Friday, February 14, 2020

ಭಾರತೀಯ ಜ್ಞಾನಿಗಳ ದೃಷ್ಟಿಯಲ್ಲಿ- ಸ್ವಾತಂತ್ರ್ಯ (Bharatheeya jnanigala drushtiyalli-svaathantrya)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ: lekhana@ayvm.in)     


ವ್ಯಕ್ತಿ ಅಥವಾ ರಾಷ್ಟ್ರಗಳು ತಮ್ಮ ಇಚ್ಚೆಯಂತೆ ಜೀವನ ಮಾಡಲು ಮುಕ್ತ ಅವಕಾಶ, ಪರಕೀಯ ದಬ್ಬಾಳಿಕೆಯಿಂದ ಮುಕ್ತಿ, ಸ್ವಾವಲಂಬನೆ, ಎಲ್ಲ ಬಗೆಯ ಕಟ್ಟುಗಳಿಂದ ಬಿಡಿಸಿಕೊಳ್ಳುವಿಕೆ ಹೀಗೆ “ಸ್ವಾತಂತ್ರ್ಯ” ಕ್ಕೆ ಅನೇಕ ರೀತಿಯ ವ್ಯಾಖ್ಯೆಗಳು. ನಮ್ಮ ಮನಸ್ಸಿನಂತೆ ನಡೆದುಕೊಳ್ಳುವ ಅವಕಾಶ ಎಲ್ಲರಿಗೂ ಇರಬೇಕು. ಸ್ವಾತಂತ್ರ್ಯವೇ ಸ್ವರ್ಗ-ಪಾರತಂತ್ರ್ಯವೇ ನರಕ ಎನ್ನುವ ಘೋಷಣೆ ಬಹಳ ಪ್ರಸಿದ್ಧ. ನಮ್ಮ ಮನಸ್ಸಿನಂತೆ ನಡೆಯಲು ತಡೆಯುಂಟುಮಾಡುವ ನಿರ್ಬಂಧಗಳು ನಮಗೆ ಸಮ್ಮತವಿಲ್ಲ. ಹಾಗಾದರೆ ದೇಶದಲ್ಲಿ ಕಾನೂನು, ಕಟ್ಟಲೆಗಳೇ ಇರಬಾರದೇ? ಸಾಮಾಜಿಕವಾಗಿ ಎಲ್ಲರೂ ಹೀಗೆ ನಡೆದುಕೊಳ್ಳಬೇಕು ಎಂಬ ವಿಧಿ-ನಿಷೇಧಗಳಿಗೆ ಏನು ಅರ್ಥ? ನಿಜವಾಗಿ ಸ್ವಾತಂತ್ರ್ಯ ಎಂದರೆ ಏನು?

ಜಗತ್ತಿನ ಅನೇಕ ರಾಷ್ಟ್ರಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿವೆ. ನಮ್ಮ ದೇಶದಲ್ಲಂತೂ ಶತಶತಮಾನಗಳ ದೀರ್ಘ ಹೋರಾಟವೇ ನಡೆದು ಈಗ ಸ್ವತಂತ್ರ ಭಾರತದಲ್ಲಿ ನಾವು ಜೀವಿಸುವಂತಾಗಿದೆ. ಇಷ್ಟಾದರೂ ನಿಶ್ಚಿತವಾಗಿ “ಸ್ವಾತಂತ್ರ್ಯ” ಎಂದರೇನು ಎಂಬ ಪ್ರಶ್ನೆಗೆ ಸಮಾಧಾನ ಹುಡುಕಬೇಕಿದೆ.

