Saturday, February 22, 2020

ಪೂಜೆಯು ಭಗವಂತನಲ್ಲಿ ಸೇರಿಸುವ ಸೇತುವೆ (Pujeyu bhagavantanalli Serisuva setuve.)

    ಲೇಖಕರು: ಶ್ರೀಮತಿ ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿlekhana@ayvm.in)


ಅಂತರಂಗ-ಬಹಿರಂಗ ಪೂಜೆಗಳೆರಡರಲ್ಲಿಯೂ  ಮನಸ್ಸು ಭಗವಂತ್‌ಸಂಬಂಧವನ್ನು ಹೊಂದಿರಬೇಕೆನ್ನುವುದೇ ಮುಖ್ಯ. ಇದನ್ನು ಸಾಧಿಸಲನುಗುಣವಾಗಿ ಜ್ಞಾನಿಗಳು ಪೂಜಾಸಿದ್ಧತೆಯನ್ನು ರೂಪಿಸಿದ್ದಾರೆ. 'ಪೂಜೆಯು ಜೀವ-ದೇವರನ್ನು ಸೇರಿಸುವ ಸೆತುವೆಯಾಗಬೇಕು' ಎನ್ನುವುದು ಶ್ರೀರಂಗಮಹಾಗುರುಗಳ ಸಂದೇಶ.

ಈ ನೇರದಲ್ಲಿ ನಮ್ಮನ್ನು ಸಿದ್ಧಪಡಿಸಿಕೊಳ್ಳುವ ಕ್ರಮ:- ೧. ಶರೀರಶುದ್ಧಿ: ಸ್ನಾನವೇ ಪೂಜಾಸಿದ್ಧತೆಯ ಮೊದಲಹಂತ.
ಪೂಜೆಯೆ ಉದ್ದೇಶಕ್ಕೆ ಬೇಕಾದ ಮನೋಲಯವನ್ನುಂಟು ಮಾಡುವ ಸ್ಥಿತಿಯೇ 'ಶುದ್ಧಿ'ಯೆನಿಸಿಕೊಳ್ಳುತ್ತದೆ.  ಶರೀರದಲ್ಲಿ ಮಲ-ಮೂತ್ರಗಳ ವೇಗಗಳು ಮನಸ್ಸು ಭಗವಂತನೆಡೆ ಹರಿಯಲು ತಡೆಯೊಡ್ಡುವುದರಿಂದ ಈ ಬಾಧೆಯನ್ನು ನೀಗಿಸಿಯೇ ಸ್ನಾನಮಾಡುವುದು ಒಳಿತು. ಆಹಾರಸೇವನೆಯು ಈ ವೇಗಗಳಿಗೆ ನಮ್ಮನ್ನೆಳೆಯುವುದರಿಂದಲೇ ಪೂಜೆಗೆ ನಿರಾಹಾರರಾಗಿರಬೇಕೆಂಬ ನಿಯಮ. ಆದರೆ ಪ್ರಕೃತಿಸೌಲಭ್ಯವಿಲ್ಲದಿದ್ದರೆ ಲಘುಪದಾರ್ಥವನ್ನು ಸೇವಿಸಿ ಪೂಜಾಯೋಗ್ಯವಾದ  ಸ್ಥಿತಿಯಲ್ಲಿರಬೇಕು.  

