Friday, February 21, 2020

ಮಹಾಶಿವರಾತ್ರಿಯ ಆಚರಣೆ ಮತ್ತು ಬಿಲ್ವದ ವೈಶಿಷ್ಟ್ಯ (Mahashivaratriya Acarane Mattu bilvada vaishistya)

ಲೇಖಕರು: ಡಾ|| ಪುನೀತ್ ಕುಮಾರ್. ಪಿ.
ಮಿಂಚಂಚೆ (lekhana@ayvm.in)




ಮಹಾಶಿವರಾತ್ರಿಯನ್ನು ಶಿವನಿಗೆ ಪ್ರಿಯವಾಗಿ ಮಾಡಿಕೊಳ್ಳುವುದಕ್ಕೆ ಎರಡು ವಿಶೇಷ ಸಾಧನಗಳೆಂದರೆ, ಉಪವಾಸ ಮತ್ತು ಜಾಗರಣೆ. ಉಪವಾಸ ಎಂದಾಕ್ಷಣ ನಮಗೆ ನೆನಪಾಗುವುದು ಮಹಾಶಿವರಾತ್ರಿ, ಕೃಷ್ಣಾಷ್ಟಮಿ, ಸಂಕಷ್ಟ ಚತುರ್ಥಿ, ಏಕಾದಶಿ ವ್ರತಗಳು. ಶಿವರಾತ್ರಿ ಸಂದರ್ಭದಲ್ಲಿ ಉಪವಾಸದ ಆಚರಣೆಯು ಶಿವಪೂಜೆಗೆ ಹೆಚ್ಚು ಸಹಕಾರಿಯಾಗಿರುವ ಬಹುಮುಖ್ಯ ಆಚರಣೆ. ಅಂತರಂಗದಲ್ಲಿ ಉಪವಾಸ-ಧ್ಯಾನಗಳಿಂದ, ಬಹಿರಂಗದಲ್ಲಿ ಜಾಗರಣೆ-ಪೂಜೆಗಳಿಂದ ಪರಮಾತ್ಮನನ್ನು ಆರಾಧಿಸಬೇಕು. 'ಉಪವಾಸ' ಎಂದರೆ 'ಭಗವಂತನಿಗೆ ಹತ್ತಿರವಾಗಿ ಇರುವುದು' ಎಂಬ  ಹಿನ್ನೆಲೆಯನ್ನರಿತು ಆಚರಿಸಬೇಕು.

ಉಪವಾಸದ ಬಗೆಗಳಲ್ಲಿ ನಿರ್ಜಲ, ಸಜಲ, ನಿರಾಹಾರ, ಮಿತಾಹಾರ, ಫಲಾಹಾರ ಇತ್ಯಾದಿ ರೂಢಿಯಲ್ಲಿ ಕಾಣಬಹುದು. ಇವುಗಳಲ್ಲಿ ಯಥಾಶಕ್ತಿ ಆಚರಿಸಬೇಕು. ಇದರಿಂದ ದೇಹದ ಜೀರ್ಣಾಂಗಗಳಿಗೆ ಶ್ರಮ ಉಂಟಾಗದೆ ವಿರಮಿಸಲು ಸಹಾಯ ಮಾಡುವುದು. ಜೀರ್ಣಾಗ್ನಿಯನ್ನು ಚುರುಕುಗೊಳಿಸಿ, ಜೀರ್ಣಕ್ರಿಯೆಗಳಿಗೆ ಹೊಸ ತಿರುವು ತರುವುದು. ದೇಹದಲ್ಲಿ ಈಗಾಗಲೆ ಉಂಟಾಗಿರಬಹುದಾದ ಆಮ(Toxins)ವನ್ನು ಕರಗಿಸಿ ದೇಹವನ್ನು ಶುದ್ಧೀಕರಿಸುವುದು. ದೇಹದ ಮಾಂಸ, ಮೇದ(ಕೊಬ್ಬಿನ ಅಂಶ), ಬೊಜ್ಜು ದೋಷಗಳನ್ನು ನಿವಾರಿಸಿ ದೇಹ ದೃಢವಾಗುವುದು. ಶರೀರ ಲಘುವಾಗಿ, ಚಟುವಟಿಕೆಗಳಲ್ಲಿ ಕಾರ್ಯಕ್ಷಮತೆ ಹೆಚ್ಚಾಗುವುದು. ಉಪವಾಸದಿಂದ ಕಫ ಹಾಗು ಪಿತ್ತ ದೋಷಗಳು ನಿಯಂತ್ರಣಕ್ಕೆ ಬಂದು ಆರೋಗ್ಯದಲ್ಲಿ ಚೇತರಿಕೆ ಮೂಡುವುದು. ಇಂತಹ ದೇಹಸ್ಥಿತಿ ಶಿವಧ್ಯಾನಕ್ಕೆ ಅತ್ಯಂತ ಪೂರಕ.