ಸ್ವಾತಂತ್ರ್ಯ ಎಂಬ ಪದವನ್ನು ತಂದವರು ನಮ್ಮ ದೇಶದ ಜ್ಞಾನಿಗಳು. ಅವರ ದೃಷ್ಟಿಯಲ್ಲಿ ಈ ಪದವನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಸೂಕ್ತವೆನಿಸುತ್ತದೆ.ಒಂದು ಮಾವಿನ ಬೀಜವನ್ನು ನೆಟ್ಟರೆ ಅದು ತನ್ನ ತಂತ್ರ-ಸ್ವತಂತ್ರದಂತೆ ಮಾವಿನ ಮೊಳಕೆ, ಮಾವಿನ ಕಾಂಡ, ಮಾವಿನ ಕೊಂಬೆ, ಮಾವಿನ ಎಲೆ, ಮಾವಿನ ಕಾಯಿ.ಮಾವಿನ ಹಣ್ಣು ಮತ್ತು ಮಾವಿನ ಬೀಜ ಹೀಗೆ ಅದರ ವಿಕಾಸ ಸಾಗುತ್ತದೆ. ಆ ಬೀಜದಲ್ಲಿ ತನ್ನ ವಿಕಾಸದ ತಂತ್ರವೇನಿದೆಯೋ ಅದೇ ಅದರ ಸ್ವ-ತಂತ್ರ. ಅದು ತನ್ನ ತಂತ್ರದಂತೆ ಮಾವಿನ ಮರವಾಗುವುದಕ್ಕೆ ಮಾಡುವ ಕೃಷಿ ಎಲ್ಲವೂ ಅದರ ಸ್ವಾತಂತ್ರದ ರಕ್ಷಣೆಗೆ ಸೇರುತ್ತದೆ. ಮಾವಿನ ಕೃಷಿಗೆ ಬೇಕಾದ ವಿಧಿ-ನಿಷೇಧಗಳೆಲ್ಲವೂ ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಅವಶ್ಯವಾಗುತ್ತವೆ. ಕೆಲವೊಮ್ಮೆ ಮಾವಿನ ಮರದಲ್ಲಿ ಬದನಿಕೆ ಬೆಳೆಯುವುದುಂಟು. ಅದು ಮಾವಿನ ಬೇರಿನ ರಸವನ್ನೆಲ್ಲ ತಾನು ಹೀರಿ ಬೆಳೆಯುತ್ತೆ. ಅದು ಮಾವಿನ ಬೀಜದ ತಂತ್ರದಂತೆ ಬೆಳೆಯಲು ಬಾಧಕ. ವ್ಯವಸಾಯಜ್ಞನಾದವನು ಅದನ್ನು ಗುರುತಿಸಿ ಅಂತಹ ಬದನಿಕೆಯನ್ನು ತೆಗೆದುಹಾಕಿ ಮಾವಿನ ಮರವೇ ಸೊಂಪಾಗಿ ಬೆಳೆಯಲು ಬೇಕಾದ ಜಾಗ್ರತೆ ವಹಿಸುತ್ತಾನೆ. ಹಾಗೆ ಬದನಿಕೆಯನ್ನು ಕಿತ್ತುಹಾಕುವುದು ಮಾವಿನ ಸ್ವಾತಂತ್ರ್ಯವನ್ನು ಕಸಿದುಕೊಂಡಂತಲ್ಲ. ಬದಲಿಗೆ ಮಾವಿನ ತಂತ್ರದಂತೆ ಅದರ ವಿಕಾಸಕ್ಕೆ ನೀಡುವ ಸಹಕಾರ.
ಮಾನವನಿಗೂ ಸಹಜವಾದ ತಂತ್ರ ಒಂದುಂಟು. ಜೀವನ ಎನ್ನುವಾಗಲೇ ಜೀವ-ಸೇರಿಕೊಂಡಿದೆ. ಜೀವವೇ ಮಾನವ ವೃಕ್ಷದ ಬೀಜ. ಶ್ರೀರಂಗ ಮಹಾಗುರುಗಳ ಮಾತಿನಂತೆ ಜೀವವನ್ನು ಕಡೆಗಣಿಸಿ ಬಾಳಿದರೆ ಅದು ಜೀವ-“ನ” ಆಗಿಬಿಡುತ್ತದೆ. ಹಾಗಾಗದೇ  ಜೀವದ ಆಶಯ ಏನು ಎಂಬುದನ್ನು ತಪಸ್ಯೆಯಿಂದ ಕಂಡುಕೊಂಡವರು ನಮ್ಮ ಮಹರ್ಷಿಗಳು. ಜೀವವು ಮಹಾಚೈತನ್ಯ ಸ್ವರೂಪನಾದ ಪರಮಾತ್ಮನ ಅಂಶವೇ ಆಗಿದೆ. ಮಾವಿನ ಮರ ಎಲ್ಲೂ ಮಾವಿನ ತನವನ್ನು ಬಿಡದೇ ವಿಕಾಸವಾಗಿ ಕಡೆಗೆ ಮಾವಿನ ಬೀಜದಲ್ಲೇ ಪರ್ಯವಸಾನವಾಗುವಂತೆ ಜೀವವೂ ತಾನು ವಿಕಾಸವಾಗುವಾಗ ಆ ಮಹಾ ಚೈತನ್ಯದ ಆಶಯಕ್ಕನುಗುಣವಾಗಿಯೇ ಬೆಳೆಯುತ್ತಾ ಕಡೆಗೆ ಅದರಲ್ಲೇ ಸೇರುವಂತಾದರೆ ಅದು ಜೀವ ಬೀಜದ ಸಹಜವಾದ ತಂತ್ರ, ಸ್ವ-ತಂತ್ರ. ಅಂತಹ ಜೀವನ ವಿಕಾಸದಲ್ಲಿ ನೆಮ್ಮದಿ, ಶಾಂತಿ, ಆನಂದಗಳುಂಟು. ಅಂತಹ ಜೀವನವೇ ಸ್ವತಂತ್ರ ಜೀವನ ಪೂರ್ಣಜೀವನ ಎಂಬುದು ಆ ಸ್ವಾತಂತ್ರ್ಯವನ್ನು ಅನುಭವಿಸಿ ಸುಖಿಸಿದವರ ತೀರ್ಮಾನ.

