Wednesday, February 26, 2020

ಸರ್ವಗಂಧನಿಗೆ ಗಂಧಸಮರ್ಪಣಾ ಪೂಜೆ (Sarvagandhanige Gandhasamarpana Pooje)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)
ಪೂಜಾಕ್ರಮದಲ್ಲಿ ಪಂಚೋಪಚಾರಪೂಜೆ, ಶೋಡಶೋಪಚಾರಪೂಜೆ ಇತ್ಯಾದಿ ಅನೇಕ ವಿಧಾನಗಳುಂಟು. ಇವುಗಳಲ್ಲಿ ಪಂಚೋಪಚಾರ ಪೂಜಾವಿಧಾನದ ಅಂಗಗಳಾದ ಗಂಧ, ಪುಷ್ಪ, ಧೂಪ, ದೀಪ ನೈವೇದ್ಯ ಇವುಗಳನ್ನು ಕುರಿತ ಸಂಕ್ಷಿಪ್ತವಿವೇಚನೆಯನ್ನು ಮುಂದೆ ಮಾಡಲಾಗುವುದು.

ಸೃಷ್ಟಿತತ್ತ್ವಗಳಲ್ಲಿ ಪೃಥ್ವೀತತ್ತ್ವದ ವಿಶೇಷಲಕ್ಷಣ ಗಂಧ. ಹೊರಗೆ ನಮಗೆ ಸಿಗುವ ಗಂಧವು ಸ್ಥೂಲವಾದದ್ದು. ಆದರೆ ಸಗುಣವಾದ ಭಗವಂತನನ್ನು ಧ್ಯಾನಮಾಡುವವರಿಗೆ ಅಂತರಂಗದಲ್ಲಿ ತನ್ಮಾತ್ರೆಗಳ ಸ್ಥಾನವನ್ನು ದಾಟಿ ಮೇಲೇರಿದಾಗ ದಿವ್ಯಗಂಧದ ಆಘ್ರಾಣವಾಗುತ್ತದೆ ಎಂಬುದು ಜ್ಞಾನಿಗಳ ಅನುಭವ. ಆ ದೈವೀಕ್ಷೇತ್ರವನ್ನೂ ದಾಟಿ ಮೇಲೇರಿದಾಗ ಪರಮಾದ್ಭುತವಾದ ಬ್ರಹ್ಮಗಂಧದ ಅನುಭವವೂ ಆಗುವುದುಂಟು ಮತ್ತು ಮೇಲೆ ಹೇಳಿದ ಎಲ್ಲ ಗಂಧಗಳೂ ಭಗವಂತನ ವಿಸ್ತಾರಗಳೇ ಎಂಬುದು ಜ್ಞಾನಿಗಳು ಕಂಡರಿತ ಸತ್ಯ.

ಗಂಧೋಪಚಾರದಲ್ಲಿ ಸ್ಥೂಲವಾದ ಗಂಧವು 'ಭಗವಂತನ ಬ್ರಹ್ಮಗಂಧದ ಒಂದಂಶ' ಎಂಬುದನ್ನು ನೆನಪಿಸಿಕೊಂಡು ಆತನ ಮಹಿಮೆಯನ್ನು ಸ್ಮರಿಸುವುದು, 'ಅವನ ಪದಾರ್ಥವನ್ನು ಅವನಿಗೇ ಒಪ್ಪಿಸುತ್ತೇನೆ' ಎಂಬ ಭಾವದಿಂದ ಆತನಿಗೆ ಅರ್ಪಿಸುವುದು- ಇದೇ 'ಭಗವತ್ಸಮರ್ಪಣೆ' ಎನಿಸಿಕೊಳ್ಳುತ್ತದೆ. ಇಷ್ಟಲ್ಲದೆ ನಾವು ಕೊಡುವ ಗಂಧದಿಂದ ಆತನಿಗೆ ಆಗಬೇಕಾದದ್ದೇನಿದೆ?ಸಮರ್ಪಣೆಯಿಂದ ಯಾರಿಗೆ, ಏನು ಲಾಭ? ಮಾನಸಿಕವಾಗಿ ಗಂಧಸಮರ್ಪಣೆ ಮಾಡುತ್ತಾ ಧ್ಯಾನದಲ್ಲಿರಬಹುದಲ್ಲ, ಹೊರ ಪದಾರ್ಥದ ಸಮರ್ಪಣೆಯೇಕೆ? ಎನ್ನಬಹುದು.

'ದಾರಿತಪ್ಪಿದ ರಾಜಕುಮಾರನನ್ನು ರಾಜನಬಳಿ ಕರೆದೊಯ್ದರೆ ರಾಜಕುಮಾರನ ಜೊತೆಗೆ ಕರೆದೊಯ್ದವನಿಗೂ ರಾಜನ ದರ್ಶನವಾಗುವುದು. ಅಂತೆಯೇ ಎಲ್ಲೋ ಕಾಡಿನಲ್ಲಿ ಬೆಳೆದ ಮರವನ್ನು ಸದ್ಭಾವದಿಂದ ತಂದು ತೇಯ್ದು ಅದನ್ನು ಭಗವಂತನ ಪಾದಕ್ಕೆ ಸೇರಿಸಿದಾಗ ಆ ಕ್ರಿಯೆಯ ಮೂಲಕ ಸೇರಿಸಿದವನಿಗೂ ಭಗವದ್ಭಾವ-ತನ್ಮಯತೆ ಉಂಟಾಗುತ್ತದೆ' ಎಂದು ಶ್ರೀರಂಗಮಹಾಗುರುಗಳು ಸ್ಪಷ್ಟಪಡಿಸಿದ್ದರು.