ಮಹಾಶಿವರಾತ್ರಿಯು ಶಿಶಿರ ಋತುವಿನಲ್ಲಿ ಆಚರಿಸಲ್ಪಡುವ ಮಹಾಪರ್ವ. ಈ ಕಾಲಪರ್ವದಲ್ಲಿ ಸಹಜವಾಗಿಯೇ ಹಸಿವು ಕಡಿಮೆಯಾಗಲು, ದೇಹ ಬಲಹೀನವಾಗುವುದು. ವಾತ, ಪಿತ್ತ, ಕಫಗಳು ಕೆರಳುವ ಕಾಲ. ಹಾಗಾಗಿ ದೇಹದ ಜೀರ್ಣಶಕ್ತಿಯನ್ನು ಕಾಪಾಡಲು ಆರೋಗ್ಯದ ದೃಷ್ಟಿಯಿಂದ ಉಪವಾಸದ ಅಗತ್ಯ ಬಹುಮುಖ್ಯ. ಹಗಲಿನ ಸೂರ್ಯನ ಪ್ರಖರ ಬಿಸಿಲಿಗೆ ಹೆಚ್ಚಾಗಿ ಮೈಯೊಡ್ಡದೆ ಹಬ್ಬದ ಆಚರಣೆಯಲ್ಲಿ ತೊಡಗಬೇಕು.

ಉಪವಾಸ ಯಾರಿಗೆ ಉಂಟು, ಯಾರಿಗೆ ಇಲ್ಲ?
ಸ್ಥೂಲಕಾಯ, ಆಮದೋಷ ಇರುವವರು, ಜ್ವರದಿಂದ ಬಳಲುತ್ತಿರುವವರು, ಚರ್ಮರೋಗ ಪೀಡಿತರು, ಸರ್ಪಸುತ್ತು, ಕುರ, ತಲೆನೋವು, ದೃಷ್ಟಿದೋಷ, ಕೆಮ್ಮು-ದಮ್ಮು ರೋಗಿಗಳು ಉಪವಾಸವನ್ನು ಯಥಾಶಕ್ತಿ ಆಚರಿಸಬೇಕು. ಆರೋಗ್ಯವಂತರೂ ಉಪವಾಸವನ್ನು ಆಚರಿಸಬೇಕು. ಮಕ್ಕಳು, ವೃದ್ಧರು, ರೋಗಿಗಳು, ವಾತಪ್ರಕೃತಿ ದೇಹದವರು, ಜೀರ್ಣಾಂಗದ ಖಾಯಿಲೆ ಪೀಡಿತರು, ಮಧುಮೇಹಿಗಳು, ಬಲಹೀನರು, ಆಯಾಸ, ನೀರಡಿಕೆಯಿಂದ ಬಳಲುತ್ತಿರುವವರು ಉಪವಾಸವನ್ನು ಮಿತವಾಗಿ ಆಚರಿಸಿಕೊಳ್ಳಬೇಕು.
ಉಪವಾಸವನ್ನು ಆಚರಿಸಿದ ನಂತರದಲ್ಲಿ ಇಂದ್ರಿಯಶುದ್ದಿಯಾಗಿ, ದೇಹದ ದೋಷ ಹಾಗು ಮಲ ನಿವಾರಣೆಯಾಗವುದು. ಶರೀರ ಹಗುರವಾಗುವುದು. ಹಸಿವು, ನೀರಡಿಕೆ ಸಹಜವಾಗಿ ಮರಳುತ್ತವೆ. ಜಾಢ್ಯ ನಿವಾರಣೆಯಾಗಿ, ಉತ್ಸಾಹ ಹೆಚ್ಚಾಗುವುದು.