ಈ ಜೀವನ ವೃಕ್ಷದಲ್ಲೂ ಜೀವದ ಮೂಲ ರಸವನ್ನೇ ಹೀರುತ್ತಾ ಅದರ ತಂತ್ರಕ್ಕೆ ಸೇರದ ಬದನಿಕೆಗಳು ಬೆಳೆಯುವುದುಂಟು. ನಮ್ಮ ಮನಸ್ಸು ಇಂದ್ರಿಯ ಸುಖಗಳ ಬೆನ್ನಟ್ಟಿ ಮುಂದೆ ಸಾಗುತ್ತಾ ಹಿಂಬದಿಯಲ್ಲಿ ಬೆಳಗುತ್ತಿರುವ ಜೀವದ ಆಶಯವನ್ನು ಮರೆತು ಬೆಳೆಯ ತೊಡಗಿದಾಗ ಪಾರತಂತ್ರ್ಯ. ಸ್ವಾತಂತ್ರ್ಯದ ವಿಸ್ಮರಣೆ. ಚಂಚಲವಾದ ಮನೋಬುದ್ಧಿ, ಇಂದ್ರಿಯಗಳು ಹೀಗೆ ದಾರಿತಪ್ಪಬಾರದು. ಅವು ತಮ್ಮ ಸಹಜವಾದ ತಂತ್ರದಲ್ಲಿ ವಿಕಾಸವಾಗುವಂತಾಗಬೇಕು. ಜೀವಲೋಕವೆಲ್ಲವೂ ತನ್ನ ಸಹಜಾವಸ್ಥೆಯಾದ ಸುಖ ಶಾಂತಿ ನೆಮ್ಮದಿಗಳಿಂದ ಬಾಳುವಂತಾಗಬೇಕು ಎಂಬುದು ನಮ್ಮ ಮಹರ್ಷಿಗಳ ಆಶಯ. ಜೀವಲೋಕದ ಮೇಲಿನ ಕರುಣೆಯಿಂದಲೇ ಅವರು ಅಂತಹ ಸ್ವಾತಂತ್ರ್ಯದಿಂದ ಬಾಳುವ ಜೀವನ ವಿಧಾನವನ್ನು ಈ ನಾಡಿನಲ್ಲಿ ರೂಪಿಸಿದರು. ಜೀವನದುದ್ದಕ್ಕೂ ಸ್ವ-ತಂತ್ರ ಮರೆಯಾಗಬಾರದು. ಆ ಆನಂದರಸವು ಅನವರತವೂ, ವಿಕಾಸದ ಹಾದಿಯಲ್ಲೆಲ್ಲ ಹರಿದು ಬರಬೇಕು. ಅದಕ್ಕೆ ಸಹಕಾರಿಯಾಗುವ “ವಿಧಿ” ಗಳನ್ನು ಆಚರಣೆಗೆ ತಂದರು. ಅದಕ್ಕೆ ಪ್ರತಿಬಂಧಕವಾದುದನ್ನು ನಿಷೇಧ ಮಾಡಿದರು. ಇದು ಈ ನಾಡಿನ ಜ್ಞಾನಿಗಳ ಸ್ವಾತಂತ್ರ್ಯದ ಬಗೆಗಿನ ನೋಟ.