ಮಾನಸಸಮರ್ಪಣೆಯಿಂದ ಪೂಜಕನಿಗೆ ಮಾತ್ರವೇ ಲಾಭ. ಆದರೆ ಜ್ಞಾನಿಯಾದವನು ಬ್ರಹ್ಮಭಾವದಲ್ಲಿ ಭಗವಂತನಿಗೆ ಅರ್ಪಿಸುವ ಗಂಧದಲ್ಲಿ ಆತನ ಬ್ರಹ್ಮಭಾವತರಂಗಗಳು ಬೆಸೆದುಕೊಳ್ಳುತ್ತದೆ. ಅಂತಹ ಗಂಧವು ದರ್ಶನ-ಸ್ಪರ್ಶಗಳ ಮೂಲಕ ಪ್ರಸನ್ನತೆಯನ್ನುಂಟುಮಾಡುವ ಪ್ರಸಾದವಾಗಿ ಪರಿಣಮಿಸುತ್ತದೆ. ಸ್ವೀಕರಿಸಿದವರನ್ನು ಭಗವದ್ಭಾವಕ್ಕೇರಿಸಿ ಪವಿತ್ರಗೊಳಿಸುತ್ತದೆ. ಇದರಿಂದ ಗಂಧವನ್ನೀಯುವ ವೃಕ್ಷವೂ ಪೂಜಾಸಾಮಗ್ರಿಯಾಗಿ ಧನ್ಯತೆಯನ್ನು ಪಡೆಯುತ್ತದೆ. 'ಮರ'ವು 'ಅಮರ'ವಾಗುತ್ತದೆ. ಆದ್ದರಿಂದ ಗಂಧಸಮರ್ಪಣೆಯ ಲಾಭ ಗಂಧದ ವೃಕ್ಷಕ್ಕೆ, ಪೂಜಕನಿಗೆ, ಪ್ರಸಾದಸ್ವೀಕರಿಸುವವರಿಗೆ ಇಷ್ಟೂ ಜನರಿಗೂ ಉಂಟು.

ಸುಗಂಧಗಳು:
ಮನಸ್ಸನ್ನು ಊರ್ಧ್ವಮುಖವಾಗಿ ಭಗವಂತನೆಡೆಗೆ ಹರಿಸುವ ಗಂಧವೇ ಸುಗಂಧ-ಭಗವಂತನಿಗೆ ಪ್ರಿಯ. ಇದನ್ನಾಧರಿಸಿ ಶ್ರೀಗಂಧವು ಅತ್ಯಂತ ಪ್ರಶಸ್ತವಾದದ್ದು ಎಂಬುದಾಗಿ ಜ್ಞಾನಿಗಳಿಂದ ಗುರುತಿಸಲ್ಪಟ್ಟಿದೆ. ಇದರ ವಾಸನೆ ಮನಸ್ಸನ್ನು ಭಗವಂತನೆಡೆ ಏರಿಸುವುದಲ್ಲದೆ ತಂಪು, ಹಿತವನ್ನುಂಟುಮಾಡುತ್ತದೆ. ಕೆಲವು ದೈಹಿಕ-ಮಾನಸಿಕ ರೋಗಗಳನ್ನು ಪರಿಹರಿಸುತ್ತದೆ. ಮೂರುಕ್ಷೇತ್ರಗಳಲ್ಲೂ (ಆಧಿಭೌತಿಕ-ಆಧಿದೈವಿಕ-ಆಧ್ಯಾತ್ಮಿಕ) ಸಹಕಾರಿಯಾಗುತ್ತದೆ. ಚಂದನ, ಸೀಬೇಮರ, ದೇವದಾರು ಇವುಗಳು ಶ್ರೀಗಂಧದಲ್ಲಿನ ಕೆಲವು ಅಂಶಗಳನ್ನು ಮಾತ್ರ ಸ್ವಲ್ಪಮಟ್ಟಿಗೆ ಹೊಂದಿರುತ್ತವೆ. ಶ್ರೀಗಂಧವು ಸಿಗದಿದ್ದಾಗ ಇವುಗಳನ್ನು ಬಳಸಬಹುದು.

ಗಂಧದ ವರ್ಣ:
ಶ್ರೀಗಂಧಕ್ಕೆ ಕೇಸರಿಯನ್ನು ಸೇರಿಸಿದಾಗ ಬರುವ ಸುವರ್ಣವರ್ಣವು ಸಕಲದೇವತಾಪ್ರಿಯವಾದದ್ದು. ರಕ್ತವರ್ಣದಗಂಧವು ಸೂರ್ಯ, ಗಣಪತಿಪೂಜೆಗೆ ವಿಶೇಷ. ಶ್ರೀಗಂಧ ಸಿಗದಿದ್ದಾಗ ಪೂಜೆಯನ್ನು ನಿಲ್ಲಿಸುವ ಅಗತ್ಯವಿಲ್ಲ, ಮಾನಸಿಕವಾಗಿ ಪೃಥ್ವೀತತ್ತ್ವವನ್ನೇ ಸಮರ್ಪಿಸಬಹುದೆಂಬುದು ಜ್ಞಾನಿಗಳ ಆದೇಶ.  

ಸೂಚನೆ: 25/02/2020 ರಂದು ಈ ಲೇಖನ ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.