ರಾತ್ರಿಜಾಗರಣೆಯನ್ನು ಶಿವರಾತ್ರಿಯ ಕಾಲಘಟ್ಟದಲ್ಲಿ ಆಚರಿಸಿಕೊಂಡರೆ, ದೇಹದಲ್ಲಿ ಉಂಟಾಗಿರಬಹುದಾದ ಕಫದೋಷ ನಿವಾರಣೆಯಾಗುವುದಲ್ಲದೆ, ಪಿತ್ತವನ್ನು ಸರಿಹೊಂದಿಸಿ ಜೀರ್ಣಕ್ರಿಯೆಗಳನ್ನು ದೇಹ ಸರಾಗವಾಗಿ ನೆಡೆಸಿಕೊಳ್ಳುವುದು. ಶಿವರಾತ್ರಿಯ ಜಾಗರಣೆಯನ್ನು ಯಾವುದೊ ಅನಗತ್ಯ ವಿಷಯಗಳಿಗೆ ಸಮಯವನ್ನು ಪೋಲು ಮಾಡದೆ, ಭಗವಂತನ ಪೂಜೆ, ಧ್ಯಾನಗಳಿಗೆ ಮೀಸಲಾಗಿಟ್ಟು ಇಂದ್ರಿಯ ಜಯ ಸಾಧಿಸಿ ಶಿವನಲ್ಲಿ ನೆಲೆ ಹೊಂದಬೇಕು. ಗೀತಾಚಾರ್ಯನು ಸಾರುವ ಹಾಗೆ 'ಯಾ ನಿಶಾ ಸರ್ವಭೂತೇಷು ತಸ್ಯಾಂ ಜಾಗರ್ತಿ ಸಂಯಮೀ', ಜ್ಞಾನಿಯಾದವನು ಬೇರೆಲ್ಲಾ ಭೂತಗಳಿಗೆ ಕತ್ತಲಾದಾಗಲೂ ಬೆಳಕನ್ನು ಸದಾ ಕಾಣುವವನಾಗಿರುತ್ತಾನೆ. ಇಂತಹಾ ಪುಣ್ಯಕಾಲದಲ್ಲಿ ತಿಳಿದೋ ತಿಳಿಯದೆಯೋ ರಾತ್ರಿಜಾಗರಣೆ ಉಪವಾಸಗಳನ್ನು ಆಚರಿಸಿದರೆ, ಚಿತ್ತಶುದ್ಧಿಯಾಗುತ್ತದೆ ಎಂದು ಜ್ಞಾನಿಗಳು  ಅಭಿಪ್ರಾಯ ಪಟ್ಟಿದ್ದಾರೆ. ಶಿವಪುರಾಣದ ಬೇಡರ ಕಣ್ಣಪ್ಪನ ಕಥೆಯಂತೆ, ತಿಳಿಯದೇ ಶಿವಪೂಜೆ ನೆರವೇರಿಸಿ ಅರಿವಿಲ್ಲದೆಯೇ ಅವನಿಗೆ ಜ್ಞಾನೋದಯವಾಗುವಂತೆ.