ಇಂತಹ ಜೀವನ ವಿಧಾನದಲ್ಲಿ ಬಾಳಿ ಜೀವನದ ಪರಮ ಸುಖವನ್ನು ಎಲ್ಲರೂ ಅನುಭವಿಸುವಂತೆ ಇಲ್ಲಿ ರಾಷ್ಟ್ರ ವ್ಯವಸ್ಥೆಯನ್ನು ತಂದರು. ಎಲ್ಲರೂ ಸ್ವ-ತಂತ್ರದಿಂದ ಬಾಳಲು ಅನುಕೂಲವಾದ ವಾತಾವರಣ ಸಮಾಜದಲ್ಲಿ ಇರುವಂತೆ ನೋಡಿಕೊಳ್ಳುವವನು ರಾಜನಾದನು. ಅವನು ಸ್ವತಃ ಆತ್ಮರಾಜ್ಯವನ್ನು ಒಳಗೆ ಅನುಭವಿಸಿದವನು. ಹೊರಗೂ ಎಲ್ಲ ಪ್ರಜೆಗಳೂ ಅದನ್ನು ಅನುಭವಿಸಲು ಅನುವಾಗುವಂತೆ ನಿಯಮನ ಮಾಡುವವನು.ಈ ಜೀವನ ವಿಧಾನವನ್ನು ಮುರಿದು ಅಶಾಂತಿ ಹರಡುವ ದುಷ್ಟರನ್ನು ದಂಡಿಸಿ, ವ್ಯವಸ್ಥೆ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುವ ಸ್ವಾಮಿಯಾದನು. “ರಾಜ” ಎಂದರೆ ಬೆಳಗುವವನು. ಒಳಗೇ ಎಲ್ಲ ಜೀವಿಗಳಲ್ಲಿ ಬೆಳಗುತ್ತಿರುವ, ಎಲ್ಲರನ್ನೂ ನಿಯಮನ ಮಾಡುತ್ತಿರುವ ಪರಂಜ್ಯೋತಿಯ ಪ್ರತಿನಿಧಿ. ಅಂತಹ ಶ್ರೇಷ್ಠ ರಾಜಪರಂಪರೆಯನ್ನೇ ಬೆಳೆಸಿದ ವೈಭವದ ನಾಡು ನಮ್ಮದು.

ಸುಶಿಕ್ಷಿತವಾದ ಮನಸ್ಸೇ ಸ್ವತಂತ್ರಕ್ಕೆ ಸಹಕಾರಿಯಾದ ಶಿಸ್ತನ್ನು ರೂಪಿಸಿಕೊಳ್ಳುತ್ತದೆ. ಹಾಗೆ ಮಾಡುವ ಎಲ್ಲ ಕಟ್ಟುಪಾಡುಗಳೂ ಸ್ವಾತಂತ್ರ್ಯ ರಕ್ಷಣೆಗೆ ಸೇರುವಂತಹವು. ಬರಿಯ ಸ್ವೇಚ್ಚೆ ಸ್ವಾತಂತ್ರ್ಯವಲ್ಲ. ಆ ಇಚ್ಛೆ ಮಹರ್ಷಿಗಳು ಕಂಡುಕೊಂಡ ನಿಜವಾದ ನಮ್ಮ ತಂತ್ರಕ್ಕೆ ಅನುಗುಣವಾಗಿದ್ದರೆ ಮಾತ್ರವೇ ಸ್ವಾತಂತ್ರ್ಯವಾಗಬಲ್ಲುದು. ರಸ್ತೆಯ ಎಡಭಾಗದಲ್ಲಿ ವಾಹನ ಚಲಿಸಬೇಕು ಎಂಬ ನಿಯಮ ನಮ್ಮ ಜೀವ ಹಿತಕ್ಕಾಗಿ ಬಂದಿರುವುದು. ಅಂತಹ ನಿಯಮ ಪಾಲನೆ ಸ್ವಾತಂತ್ರ್ಯಕ್ಕೆ ಅಡ್ಡಿ ಅಲ್ಲ. ಬದಲಿಗೆ ಪೂರಕ. ನಮಗೆ ಬಲ ಭಾಗದಲ್ಲಿ ಸಂಚರಿಸಬೇಕೆಂಬ ಇಚ್ಛೆ ಬಂದರೆ ಅದು ನಮ್ಮನ್ನೂ, ಎದುರು ಬರುವವರನ್ನೂ ಬಲಿತೆಗೆದುಕೊಳ್ಳಬಹುದು. ಹೀಗೆಯೇ ನಮ್ಮ ಇಹ ಪರಗಳ ಹಿತವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಹರ್ಷಿಗಳು ತಂದ ಜೀವನ ವಿಧಾನ, ಆಚಾರ ವಿಚಾರಗಳು, ವಿಧಿ-ನಿಷೇಧಗಳು ಎಲ್ಲವೂ ಸ್ವಾತಂತ್ರ್ಯಕ್ಕೆ ಪೂರಕ. ಅಂತಹ ನಿಜವಾದ ಸ್ವಾತಂತ್ರ್ಯದಲ್ಲಿ ನಾವೆಲ್ಲಾ ರಮಿಸುವಂತಾದರೆ ಅದೇ ಈ ದೇಶದ ಮಹರ್ಷಿಗಳಿಗೆ ನಾವು ಅರ್ಪಿಸುವ ಕೃತಜ್ಞತೆ.    

ಸೂಚನೆ: 13/02/2020 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿಯ ಅಂಕಣದಲ್ಲಿ ಪ್ರಕಟವಾಗಿದೆ.