Thursday, February 13, 2020

ರಾಸಕ್ರೀಡೆ - ಒಂದು ಚಿಂತನೆ. (Raasakreede - Ondu chinthane)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ: lekhana@ayvm.in)   


ರಾಸಕ್ರೀಡೆಯು ಶ್ರೀಕೃಷ್ಣನ ಲೀಲೆಗಳಲ್ಲಿ ಬಹಳ ವಿವಾದಾಸ್ಪದವಾದುದು. ಇದು ಶ್ರೀಕೃಷ್ಣನ ಗಾಂಭೀರ್ಯಕ್ಕೆ ಸಲ್ಲುವುದೇ? ಎಂದು ಕೃಷ್ಣನ ಬಗ್ಗೆ ಶ್ರದ್ದೆ ಗೌರವಗಳನ್ನಿಟ್ಟುಕೊಂಡವರಿಗೆ ಅನ್ನಿಸಿದರೆ, ನಮ್ಮ ಸಂಸ್ಕೃತಿಯ ಅವಹೆಳನದಲ್ಲೇ ತೊಡಗಿರುವವರಿಗೆ ಇದೊಂದು ಸಿದ್ಧ ಆಹಾರ. ಸಮಾಜದಲ್ಲಿರುವ ಲಂಪಟತನಕ್ಕೂ ರಾಸಕ್ರೀಡೆ ಎಂಬ ವ್ಯಂಗ್ಯವಿದೆ.ಆದರೆ ರಾಸಕ್ರೀಡೆ ಶ್ರೀಕೃಷ್ಣನ ಅದ್ಭುತವೂ, ಪರಮಮಂಗಳಕರವೂ ಆದ ಲೀಲಾವಿಲಾಸ ಎಂದು ಮಹರ್ಷಿಗಳ  ಮಾತು.ಲೋಕ ಗುರುವಾದ ಶ್ರೀಕೃಷ್ಣನು ಈ ಬಗೆಯ ಲೀಲೆಯನ್ನು ನಡೆಸಲು ಕಾರಣವೇನು? ಎಂಬ ಪ್ರಶ್ನೆಗಳನ್ನು ಅಲ್ಲಗೆಳೆಯಲಾಗದು. ಹಾಗಾದರೆ ರಾಸಕ್ರೀಡೆಯ ರಹಸ್ಯವೇನು? ಅದು ಹಗುರವಾದ ವಿಷಯವೇ? ಮಂಗಳಕರವಾದದ್ದೇ? ಎಂಬ ವಿವೇಚನೆಯ ಅಗತ್ಯವಿದೆ.

ಯಾವುದೇ ಕಾರ್ಯವನ್ನು, ಯಾರು ಮಾಡಿದರು? ಅದರ ಉದ್ದೇಶ ಮತ್ತು ಪರಿಣಾಮಗಳೇನು? ಎನ್ನುವುದರ ಮೇಲೆ ಅದರ ಒಳಿತು ಕೆಡಕುಗಳನ್ನು ಅಳೆಯಬೇಕು . ಒಬ್ಬ ವೈದ್ಯ ಶಸ್ತ್ರಚಿಕಿತ್ಸೆ ಮಾಡುತ್ತಾನೆ. ಶಸ್ತ್ರಗಳನ್ನು ಬಳಸುತ್ತಾನೆ.  ಹಾಗಾದರೆ ನಾನೂ ಮಾಡಬಹುದೇ? ಸರ್ಕಸ್ ನಲ್ಲಿ ಹಗ್ಗದಮೇಲೆ ಒಬ್ಬನು ನಡೆಯುತ್ತಾನೆ, ಅಭ್ಯಾಸವಿಲ್ಲದೇ ಹಾಗೆ ನಡೆಯಲಾಗುವುದೇ? ಹೀಗೆ ಮಾನವರಲ್ಲೇ ಒಬ್ಬರು ಮಾಡುವ ಕೆಲಸ ಇನ್ನೊಬ್ಬರಿಂದಾಗದು.ಇನ್ನು ಪರಮಪುರುಷನಾದ ಶ್ರೀ ಕೃಷ್ಣನು ಜೀವಿಗಳ ಉದ್ಧಾರಕ್ಕೆ ಮಾಡುವ ಕೆಲಸದ ಬಗ್ಗೆ ನಮ್ಮ ಸೀಮಿತವಾದ ಜ್ಞಾನದಿಂದ ಅಳೆಯಬಹುದೇ? 