ಬಿಲ್ವದ ವೈಶಿಷ್ಟ್ಯ
ಶಿವರಾತ್ರಿಯ ಪೂಜೆ ಎಂದಾಕ್ಷಣ ನಮ್ಮ ಮನ್ನಸ್ಸಿಗೆ ನೆನಪಾಗುವುದೇ ಬಿಲ್ವ ಪತ್ರೆಗಳು. ಬಿಲ್ವಪತ್ರೆ, ಎಕ್ಕ, ಗಣಿಗಿಲೆ, ಧತ್ತೂರೀ, ಬೃಹತೀ, ಜಪಾಕುಸುಮ(ಕೆಂಪು ದಾಸವಾಳ) ಶಿವಪೂಜೆಯಲ್ಲಿ ಬಳಸಲಾಗುವ ವಿಶೇಷ ಪತ್ರಪುಷ್ಪಗಳು. ಇವುಗಳಲ್ಲೆಲ್ಲ ಅತ್ಯಂತ ಶ್ರೇಷ್ಠವಾದುದು ಬಿಲ್ವಪತ್ರ. 'ಅದರ ದರ್ಶನ, ಸ್ಪರ್ಶ, ಸಮರ್ಪಣೆಗಳು ಶಿವಸ್ಥಾನಕ್ಕೆ ನಮ್ಮನ್ನು ಏರಿಸುವ ಶಕ್ತಿಯಿರುವ ಪವಾಡ ಮೂಲಿಕೆ' ಎಂದು ಶ್ರೀರಂಗಮಹಾಗುರುಗಳು ಅಪ್ಪಣೆಕೊಡಿಸಿದ್ದರು.

ಬಿಲ್ವದ ಮರವು ದೃಡವಾಗಿ, ಎತ್ತರಕ್ಕೆ ಬೆಳೆಯುವ, ಶೀತೋಷ್ಣ ವಲಯದಲ್ಲಿ ನೋಡಸಿಗುವ ಮೈಯಲ್ಲಾ ಮುಳ್ಳುಗಳನ್ನು ಹೊತ್ತಿರುವ ಕಂದುಬಣ್ಣದ ಮರ. ಸುಮಾರು 20-30 ಅಡಿ ಎತ್ತರಕ್ಕೆ ಬೆಳೆದು, ಬೇಸಿಗೆಯಕಾಲಕ್ಕೆ ಹಣ್ಣುಗಳು ಪಕ್ವವಾಗುವುದು. ಇದರ ಕಾಂಡ ಸುಮಾರು 1.5 – 2 ಅಡಿ ಅಗಲವಾಗಿದ್ದು ಕಂದುಬಣ್ಣದ ತೊಗಟೆ ಇರುತ್ತದೆ. ಕೊಂಬೆಗಳು  ಮುಳ್ಳನ್ನು ಹೊತ್ತು ಎಲ್ಲಾ ದಿಕ್ಕುಗಳಿಗೆ ಚಾಚಿಕೊಂಡಂತಿರುತ್ತವೆ. ಎಲೆಗಳು  ಅಚ್ಚಹಸಿರು, ಮೂರು-ಮೂರು ಎಲೆಗಳು ಗುಂಪಾಗಿ(Trifoliate) ಸುಂದರವಾಗಿರುತ್ತವೆ. ಈ ಮೂರು ದಳಗಳು ಬ್ರಹ್ಮ, ವಿಷ್ಣು, ರುದ್ರ ದೇವರ ಸಂಕೇತ. ಸಾಧನೆಯಲ್ಲಿ ತ್ರಿಮೂರ್ತಿಗಳ ದರ್ಶನ, ಅನುಭವಗಳಿಗೆ ಸಹಕಾರಿ. ಮುಕ್ಕಣ್ಣನ ಮೂರು ಕಣ್ಣುಗಳಂತೆ. ಸೃಷ್ಟಿ ಸ್ಥಿತಿ ಲಯದ ಸಂಕೇತ.  ಸತ್ತ್ವ ರಜಸ್ ತಮೋ ಗುಣಗಳ ಪ್ರತೀಕವೂ ಆಗಿದೆ. ಬಿಲ್ವದ ಮರಗಳು ಸಾಮಾನ್ಯವಾಗಿ ಮಧ್ಯ ಹಾಗು ದಕ್ಷಿಣ ಭಾರತ, ಬರ್ಮಾ ದೇಶಗಳಲ್ಲಿ ನೋಡಸಿಗುತ್ತವೆ. ಇದರ ಎಲೆ, ತೊಗಟೆ, ಹಣ್ಣುಗಳು ಕಹಿ ಹಾಗು ಒಗಚು ರಸ ಹೊಂದಿದ್ದು, ಉಷ್ಣದ ವೀರ್ಯಶಕ್ತಿ ಇದರಲ್ಲಡಗಿದೆ. ಇದು ಕಫ ಮತ್ತು ವಾತ ದೋಷಗಳನ್ನು ನಿವಾರಿಸುತ್ತದ್ದೆ. ಅರ್ಧಪಕ್ವಬಿಲ್ವ ಆಮಶಂಕೆ ನಿವಾರಿಸುವುದು, ತೊಗಟೆ ಜ್ವರಕ್ಕೆ ಪಾಶುಪತಾಸ್ತ್ರ. ಎಲೆಯ ರಸ ಮಧುಮೇಹ ರೋಗ ನಿವಾರಕ.


