಆಲಸ್ಯ-ನಿಷ್ಕ್ರಿಯತೆಗೆ ಕಾರಣ. ಸತ್ತ್ವ ಸರಿಯಾದ ಅರಿವನ್ನು ಕೊಟ್ಟು ಪ್ರಕಾಶಿಸುತ್ತದೆ. ಈ ಗುಣತ್ರಯಗಳ ಆಟದಿಂದಲೆ ನಮ್ಮ ಜೀವನದ ಕ್ರಿಯಾಕಲಾಪಗಳು.  ಇವು ಒಂದು ಸಮಸ್ಠಿತಿಗೆ ಬಂದು, ಏರಿಳಿತವಿಲ್ಲದೆ ಶಾಂತವಾಗಿ ನಿಂತಾಗ ಈ ತೆರೆಯು ಮರೆಯಾಗುತ್ತದೆ. ಪರದೆಗಳನ್ನು ಸರಿಸಲು ಸಾಧ್ಯವಾಗುತ್ತದೆ. ತೆರೆಮರೆಯಲ್ಲಿದ್ದ ಪರಮಾತ್ಮದರ್ಶನ ಮಾಡಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬಹುದು. ಈ ದರ್ಶನವನ್ನು ಮಾಡಿಸಿಕೊಡುವವರು ಅರ್ಚಕರು. ಆದ್ದರಿಂದಲೇ ಅರ್ಚಕ ಸಾಕ್ಷಾತ್ ಹರಿಯ ರೂಪವೆಂದು ಸಾರುವ ಶಾಸ್ತ್ರವಾಕ್ಯವನ್ನು ಶ್ರೀರಂಗ ಮಹಾಗುರುಗಳು ಉದ್ಧರಿಸುತ್ತಿದ್ದರು. ಅರ್ಚಕರಂತೆ ಈ ಪರದೆಗಳ ಪರದಾಟದಿಂದ ಪಾರುಮಾಡುವ ಪರಮ ಗುರುಗಳನ್ನು ನಿಷ್ಠೆಯಿಂದ ಆರಾಧಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.

ಸೂಚನೆ:  9/1/2020 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ.