Sunday, February 2, 2020

ರಥಸಪ್ತಮೀ ವಿಶೇಷ (Rathasapthami vishesha)

ಲೇಖಕರು:  ಶ್ರೀಮತಿ ಸುಮೇಧಾ
(ಪ್ರತಿಕ್ರಿಯಿಸಿರಿ : lekhana@ayvm.in)



ಸೂರ್ಯಚಂದ್ರರು ಸಮಯದ ನಿಯಾಮಕರು. ಅವರ ಗತಿಯಿಂದಲೇ ಹಗಲಿರುಳು, ಪಕ್ಷ-ಮಾಸ-ಸಂವತ್ಸರಗಳು ಉರುಳುತ್ತವೆ. ಕಾಲ ಉರುಳುತ್ತಿರಲು ಮಹರ್ಷಿಗಳು ಗುರುತಿಸಿದ ವಿಶೇಷ ಪರ್ವಕಾಲಗಳಲ್ಲಿ ರಥಸಪ್ತಮಿಯೂ ಒಂದು ಅತ್ಯುತ್ತಮವಾದ ದಿನವಾಗಿದೆ.

ಮಕರ  ಸಂಕ್ರಾಂತಿ ದಿನದಿಂದ ವರ್ಷದ ಉತ್ತರಾಯಣ ಭಾಗ ಪ್ರಾರಂಭಿಸುತ್ತದೆ. ಸೂರ್ಯನು ಉತ್ತರ ದಿಕ್ಕಿಗೆ ಚಲಿಸುತ್ತಾನೆ. ಮುಂದುವರಿದು ಮಾಘಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿಯಂದು ಸೂರ್ಯನು ವಿಶೇಷವಾಗಿ ಬೆಳಗುತ್ತಾನೆ. ಅಂದು ”ರಥವರ” ಎಂದು ಕರೆಯಲ್ಪಡುವ ರಥಸಮೇತನಾದ ಸೂರ್ಯನನ್ನು ಪೂಜಿಸುವುದರಿಂದ ರಥಸಪ್ತಮಿ ಎಂದು ಪ್ರಸಿದ್ಧವಾಗಿದೆ. ಸೂರ್ಯನನ್ನೂ ಹಾಗೆಯೇ ಆ ಸೂರ್ಯಮಂಡಲವರ್ತಿಯಾಗಿ ವಿರಾಜಿಸುವ ನಾರಾಯಣನಿಗೂ, ಪರಶಿವನಿಗೂ ವೈಭವೋಪೇತವಾಗಿ ಪೂಜಾರ್ಚನೆಗಳು ನಡೆಯುತ್ತವೆ. ವೈಷ್ಣವ, ಶೈವ ಎಂಬ ಭೇದವಿಲ್ಲದೆ ಎಲ್ಲರೂ ಮಾಡುವ ಹಬ್ಬ ಇದಾಗಿದೆ.  “ಸೂರ್ಯನಾರಾಯಣ” ಎಂದು ಕರೆಯಲ್ಪಡುವ ಸೂರ್ಯನ ಸಪ್ತಾಶ್ವಯುತವಾದ ರಥವನ್ನು ಧ್ಯಾನಿಸಿ, ಎಲ್ಲ ದೇವಸ್ಥಾನಗಳಲ್ಲೂ ರಥೋತ್ಸವಗಳು ಆರಂಭಗೊಳ್ಳುತ್ತದೆ ಆದ್ದರಿಂದಲೂ ಈ ದಿನಕ್ಕೆ ರಥಸಪ್ತಮೀ ಎಂಬ ಹೆಸರು ಉಚಿತವಾಗಿದೆ ಎಂದು ಶ್ರೀರಂಗ ಮಹಾಗುರುಗಳು ತಿಳಿಸುತ್ತಿದ್ದರು.

ಸೂರ್ಯನಿಗೂ ಏಳು ಎಂಬ ಸಂಖ್ಯೆಗೂ ಒಂದು ನಂಟು ಇದೆ. ಸೂರ್ಯನ ರಥಕ್ಕೆ ಏಳು ಕುದುರೆಗಳು, ಪೂಜೆಗೆ ಪ್ರಶಸ್ತ ದಿನ ಸಪ್ತಮಿ, ಸೂರ್ಯನಿಗೆ ಏಳು ಬಗೆ ನೈವೇದ್ಯಗಳು ಅರ್ಪಿಸಬೇಕು, ಏಳು ಪ್ರದಕ್ಷಿಣೆ ಮಾಡಬೇಕು, ಸೂರ್ಯನಿಗೆ ಏಳು ಪತ್ರೆಗಳನ್ನು ಅರ್ಪಿಸುತ್ತಾರೆ.  ನಮ್ಮೊಳಗೇ ಭೂರಾದಿ ಸಪ್ತಲೋಕಗಳನು ವ್ಯಾಪಿಸಿ ತುತ್ತ-ತುದಿಯಲ್ಲ ಬೆಳಗುವುದು ಸೂರ್ಯನಾರಾಯಣನ ಅನುಭವ.  