ಬಿಲ್ವದ ಹಣ್ಣಿನಿಂದ ತಯಾರಿಸಿದ ಎಣ್ಣೆಯು ಕಿವಿನೋವು, ಕಿವಿಯ ಸೋಂಕು, ಕರ್ಣನಾದ(Tinnitus), ಕಿವುಡುತನಕ್ಕೆ ಪರಿಣಾಮಕಾರಿಯಾದ ಔಷಧವಾಗಿದೆ. ಇವೆಲ್ಲವೂ ಆಧಿಭೌತಿಕ ಪ್ರಯೋಜನಗಳಾದರೆ ಆಧ್ಯಾತ್ಮಿಕವಾಗಿ ಶಿವನ ಪೂಜೆಗೆ ಅತ್ಯಂತ ಸಹಕಾರಿಯಾಗಿದೆ.

ಹೀಗೆ  ಸದಾಶಿವನ ಪೂಜೆಯಲ್ಲಿ ವಿಶೇಷವಾಗಿರುವ ಬಿಲ್ವ, ಆರೋಗ್ಯದ ದೃಷ್ಟಿಯಲ್ಲಿ ಕೂಡ ದೇಹ-ಮನಸ್ಸುಗಳ ದೋಷ ನಿವಾರಣೆ ಮಾಡಿ, ಜೀವದ ಧ್ಯೇಯವಾದ ಶಿವನ ಸಾಯುಜ್ಯ ಹೊಂದಲು ತಾರಕವಾಗಿದೆ. ಹೀಗೆ ಶಿವರಾತ್ರಿಯ ದಿನ ಉಪವಾಸ, ಜಾಗರಣೆ, ಶಿವನ ಧ್ಯಾನ, ಪೂಜೆ, ಜಪ, ಕೀರ್ತನೆ, ದಾನ, ಹೋಮಗಳ ಆಚರಣೆಯಿಂದ ದೇಹದ ಒಳಗೂ ಹಾಗು ಹೊರಗೂ ಇರುವ ದುಷ್ಟ ಶಕ್ತಿಗಳ  ಸಂಹಾರ ಮಾಡಿಕೊಂಡು ಪರಮ ಕರುಣಾಳುವಾದ ರುದ್ರದೇವನ ಕೃಪೆಗೆ ಪಾತ್ರರಾಗೋಣ.