ಶಸ್ತ್ರವು ವೈದ್ಯನ ಕೈಯಲ್ಲಿದ್ದಾಗ, ಉದ್ದೇಶ, ಪರಿಣಾಮ ಎರಡೂ ಜೀವ ರಕ್ಷಣೆ. ಕಳ್ಳನ ಕೈಯಲ್ಲಿ ಪ್ರಾಣಾಪಾಯ. ಹಾಗೆಯೇ ಕಾಮವು ಭಗವಂತನ ಹತ್ತಿರ ಇದ್ದಾಗ ಅವನ ಧಾಮಕ್ಕೆ ಅವನನ್ನು ಕಾಮಿಸುವವರನ್ನು ಸೆಳೆಯುವ, ಅವರನ್ನು ಮುಕ್ತರನ್ನಾಗಿಸುವ ಸಾಧನವಾಗುತ್ತದೆ. ಗೋಪಿಕೆಯರು ತಮ್ಮ ಬಂಧುಬಾಂಧವರು, ಮಕ್ಕಳು ಎಲ್ಲರನ್ನೂ ತೊರೆದು ಪರಮಪ್ರೇಮದಿಂದ ಕೃಷ್ಣನೆಡೆಗೆ ಬಂದರು. ಅವರ ಸರ್ವಸ್ವವೂ ಕೃಷ್ಣಾರ್ಪಣವಾಗಿತ್ತು. ತಮ್ಮ ಲೌಕಿಕ ಭಾವವನ್ನೆಲ್ಲ ಕೃಷ್ಣನಿಗೆ ಸಮರ್ಪಿಸಿದ್ದರು. ಕೃಷ್ಣನು ಅವರ ಲೌಕಿಕ ಭಾವವನ್ನು ತೆಗೆದುಕೊಂಡು ಅವರಲ್ಲಿ ಅನುರಕ್ತನಾಗಿ, ಅವರ ಜೊತೆಗೆ ಕ್ರೀಡಿಸುವ ನೆಪದಲ್ಲಿ ಅವರನ್ನೆಲ್ಲ ಬ್ರಹ್ಮಭಾವದಲ್ಲಿ ರಮಿಸುವಂತೆ ಮಾಡಿದ. 

ರಾಸಕ್ರೀಡೆಯನ್ನು ಶ್ರೀಮದ್ಭಾಗವತದಲ್ಲಿ ಬಣ್ಣಿಸಿರುವವರು ಅಂತಹ ಬ್ರಹ್ಮಭಾವದ ಪರಿಚಯವಿದ್ದ ಪರಮ ವಿರಾಗಿಗಳಾದ ಶುಕಬ್ರಹ್ಮರ್ಷಿಗಳು. ಅಂದಿನ ರಾತ್ರಿಯನ್ನು “ಬ್ರಹ್ಮರಾತ್ರ” ಎಂದು ಕರೆದಿದ್ದಾರೆ. ರಾಸಕ್ರೀಡೆಯ ನಾಯಕ, ಕೇಂದ್ರಬಿಂದು ಮಹಾಮಹಿಮ ಶ್ರೀಕೃಷ್ಣನೇ. ರಾಸಕ್ರೀಡೆಯ ಸಂಕಲ್ಪ ಮಾಡಿ ತನ್ನ ವೇಣುಗಾನವನ್ನು ಮಾಡಿದಾಗ ಬೃಂದಾವನದ ಗೋಪಿಕೆಯರೆಲ್ಲರೂ ತಮ್ಮ ಬಾಹ್ಯ ಪ್ರಜ್ಞೆಯನ್ನೇ ಕಳೆದುಕೊಂಡು, ಮಾಡುತ್ತಿರುವ ಕೆಲಸಗಳೆಲ್ಲವನ್ನೂ ಅಲ್ಲಲ್ಲಿಯೇ ಬಿಟ್ಟು ವೇಣುಗಾನಲೋಲನಾದ ಕೃಷ್ಣನೆಡೆಗೆ ಧಾವಿಸಿ ಬಂದರು. ಇದು ಇಂದ್ರಿಯಭಾವವನ್ನು ಮೀರಿದ ಅತೀಂದ್ರಿಯಭಾವದ ಸಮಾಚಾರವದು.