೨. ಮನಸ್ಸಿನ ಶುದ್ಧಿ(ಅರಿಷಡ್ವರ್ಗಗಳ ನಿವಾರಣೆ): ಶಾರಿರಿಕವಾದ ವೇಗಗಳು ಮನಸ್ಸಿನ ಸ್ಥಿತಿಯನ್ನು ಕೆಡಿಸುವಂತೆಯೇ ಕಾಮ(ಸಲ್ಲದ ಆಸೆಗಳು), ಕ್ರೋಧ(ಕಾಮವು ಈಡೇರದಿದ್ದಾಗ ಏರ್ಪಡುವ ವೇಗ), ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಮಾನಸಿಕವೇಗಗಳೂ ಮನೋಲಯಕ್ಕೆ ಅಡ್ಡಿಯನ್ನುಂಟುಮಾಡುತ್ತವೆ. ಮನಸ್ಸಿನ ತಂಪನ್ನು ಹಾಳುಮಾಡಿ ಪೂಜೆಗೆ ಸಲ್ಲದ ಉಷ್ಣವನ್ನೇರ್ಪಡಿಸುತ್ತವೆ.
ಆದ್ದರಿಂದಲೇ 'ಪೂಜೆಗೆ ಮುನ್ನ ಒಳ್ಳೆಯ ವಿಷಯಗಳ ಅನುಸಂಧಾನವಾಗಲಿ; ವೇಗಗಳುಂಟಾಗುವ ವಾತಾವರಣಾದಲ್ಲಿ ಪೂಜೆಯನ್ನಿಟ್ಟುಕೊಳ್ಳಬೇಡಿ' ಎಂಬ ಶಾಸ್ತ್ರಾದೇಶ. ಕೋಪದ ಪ್ರಸಂಗಗಳನ್ನುಂಟುಮಾಡುವ ಮಾತುಗಳನ್ನು ತಪ್ಪಿಸಬೇಕು. ದುಷ್ಟವೇಗಗಳಿದ್ದರೆ ಅವುಗಳ ನಿವಾರಣೆಗಾಗಿ ವಿಧಿಸಲ್ಪಟ್ಟಿರುವ ಆಚಮನ ಇತ್ಯಾದಿ ವಿಜ್ಞಾನಪೂರ್ಣವಾದ ಕರ್ಮಗಳನ್ನುಮಾಡಿ, ಅವುಗಳು ನಿವಾರಣೆಯಾಗುವವರೆಗೂ ಕಾದು, ನಂತರ ಪೂಜೆಯನ್ನಾಚರಿಸಬೇಕು. ಪೂಜೆಗಾಗಿ ಉಡುವ ಮಡಿಬಟ್ಟೆಗಳೂ ಮನಸ್ಸಿನ ಸುಸ್ಥಿತಿಗೆ ಪೋಷಕವೆಂಬ ಅಂಶವು ಮಹರ್ಷಿಗಳ ಅನ್ವೇಷಣೆಯಿಂದ ತಿಳಿದುಬಂದಿರುವ ಸತ್ಯ.
ಪೂಜೆಗೆ ಪದಾರ್ಥಗಳನ್ನು ಕೊಳ್ಳುವಾಗ ಅಥವ ಕೊಡುವಾಗ ಅನವಶ್ಯಕ ಲೆಕ್ಕಾಚಾರಮಾಡಿಸುವ ಲೋಭ, ಪೂಜೆಯಲ್ಲಿ ಅನಗತ್ಯವಾದ ಆಡಂಬರವನ್ನು ತೋರಿಸುವ ಮದ, ಜೊತೆಯಲ್ಲಿ ಹುಟ್ಟಬಹುದಾದ ಮಾತ್ಸರ್ಯ - ಈ ಎಲ್ಲವೇಗಗಳೂ ನೀಗಿದಾಗಮಾತ್ರವೇ ಶುದ್ಧಿ.

೩. ಭಾವಶುದ್ಧಿ: ಭಾವಶುದ್ಧಿಯೂ ಸಿದ್ಧತೆಯ ಮುಖ್ಯ ಅಂಗವಾಗಿದೆ. ನೈವೇದ್ಯದವೇಳೆಗೆ ಆ ಪದಾರ್ಥ ತನಗೆ ಇಷ್ಟವಾದದ್ದೆನ್ನುವ ಆಸೆ ತಲೆದೋರುವುದು, ಪಾಕತಯಾರಿಸುವಾಗ ಮನೆಯಲ್ಲಿ ಯಾರಿಗೆ ಯಾವುದು ಇಷ್ಟ ಮುಂತಾದ ಲೆಕ್ಕಾಚಾರಗಳು, ಯೋಚನಾಲಹರಿಗಳು! ಇತ್ಯಾದಿ ಯೋಚನೆಗಳೆಲ್ಲವೂ ಭಾವಶುದ್ಧಿಗೆ ಭಂಗ ತರುವಂತವು. ಅವಶ್ಯವಾಗಿ ತಡೆಯಲೇಬೇಕಾದವುಗಳು.
ಈ ಎಲ್ಲ ವೇಗಗಳನ್ನೂ ನಿವಾರಿಸಿಕೊಂಡು ತಂಪಾದ ವಾತಾವರಣದಲ್ಲಿ, ತಂಪಾದ ಮನಸ್ಸಿನೊಡನೆ, ತಂಪಾದ ಅಮೃತಮಯನಾದ ಭಗವಂತನನ್ನು ಪೂಜಿಸಬೇಕಾಗಿದೆ. ಹೀಗಾದಾಗ ಪೂಜೆಯು ನಮ್ಮನ್ನು ಭಗವಂತನಲ್ಲಿ ಸೇರಿಸುವ ಸೇತುವೆಯಾಗಬಲ್ಲದು.

ಸೂಚನೆ: 15/02/2020 ರಂದು ಈ ಲೇಖನ ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.