ಈ ಸಪ್ತಮಿ ತಿಥಿಯಂದು ಅರುಣೋದಯದ ಸಮಯದಲ್ಲಿ ಪುಣ್ಯತೀರ್ಥದಲ್ಲಿ ಸ್ನಾನಮಾಡಿ ಮಂತ್ರಜಪ ಮತ್ತು ದೇವತಾರಾಧನೆಗಳನ್ನು ಮಾಡುವುದು ರೂಢಿಯಲ್ಲಿದೆ. ಸ್ನಾನಮಾಡುವಾಗ ಏಳು ಎಕ್ಕದ ಎಲೆಯನ್ನು ತಲೆ, ತೋಳುಗಳಮೇಲೆ ಇರಿಸಿಕೊಂಡು ಅಥವಾ ತಲೆಯಮೇಲೆ ಚಿನ್ನ, ಬೆಳ್ಳಿ ಅಥವ ಸೋರುಬುರುಡೆಯ ಪಾತ್ರೆಯಲ್ಲಿ ಎಳ್ಳೆಣ್ಣೆ ದೀಪ ಒಂದನ್ನು ಇರಿಸಿಕೊಂಡು ಸ್ನಾನಮಾಡಬೇಕು. ನಂತರ ಆ ದೀಪವನ್ನು ಅದೇ ನದಿ ಅಥವ ಸಮುದ್ರದಲ್ಲಿ ತೇಲಿಬಿಡಬೇಕು. ಸ್ನಾನ ಸಮಯದಲ್ಲಿ ಸಮಾಧಾನ ಚಿತ್ತದಿಂದ ಈ ಸ್ತೋತ್ರವನ್ನು ಮನನ ಮಾಡುತ್ತಾ ಸೂರ್ಯನಾರಯಣನನ್ನು ಧ್ಯಾನಿಸಬೇಕು:-

“ಸಪ್ತಾಶ್ವ ಸಪ್ತಲೋಕಾಶ್ಚ ಸಪ್ತದ್ವೀಪಾ ವಸುಂಧರಾ |
ಸಪ್ತಾರ್ಕಪರ್ಣಾನ್ಯಾದಾಯ ಸಪ್ತಮ್ಯಾಂ ಸ್ನಾನಮಾಚರೇತ್ ||

ಸ್ನಾನದ ಅನಂತರ ಯಥಾಶಕ್ತಿ ಸೂರ್ಯನನ್ನು ಶೋಡಷೋಪಚಾರಗಳಿಂದ ಪೂಜೆ ಮಾಡಿ ನಮ್ಮೊಳಗೆ ಬೆಳಗುವ ಆತ್ಮಸೂರ್ಯನನ್ನು ಕಂಡು ಧನ್ಯರಾಗಬೇಕು. ಆತ್ಮಸಾಧನೆಗೆ ಅತ್ಯಂತ ಅನುಕೂಲವಾದ ದಿನವಾದ್ದರಿಂದ ಸಮಯ ವ್ಯರ್ಥಮಾಡದಿರಿ, ಬಲವಂತದ ಮಾಘಸ್ನಾನದಿಂದ ಫಲವಿಲ್ಲ, ಕರ್ಮವನ್ನು ಮರ್ಮವರಿತು ಆಚರಿಸಿ ಎಂದು ಶ್ರೀರಂಗ ಮಹಾಗುರುಗಳು ಎಚ್ಚರಿಸುತ್ತಿದ್ದರು.

ಮಾಘಮಾಸದಲ್ಲಿ ನಿತ್ಯವೂ ಅರುಣೋದಯ ಸಮಯದಲ್ಲಿ ಸ್ನಾನ ಮಾಡಬೇಕು, ಆಗದಿದ್ದಲ್ಲಿ ಮೂರುದಿನ ಸಂಕ್ರಾಂತಿ, ರಥಸಪ್ತಮಿ ಹಾಗು ಮಾಘೀ ದಿನಗಳಲ್ಲಾದರೂ ಮಾಡಲೇಬೇಕು.  ಅದರಲ್ಲೂ ರಥಸಪ್ತಮಿಯು ಸೂರ್ಯಗ್ರಹಣಕ್ಕೆ ಸಮಾನವಾದುದು ಹಾಗು ಪ್ರಯಾಗತೀರ್ಥದಲ್ಲಿ ಸ್ನಾನಮಾಡಿದರಂತೂ ಕೋಟಿಸೂರ್ಯಗ್ರಹಣದ ಆಚರಣೆಯ ಸಮಾನ. ರಥಸಪ್ತಮಿಯಂದು ಸತ್ಯಚಿತ್ತದಿಂದ ಸ್ನಾನ ಮಾಡಿದ್ದಲ್ಲಿ ಸಪ್ತಜನ್ಮಗಳ ಪಾಪ ನಾಶವಾಗುತ್ತದೆ ಹಾಗೂ  ಶುದ್ಧಾತ್ಮರನ್ನಾಗಿಸುತ್ತದೆ ಎಂದು ಜ್ಞಾನಿಗಳು ಸಾರುತ್ತಾರೆ.. ವಿಶೇಷವಾಗಿ ಪರಮಾತ್ಮ ಸಾಕ್ಷಾತ್ಕಾರಕ್ಕೆ ಪ್ರಕೃತಿಯೇ ಸಹಜವಾಗಿ ಒದಗಿಸಿಕೊಟ್ಟ ಕಾಲ ರಥಸಪ್ತಮೀ.ಅದನ್ನು ಸದುಪಯೋಗಪಡಿಸಿಕೊಳ್ಳೋಣ.  


ಸೂಚನೆ:  27/01/2020 ರಂದು ಈ ಲೇಖನ ಉದಯವಾಣಿ ಬಹುಮುಖಿ  ಅಂಕಣದಲ್ಲಿ ಪ್ರಕಟವಾಗಿದೆ