“ಅವಜಾನಂತಿ ಮಾಂ ಮೂಡಾಃ ಮಾನುಷೀಂ ತನುಮಾಶ್ರಿತಂ ಪರಂ ಭಾವಮಜಾನಂತಃ ಮಮ ಭೂತ ಮಹೇಶ್ವರಮ್” “ನಾನು ಮಾನುಷರೂಪವನ್ನು ಧರಿಸಿದ್ದರಿಂದ ಮೂರ್ಖರು  ಇರುವುದೆಲ್ಲದರ ಪ್ರಭುವಾದ ನನ್ನ  ಪರಭಾವವನ್ನು ತಿಳಿಯುವುದಿಲ್ಲ” ಎಂದು ಶ್ರೀಕೃಷ್ಣನೇ ನೊಂದುಕೊಂಡಿದ್ದಾನೆ.  ಶ್ರೀಕೃಷ್ಣನನ್ನು ನಮ್ಮಂತೆಯೇ ಇಂದ್ರಿಯಲೋಕದಲ್ಲಷ್ಟೇ ವಿಹರಿಸುವವನು ಎಂದು ತಿಳಿದಾಗ ಅವನ ಅತೀಂದ್ರಿಯ ಸಂಕಲ್ಪದ ವಿಷಯ ಹಾಗೂ ಅವನ ವಿಶೇಷ ಸಾಮರ್ಥ್ಯ ನಮಗೆ ಗೊತ್ತಾಗದು. ಆಗ ನಾವು ನಮಗಿರುವ ವಿಧಿ ನಿಷೇಧಗಳನ್ನೆಲ್ಲ ಅವನಿಗೂ ಅಂಟಿಸಿಬಿಡುತ್ತೇವೆ. ಹಾಗಲ್ಲದೇ , ಬಗೆಬಗೆಯ ಮಾರ್ಗಗಳಿಂದ ಜೀವಿಗಳನ್ನು ಉದ್ಧರಿಸುವ  ಅವನ ಪರಮ ಕರುಣೆಯನ್ನು ಅರ್ಥಮಾಡಿಕೊಳ್ಳುವುದಾಗಬೇಕು.

ಶ್ರೀಕೃಷ್ಣನು ರಾಸಕ್ರೀಡೆಯಿಂದ ಗೋಪಿಕೆಯರನ್ನು ಆತ್ಮಭಾವಕ್ಕೆ ಏರಿಸಿದ. ಅವರು ಸಮರ್ಪಿಸಿದ ಕಾಮವನ್ನು ಭಗವತ್ಕಾಮವನ್ನಾಗಿಸಿದ. ಅವರನ್ನು ಕೃಷ್ಣಭಾವವಶರನ್ನಾಗಿಸಿದ. ಶ್ರೀರಂಗಮಹಾಗುರುಗಳು ಹೇಳಿದಂತೆ-“ಭಗವಂತನಿಗೆ ಸಮರ್ಪಿತವಾದ ಅಧರಗಳು(ತುಟಿಗಳು) ಉತ್ತರವಾಗುತ್ತವೆ(ಉನ್ನತವಾದ ಸ್ಥಿತಿಗೆ ಏರುತ್ತದೆ). ರಾಸಕ್ರೀಡೆಯ ಪರಿಣಾಮವೂ ಸಹ ಇದೇ. ಜೀವಿಗಳಲ್ಲಿ ಸುಖಾನುಭವದ ವಿಷಯಗಳನ್ನು ಇಡುವವನೂ ಅವನೇ. ಎಲ್ಲ ಇಂದ್ರಿಯಗಳ ಹಿಂದಿನ ಚೈತನ್ಯವೂ ಅವನೇ. ಜೀವಿಗಳು ಇಂದ್ರಿಯ ಸುಖವನ್ನುಅನುಭವಿಸುವುದಕ್ಕೂ ಅವನ ಶಕ್ತಿಯೇ ಬೇಕು.

ಇಂತಹ ಭಗವಂತನ ಅತಿಶ್ರೇಷ್ಠ ಲೀಲೆಯಲ್ಲಿ ಮಹರ್ಷಿಗಳು ಕಂಡರುಹಿದ ಭಗವಂತನ ಪರಮಾನುಗ್ರಹದ ಭಾವವನ್ನು ನಾವೆಲ್ಲರೂ ಕಾಣುವಂತಾಗಲಿ.

ಸೂಚನೆ: 13/02/2020 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ.